ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

Published : 5 ಜೂನ್ 2025, 23:30 IST
Last Updated : 5 ಜೂನ್ 2025, 23:30 IST
ಫಾಲೋ ಮಾಡಿ
Comments
‘ಭೂಮಿ ಇಲ್ಲದವರಿಗೆ ಅದನ್ನು ಒದಗಿಸಿಕೊಡುವ, ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸರ್ಕಾರದ ನೂತನ ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹಂಚಿಕೊಂಡರು
ಪ್ರ

ಈ ಕಾರ್ಯಕ್ರಮಕ್ಕೆ ‘ಭೂ ಗ್ಯಾರಂಟಿ’ ಎಂದು ಹೆಸರಿಟ್ಟಿದ್ದೀರಿ. ಇತರ ಗ್ಯಾರಂಟಿಗಳಿಗೆ ಹೋಲಿಸಿದರೆ ಇದರ ಮಹತ್ವ ಎಂಥದ್ದು? 

ನಮ್ಮ ಸರ್ಕಾರದ ಇತರ ಎಲ್ಲ ಗ್ಯಾರಂಟಿಗಳು ಜನಜೀವನವನ್ನು ಮೇಲಕ್ಕೆ ಎತ್ತುವ ಉಪಕ್ರಮಗಳಾಗಿವೆ. ಒಬ್ಬ ಮನುಷ್ಯನಿಗೆ ಅತನದ್ದೇ ಒಂದು ತುಂಡು ನೆಲ ಅಥವಾ ಭೂಮಿ ಕೊಡುವಷ್ಟು ನೆಮ್ಮದಿ ಹಾಗೂ ಧೈರ್ಯ ಬೇರೇನೂ ನೀಡದು. ಭೂಮಿಯೇ ಇಲ್ಲದ ಲಕ್ಷಾಂತರ ಕುಟುಂಬಗಳು ನಮ್ಮಲ್ಲಿವೆ. ಭೂಮಿ ಇದ್ದೂ, ಅದರ ಮಾಲೀಕತ್ವ ಇಲ್ಲದ ಲಕ್ಷಾಂತರ ರೈತರು ನಮ್ಮ ಮಧ್ಯೆ ಇದ್ದಾರೆ. ಜತೆಗೆ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಭೂಮಿಯನ್ನು ಅನುಭವಿಸಲು ಸಾಧ್ಯವಿರದವರೂ ಇದ್ದಾರೆ. ಈ ಎಲ್ಲರಲ್ಲಿ ಕೆಲವರಿಗಾದರೂ ಭೂಮಿಯ ಹಕ್ಕು ಮತ್ತು ಮಾಲೀಕತ್ವ ಒದಗಿಸಿಕೊಡುವ ಮೂಲಕ ನೆಮ್ಮದಿ ನೀಡುವ ಗ್ಯಾರಂಟಿ ಇದು. ಈ ಎಲ್ಲದರಿಂದ ವಂಚಿತರಾಗಿರುವ ಜನರಿಗೆ ನೆಲೆ ಕಲ್ಪಿಸುವ ಮೂಲಕ ನೆಮ್ಮದಿ ನೀಡುವುದು ನಮ್ಮ ಸರ್ಕಾರದ ಉದ್ದೇಶ. ಇದಕ್ಕಾಗಿ ಕಂದಾಯ ಇಲಾಖೆಯ ಕಾರ್ಯಸ್ವರೂಪ ಮತ್ತು ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರಲಾಗುತ್ತಿದೆ.

ಪ್ರ

ಭೂಮಿಯ ನೈಜ ಹಕ್ಕು–ಮಾಲೀಕತ್ವ ಒದಗಿಸುವ ಉದ್ದೇಶದ ಈ ಯೋಜನೆಯನ್ನು
‘ಎರಡನೇ ಭೂಸುಧಾರಣಾ ಚಳವಳಿ’ ಎನ್ನಬಹುದೇ?

ಭೂ ಸುಧಾರಣೆ ಹೆಸರಿನಲ್ಲಿ ಲಕ್ಷಾಂತರ ಜನರಿಗೆ ಭೂಮಿ ಮಂಜೂರು ಮಾಡಲಾಗಿದೆ. ಆದರೆ ಅಗತ್ಯ ದಾಖಲೆಗಳನ್ನು ಒದಗಿಸದೆ, ಅವರಿಗೆ ಪೂರ್ಣ ಪ್ರಮಾಣದ ಮಾಲೀಕತ್ವ ದೊರೆತಿಲ್ಲ. ಭೂ ಸುಧಾರಣೆ ಎಂದೊಡನೆ ರೈತರ ಮನಸ್ಸಿನಲ್ಲಿ ಈ ಅಂಶವೇ ಬರುತ್ತದೆ. ಭೂಮಿ ಮಂಜೂರು ಮಾಡಿ, ಪ್ರಚಾರ ಪಡೆದುಕೊಳ್ಳುವುದಕ್ಕೆ ಇದು ಸೀಮಿತವಾಗಬಾರದು. ಬದಲಿಗೆ ಸಮಸ್ಯೆಗಳನ್ನು ನಿವಾರಿಸಿ, ಎಲ್ಲರಿಗೂ ಭೂಮಿಯ ಹಕ್ಕು ಮತ್ತು ಮಾಲೀಕತ್ವ ಒದಗಿಸಿಕೊಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ನನ್ನ ಒತ್ತಾಸೆಯಾಗಿತ್ತು. ಈ ಎಲ್ಲವನ್ನು ಗಮನದಲ್ಲಿ ಇರಿಸಿಕೊಂಡೇ ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿದೆ. 

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಭೂಮಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸಾವಿರಾರು ಪ್ರಕರಣಗಳಿವೆ. ಲಕ್ಷಾಂತರ ಮಂದಿ ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ, ಹಣ ಖರ್ಚು ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಿದರೆ, ಆ ಸ್ವತ್ತು ಮತ್ತು ಮಾನವ ಸಂಪನ್ಮೂಲವನ್ನು ಉತ್ಪಾದಕತೆಗೆ ಬಳಸಿಕೊಳ್ಳಬಹುದು. ಇದರಿಂದ ರೈತರ ಜೀವನಮಟ್ಟ ಸುಧಾರಿಸುತ್ತದೆ, ಅವರ ಬದುಕು ಹಸನಾಗುತ್ತದೆ. ಈ ದಿಸೆಯಲ್ಲಿ ಈ ಕಾರ್ಯಕ್ರಮವನ್ನು ಭೂ ಸುಧಾರಣೆ ಎಂದೂ ಕರೆಯಬಹುದು.

ಪ್ರ

ಭೂ ಗ್ಯಾರಂಟಿ ಅಡಿಯ ಎಲ್ಲ ಉಪಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಕಾಲಮಿತಿ ಹಾಕಿಕೊಳ್ಳಲಾಗಿದೆಯೇ?

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ತಿಂಗಳ ನಂತರ ಈ ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ. ಆರಂಭದಲ್ಲಿ ನಿರೀಕ್ಷಿತ ವೇಗದಲ್ಲಿ ಕೆಲಸ ಆಗುತ್ತಿರಲಿಲ್ಲ. ಆದರೆ ಪ್ರತಿ ವಾರವೂ ಪ್ರಗತಿಯ ಬಗ್ಗೆ ವರದಿ ಪಡೆದು, ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಒಂದು ವರ್ಷದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕೆಲವು ಮುಂದಿನ ಒಂದು ವರ್ಷದಲ್ಲಿ, ಇನ್ನೂ ಕೆಲವು ಎರಡು ವರ್ಷದ ಒಳಗೆ ಪೂರ್ಣವಾಗಲಿವೆ. ಅದನ್ನು ಪಟ್ಟು ಹಿಡಿದು ಸಾಧಿಸುತ್ತೇವೆ. ಈ ಎಲ್ಲ ಪ್ರಯತ್ನಗಳ ಒಟ್ಟು ಫಲ ನಮಗೆ ಕಾಣಲು ಒಂದೆರಡು ವರ್ಷಗಳು ಬೇಕಾಗುತ್ತವೆ.

ಪ್ರ

ಕಾವೇರಿ ತಂತ್ರಾಂಶವು ಪದೇ–ಪದೇ ಸರ್ವರ್‌ ಸಮಸ್ಯೆ ಎದುರಿಸುವ ಬಗ್ಗೆ ದೂರುಗಳಿವೆ. ಕಂದಾಯ ಇಲಾಖೆಯ ಬಹುತೇಕ ಸೇವೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೀರಿ. ಸರ್ವರ್‌ ಸಮಸ್ಯೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆಯೇ?

ಕಾವೇರಿ ತಂತ್ರಾಂಶದಲ್ಲಿ ಸರ್ವರ್ ಸಮಸ್ಯೆ ಇರುವುದರ ಬಗ್ಗೆ ಆಗಾಗ ದೂರುಗಳು ಬರುತ್ತಿವೆ. ಹೀಗಿದ್ದೂ ಪ್ರತಿದಿನ 9,000ದಿಂದ 14,000ದಷ್ಟು ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಸಂಪೂರ್ಣ ಡಿಜಿಟಲೀಕರಣದಿಂದ ಸರ್ವರ್‌ಗಳ ಮೇಲಿನ ಒತ್ತಡ ಹೆಚ್ಚಬಹುದು. ಅದನ್ನು ಗಮನದಲ್ಲಿ ಇರಿಸಿಕೊಂಡೇ ಹಲವು ಸಭೆ ನಡೆಸಲಾಗಿದೆ. ನಿಜವಾಗಿಯೂ ಯಾವ ಹಂತದಲ್ಲಿ ಸಮಸ್ಯೆ ಆಗುತ್ತಿದೆ ಎಂಬುದನ್ನು ಪತ್ತೆ ಮಾಡಿ, ಅದನ್ನು ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ, ಮತ್ತೆ ಈ ಬಗ್ಗೆ ದೂರು ಬರಬಾರದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ.

ಪ್ರ

ರೈತರು ಈವರೆಗೆ ಕಚೇರಿಗೆ ಬಂದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈಗ ಅಧಿಕಾರಿ ಮತ್ತು ಸಿಬ್ಬಂದಿಯೇ ರೈತರ ಮನೆಬಾಗಿಲಿಗೆ ಹೋಗಬೇಕು ಎಂದಿದ್ದೀರಿ. ಈ ಬದಲಾವಣೆಗೆ ಎದುರಾದ ಸವಾಲುಗಳೇನು?

ಇದೊಂದು ಮಹತ್ವದ ಬದಲಾವಣೆ. ಇಲಾಖೆಯ ಎಲ್ಲ ಸಿಬ್ಬಂದಿ ಒಂದೇ ರೀತಿ ಇರುವುದಿಲ್ಲ. ಶೇ 30ರಷ್ಟು ಮಂದಿ ಈ ಬದಲಾವಣೆಯನ್ನು ಬಹಳ ಸಂತಸದಿಂದ ಒಪ್ಪಿಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ. ಇನ್ನು
ಶೇ 30–35ರಷ್ಟು ಮಂದಿ ಸೂಚನೆ ಮತ್ತು ಎಚ್ಚರಿಕೆಗಳ ನಂತರ ಕಾರ್ಯರೂಪಕ್ಕೆ ತಂದಿದ್ದಾರೆ. ಜನರ ಬಳಿಗೇ ಹೋಗಿ ಕೆಲಸ ಮಾಡಿಕೊಟ್ಟಾಗ, ಜನರಿಂದ ವ್ಯಕ್ತವಾಗುವ ಧನ್ಯತಾ ಭಾವ ಸಿಬ್ಬಂದಿಗೆ ಉತ್ಸಾಹ ನೀಡಿದೆ. ಇಂತಹ ಅಧಿಕಾರಿ ಮತ್ತು ಸಿಬ್ಬಂದಿಯ ಕಾರಣದಿಂದಲೇ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಈ ಬದಲಾವಣೆಗೆ ಒಗ್ಗಿಕೊಳ್ಳದ ಸಿಬ್ಬಂದಿಯೂ ಇದ್ದಾರೆ. ಆದರೆ ಅನಿವಾರ್ಯವಾಗಿ ಜನರ ಬಳಿಗೆ ಹೋಗಲೇಬೇಕಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT