ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ಬಿಬಿಎಂಪಿ ಕ್ರಮ ಕಾನೂನುಬಾಹಿರ

Published 4 ಡಿಸೆಂಬರ್ 2023, 23:40 IST
Last Updated 4 ಡಿಸೆಂಬರ್ 2023, 23:40 IST
ಅಕ್ಷರ ಗಾತ್ರ

ನಗರವೊಂದರ ಸೌಂದರ್ಯವನ್ನು ಹೆಚ್ಚಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಅಲ್ಲಿನ ಬಡ
ವರ್ಗದವರು ಸಾಮಾನ್ಯವಾಗಿ ಒಂದಿಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ, ಬೀದಿಬದಿ ವ್ಯಾಪಾರಿಗಳು ತೊಂದರೆಗೆ ಒಳಗಾಗುತ್ತಾರೆ. ಆದರೆ ದೊಡ್ಡವರನ್ನು ಮುಟ್ಟುವ ಗೊಡವೆಗೆ ಅಧಿಕಾರಸ್ಥರು ಹೋಗುವುದಿಲ್ಲ. ಬೆಂಗಳೂರಿನಲ್ಲಿಯೂ ಇದೇ ಆಗುತ್ತಿದೆ. ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯದ ಭಾಗವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಬೀದಿಬದಿ ವ್ಯಾಪಾರಿಗಳನ್ನು ಇದ್ದಕ್ಕಿದ್ದಂತೆ ತೆರವು ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಕಾನೂನು ಸರಿಯಾಗಿ ಪಾಲನೆ ಆಗುತ್ತಿಲ್ಲ. ಈಚಿನ ದಿನಗಳಲ್ಲಿ ಈ ರೀತಿ ತೆರವು ಮಾಡುವುದು ಹೆಚ್ಚಾಗಿದೆ. ಇದು ಈ ನಗರದ ಒಳಗೊಳ್ಳುವಿಕೆಯ ಕುರಿತಾಗಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ದಶಕಗಳಿಂದಲೂ ಈ ನಗರದ ಅವಿಭಾಜ್ಯ ಅಂಗವಾಗಿರುವ ವ್ಯಾಪಾರಿಗಳನ್ನು ಮಹದೇವಪುರ, ಜಯನಗರ, ಬನಶಂಕರಿ ಮತ್ತು ಇತರ ಹಲವು ಪ್ರದೇಶಗಳಿಂದ ಎತ್ತಂಗಡಿ ಮಾಡಲಾಗಿದೆ. ಆದರೆ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ಅಂಗಡಿ ಮಾಲೀಕರು ಮತ್ತು ಕೆಲವು ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಂಡ ನಿದರ್ಶನಗಳು ವಿರಳ. ಕೋವಿಡ್ ಸಾಂಕ್ರಾಮಿಕ ತೀವ್ರಗೊಂಡಿದ್ದ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರವೇ ಇಲ್ಲದಂತಾಗಿತ್ತು. ಅವರು ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಅವರ ಜೀವನವು ಇನ್ನೂ ಹಳಿಗೆ ಬಂದಿಲ್ಲ. ಬೀದಿಬದಿ ವ್ಯಾಪಾರಿಗಳನ್ನು ಅಲ್ಲಿಂದ ಎಬ್ಬಿಸುವ ಅಭಿಯಾನ ಶುರುಮಾಡುವ ಮೊದಲು ಬಿಬಿಎಂಪಿ ನೋಟಿಸ್ ಸಹ ನೀಡಿಲ್ಲ. ಪರವಾನಗಿ ಹೊಂದಿರುವ ಬೀದಿಬದಿ
ವ್ಯಾಪಾರಿಗಳನ್ನು ಕೂಡ ಗುರಿಯಾಗಿಸಿಕೊಳ್ಳಲಾಗಿದೆ.

ಬಿಬಿಎಂಪಿ ಕೃತ್ಯವು ಸಂಪೂರ್ಣವಾಗಿ ಕಾನೂನುಬಾಹಿರ. ಏಕೆಂದರೆ ಇದು, ಬೀದಿಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರದ ನಿಯಂತ್ರಣ) ಕಾಯ್ದೆ– 2014ರ ಉಲ್ಲಂಘನೆ. ನಗರದ ಬೀದಿಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ ಹಾಗೂ ಬೀದಿಬದಿ ವ್ಯಾಪಾರ ಚಟುವಟಿಕೆಗಳನ್ನು ಕಾನೂನಿನ ಚೌಕಟ್ಟಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಯು ಪ್ರತಿ ನಗರ ಸ್ಥಳೀಯ ಸಂಸ್ಥೆ ಕೂಡ ವ್ಯಾಪಾರ ಸಮಿತಿಯನ್ನು ರಚಿಸಬೇಕು ಎಂದು ಹೇಳುತ್ತದೆ. ಈ ಸಮಿತಿಯು ಸಮೀಕ್ಷೆ ಕೈಗೊಂಡು, ಬೀದಿಬದಿ ವ್ಯಾಪಾರಿಗಳನ್ನು ಗುರುತಿಸುವ ಕೆಲಸ ಮಾಡಬೇಕು. ಬೀದಿಬದಿ ವ್ಯಾಪಾರಿಗಳ ಸಂಖ್ಯೆಯು ವಾರ್ಡ್‌, ಪಟ್ಟಣ ಅಥವಾ ನಗರದ ಒಟ್ಟು ಜನಸಂಖ್ಯೆಯ ಶೇಕಡ 2.5ರಷ್ಟಕ್ಕಿಂತ ಹೆಚ್ಚಿರಬಾರದು ಎಂದು ಕಾಯ್ದೆ ಹೇಳುತ್ತದೆ. ವಲಯವೊಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳು ಇದ್ದರೆ, ಸಮಿತಿಯು ಹೆಚ್ಚುವರಿ ಬೀದಿಬದಿ ವ್ಯಾಪಾರಿಗಳಿಗೆ ಲಾಟರಿ ಮೂಲಕ ಅಕ್ಕಪಕ್ಕದ ವಲಯಗಳಲ್ಲಿ ನೆಲೆ ಕಲ್ಪಿಸಿಕೊಡಬೇಕು. ಸಮೀಕ್ಷೆಯು ಪೂರ್ಣಗೊಳ್ಳುವ ಮೊದಲು ಯಾರನ್ನೂ ತೆರವು ಮಾಡುವಂತೆ ಇಲ್ಲ. 

ಒಮ್ಮೆ ಸಮೀಕ್ಷೆ ನಡೆದ ನಂತರದಲ್ಲಿ, ಕನಿಷ್ಠ ಐದು ವರ್ಷಕ್ಕೆ ಒಮ್ಮೆಯಾದರೂ ಸಮೀಕ್ಷೆ ನಡೆಸಬೇಕು. ಸಮಿತಿಯು ಕೈಗೊಂಡ ತೀರ್ಮಾನವು ಯಾರಿಗಾದರೂ ತೃಪ್ತಿ ತರದಿದ್ದಲ್ಲಿ, ಅದಕ್ಕೆ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆಯ ಬಗ್ಗೆ ಕೂಡ ಕಾಯ್ದೆಯು ಹೇಳಿದೆ. ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯ ವಾದವನ್ನು ಆಲಿಸದೆ, ಆತನ ಅರ್ಜಿಯನ್ನು ಇತ್ಯರ್ಥಪಡಿಸಲು ಅವಕಾಶವಿಲ್ಲ. ಬೀದಿಬದಿ ವ್ಯಾಪಾರಿಗಳು ಮತ್ತು ಇತರರು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಳ್ಳುವುದು ಒಂದು ಪಿಡುಗು, ಇದು ಪಾದಚಾರಿಗಳನ್ನು ತೊಂದರೆಗೆ ಸಿಲುಕಿಸುತ್ತದೆ ಎಂಬುದು ನಿಜ. ಆದರೆ ಬಿಬಿಎಂಪಿ ಕೈಗೊಂಡಿರುವ ಕ್ರಮವು ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿರುವುದಷ್ಟೇ ಅಲ್ಲದೆ, ಮನಸೋಇಚ್ಛೆ ವರ್ತನೆಗೆ ಸಮನಾಗಿದೆ. ಈ ಕ್ರಮಕ್ಕೆ ವಿರೋಧಗಳು ಬಂದಾಗ ಅಭಿಯಾನಕ್ಕೆ ತಾತ್ಕಾಲಿಕ ತಡೆ ಬೀಳುತ್ತದೆ. ಆದರೆ ಇಷ್ಟೇ ಸಾಕಾಗುವುದಿಲ್ಲ. ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕು. ಬೀದಿಬದಿ ವ್ಯಾಪಾರಿಗಳು ಮತ್ತು ಹಾಕರ್‌ಗಳು ಸಮಾಜದ ದುರ್ಬಲ ವರ್ಗಕ್ಕೆ ಸೇರಿದವರು. ಅವರಿಗೆ ಕೂಡ ಜೀವನೋಪಾಯ ಕಂಡುಕೊಳ್ಳುವ ಹಕ್ಕು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT