ಭಾನುವಾರ, ಆಗಸ್ಟ್ 14, 2022
24 °C

ಸಂಪಾದಕೀಯ: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್‌ರಚನೆ ಆಗಿದೆ; ಕೆಲವರಿಗೆ ಬಡ್ತಿ ಮತ್ತು ಕೆಲವರ ತಲೆದಂಡದ ಮೂಲಕ ಸರ್ಕಾರದ ಕಾರ್ಯಶೈಲಿ ಬದಲಿಸಿಕೊಳ್ಳುವ ಪ್ರಯತ್ನ ನಡೆದಿರುವಂತಿದೆ. ಈ ಮಧ್ಯಂತರ ಮರುಹೊಂದಾಣಿಕೆಯ ಹಿಂದೆ ಆಡಳಿತಾತ್ಮಕ ಮತ್ತು ರಾಜಕೀಯ ಉದ್ದೇಶಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಆಡಳಿತಾತ್ಮಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶವೇ ಮೇಲುಗೈ ಪಡೆದಿದೆ ಎಂಬುದು ಬದಲಾವಣೆಗಳನ್ನು ಗಮನಿಸಿದರೆ ನಿಚ್ಚಳವಾಗುತ್ತದೆ.

ಆಡಳಿತಾತ್ಮಕವಾಗಿ ನೋಡಿದರೆ, ಕೋವಿಡ್‌ ಸಾಂಕ್ರಾಮಿಕದ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ಹೊಸ ತಂಡ ಕಟ್ಟುವ ಪ್ರಯತ್ನವನ್ನು ಪ್ರಧಾನಿ ಮಾಡಿದ್ದಾರೆ ಅನ್ನಿಸುತ್ತದೆ. ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯು ಅದ್ಭುತವಾಗಿಯೇನೂ ಇರಲಿಲ್ಲ. ಕೋವಿಡ್‌ ಸಾಂಕ್ರಾಮಿಕವು ಎಲ್ಲದರ ಮೇಲೆಯೂ ಭಾರಿ ಪರಿಣಾಮ ಬೀರಿದೆ ಎಂಬ ಕಾರಣಕ್ಕೆ ಸರ್ಕಾರಕ್ಕೆ ಕೃಪಾಂಕ ನೀಡಿದರೂ ಸಾಧನೆಯು ಹೇಳಿಕೊಳ್ಳುವಂತಹುದೇನೂ ಅಲ್ಲ.

ಸರ್ಕಾರದ ಮುಂದಿನ ಅವಧಿಯು ಆಡಳಿತಾರೂಢ ಬಿಜೆಪಿಗೆ ಬಹಳ ಮುಖ್ಯ– ಏಕೆಂದರೆ, ಸಾರ್ವತ್ರಿಕ ಚುನಾವಣೆಯ ಸಿದ್ಧತೆಗಳು ಮುಂದಿನ ವರ್ಷ ಆರಂಭ ಆಗಲಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗಳು ಬಿಜೆಪಿಯ ಮುಂದಿರುವ ತಕ್ಷಣದ ಸವಾಲು. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶ ಮತ್ತು ಪ್ರಧಾನಿಯ ತವರು ರಾಜ್ಯ ಗುಜರಾತ್‌ನಲ್ಲಿ ಕೂಡ ಚುನಾವಣೆ ನಡೆಯಬೇಕಿದೆ. ಸಚಿವ ಸಂಪುಟ ಪುನರ್‌ರಚನೆಯ ಬಹುಪಾಲು ಬದಲಾವಣೆಯು ಈ ಸವಾಲನ್ನು ಎದುರಿಸುವುದಕ್ಕಾಗಿಯೇ ನಡೆದಿದೆ. 

ಉತ್ತರಪ್ರದೇಶ ಮತ್ತು ವಿಧಾನಸಭೆ ಚುನಾವಣೆ ನಡೆಯಲಿರುವ ಇತರ ರಾಜ್ಯಗಳಿಗೆ ಸಿಂಹಪಾಲು ಸಿಕ್ಕಿದೆ. ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಮುಖ್ಯವಾದ ಜಾತಿ, ಉಪಜಾತಿ, ಸಮುದಾಯ ಮತ್ತು ವರ್ಗಗಳನ್ನು ಮನವೊಲಿಸುವ ರೀತಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಾತಿನಿಧ್ಯದ ಹಂಚಿಕೆ ಆಗಿದೆ. ಚುನಾವಣಾ ಜಾತಿ ಸಮೀಕರಣವನ್ನು ಜಾಣ್ಮೆಯಿಂದ ರೂಪಿಸಲಾಗಿದೆ. ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು, ಯುವ ಜನರಿಗೂ ಹೆಚ್ಚು ಅವಕಾಶ ದೊರೆತಿದೆ. ಇವು ಕೂಡ ಪ್ರಜ್ಞಾಪೂರ್ವಕವಾದ ಆಯ್ಕೆಗಳೇ ಆಗಿವೆ.

ಚುನಾವಣೆಯಲ್ಲಿ ಮಹತ್ವದವು ಎಂದು ಬಿಜೆಪಿ ಪರಿಗಣಿಸುವ ಈ ವರ್ಗಗಳಿಗೆ ಸರ್ಕಾರದಲ್ಲಿ ಅಥವಾ ಆಡಳಿತದಲ್ಲಿಯೂ ಹೆಚ್ಚಿನ ಅವಕಾಶ ನೀಡಬೇಕಾಗಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಗೆ ಈ ಹಿಂದಿಗಿಂತ ಹೆಚ್ಚು ಮಹತ್ವ ದೊರೆತಿದೆ ಎಂಬುದು ಪುನರ್‌ರಚನೆಯಲ್ಲಿ ಎದ್ದುಕಂಡ ಇನ್ನೊಂದು ಅಂಶ. ಹಿಂದಿನ ಚುನಾವಣೆಗಳಂತೆ ಅಲ್ಲದೆ, ಮುಂದಿನ ಚುನಾವಣೆಗಳಲ್ಲಿ ಮಿತ್ರ ಪಕ್ಷಗಳ ನೆರವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ ಎಂಬುದು ಬಿಜೆಪಿಗೆ ಮನವರಿಕೆ ಆಗಿದೆ ಎಂಬುದರ ಸಂಕೇತದಂತೆ ಇದು ತೋರುತ್ತದೆ.

ಹೊಸ ಸಚಿವ ಸಂಪುಟದ ಮುಖಚರ್ಯೆಯೇ ಬದಲಾಗಿದೆ. ಏಕೆಂದರೆ, 36 ಹೊಸ ಸಚಿವರ ಸೇರ್ಪಡೆಯಾಗಿದೆ ಮತ್ತು 12 ಮಂದಿಯನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಮಧ್ಯ ಪ್ರದೇಶದಿಂದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂನಿಂದ ಸರ್ವಾನಂದ ಸೋನೋವಾಲ್‌ ಅವರ ಸೇರ್ಪಡೆ ನಿರೀಕ್ಷಿತವಾಗಿತ್ತು. ಹಿರಿಯ ಸಚಿವರಲ್ಲಿ ಹಲವರನ್ನು ಕೈಬಿಟ್ಟಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್‌ ಬಲಿಪಶುವಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿರುವ ಕೋವಿಡ್‌ ಸಾಂಕ್ರಾಮಿಕದ ನಿರ್ವಹಣೆಯ ಹೊಣೆಯನ್ನು ಒಬ್ಬ ವ್ಯಕ್ತಿಯ ತಲೆಗೆ ಕಟ್ಟುವುದು ನ್ಯಾಯಯುತವಾದ ನಡೆಯೇನೂ ಅಲ್ಲ. ಜತೆಗೆ, ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ದಯನೀಯವಾಗಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಸರ್ಕಾರವೇ ಸಹಮತ ಸೂಚಿಸಿದಂತೆ ಈ ನಡೆ ಇದೆ.

ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ರವಿಶಂಕರ್ ಪ್ರಸಾದ್‌, ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದ ಪ್ರಕಾಶ್‌ ಜಾವಡೇಕರ್‌ ಅವರ ತಲೆದಂಡವು ಆಶ್ಚರ್ಯ ಹುಟ್ಟಿಸಿದೆ. ಪ್ರಧಾನಿಗೆ ಹತ್ತಿರವಾಗಿದ್ದ ಈ ಇಬ್ಬರೂ ‍ಪ್ರಭಾವಿಗಳು; ಜತೆಗೆ ಸರ್ಕಾರ ಮತ್ತು ಪಕ್ಷವನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದವರು. ಕರ್ನಾಟಕದ ಡಿ.ವಿ. ಸದಾನಂದ ಗೌಡ ಅವರು ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕರ್ನಾಟಕಕ್ಕೆ ಗಣನೀಯ ಪ್ರಾತಿನಿಧ್ಯ ನೀಡಲಾಗಿದೆ. ಕಿರಿಯ ಸಚಿವರ ಬಡ್ತಿಗೆ ಕಾರ್ಯದಕ್ಷತೆಯೇ ಆಧಾರ, ಪ್ರಧಾನಿ ನೇತೃತ್ವದಲ್ಲಿ ನಡೆದ ಮೌಲ್ಯಮಾಪನದ ಬಳಿಕವೇ ಬಡ್ತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಅನುರಾಗ್‌ ಠಾಕೂರ್‌ ಅವರ ಬಡ್ತಿ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಅತ್ಯಂತ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯಗಳಲ್ಲಿ ಠಾಕೂರ್‌ ಅವರು ರಾಜ್ಯ ಖಾತೆ ಸಚಿವರಾಗಿದ್ದ ಹಣಕಾಸು ಸಚಿವಾಲಯವೂ ಒಂದು. ಅದೇನೇ ಇರಲಿ, ಹೊಸ ತಂಡವು ಉಳಿದಿರುವ ಅವಧಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಲಿದೆಯೇ ಎಂಬುದು ಈಗಿನ ಪ್ರಶ್ನೆ. ಕಾರ್ಯಕ್ಷಮತೆ, ಪ್ರತಿಭೆ, ಜನಕಲ್ಯಾಣದ ಬದ್ಧತೆ ಇಲ್ಲದಿದ್ದರೆ ಯಾವ ಸಚಿವ ಸಂಪುಟವೂ ದೇಶದ ಜನರಿಗೆ ಒಳಿತನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಂಶೋಧನೆ ಮಾಡಿ ತಿಳಿಯಬೇಕಾದ ಅಗತ್ಯವೇನೂ ಇಲ್ಲ. ಹಾಗಾಗಿ, ಚುನಾವಣೆ ಮತ್ತು ರಾಜಕೀಯ ಕಾರಣಗಳಿಗಾಗಿ ಸಚಿವ ಸಂಪುಟಕ್ಕೆ ಸೇರ್ಪಡೆ ಆದವರಿಂದ ಆಡಳಿತಾತ್ಮಕವಾದ ಪವಾಡವನ್ನೇನೂ ನಿರೀಕ್ಷೆ ಮಾಡುವಂತಿಲ್ಲ. ಕೋವಿಡ್‌ ಸಾಂಕ್ರಾಮಿಕವು ಸೃಷ್ಟಿಸಿರುವ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಬಸವಳಿದಿರುವ ಜನರ ಬಾಳಿನಲ್ಲಿ ನೆಮ್ಮದಿಯ ಆಶಾಕಿರಣ ಕಾಣಿಸುವಂತೆ ಮಾಡುವ ಕೆಲಸ ಆಗಬೇಕಿದ್ದರೆ, ಸಚಿವರು ಸಮರ್ಥರಾಗಿರಬೇಕು ಮತ್ತು ತಮ್ಮ ಸಾಮರ್ಥ್ಯವನ್ನು ತೋರಲು ಬೇಕಾದ ಅವಕಾಶ ಮತ್ತು ಸ್ವಾಯತ್ತೆ ಅವರಿಗೆ ಇರಬೇಕು. ಅದು ಇಲ್ಲದೇ ಇದ್ದರೆ, ಸಚಿವ ಸಂಪುಟ ಪುನರ್‌ರಚನೆಯಂತಹ ಚಟುವಟಿಕೆಗಳೆಲ್ಲವೂ ಜನರ ‍ಪಾಲಿಗೆ ವ್ಯರ್ಥ ಕಸರತ್ತು ಮಾತ್ರ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು