ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋವಿಡ್‌ ಪೂರ್ವದ ಮಟ್ಟಕ್ಕೆ ರೆಪೊ- ನಿಯಂತ್ರಣಕ್ಕೆ ಬರುವುದೇ ಹಣದುಬ್ಬರ?

Last Updated 7 ಆಗಸ್ಟ್ 2022, 23:30 IST
ಅಕ್ಷರ ಗಾತ್ರ

ದೇಶದಲ್ಲಿ ಹಣದುಬ್ಬರ ದರವು ‘ಸ್ವೀಕಾರಾರ್ಹ ಅಲ್ಲದಷ್ಟು ಅತಿಯಾಗಿದೆ’ ಎಂದು ಹೇಳಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶುಕ್ರವಾರ ಶೇಕಡ 0.50ರಷ್ಟು ಹೆಚ್ಚಿಸಿದೆ. ಇದು ನಿರೀಕ್ಷಿತವೇ ಆಗಿತ್ತು. ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಹಣಕ್ಕೆ ವಿಧಿಸುವ ಬಡ್ಡಿ ದರ (ರೆಪೊ ದರ) ಈಗ ಕೋವಿಡ್‌ ಪೂರ್ವದ ಮಟ್ಟವನ್ನು ಮೀರಿದೆ. 2019ರ ಆಗಸ್ಟ್‌ನಲ್ಲಿ ರೆಪೊ ದರವು ಶೇಕಡ 5.40ರಷ್ಟು ಇತ್ತು. ಶುಕ್ರವಾರದ ಏರಿಕೆಯ ನಂತರ ದರವು ಮತ್ತೆ ಈ ಮಟ್ಟವನ್ನು ತಲುಪಿದೆ.

ರೆಪೊ ದರವನ್ನು ಆರ್‌ಬಿಐ ಶೇ 0.35ರಿಂದ ಶೇ 0.50ರವರೆಗೆ ಹೆಚ್ಚಳ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಮೊದಲೇ ಅಂದಾಜು ಮಾಡಿದ್ದರು. ಹೀಗಾಗಿ, ಆರ್‌ಬಿಐ ತೀರ್ಮಾನವು ದೇಶದ ಹಣಕಾಸು ಮಾರುಕಟ್ಟೆಗಳ ಮೇಲೆ ಅನಿರೀಕ್ಷಿತ ಪರಿಣಾಮವನ್ನೇನೂ ಬೀರಿದಂತಿಲ್ಲ. ರೆಪೊ ದರವನ್ನು ಆರ್‌ಬಿಐ ನಿರ್ಧರಿಸುವುದು ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಆಧರಿಸಿ. ಅದು ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣವು ತುಸು ಇಳಿಕೆ ಆಗಬಹುದಾದರೂ, ಖುದ್ದು ಆರ್‌ಬಿಐ ಅಂದಾಜು ಮಾಡಿರುವ ಪ್ರಕಾರ ಅದು ಗರಿಷ್ಠ ಮಿತಿಯೊಳಗೆ ಬರುವ ಸಾಧ್ಯತೆ ಇಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.7ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಹಣಕಾಸಿನ ನೀತಿಯನ್ನು ಬಿಗಿಗೊಳಿಸಿ, ರೆಪೊ ದರವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯ ಎದುರಾಗಬಹುದು ಎಂಬುದರ ಸೂಚನೆಯನ್ನು ಈ ಅಂದಾಜು ನೀಡುತ್ತಿದೆ.

ದೇಶದಲ್ಲಿ ಕೋವಿಡ್‌ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ರೆಪೊ ದರವನ್ನು ಆರ್‌ಬಿಐ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿತು. ಇದರಿಂದಾಗಿ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಜಾಸ್ತಿಯಾಯಿತು, ಹಣದುಬ್ಬರ ಹೆಚ್ಚಾಗಲು ಎಡೆಮಾಡಿಕೊಟ್ಟಿತು ಎಂಬ ವಾದ ಇದೆ. ಆದರೆ, ಈ ವಾದವನ್ನು ದಾಸ್ ಒಪ್ಪಿಲ್ಲ. ಹಿಂದೆ ಮಾಡಿರುವ ರೆಪೊ ದರ ಇಳಿಕೆಗೂ ಹಣದುಬ್ಬರಕ್ಕೂ ಸಂಬಂಧ ಇಲ್ಲ.

ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಅಂತರರಾಷ್ಟ್ರೀಯ ವಿದ್ಯಮಾನಗಳ ಕಾರಣದಿಂದಾಗಿ ಹಣದುಬ್ಬರ ಹೆಚ್ಚಾಗಿದೆ ಎಂದು ದಾಸ್ ಹೇಳಿದ್ದಾರೆ. ಈ ಮಾತಿನಲ್ಲಿ ಒಂದಿಷ್ಟು ಸತ್ಯ ಖಂಡಿತ ಇದೆ. ಲಾಕ್‌ಡೌನ್‌ ಜಾರಿಗೆ ಬಂದ ನಂತರ ಪೂರೈಕೆ ವ್ಯವಸ್ಥೆಯಲ್ಲಿ ಏರುಪೇರು ಆಗಿದೆ. ಅದು ಹಣದುಬ್ಬರ ಹೆಚ್ಚಳಕ್ಕೆ ದಾರಿಮಾಡಿಕೊಟ್ಟಿದೆ. ರಷ್ಯಾ–ಉಕ್ರೇನ್ ಯುದ್ಧ ಕೂಡ ದೇಶದಲ್ಲಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರವಾಗಿ ಕಾರಣವಾಗಿದೆ. ಈಚಿನ ದಿನಗಳಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿರುವುದು ಕೂಡ ಹಣದುಬ್ಬರ ಹೆಚ್ಚಾಗಲು ಕಾರಣವಾಗಿದೆ.

ಈ ಎಲ್ಲವುಗಳಿಂದಾಗಿ ಆಗಿರುವ ಹಣದುಬ್ಬರ ಹೆಚ್ಚಳವನ್ನು ರೆಪೊ ದರ ಏರಿಕೆಯ ಮೂಲಕ ನಿಯಂತ್ರಣಕ್ಕೆ ತರಲು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಇದೆ. ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಎಂಪಿಸಿ ಸಭೆಯಲ್ಲಿಯೂ ರೆಪೊ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಆರ್‌ಬಿಐ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಹೆಚ್ಚು ಪ್ರಸ್ತುತವಾಗುತ್ತದೆ.

ಶ್ರಾವಣ ಬಂತೆಂದರೆ ದೇಶದಲ್ಲಿ ಹಬ್ಬಗಳ ಋತು ಶುರುವಾಗುತ್ತದೆ. ಈ ಅವಧಿಯಲ್ಲಿ ಮನೆ ಖರೀದಿ, ವಾಹನ ಖರೀದಿ, ಆಭರಣ ಖರೀದಿ ಭರದಿಂದ ನಡೆಯುತ್ತವೆ. ಮನೆ ಮತ್ತು ವಾಹನ ಖರೀದಿಗೂ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ ದರಕ್ಕೂ ನೇರ ಸಂಬಂಧ ಇದೆ. ರೆಪೊ ದರ ಏರಿಕೆಯ ಪರಿಣಾಮವಾಗಿ ಸಾಲದ ಬಡ್ಡಿ ದರ ಏರಿಕೆ ಸಹಜವಾಗಿಯೇ ಆಗುತ್ತದೆ.

ಇದು ಹಬ್ಬಗಳ ಋತುವಿನಲ್ಲಿ ವಾಹನ ಮತ್ತು ಮನೆ ಖರೀದಿಯ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು ಎಂಬುದು ಈಗ ಗಮನಿಸಬೇಕಾದ ಅಂಶ. ಬಡ್ಡಿ ದರ ಏರಿಕೆಯು ಮನೆ ಮತ್ತು ವಾಹನ ಖರೀದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿಕ್ಕಿಲ್ಲ ಎಂಬ ವಾದ ಇದೆ. ಆದರೆ, ರೆಪೊ ದರ ಏರಿಕೆಯು ಹಬ್ಬದ ಋತುವಿನಲ್ಲಿ ಬರುವ ಬೇಡಿಕೆಗಳನ್ನು ತಗ್ಗಿಸಲಿದೆ ಎಂಬ ಆತಂಕವನ್ನು ಕೆಲವು ವಾಣಿಜ್ಯೋದ್ಯಮ ಸಂಘಟನೆಗಳು ಈಗಾಗಲೇ ವ್ಯಕ್ತ‍ಪಡಿಸಿವೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT