ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 18ನೇ ಆವೃತ್ತಿಯ ಫೈನಲ್ನಲ್ಲಿ ಗೆಲುವು ಕಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್ಸಿಬಿ) ತಂಡವನ್ನು ಸನ್ಮಾನಿಸುವ ಸಂಭ್ರಮಾಚರಣೆಯ
ಕಾರ್ಯಕ್ರಮವು ಸೂತಕವಾಗಿ ಪರಿವರ್ತನೆಯಾಗಿದ್ದು ದುರದೃಷ್ಟಕರ. ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು. ಅಭಿಮಾನಿಗಳು ಎಲ್ಲ ದಿಕ್ಕುಗಳಿಂದಲೂ ಈ ಎರಡು ಸ್ಥಳಗಳತ್ತ ನುಗ್ಗಿದರು. ಇಡೀ ಪ್ರದೇಶವು ಜನಸಾಗರವಾಗಿ ಪರಿವರ್ತನೆಯಾಗಿತ್ತು. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ಹಲವು ರಸ್ತೆಗಳನ್ನು ಮುಚ್ಚಲಾಗಿತ್ತು. ಸಂಚಾರಕ್ಕೆ ಮುಕ್ತವಾಗಿದ್ದ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ಸಂಚಾರ ಅಕ್ಷರಶಃ ಸ್ಥಗಿತವಾಗಿತ್ತು. ಲಕ್ಷಾಂತರ ಜನರು ಸೇರಿದ್ದರಿಂದಾಗಿ ಉಂಟಾದ ನೂಕುನುಗ್ಗಲಿನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಕೆಲವರು ಸತ್ತಿದ್ದರೆ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಸತ್ತಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳು, ಯುವಕ, ಯುವತಿಯರು ಇದ್ದಾರೆ. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಟ್ಟಿಗೆ ಇದು ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದಂತಹ ದುರಂತ. ಈ ಪ್ರದೇಶದ ಸುತ್ತಮುತ್ತ ಸಂಚರಿಸುವ ಮೆಟ್ರೊ ರೈಲಿನಲ್ಲಿ ಕೂಡ ವಿಪರೀತ ಜನದಟ್ಟಣೆಯಿಂದಾಗಿ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು. ಕೆಲವು ನಿಲ್ದಾಣಗಳನ್ನು ಕೆಲಹೊತ್ತು ಬಂದ್ ಮಾಡಿ ದಟ್ಟಣೆ ನಿಯಂತ್ರಿಸಲು ಪ್ರಯತ್ನಿಸಿದರೂ ಅದಕ್ಕೆ ಹೆಚ್ಚಿನ ಫಲ ಸಿಗಲಿಲ್ಲ. ಹಿಂದಿರುಗಲು ಬಯಸಿದ ಜನರಿಗೂ ಯಾವುದೇ ವಾಹನ ವ್ಯವಸ್ಥೆ ಇಲ್ಲದೆ ಸಂಕಟಪಡುವಂತಾಯಿತು.

ಕರ್ನಾಟಕ ಸರ್ಕಾರ ಮತ್ತು ಆರ್ಸಿಬಿ ತಂಡದ ಮಾಲೀಕರು ಮತ್ತು ನಿರ್ವಾಹಕರ ಕಡೆಯಿಂದ ಆಗಿರುವ ಹಲವು ಲೋಪಗಳು ಈ ದುರಂತಕ್ಕೆ ಕಾರಣ. ಗುಪ್ತಚರ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುವಂತಿದೆ. ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ತೆರೆದ ಬಸ್ನಲ್ಲಿ ಆಟಗಾರರ ಮೆರವಣಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸರು ಒಂದಷ್ಟು ಎಚ್ಚರಿಕೆಯನ್ನು
ತೋರಿದ್ದಾರೆ. ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ಸರ್ಕಾರವನ್ನು ಬಿಜೆಪಿ, ಜೆಡಿಎಸ್ ‘ಎಕ್ಸ್’ ಮೂಲಕ ಟೀಕಿಸಿದ್ದವು ಎಂಬುದರಿಂದ ಸಮೂಹ ಸನ್ನಿಯ ಲಾಭ ಪಡೆಯುವ ಹವಣಿಕೆಯನ್ನು ಸರ್ಕಾರದ ಜೊತೆಗೆ ವಿರೋಧ ಪಕ್ಷಗಳೂ ಮಾಡಿದ್ದವು ಎಂಬುದು ಮನದಟ್ಟಾಗುತ್ತದೆ.

ಅಹಮದಾಬಾದ್ನಲ್ಲಿ ಮಂಗಳವಾರ ರಾತ್ರಿಯಷ್ಟೇ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಪಂದ್ಯ ಗೆದ್ದಾಗಲೇ ರಾಜ್ಯದ ವಿವಿಧೆಡೆ ಅನಿಯಂತ್ರಿತ ರೀತಿಯಲ್ಲಿ ಸಂಭ್ರಮಾಚರಣೆ ನಡೆದಿತ್ತು. ಸಂಭ್ರಮಾಚರಣೆಯಲ್ಲಿ ಕುಸಿದುಬಿದ್ದು ಕೆಲವೆಡೆ ಒಂದಿಬ್ಬರು ಮೃತಪಟ್ಟ ವರದಿಗಳಿವೆ. ಬೈಕ್ನಲ್ಲಿ ಸವಾರಿ ಮಾಡುತ್ತಾ ಸಂಭ್ರಮಿಸಿದ ಒಬ್ಬರು ಅಪಘಾತವಾಗಿ ಶಿವಮೊಗ್ಗದಲ್ಲಿ ಸತ್ತಿದ್ದಾರೆ. ಬೆಂಗಳೂರು ನಗರದಲ್ಲಂತೂ ಬೆಳಗಿನ ಜಾವದವರೆಗೂ ಕೆಲವರು ಬೀದಿಗಳಲ್ಲಿ ಅಡ್ಡಾಡುತ್ತಾ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿದರು. ಹಲವೆಡೆ ಲಘು ಲಾಠಿ ಪ್ರಹಾರ ಮಾಡಿ ಪೊಲೀಸರು ಜನರನ್ನು ಚದುರಿಸಿದ್ದರು. ಇಂತಹ ಸನ್ನಿವೇಶದಲ್ಲಿ, ಬುಧವಾರ ಬೆಳಿಗ್ಗೆಯೇ ಎರಡು ಕಡೆ ಸನ್ಮಾನ ಆಯೋಜಿಸಿದ ಘೋಷಣೆ ಮಾಡಲಾಯಿತು. ಜನರನ್ನು ನಿಯಂತ್ರಿಸಲು ಹಾಗೂ ವಾಹನ ನಿಲುಗಡೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ. ಜನರ ಅಭಿಮಾನದ ಲಾಭ ಪಡೆಯುವ ತರಾತುರಿ ಎದ್ದು ಕಾಣುತ್ತಿತ್ತು. ಅಭಿಮಾನವು ಸಮೂಹಸನ್ನಿಯಾಗಿ ಮಾರ್ಪಡುವಂತಾಯಿತು.

ಮಂಗಳವಾರ ರಾತ್ರಿಯಿಡೀ ಜನರನ್ನು ನಿಯಂತ್ರಿಸಿ ಹೈರಾಣಾಗಿದ್ದ ಪೊಲೀಸರು ಬುಧವಾರ ಸೇರಿದ್ದ ಅಪಾರ ಜನಸ್ತೋಮದ ಎದುರು ಮೂಕಪ್ರೇಕ್ಷಕರಂತೆ ನಿಲ್ಲಬೇಕಾಯಿತು. ಈ ಎಲ್ಲದರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಐಪಿಎಲ್ ತಂಡದ ಬಾವುಟ ಬೀಸುತ್ತಾ ಅತ್ಯುತ್ಸಾಹ ತೋರಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ ಅವರೇ ಹೊರಬೇಕಾಗುತ್ತದೆ. ಬ್ರಿಟನ್ನ ಮದ್ಯ ತಯಾರಿಕಾ ಕಂಪನಿ ಡಿಯಾಜಿಯೊ ಆರ್ಸಿಬಿ ತಂಡದ ಮಾಲೀಕತ್ವ ಹೊಂದಿದೆ. ಆ ಕಂಪನಿಯ ಭಾರತದಲ್ಲಿರುವ ಘಟಕವಾದ ಯುನೈಟೆಡ್ ಸ್ಪಿರಿಟ್ಸ್, ತಂಡದ ನಿರ್ವಹಣೆ ನೋಡಿಕೊಳ್ಳುತ್ತಿದೆ. ಐಪಿಎಲ್ ಎಂಬುದು ಸಂಪೂರ್ಣವಾಗಿ ಮನರಂಜನೆ ಮತ್ತು ವಾಣಿಜ್ಯ ಉದ್ದೇಶವನ್ನು ಹೊಂದಿದೆ. ಹಾಗಿದ್ದರೂ ತಂಡದ ಜೊತೆಗೆ ಜನ ಹೊಂದಿರುವ ಅಭಿಮಾನಕ್ಕೆ ಸ್ಪಂದಿಸಿ ಸರ್ಕಾರವು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಇದೆ.

ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಕಾಲ್ತುಳಿತ ನಡೆದು ಕೆಲವರು ಮೃತಪಟ್ಟ ಸುದ್ದಿ ಬಂದಿತ್ತು. ಹಾಗಿದ್ದರೂ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವ ಮತ್ತು ಇತರ ಸಚಿವರು ಹಾಜರಿದ್ದು ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಇದು ಸಂವೇದನೆಯೇ ಇಲ್ಲದ ನಡವಳಿಕೆ. 11 ಮಂದಿ ಸತ್ತಿದ್ದಾರೆ ಎಂಬುದು ಗೊತ್ತಾದ ಬಳಿಕವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಜನರ ಜೀವ ಬಲಿ ಪಡೆದುದರ ಹೊಣೆ ಹೊರಬೇಕಾಗಿದ್ದ ಆರ್ಸಿಬಿ ತಂಡದ ಮಾಲೀಕರು ಸನ್ಮಾನ ಮಾಡಿ ಸಂಭ್ರಮಿಸಿದ್ದು ಅಕ್ಷಮ್ಯ. ಈ ಎಲ್ಲದಕ್ಕೂ ಉತ್ತರದಾಯಿತ್ವ ನಿರ್ಣಯವಾಗಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.