ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹುಳುಕುಗಳನ್ನು ತೆರೆದಿಟ್ಟ ಪ್ರವಾಹ, ಪರಿಹಾರ ಕಾರ್ಯ ಚುರುಕುಗೊಳ್ಳಲಿ

Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಕೆಲವು ದಿನಗಳಿಂದ ಮಳೆ ಅಬ್ಬರಿಸುತ್ತಿರುವ ಪರಿಗೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳು ಸಂಪೂರ್ಣವಾಗಿ ನಲುಗಿಹೋಗಿವೆ. ಬಯಲುಸೀಮೆ, ಕರಾವಳಿ ಮತ್ತು ಮಲೆನಾಡು ಎನ್ನದೆ ರಾಜ್ಯದ ಎಲ್ಲೆಡೆಯೂ ಮಳೆ ಆರ್ಭಟಿಸುತ್ತಿದೆ. ಶಾಲೆಗಳಿಗೂ ರಜೆ ಘೋಷಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನ ಪೂರ್ವಭಾಗದ ಕೆಲವು ಪ್ರದೇಶಗಳು ಜಲಾವೃತಗೊಂಡರೆ, ರಾಜ್ಯದ ಹಲವೆಡೆ ಸೇತುವೆಗಳು ಮುಳುಗಡೆಯಾಗಿ ಸಂಪರ್ಕವೇ ಕಡಿದುಹೋಗಿದೆ. ಇನ್ನೂ ಉದ್ಘಾಟನೆ ಆಗಬೇಕಿರುವ ಬೆಂಗಳೂರು–ಮೈಸೂರು ದಶಪಥ ರಸ್ತೆ ಕೂಡ ಕಾಲುವೆಯ ರೂಪವನ್ನು ತಾಳಿ ನಿಂತಿದ್ದು ಸೋಜಿಗ ಉಂಟುಮಾಡಿದೆ.

ಬಿತ್ತನೆಯಾಗಿದ್ದ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ಹಸಿರೆಲ್ಲ ಮಾಯವಾಗಿ ಬರೀ ನೀರು ತುಂಬಿಕೊಂಡಿದೆ. ಮಳೆಯ ಅಟಾಟೋಪ ಹೇಗಿದೆ ಎಂದರೆ ವಾಸದ ಮನೆ, ದವಸ–ಧಾನ್ಯ, ದನಕರುಗಳ ಕೊಟ್ಟಿಗೆ, ಒಣಮೇವು, ಪಚ್ಚೆಪೈರಿನ ಜತೆಗೆ ಜನರ ಭವಿಷ್ಯದ ಕನಸುಗಳೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಜತೆಗೆ ಜೀವಹಾನಿಯೂ ಅವರನ್ನು ಕಂಗೆಡಿಸಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ₹ 7,650 ಕೋಟಿಯಷ್ಟು ನಷ್ಟವಾಗಿದೆ ಎಂದು ಕಂದಾಯ ಇಲಾಖೆಯು ತಕ್ಷಣದ ಅಂದಾಜು ಮಾಡಿದೆಯಾದರೂ ನಷ್ಟದ ಬಾಬತ್ತು ಇದಕ್ಕಿಂತಲೂ ಹಲವು ಪಟ್ಟು ಹೆಚ್ಚಾಗಿದೆ.

ನೂರಾರು ಗ್ರಾಮಗಳು ಜಲಾವೃತವಾಗುವ ಭೀತಿಯನ್ನುಇನ್ನೂ ಎದುರಿಸುತ್ತಿವೆ. ಬರಪೀಡಿತ ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಲ್ಲೀಗ ಹಿಂದೆಂದೂ ಕಾಣದಂತಹ ಮಳೆ ಸುರಿದಿದೆ. ಬರಪೀಡಿತ ಪ್ರದೇಶಗಳ ಜನರಲ್ಲಿ ಜಲಸಿರಿಯಿಂದ ಸಂಭ್ರಮ ಮೂಡಿದರೂ ನಿಲ್ಲದ ಮಳೆ ಅಲ್ಲಿನ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.

ರಾಜ್ಯದಾದ್ಯಂತ ಈ ಎರಡು–ಮೂರು ದಿನಗಳಲ್ಲಿ ಸುರಿದ ಮಳೆಯು ಒಟ್ಟಾರೆ ವ್ಯವಸ್ಥೆಯ ಎಲ್ಲ ಹುಳುಕುಗಳನ್ನೂ ಬಯಲು ಮಾಡಿದೆ. ಒತ್ತುವರಿ ಸಮಸ್ಯೆ ರಾಜಧಾನಿಯನ್ನು ಮಾತ್ರವಲ್ಲ, ರಾಜ್ಯದ ಉಳಿದ ಭಾಗಗಳನ್ನೂ ಕಾಡುತ್ತಿರುವುದು ಢಾಳಾಗಿ ಎದ್ದುಕಂಡಿದೆ. ಕಾಡು–ಮೇಡು, ನದಿ, ಹಳ್ಳ–ಕೊಳ್ಳ ಯಾವುದನ್ನೂ ಬಿಡದಂತೆ ಒತ್ತುವರಿ ಮಾಡಿರುವುದಕ್ಕೆ ಸಣ್ಣ ಸಣ್ಣ ಊರುಗಳಲ್ಲೂ ಉಕ್ಕಿ ಹರಿದ ಪ್ರವಾಹ ಸಾಕ್ಷ್ಯ ನುಡಿಯುತ್ತಿದೆ. ಮಳೆ ನೀರಿನ ಸಹಜ ಹರಿವಿನ ಮಾರ್ಗಗಳೆಲ್ಲ ಒಂದೋ ಒತ್ತುವರಿ ಯಾಗಿವೆ, ಇಲ್ಲದಿದ್ದರೆ ಹೂಳು ತುಂಬಿಕೊಂಡು ನಿಂತಿವೆ ಎಂಬ ವಾದವನ್ನು ರಾಜ್ಯದ ಪ್ರವಾಹದ ಪರಿಸ್ಥಿತಿ ಪುಷ್ಟೀಕರಿಸುತ್ತಿದೆ. ಹಳ್ಳ, ನದಿಗಳಲ್ಲಿ ಹರಿಯಬೇಕಿದ್ದ ಮಳೆ ನೀರು ಮನೆಗಳನ್ನು ಹುಡುಕಿಕೊಂಡು ಬಂದಿದ್ದೇಕೆ ಎಂದು ಜನ ಯೋಚಿಸದಿರುವುದು ಆಶ್ಚರ್ಯ ಉಂಟುಮಾಡುತ್ತದೆ.

ಮಳೆಯ ಪ್ರಮಾಣದಲ್ಲಿ ಆಗುತ್ತಿರುವ ಈ ಪರಿಯ ಏರಿಳಿತಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳು ಪರೋಕ್ಷವಾಗಿ ಮಳೆಚಕ್ರ ದಿಕ್ಕು ತಪ್ಪಲು ಕಾರಣ ಎಂದೂ ಹೇಳಲಾಗುತ್ತಿದೆ. ಪದೇ ಪದೇ ದುರಂತಗಳ ಕಹಿ ನೆನಪು ಕಾಡಿದರೂ ಹಳೆಯ ತಪ್ಪುಗಳಿಂದ ನಾವು ಪಾಠವನ್ನೇ ಕಲಿತಿಲ್ಲ. ಈಗಾಗಲೇ ವಿಳಂಬವಾಗಿದೆಯಾದರೂ ನಮ್ಮ ನೀತಿನಿರೂಪಕರು ಈ ವಿಷಯದಲ್ಲಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪ್ರವಾಹ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು ವಸ್ತುನಿಷ್ಠ ವಿಶ್ಲೇಷಣೆಗೆ ಒಳಪಡಿಸಬೇಕು. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರ ಕಣ್ಣೀರು ಒರೆಸುವುದು ಆದ್ಯತೆಯಾಗಬೇಕು.

ತಕ್ಷಣಕ್ಕೆ ಜಾರಿಗೊಳಿಸಬಹುದಾದ ಅಲ್ಪಾವಧಿ ಮತ್ತು ದೂರಗಾಮಿ ಪರಿಣಾಮ ಬೀರುವ ದೀರ್ಘಾವಧಿ ಯೋಜನೆಗಳ ಮೂಲಕಪ್ರವಾಹದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಕೈತೊಳೆದುಕೊಂಡರೆ ಸಾಲದು. ಸಂತ್ರಸ್ತರಿಗೆ ಅಲ್ಲಿ ಅಗತ್ಯ ಸೌಲಭ್ಯಗಳನ್ನೂ ಒದಗಿಸುವ ಕೆಲಸ ತಕ್ಷಣವೇ ಆಗಬೇಕು. ಕಾಳಜಿ ಕೇಂದ್ರಗಳು ತಾತ್ಕಾಲಿಕವಾಗಿ ಒದಗಿಸಿದ ಸೌಲಭ್ಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು, ಸಮೀಕ್ಷೆಯ ನೆಪದಲ್ಲಿ ವಿಳಂಬ ಮಾಡದೆ ಹಾನಿಗೊಳಗಾದ ಜನರಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವ ಕೆಲಸ ಆಗಬೇಕು.

ಮಳೆಯ ಆರ್ಭಟ ಕಡಿಮೆಯಾದ ತಕ್ಷಣವೇ ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡಬೇಕು. ಎಲ್ಲೆಲ್ಲಿ ಕೆರೆ–ಕಟ್ಟೆ, ಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆಯೋ ಅದನ್ನೆಲ್ಲ ಸಮೀಕ್ಷೆ ನಡೆಸಿ, ಕಾಲಮಿತಿಯಲ್ಲಿ ತೆರವುಗೊಳಿಸಬೇಕು. ಹೂಳನ್ನು ತೆಗೆಸಿದ ನಾಟಕವಾಡದೆ ಕಾಲುವೆಗಳನ್ನು ನಿಜವಾಗಿಯೂ ಸುಸ್ಥಿತಿ
ಯಲ್ಲಿಟ್ಟು ಮಳೆ ನೀರು ಸರಾಗವಾಗಿ ಹರಿಯಲು ಸನ್ನದ್ಧಗೊಳಿಸಬೇಕು. ಆದರೆ, ಚುನಾವಣೆಯತ್ತ ಕಣ್ಣು ನೆಟ್ಟಿರುವ ಸರ್ಕಾರಕ್ಕೆ ಇಂತಹ ವಿಷಯಗಳು ಆದ್ಯತೆಯಾಗಬಲ್ಲವೇ ಎನ್ನುವುದು ಕಾಡುವ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT