ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಬಸ್‌ ಸಂಚಾರ ಸೇವೆಯರಕ್ಷಣೆ: ಸರ್ಕಾರಕ್ಕೂ ಇದೆ ಹೊಣೆಗಾರಿಕೆ

Last Updated 20 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪವನ್ನು ಕೇಂದ್ರ ಸ್ಥಾನವಾಗಿ ಇರಿಸಿಕೊಂಡು 1991ರಲ್ಲಿ ಕಾರ್ಮಿಕರೇ ಸ್ಥಾಪಿಸಿದ ಸಹಕಾರ ಸಾರಿಗೆ ಸಂಸ್ಥೆಯು (ಟಿಸಿಎಸ್‌) ಮಲೆನಾಡು ಭಾಗದಲ್ಲಿ ಸಂಚಾರ ವ್ಯವಸ್ಥೆಯ ಜೀವನಾಡಿಯಂತೆ ಬೆಳೆದಿತ್ತು. ಸರ್ಕಾರಿ ಸಾರಿಗೆ ನಿಗಮಗಳು ನೀಡುವಂತಹ ಸೇವೆಗಳಿಗೆ ಸರಿಸಮನಾದ ಸೌಲಭ್ಯಗಳನ್ನು ಪ್ರಯಾಣಿಕರು ಮತ್ತು ನೌಕರರಿಗೆ ಒದಗಿಸುವ ಪ್ರಯತ್ನವನ್ನೂ ಮಾಡುತ್ತಾ ಬಂದಿತ್ತು. ಈಗ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.

ಸತತ ನಷ್ಟದಿಂದ ತತ್ತರಿಸಿರುವ ಸಂಸ್ಥೆ, ಈ ತಿಂಗಳ 17ರಿಂದ ತನ್ನ ಎಲ್ಲ ಬಸ್‌ಗಳ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿದೆ. ಸಹಕಾರ ತತ್ವದಡಿ ಆರಂಭವಾದ ಏಷ್ಯಾದ ಮೊದಲ ಸಾರಿಗೆ ಸಂಸ್ಥೆಯ ಭವಿಷ್ಯ ಈಗ ಡೋಲಾಯಮಾನ ಆಗಿದೆ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ 300 ನೌಕರರ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಇನ್ನೊಂದೆಡೆ, ಸಹಕಾರ ಸಾರಿಗೆಯ ಬಸ್‌ಗಳನ್ನೇ ನೆಚ್ಚಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಬಹುಭಾಗ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳ ಜನರು ಬಸ್‌ಗಳ ಸಂಚಾರವಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಹಲವು ಊರುಗಳಿಗೆ ಹತ್ತಾರು ವರ್ಷಗಳಿಂದ ಸಹಕಾರ ಸಾರಿಗೆ ಬಸ್‌ಗಳು ಮಾತ್ರ ಓಡಾಡುತ್ತಿದ್ದವು.

ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ, ಕೆಲವು ಗ್ರಾಮಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹತ್ತಾರು ಕಿಲೊಮೀಟರ್‌ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಸಂಕಷ್ಟ ಎದುರಾಗಿದೆ. ರೈತರು, ಕಾರ್ಮಿಕರು, ಪಟ್ಟಣಗಳಲ್ಲಿ ನೌಕರಿ ಹೊಂದಿರುವವರೂ ಸಹಕಾರ ಸಾರಿಗೆ ಬಸ್‌ಗಳಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.

ಸಹಕಾರ ಸಾರಿಗೆ ಸಂಸ್ಥೆಗೆ ಸೇವೆಯೇ ಆದ್ಯತೆಯಾಗಿತ್ತು. ಹಾಗಾಗಿಯೇ, ಡೀಸೆಲ್‌ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಏಳು ವರ್ಷಗಳಿಂದ ಸಂಸ್ಥೆಯು ಪ್ರಯಾಣ ದರವನ್ನು ಹೆಚ್ಚಿಸಿರಲಿಲ್ಲ. ರಾಜ್ಯ ಸರ್ಕಾರದ ಸಾರಿಗೆ ನಿಗಮಗಳ ಮಾದರಿಯಲ್ಲೇ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಅಂಗವಿಕಲರು, ಸ್ವಾತಂತ್ರ್ಯ ಹೋರಾಟಗಾರರಿಗೆ ರಿಯಾಯಿತಿ ದರದ ಬಸ್‌ ಪಾಸ್‌ಗಳ ಸೌಲಭ್ಯ ಒದಗಿಸುತ್ತಾ ಬಂದಿತ್ತು. ಆದರೆ, ಈಗ ಸಂಸ್ಥೆಯು ಡೀಸೆಲ್‌ ಖರೀದಿ ಬಾಬ್ತು ಪಾವತಿಸಬೇಕಿರುವ ಬಾಕಿ ಮೊತ್ತವೇ ₹ 1.45 ಕೋಟಿ ತಲುಪಿದೆ.

ಒಟ್ಟು ₹ 6.89 ಕೋಟಿ ಮೊತ್ತದ ಸಾಲದ ಹೊರೆ ಸಂಸ್ಥೆಯ ಮೇಲಿದೆ ಎಂದು ವರದಿಯಾಗಿದೆ. ಡೀಸೆಲ್‌ ಖರೀದಿಸಲೂ ಆಗದ ಸ್ಥಿತಿಗೆ ಸಂಸ್ಥೆ ತಲುಪಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿದೆ. ಎಲ್ಲ 70 ಬಸ್‌ಗಳ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸರ್ಕಾರದ ನೆರವಿಗಾಗಿ ಆಡಳಿತ ಮಂಡಳಿ ಮೊರೆ ಇಟ್ಟಿದೆ. ಸರ್ಕಾರದ ಸಾರಿಗೆ ನಿಗಮಗಳಿಗೆ ನೀಡುತ್ತಿರುವಂತೆ ಪಾಸ್‌ ರಿಯಾಯಿತಿ ಮೊತ್ತವನ್ನು ಸಹಕಾರ ಸಾರಿಗೆ ಸಂಸ್ಥೆಗೂ ರಾಜ್ಯ ಸರ್ಕಾರ ತುಂಬಿಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಅದರ ಜೊತೆಯಲ್ಲೇ ಸಂಸ್ಥೆಯನ್ನು ಸುಸ್ಥಿತಿಗೆ ತರಲು ಆರ್ಥಿಕ ನೆರವು ಒದಗಿಸುವಂತೆಯೂ ಕೋರಿದೆ.

ಸಹಕಾರ ಸಾರಿಗೆ ಸಂಸ್ಥೆಯು ರಾಜ್ಯದ ಒಂದು ಪ್ರದೇಶದ ಸಂಚಾರ ವ್ಯವಸ್ಥೆಯ ಆಧಾರ ಸ್ತಂಭದಂತೆ ಇತ್ತು. ಅದನ್ನು ಉಳಿಸಿಕೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಕಾರವನ್ನೂ ಒದಗಿಸಬೇಕು. ಸಂಸ್ಥೆಯ ಪುನಶ್ಚೇತನಕ್ಕೆ ಸಾಲದ ನೆರವು ಬೇಕಿದ್ದರೆ ಈ ದಿಸೆಯಲ್ಲೂ ಸಹಾಯಹಸ್ತ ಚಾಚುವ ಕುರಿತು ಗಂಭೀರವಾಗಿ ಆಲೋಚಿಸಬೇಕು.

ವರಮಾನ ಮತ್ತು ವೆಚ್ಚದ ವಿಚಾರದಲ್ಲಿಸಂಸ್ಥೆಯ ಆಡಳಿತ ಮಂಡಳಿಯು ಎಚ್ಚರಿಕೆಯ ಹೆಜ್ಜೆ ಇಡಬೇಕು. ಕಾರ್ಯಸಾಧು ರೀತಿಯಲ್ಲಿ ವ್ಯವಹಾರವನ್ನು ನಿಭಾಯಿಸಬೇಕು. ಈಗಿನ ಸ್ಥಿತಿಯು ಅದಕ್ಕೆ ಪಾಠವಾಗಬೇಕು. ಮತ್ತೆ ಸಾಲದ ಸುಳಿಗೆ ಸಿಲುಕದ ರೀತಿಯಲ್ಲಿ ಹೇಗೆ ಮುನ್ನಡೆಯಬೇಕು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸಬೇಕು. ಅದಕ್ಕೆ ಅಗತ್ಯವಿದ್ದರೆ ತಜ್ಞರ ನೆರವು ಪಡೆಯಬೇಕು. ಮಾದರಿಯಾಗಿ ರೂಪುಗೊಂಡಿದ್ದ ಸಮೂಹ ಸಂಚಾರ ಸೇವಾ ವ್ಯವಸ್ಥೆಯನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಮತ್ತು ಆಡಳಿತ ಮಂಡಳಿಗೆ ತಮ್ಮದೇ ಆದ ಹೊಣೆಗಾರಿಕೆ ಇದೆ. ಅದನ್ನು ಅರಿತು ಎರಡೂ ಕಡೆಯವರು ಕಾರ್ಯಪ್ರವೃತ್ತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT