ಶನಿವಾರ, ಡಿಸೆಂಬರ್ 4, 2021
20 °C

Interview| ಒಳ ಮೀಸಲಾತಿ ಬಗ್ಗೆ ಎಲ್ಲ ಪಕ್ಷಗಳಿಂದಲೂ ಮೊಸಳೆ ಕಣ್ಣೀರು: ಆಂಜನೇಯ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಮಾದಿಗ ಸಮುದಾಯದ ಮುಖಂಡನಾಗಿ, ಕಾಂಗ್ರೆಸ್‌ ನಾಯಕ ನಾಗಿ ‘ಒಳ ಮೀಸಲಾತಿ’ ಚಳವಳಿಯ ಮುಂಚೂಣಿಯಲ್ಲಿದ್ದೀರಿ. ಈ ಬೇಡಿಕೆ ಹಿಂದಿನ ವಸ್ತುಸ್ಥಿತಿ, ಆಳ– ಅಗಲವೇನು?

ನಮ್ಮದು (ಮಾದಿಗರು) ಸಾಸಿವೆ ಕಾಳಿನಷ್ಟು ಸುಖ, ಸಮುದ್ರದಷ್ಟು ದುಃಖ. ನರಿ, ನಾಯಿ, ಹಂದಿಗಳಂತೆ ವಾಸಯೋಗ್ಯವಲ್ಲದ ಪ್ರದೇಶಗಳಲ್ಲಿ ಮೋರಿಗಳ ಕೆಳಗಡೆ, ಗುಡಿಸಲುಗಳಲ್ಲಿ ನೆಲೆಸಿದ ನಮ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯೊಳಗೆ ತರಬೇಕೆನ್ನುವುದು ಸಂವಿಧಾನದ ಆಶಯವೂ ಹೌದು. ಮೀಸಲಾತಿ ಇರುವುದೇ ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದವರಿಗೆ. ಆದರೆ, ಅಸ್ಪೃಶ್ಯರಲ್ಲದವರನ್ನೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ತೀಟೆ ತೀರಿಸಿಕೊಳ್ಳಲು ಪಟ್ಟಿಗೆ ಸೇರಿಸಿ, ನಮ್ಮ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದರಿಂದಾಗಿ ಹೊಲೆಯ, ಮಾದಿಗರಿಗೆ ಅನ್ಯಾಯವಾಗಿದೆ. ಹಾಗೆಂದು, ಅಸ್ಪೃಶ್ಯರಲ್ಲದವರನ್ನೂ ಪಟ್ಟಿಯಿಂದ ಹೊರ ಹಾಕಿ ಎನ್ನುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎನ್ನುವುದಷ್ಟೆ ನಮ್ಮ ಕೂಗು. ಬೋವಿ, ಲಂಬಾಣಿ ಮತ್ತಿತರ ಜಾತಿಗಳ ಜೊತೆ ಸ್ಪರ್ಧೆ ಮಾಡಲು ನಮಗೆ ಶಕ್ತಿ ಇಲ್ಲ. ಎಂಜಿನಿಯರಿಂಗ್, ವೈದ್ಯಕೀಯ ಸೀಟು ಸಿಗುವುದೇ ಕಷ್ಟ. ಆ ಮೇಲೆ, ಅಲ್ಲವೇ ಎಂಜಿನಿಯರ್‌, ವೈದ್ಯರಾಗುವುದು. ಹಸಿದವರಿಗೆ ಅನ್ನ ಕೊಟ್ಟು, ಸಂಕಟದಲ್ಲಿರುವವರನ್ನು ಸಂತೈಸಿ ಕಣ್ಣೀರು ಒರೆಸಿ ಹೃದಯ ವೈಶಾಲ್ಯ ತೋರಿಸಿ, ತುಳಿತ, ನಿರ್ಲಕ್ಷ್ಯಕ್ಕೊಳಗಾದ ಸಮುದಾಯಕ್ಕೆ ನ್ಯಾಯ ದಯಪಾಲಿಸುವುದು ಆಳುವ ಸರ್ಕಾರದ ಕೆಲಸ. ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯದಿಂದ ‘ಕೋಮಾ’ದಲ್ಲಿದ್ದ ಮಾದಿಗರು ಉಸಿರಾಡಲು ಆರಂಭಿಸಿ, ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕೊಡಿ ಎಂದು ಸರ್ಕಾರವನ್ನು ಬೇಡುತ್ತಿದ್ದೇವೆ.‌

ರಾಜ್ಯದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕೆಂದು ನಿರ್ಣಯಿಸುವಷ್ಟು ಸಂಖ್ಯೆಯಲ್ಲಿ ‘ಬಲಾಢ್ಯ’ರಿದ್ದೂ ನಿಮ್ಮ ಬೇಡಿಕೆಗೆ ಯಾವುದೇ ಸರ್ಕಾರ ಬಗ್ಗಿಲ್ಲವೇಕೆ?

ರಾಜ್ಯದಲ್ಲಿ ನಾವು ಶೇ 6ರಷ್ಟಿದ್ದೇವೆ. ಪರಿಶಿಷ್ಟ ಜಾತಿಗೆ ಮೀಸ ಲಿರುವ ಶೇ 15ರಲ್ಲಿ, ಶೇ 1ರಿಂದ 1.5ರಷ್ಟು ಮಾತ್ರ ನಮಗೆ ಸಿಗುತ್ತಿದೆ. ಹೀಗೆ ಸಂಕಟ ಸಹಿಸಿಕೊಂಡು ಎಷ್ಟು ದಿನ ಇರಬೇಕೆಂಬ ಒಳ ನೋವು 90ರ ದಶಕದಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸ್ಫೋಟಗೊಂಡು ಹೋರಾಟದ ರೂಪು ಪಡೆಯಿತು. ಹೀಗಾಗಿ, ಅಲ್ಲಿ ಒಳ ಮೀಸಲಾತಿ ಬಂತು. ಆದರೆ, ಆಂಧ್ರದಲ್ಲಿ ಸಮಾಜಘಾತುಕ ಶಕ್ತಿಗಳು ಕೋರ್ಟಿನಿಂದ ತಡೆ ತಂದಿವೆ. ಅಧಿಕಾರಕ್ಕೆ ಬರುವ ಮೊದಲು ಎಲ್ಲ ಪಕ್ಷಗಳು ನಮ್ಮ ಸ್ಥಿತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತವೆ. ಅಧಿಕಾರಕ್ಕೆ ಬಂದ ಬಳಿಕ ಕುಂಟುನೆಪ ಹೇಳಿಕೊಂಡು ವರದಿ ಜಾರಿ ವಿಷಯ ಮುಂದೂಡುತ್ತ ಬಂದಿವೆ. ವೀರೇಂದ್ರ ಪಾಟೀಲ, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಎಲ್ಲರೂ ಎಡಗೈ ಪರವಾಗಿ ಇದ್ದವರು. 

ನೀವೇ ಸಮಾಜ ಕಲ್ಯಾಣ ಸಚಿವರಾಗಿದ್ದಿರಿ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಿಮ್ಮ ಸಮುದಾಯದ ಪರವಾಗಿಯೇ ಇದ್ದರು ಅಂದಿರಿ. ಹಾಗಿದ್ದರೆ, ನಿಮ್ಮ ಕೈ ಕಟ್ಟಿದ್ದು ಹಾಕಿದ್ದು ಯಾರು?

ನಿಜ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರವಾಗಿಯೇ ಇದ್ದಾರೆ. ಅವರ ಸಲಹೆಯಂತೆ, ನಾನು ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ಸಂಪುಟದಲ್ಲಿ ವಿ. ಶ್ರೀನಿವಾಸ ಪ್ರಸಾದ್‌, ಎಚ್‌.ಸಿ. ಮಹದೇವಪ್ಪ ಕೂಡಾ ಇದ್ದರು. ನಾನೊಬ್ಬನೇ ಎಡಗೈ ಸಮುದಾಯದ ಸಚಿವ. ಆಗ ಜಿಲ್ಲಾ ಪಂಚಾಯಿತಿ ಚುನಾವಣೆ ಹತ್ತಿರದಲ್ಲೇ ಇತ್ತು. ಈ ವಿಷಯ ಎತ್ತಿಕೊಂಡರೆ ಬೋವಿಗಳು, ಲಂಬಾಣಿಗಳು ಪಕ್ಷದ ಮೇಲೆ ಮುನಿಸಿಕೊಳ್ಳಬಹುದು. ಹೀಗಾಗಿ, ಕೆಲವರು ಆಗ ಬೇಡವೆಂದು ನನ್ನನ್ನು ಸಮಾಧಾನಪಡಿಸಿದರು. ನಂತರದ ಎಲ್ಲ ಸಂದರ್ಭಗಳಲ್ಲಿಯೂ ವರದಿ ಜಾರಿಗೆ ತರೋಣ, ತರೋಣವೆಂದು ಮುಂದೂಡುತ್ತಾ ಬಂದರು. ಅದೇ ಸಂದರ್ಭದಲ್ಲಿ (2017) ಹುಬ್ಬಳ್ಳಿಯಲ್ಲಿ ನಮ್ಮ ಶಕ್ತಿ ಪ್ರದರ್ಶಿಸಿದೆವು. ವರದಿ ಜಾರಿಗೊಳಿಸಲೇಬೇಕೆಂದು ಬಹಿರಂಗ ಸಭೆಯಲ್ಲಿ ನಾನು ಪಟ್ಟು ಹಿಡಿದಾಗ, ವೇದಿಕೆಯಲ್ಲಿದ್ದ ಸಿದ್ದರಾಮಯ್ಯ, ಮಾಡೇ ಮಾಡುತ್ತೇನೆಂದು ಭರವಸೆ ನೀಡಿದ್ದರು. ಸಚಿವ ಸಂಪುಟ ಒಪ್ಪಿದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಕೂಡಾ ಹೇಳಿದ್ದರು. ಮತ್ತೆ ಸಂಪುಟ ಸಭೆಗೆ ವಿಷಯ ತಂದೆ. ಈ ವರ್ಷ ಚುನಾವಣೆಗೆ ಹೋಗುತ್ತಿದ್ದೇವೆ. ವರದಿ ಜಾರಿಗೆ ಶಿಫಾರಸು ಮಾಡಿದರೆ ಏನೇನಾಗುತ್ತೊ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರು. ಕೆಲವು ಶಕ್ತಿಗಳು ಸಿದ್ದರಾಮಯ್ಯ ಅವರ ಧೈರ್ಯವನ್ನೇ ಕುಗ್ಗಿಸಿದವು. 

ಸಿದ್ದರಾಮಯ್ಯ ಅವರ ಧೈರ್ಯವನ್ನೇ ಕುಗ್ಗಿಸಿದ್ದು ಯಾರು? ಸಂಪುಟದಲ್ಲಿದ್ದ ‘ಬಲಗೈ’ಗಳೇ? ಎಡಗೈ– ಬಲಗೈ ನಡುವಿನ ಒಡಕು ಧ್ವನಿಯೇ ವರದಿ ಅನುಷ್ಠಾನಕ್ಕೆ ಅಡ್ಡಗಾಲು, ಅಲ್ಲವೇ?

ಸಂಪುಟ ಸಭೆಯಲ್ಲಿ ಚರ್ಚೆಯಾದ ವಿಷಯವದು. ಗೌಪ್ಯ ಸಭೆಯ ವಿಚಾರಗಳನ್ನು ಬಹಿರಂಗಪಡಿಸುವುದು ಉಚಿತವಲ್ಲ. ಅಂದು ಅಡ್ಡಿಯಾಗಿದ್ದ ಶಕ್ತಿಗಳ ಮನಸ್ಸು ಕೂಡಾ ಬದಲಾಗುವ ಕಾಲ ಸನ್ನಿಹಿತವಾಗಿದೆ. ಈಗ ಯಾವ ಒಡಕೂ ಇಲ್ಲ. ಅಪಸ್ವರವೂ ಇಲ್ಲ. ಎಲ್ಲರೂ ಒಂದಾಗಿದ್ದೇವೆ. 

ನಿಮ್ಮ ಸರ್ಕಾರವೇ ಮುತುವರ್ಜಿ ವಹಿಸಿ ಮಾಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು (ಜಾತಿ ಗಣತಿ) ಕೂಡಾ ಬಹಿರಂಗಪಡಿಸುವ ಧೈರ್ಯ ತೋರಿಸಲಿಲ್ಲ...?

ಆ ವರದಿಯನ್ನು ಬಹಿರಂಗಪಡಿಸುತ್ತಿದ್ದರೆ, ನಮ್ಮ ಜನಸಂಖ್ಯೆ ಎಷ್ಟಿದೆ ಎನ್ನುವುದು ಅಧಿಕೃತವಾಗಿ ಗೊತ್ತಾಗುತ್ತಿತ್ತು. ಯಾವ ಸ್ಥಿತಿಯಲ್ಲಿದ್ದೇವೆ ಎನ್ನುವುದಕ್ಕೆ ಸಾಕ್ಷ್ಯಗಳೂ ಸಿಗುತ್ತಿದ್ದವು. ಅದನ್ನೂ ಮಾಡಲಿಲ್ಲ. ಅದೂ ನಮಗೆ ಹಿನ್ನಡೆ ಆಯಿತು. 

ನಿಮ್ಮ ಮುಂದಿನ ನಡೆ ಏನು?

ಮುಂದೇನು ಮಾಡಬೇಕೆಂದು ಸಮಾಜದ ಮುಖಂಡರೆಲ್ಲರೂ ಶೀಘ್ರದಲ್ಲೇ ಸೇರಿ ಸಮಾಲೋಚಿಸುತ್ತೇವೆ. ವಿಧಾನಮಂಡಲದ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಮನವಿ ಮಾಡುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು