ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ

Last Updated 13 ಮೇ 2020, 1:37 IST
ಅಕ್ಷರ ಗಾತ್ರ

ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್‌ಡೌನ್‌ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ‘ಎಲ್ಲಿರುವಿರೋ ಅಲ್ಲಿಯೇ ಇರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಹೇಳಿದ್ದರು. ಕಣ್ಣಿಗೆ ಕಾಣದ ವೈರಿಯ ವಿರುದ್ಧದ ಹೋರಾಟದಲ್ಲಿ ಇದು ಅನಿವಾರ್ಯ ಎಂದು ಜನರು ಅದನ್ನು ಪಾಲಿಸಿದ್ದರು. ಆದರೆ, ಎಲ್ಲೆಲ್ಲೋ ಇರುವವರು ಅಲ್ಲಲ್ಲೇ ಇರುವುದು ಎಷ್ಟು ತ್ರಾಸದಾಯಕ ಎಂಬುದು ಲಾಕ್‌ಡೌನ್‌ ಮತ್ತೆ ಮತ್ತೆ ವಿಸ್ತರಣೆಯಾದಾಗ ಅರಿವಾಗುತ್ತಾ ಹೋಯಿತು.

ಜನ ಮತ್ತು ಜೀವನೋಪಾಯ, ವ್ಯಾಪಾರೋದ್ಯಮ ಮತ್ತು ಅರ್ಥ ವ್ಯವಸ್ಥೆಗಳೆಲ್ಲವೂ ತಾಳತಪ್ಪಿ, ಕೊರೊನಾಕ್ಕಿಂತ ದೊಡ್ಡ ಸಂಕಷ್ಟದತ್ತ ಸಾಗುತ್ತಿದ್ದೇವೆ ಎಂಬುದರ ಸೂಚನೆಗಳು ಇತ್ತೀಚಿನ ಕೆಲ ವಾರಗಳಲ್ಲಿ ಸಿಕ್ಕಿವೆ. ಎಲ್ಲೆಲ್ಲೋ ಇದ್ದವರು ಮನೆ ಸೇರುವ ತವಕದಲ್ಲಿ ತಮಗೆ ಮತ್ತು ತಮ್ಮಿಂದ ಇತರರಿಗೆ ಕೊರೊನಾ ಸೋಂಕು ತಗುಲಬಹುದು ಎಂಬುದನ್ನೇ ಮರೆತರು. ಭಾರತದಂತಹ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರು ಅಮೂಲ್ಯ. ಆದರೆ, ಅಂತಹ ಕಾರ್ಮಿಕರು ನೂರಾರು ಕಿಲೊಮೀಟರ್‌ ನಡೆದು, ಸೈಕಲ್ ತುಳಿದು ಊರು ಸೇರಬೇಕಾದ ಸ್ಥಿತಿ, ಈ ಅನಿವಾರ್ಯ ಪಯಣದಲ್ಲಿ ಎದುರಿಸಿದ ತೊಂದರೆಗಳು, ಕೆಲವರು ಜೀವವನ್ನೇ ತೆತ್ತ ಉದಾಹರಣೆಗಳೂ ನಮ್ಮ ಮುಂದೆ ಈಗ ಇವೆ. ಹಳಿ ತಪ್ಪಿರುವ ವ್ಯವಸ್ಥೆಯನ್ನು ಇನ್ನಾದರೂ ಹಳಿಗೆ ತಾರದಿದ್ದರೆ, ಜನಜೀವನದ ಮೇಲೆ ಈಗಾಗಲೇ ಬಿದ್ದಿರುವ ಮತ್ತು ಮುಂದೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳುವುದು ಈ ದೇಶಕ್ಕೆ ಸುಲಭ ಸಾಧ್ಯವಲ್ಲ. ಹಾಗಾಗಿಯೇ, ಒಂದು ವಾರದಿಂದ ನಿರ್ಬಂಧಗಳಲ್ಲಿ ತುಸು ಸಡಿಲಿಕೆ ಆಗಿದೆ. ಆದರೆ, ಈ ದಿನಗಳಲ್ಲಿ, ಕೋವಿಡ್‌–19 ಪ್ರಕರಣಗಳು ದೃಢಪಡುತ್ತಿರುವ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿದೆ. ಇದು ಆಡಳಿತ ನಡೆಸುತ್ತಿರುವವರಲ್ಲಿ ದ್ವಂದ್ವ ಮತ್ತು ಕಳವಳ ಮೂಡಿಸಿರುವ ಸಾಧ್ಯತೆಗಳಿವೆ.

ಪ್ರಧಾನಿ ಜತೆಗೆ ಮುಖ್ಯಮಂತ್ರಿಗಳು ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಇದು ವ್ಯಕ್ತವಾಗಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಾರಿಗೆ ಆರಂಭವಾಗಲೇಬೇಕಿದೆ ಎಂಬ ವಿಚಾರದಲ್ಲಿ ಮುಖ್ಯಮಂತ್ರಿಗಳಲ್ಲಿ ಸಹಮತ ಕಾಣಿಸಿಲ್ಲ. ಸೋಮವಾರದಿಂದ 15 ಮಾರ್ಗಗಳಲ್ಲಿ 30 ರೈಲುಗಳ ಸೇವೆ ಆರಂಭವಾಗಿದೆ. ಈ ರೈಲು ಸಂಚಾರಕ್ಕೆ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂತರರಾಜ್ಯ ಸಾರ್ವಜನಿಕ ಸಾರಿಗೆ ಶುರುವಾಗಲಿ ಎಂದು ಗೋವಾ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಕೋರಿದ್ದಾರೆ ಎಂದು ವರದಿಯಾಗಿದೆ. ಆರ್ಥಿಕ ಚಟುವಟಿಕೆಗೆ ಚಾಲನೆ ನೀಡಲು ಮಾತ್ರವಲ್ಲ, ಎಲ್ಲೆಲ್ಲೋ ಸಿಲುಕಿಕೊಂಡಿರುವವರು ತಮ್ಮ ಗಮ್ಯ ಸೇರಲು ಕೂಡ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಬೇಕಿದೆ. ಲಾಕ್‌ಡೌನ್‌ನಿಂದಾಗಿ ಅಪರಿಚಿತ ನಗರದಲ್ಲಿ ಸಿಲುಕಿಕೊಂಡ ಕಾರ್ಮಿಕರು ಊರಿಗೆ ಮರಳಲು ಸರ್ಕಾರವೇ ಶ್ರಮಿಕ ರೈಲು ವ್ಯವಸ್ಥೆ ಮಾಡಿದೆ. ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಈಗ ಊರು ಸೇರಿಕೊಂಡಿದ್ದಾರೆ. ಗ್ರಾಮಗಳ ಜನರು ದುಡಿಯಲು ಬಾರದೇ ಇದ್ದರೆ ಪಟ್ಟಣ, ನಗರಗಳ ಕಾರ್ಖಾನೆಗಳ ಯಂತ್ರ ತಿರುಗುವುದಿಲ್ಲ. ಎಲ್ಲವೂ ಸಹಜ ಸ್ಥಿತಿಯತ್ತ ಹೊರಳುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವುದು ಕೂಡ ಭಾವನಾತ್ಮವಾಗಿ ಬಹಳ ಮುಖ್ಯ. ಸರಕು ಸಾಗಾಟ ಮತ್ತು ಜನ ಸಂಚಾರವು ಅರ್ಥವ್ಯವಸ್ಥೆಯ ಜೀವನಾಡಿ ಇದ್ದಂತೆ. ಹಾಗಾಗಿ, ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವ ದಿಸೆಯಲ್ಲಿ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು.

ಕೊರೊನಾ ಪಿಡುಗು ಹರಡುವ ವೇಗ ಮತ್ತು ವಿಧಾನಗಳೆರಡನ್ನೂ ಗಮನದಲ್ಲಿ ಇರಿಸಿಕೊಂಡೇ ಈ ನಿರ್ಧಾರ ಕೈಗೊಳ್ಳಬೇಕು. ಬಸ್ಸು, ರೈಲು ಮತ್ತು ಈ ಎರಡರ ನಿಲ್ದಾಣಗಳು ಎಷ್ಟು ಕೊಳಕಾಗಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಈಗಿನ ಸನ್ನಿವೇಶದಲ್ಲಿಯೂ ಅದೇ ಕೊಳಕುತನವನ್ನು ಮುಂದುವರಿಸಿದರೆ ಅದಕ್ಕೆ ತೆರಬೇಕಾದ ಬೆಲೆಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ನಿಲ್ದಾಣಗಳು, ರೈಲು, ಬಸ್ಸುಗಳನ್ನು ಸ್ವಚ್ಛಗೊಳಿಸಬೇಕು, ಸೋಂಕುಮುಕ್ತಗೊಳಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಸೋಂಕು ಒಂದೂರಿನಿಂದ ಇನ್ನೊಂದು ಊರಿಗೆ ಸಾಗುತ್ತಿಲ್ಲ ಎಂಬುದನ್ನು ಖಾತರಿ‍ಪಡಿಸಿಕೊಳ್ಳಬೇಕು. ಅತ್ಯಂತ ಆರೋಗ್ಯಕರವಾದ, ಗರಿಷ್ಠ ಎಚ್ಚರದ ಪ್ರಯಾಣ ಸಾಧ್ಯವಾಗುವಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಜನ ಕೂಡ ಸಣ್ಣ ಉದಾಸೀನಕ್ಕೂ ಎಡೆಮಾಡಿಕೊಡದೆ ಜಾಗೃತರಾಗಿರಬೇಕು. ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆ ರಾಜ್ಯಗಳಲ್ಲಿ ಒಮ್ಮತ ಇಲ್ಲ. ಹಾಗಾಗಿ, ಯಾವೆಲ್ಲ ಜಾಗರೂಕತೆ ಇರಬೇಕು ಎಂಬ ಮಾರ್ಗಸೂಚಿಯನ್ನು ಕೇಂದ್ರವೇ ಸಿದ್ಧಪಡಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT