ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ, ಸೂಕ್ತ ತೀರ್ಮಾನ ತಳೆದ ಆರ್‌ಬಿಐ

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ತೀರ್ಮಾನವನ್ನು ಏಪ್ರಿಲ್‌ 5ರಂದು ಕೈಗೊಂಡಿದೆ. ಈ ತೀರ್ಮಾನ ಕೈಗೊಂಡಿದ್ದಕ್ಕೆ ಕಾರಣ ವಿವರಿಸಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಭಾರತದ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯವು ಹಣದುಬ್ಬರದ ನಿಯಂತ್ರಣದ ಮೇಲೆ ಹೆಚ್ಚಿನ ಗಮನ ನೀಡಲು ಹಾಗೂ ಮಧ್ಯಮಾವಧಿಯಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ಶೇಕಡ 4ಕ್ಕೆ ಮಿತಿಗೊಳಿಸುವುದಕ್ಕೆ
ಆದ್ಯತೆ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಆರ್ಥಿಕ ಬೆಳವಣಿಗೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಬಿಐಗೆ ಕರೆ ನೀಡಿದ ಕೆಲವೇ ದಿನಗಳಲ್ಲಿ ದಾಸ್ ಅವರು ಈ ಮಾತು ಆಡಿದ್ದಾರೆ. ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕಾದ ಸಂದರ್ಭಗಳಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಕಡಿಮೆ ಮಾಡುತ್ತವೆ. ಅವು ಚಿಲ್ಲರೆ ಹಣದುಬ್ಬರ ದರವನ್ನು ನಿಯಂತ್ರಣಕ್ಕೆ ತರುವ ಗುರಿ ಇಟ್ಟುಕೊಂಡಾಗ ರೆಪೊ ದರವನ್ನು ಹೆಚ್ಚು ಮಾಡುವ ಕೆಲಸಕ್ಕೆ ಮುಂದಾಗುತ್ತವೆ. ಆದರೆ ಈಗ, ತಾನು ರೆಪೊ ದರವನ್ನು ಕಡಿಮೆ ಮಾಡದೆ ಇದ್ದರೂ ಆರ್ಥಿಕ ಬೆಳವಣಿಗೆ ದರವು ಚೆನ್ನಾಗಿಯೇ ಇರಲಿದೆ ಎಂಬ ಮಾತನ್ನು ಆರ್‌ಬಿಐ ಹೇಳುತ್ತಿದೆ. 2025ನೇ ಹಣಕಾಸು ವರ್ಷಕ್ಕೆ ದೇಶದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟು ಇರಲಿದೆ ಎಂಬ ಅಂದಾಜನ್ನು ಆರ್‌ಬಿಐ ಪುನರುಚ್ಚರಿಸಿದೆ.

ರೆಪೊ ದರವನ್ನು ಸತತ ಏಳನೆಯ ಬಾರಿಯೂ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸುವ ಮೂಲಕ ಹಣಕಾಸು ನೀತಿ ಸಮಿತಿಯು ಸರಿಯಾದ ತೀರ್ಮಾನವನ್ನೇ ಕೈಗೊಂಡಿದೆ. ಈಗ ರೆಪೊ ದರವು ಶೇ 6.5ರಷ್ಟು ಇದೆ. ರೆಪೊ ದರವು ಈ ಮಟ್ಟವನ್ನು ತಲುಪಿದ್ದು 2023ರ ಫೆಬ್ರುವರಿಯಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಆರ್‌ಬಿಐ ಬಿಗಿ ನಿಲುವನ್ನು ಮುಂದುವರಿಸಿಕೊಂಡು ಬಂದಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರವು ಈ ವರ್ಷದ ಫೆಬ್ರುವರಿಯಲ್ಲಿ ಶೇ 5.09ರಷ್ಟು ದಾಖಲಾಗಿದೆ. ಚಿಲ್ಲರೆ ಹಣದುಬ್ಬರ ದರವು ಸತತ 53 ತಿಂಗಳುಗಳಿಂದಲೂ ಆರ್‌ಬಿಐ ನಿಗದಿ ಮಾಡಿಕೊಂಡಿರುವ ಶೇ 4ರ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. ಆದರೆ ಈಚಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಗರಿಷ್ಠ ಮಿತಿಯಾದ ಶೇ 6ಕ್ಕಿಂತ ಹೆಚ್ಚಾಗಿಲ್ಲದ ಕಾರಣಕ್ಕೆ, ರೆಪೊ ದರವನ್ನು ಇನ್ನಷ್ಟು ಹೆಚ್ಚು ಮಾಡುವ ಅಗತ್ಯವೂ ಇಲ್ಲ ಎಂಬುದನ್ನು ಎಂಪಿಸಿ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ, ಅಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಏಪ್ರಿಲ್‌–ಜೂನ್ ತ್ರೈಮಾಸಿಕದ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಶೇ 4.9ರಷ್ಟು, ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 3.8ರಷ್ಟು, ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಶೇ 4.6ರಷ್ಟು ಹಾಗೂ ಜನವರಿ–ಮಾರ್ಚ್ ತ್ರೈಮಾಸಿಕದ ಅವಧಿಯಲ್ಲಿ ಶೇ 4.5ರಷ್ಟು ದಾಖಲಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಬಾರಿಯ ಮುಂಗಾರು ಮಳೆಯು ವಾಡಿಕೆಯಂತೆ ಇರುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಅಂದಾಜುಗಳನ್ನು ಮಾಡಲಾಗಿದೆ. ಆಹಾರ ವಸ್ತುಗಳ ಬೆಲೆಯಲ್ಲಿನ ಅನಿಶ್ಚಿತತೆಯು ಹಣದುಬ್ಬರ ಪ್ರಮಾಣದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಕೂಡ ದಾಸ್ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಮುಂಗಾರು ಮಳೆಯು ವಾಡಿಕೆಯಂತೆ ಆಗಲಿದೆ ಎಂಬ ನಿರೀಕ್ಷೆ ವ್ಯಾಪಕವಾಗಿರುವುದು ಹೌದಾದರೂ, ಮಳೆಯು ಎಲ್ಲ ಪ್ರದೇಶಗಳಲ್ಲಿಯೂ ಎಷ್ಟರಮಟ್ಟಿಗೆ ವಾಡಿಕೆಯಂತೆ ಆಗಲಿದೆ ಎಂಬುದನ್ನು ಕಾದು ನೋಡಬೇಕು. ಅದರಿಂದ ಮುಂಗಾರು ಹಂಗಾಮಿನ ಬಿತ್ತನೆಯ ಮೇಲೆ ಯಾವ ಬಗೆಯ ಪರಿಣಾಮ ಉಂಟಾಗುತ್ತದೆ ಎಂಬುದು ಕೂಡ ಇನ್ನಷ್ಟೇ ಗೊತ್ತಾಗಬೇಕು. ಆಹಾರೇತರ ವಸ್ತುಗಳ ಬೆಲೆ ಏರಿಕೆಯ ಪ್ರಮಾಣವು ನಿಯಂತ್ರಣದಲ್ಲಿ ಇದೆಯಾದರೂ, ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಬಹುದು ಎಂದು ಕೆಲವು ಪರಿಣತರು ಅಂದಾಜಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಆಹಾರ ವಸ್ತುಗಳ ಬೆಲೆಯಲ್ಲಿ ಸ್ಥಿರತೆ ಕಾಣುತ್ತಿಲ್ಲ. ಇದು ಹಣದುಬ್ಬರ ನಿಯಂತ್ರಣದಲ್ಲಿ ದೊಡ್ಡ ಸವಾಲಾಗಿ ನಿಂತಿದೆ.

ಈ ನಡುವೆ, ಜಾಗತಿಕ ಬಿಕ್ಕಟ್ಟುಗಳ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯು 2023ರ ಅಕ್ಟೋಬರ್ ನಂತರದಲ್ಲಿ ಹೆಚ್ಚಿನ ಮಟ್ಟದಲ್ಲಿ ಇದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 90 ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ. ಇದು ಇಂಧನ ಬೆಲೆಯ ಏರಿಕೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಉಂಟುಮಾಡಲಿದೆ ಎಂಬುದನ್ನು ಆರ್‌ಬಿಐ ಸೂಕ್ಷ್ಮವಾಗಿ ಅವಲೋಕಿಸಲಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಜೂನ್‌ಗೂ ಮೊದಲು ಬಡ್ಡಿ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇಲ್ಲ. ಹೀಗಾಗಿ, ಆರ್‌ಬಿಐ ಕೂಡ ಅದಕ್ಕೂ ಮೊದಲು ರೆಪೊ ದರ ತಗ್ಗಿಸುವ ಕಾರ್ಯಕ್ಕೆ ಕೈಹಾಕುವ ಸಾಧ್ಯತೆ ಬಹಳ ಕಡಿಮೆ. ಪ್ರಸಕ್ತ ಕ್ಯಾಲೆಂಡರ್ ವರ್ಷದ ಅಂತ್ಯದ ಹೊತ್ತಿಗೆ ಭಾರತದಲ್ಲಿ ರೆಪೊ ದರ ಇಳಿಕೆ ಆಗಬಹುದು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಸರ್ಕಾರ ಬಯಸುತ್ತಿದ್ದರೂ, ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಮೂಲಕ ಆರ್‌ಬಿಐ ಒಳ್ಳೆಯ ಕೆಲಸವನ್ನೇ ಮಾಡಿದೆ. ತನ್ನ ಬಳಿ ಇರುವ ದತ್ತಾಂಶ ಆಧರಿಸಿ ಆರ್‌ಬಿಐ ಈ ತೀರ್ಮಾನ ಕೈಗೊಂಡಿದೆ. ಬಡ್ಡಿ ದರ ಇಳಿಕೆಗೆ ಕಾಲ ಇನ್ನೂ ಕೂಡಿಬಂದಿಲ್ಲ ಎಂಬುದನ್ನು ಆರ್‌ಬಿಐ ಬಳಿ ಇರುವ ದತ್ತಾಂಶ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT