ಶುಕ್ರವಾರ, ಆಗಸ್ಟ್ 6, 2021
22 °C
ಪರಿಸರ ದಿನ: ತೋರಿಕೆಯನ್ನು ಮೀರುವ ಆಚರಣೆ ಯಾವಾಗ?

ಸಹ್ಯಾದ್ರಿಯ ಕೊನೆಯ ಕೂಗು!

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

prajavani

ವೇಗವಾಗಿ ಪಸರಿಸುತ್ತಿರುವ ಕೊರೊನಾ ಸೋಂಕಿನ ನಡುವೆಯೇ, ಈ ವರ್ಷದ ಜಾಗತಿಕ ಪರಿಸರ ದಿನ ಬಂದಿದೆ. ಇದರ ಆಚರಣೆ ಸದ್ದು- ಗದ್ದಲದಿಂದಲೇ ಸಾಗಿದೆ ಯೆನ್ನಬೇಕು. ಹಿನ್ನೆಲೆಯಲ್ಲಿ ಕೋರೊನಾ ಸೃಷ್ಟಿಸಿರುವ ಅಸಹಾಯಕ ರೋದನದ ಶ್ರುತಿ. ಇನ್ನೊಂದೆಡೆ, ಕರಾವಳಿಗೆ ಅಪ್ಪಳಿಸಿರುವ ‘ನಿಸರ್ಗ’ ಚಂಡಮಾರುತದ ಅಬ್ಬರದ ವಾದನ. ಜೊತೆಗೆ, ಶರಾವತಿ ಕಣಿವೆಯ ಭೂಗರ್ಭದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯುತ್ ಸ್ಥಾವರ ಯೋಜನೆಯ ಸಮೀಕ್ಷೆಗಾಗಿ ಕೈಗೊಂಡಿರುವ ರಂಧ್ರ ಕೊರೆಯುವ ಮತ್ತು ಸ್ಫೋಟಗಳ ಭಾರಿ ನಗಾರಿ!

ಶರಾವತಿ ಕಣಿವೆಯ ಗಗನಚುಂಬಿ ಕಾಡನ್ನು ಕಡಿದು, ತೊಂಬತ್ತರ ದಶಕದಲ್ಲಿ ಗೇರುಸೊಪ್ಪೆಯಲ್ಲಿ ಟೇಲ್-ರೇಸ್ ಅಣೆಕಟ್ಟು ನಿರ್ಮಿಸುವಾಗಲೂ ಅಪಾರ ವಿರೋಧವಿತ್ತು. ಆ ಜನಾಂದೋಲನದ ನೈತಿಕ ಶಕ್ತಿಗಳಾಗಿದ್ದ ಶಿವರಾಮ ಕಾರಂತ ಹಾಗೂ ಸಾಮಾಜಿಕ ಹೋರಾಟಗಾರ್ತಿ, ವೈದ್ಯೆ ಕುಸುಮಾ ಸೊರಬ ಅವರು, ‘ಇಲ್ಲಿನ ಮರ-ಗಿಡ-ಪ್ರಾಣಿಗಳಿಗೆ ಮಾತು ಬರುತ್ತಿದ್ದರೆ, ಅವುಗಳ ಚೀರಾಟವಾದರೂ ಈ ಧ್ವಂಸವನ್ನು ನಿಲ್ಲಿಸುತ್ತಿತ್ತೇನೋ’ ಎಂದು ನೋವಿನಿಂದ ಹೇಳಿದ್ದ ಮಾತು ಈಗಲೂ ಜನಮಾನಸದ ಜ್ಞಾಪಕದಲ್ಲಿದೆ. ಮುಂದೆ ಇಲ್ಲಿ ಬೃಹತ್ ವಿನಾಶಕಾರಿ ಯೋಜನೆ ಕೈಗೊಳ್ಳುವುದಿಲ್ಲವೆಂಬ ಆಶ್ವಾಸನೆ ನೀಡುತ್ತಲೇ, ಸರ್ಕಾರ ಹಾಗೂ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಆ ಯೋಜನೆಯನ್ನು ಕಾರ್ಯಗತಗೊಳಿಸಿಬಿಟ್ಟವು. ಮೌನ ಸಹ್ಯಾದ್ರಿಯ ಕಣ್ಣೀರು ಗೇರುಸೊಪ್ಪೆ ಜಲಾಶಯದ ನೀರುಪಾಲಾಯಿತು. ಅದೇ ಪ್ರದೇಶದಲ್ಲಿ ಭಾರಿ ಸ್ಫೋಟ ಮಾಡಿ ಭೂಗರ್ಭದಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸುವ ಭಾರಿ ಯೋಜನೆಯೊಂದಕ್ಕೆ ಕೆಪಿಸಿ ಇದೀಗ ಅಡಿಯಿಟ್ಟಿದೆ.

ಇಲ್ಲಿನ ದಟ್ಟ ಮಳೆಕಾಡನ್ನು ಕಡಿದು ರಸ್ತೆ ಮಾಡಿ, ಭಾರಿ ಯಂತ್ರಗಳ ವಾಹನಗಳನ್ನು ಸಾಗಿಸಿ, ನೆಲವನ್ನು ಸ್ಫೋಟಿಸಿ ರಂಧ್ರ ಕೊರೆದು, ನೆಲದಾಳದ ಪರೀಕ್ಷೆ ಮಾಡುವ ಈ ಯೋಜನೆಯ ಸಮೀಕ್ಷಾ ಕಾರ್ಯಕ್ಕೆ ಸರ್ಕಾರವೀಗ ಒಪ್ಪಿಗೆ ನೀಡಿದೆ. ಇದು ಮೂರು ಬಗೆಯ ಅನಾಹುತಗಳಿಗೆ ದಾರಿ ಮಾಡಿಕೊಡಲಿದೆ. ಮೊದಲಿನದು, ಶೇ 5ಕ್ಕಿಂತಲೂ ಕಡಿಮೆ ಭೂಭಾಗ ದಲ್ಲಿರುವ ಜೀವವೈವಿಧ್ಯಭರಿತ ಅಭಯಾರಣ್ಯದ ಪರಿಸರಸೂಕ್ಷ್ಮ ಪ್ರದೇಶದಲ್ಲೂ ಕಾನೂನುಗಳ ಆಶಯ ಮೀರಿ ವಿನಾಶಕಾರಿ ಯೋಜನೆ ಹಮ್ಮಿಕೊಳ್ಳುವ ಪರಿ ಪಾಟ ಆರಂಭಿಸಿರುವುದು. ಇನ್ನೊಂದು, ನಾಡಿನ ವಿದ್ಯುತ್ ಉತ್ಪಾದನೆ ಮತ್ತು ಆಪತ್ಕಾಲದ ನೀರಿನ ಭಂಡಾರದಂತಿರುವ ಲಿಂಗನಮಕ್ಕಿ ಜಲಾಶಯವನ್ನು ಪೋಷಿಸುತ್ತಿರುವ ಶರಾವತಿ ಕಣಿವೆಯನ್ನು, ಭವಿಷ್ಯದ ಕುರಿತು ಚಿಂತನೆ ಇಲ್ಲದೆಯೇ ಅಪಾಯಕ್ಕೆ ಸಿಲುಕಿಸು
ತ್ತಿರುವುದು. ಕೊನೆಯದಾಗಿ, ಪಶ್ಚಿಮಘಟ್ಟದ ಬುಡದಲ್ಲಿ ಈ ಭಾರಿ ಭೂಗತ ಕಾಮಗಾರಿ ಕೈಗೊಂಡು, ಭವಿಷ್ಯದಲ್ಲಿ ಭಾರಿ ಭೂಕುಸಿತಕ್ಕೆ ಆಹ್ವಾನ ನೀಡುತ್ತಿರುವುದು. ಈ ಕಣಿವೆಯನ್ನು ಜತನದಿಂದ ಕಾಪಾಡಿಕೊಳ್ಳುವುದಾಗಿ ಕೇವಲ ಎರಡು ದಶಕಗಳ ಹಿಂದೆ ನೀಡಿದ್ದ ಸರ್ಕಾರಿ ವಾಗ್ದಾನ ಶರಾವತಿ ನೆರೆಯಲ್ಲಿ ಕೊಚ್ಚಿಹೋಯಿತಲ್ಲ!

ಶರಾವತಿ ನದಿಯ ಕೆಳಹರಿವಿನ ಕಣಿವೆಯೆಂದರೆ ನಾಡಿನಲ್ಲಿ ಕೊನೆಯದಾಗಿ ಉಳಿದಿರುವ ಜೀವವೈವಿಧ್ಯದ ಭಂಡಾರವೆನ್ನಬೇಕು. ನೀರುನೇರಳೆ, ರಾಮಪತ್ರೆ, ಅಶೋಕಾ, ಹಿಪ್ಪೆ, ಕದಂಬ, ಸಿರಿಹೊನ್ನೆಯಂಥ ವಿನಾಶದಂಚಿನ ನೂರಾರು ವೃಕ್ಷಪ್ರಭೇದಗಳ ತಾಣ. ಸಿಂಗಳೀಕ, ಚಿರತೆ, ಕಾಡೆಮ್ಮೆ, ಅಳಿಲುಗಳಂಥ ಸಸ್ತನಿಗಳು, ಅಪರೂಪದ ಉಭಯವಾಸಿ ಹಾಗೂ ಸರೀಸೃಪಗಳು- ಎಷ್ಟೆಲ್ಲ ವನ್ಯಜೀವಿಗಳ ದಟ್ಟ ಸಾಂದ್ರತೆಯ ತವರು. ಇಂಥ ಸೂಕ್ಷ್ಮ ನೆಲದಲ್ಲಿ ಕಾಮಗಾರಿ ಕೈಗೊಳ್ಳುವುದು ಈ ಜೀವಸಮೂಹದ ಸಾಮೂಹಿಕ ಹತ್ಯೆಗೆ ಕಾರಣವಾಗಬಲ್ಲದೆಂದು ಮೈಸೂರಿನ ಪ್ರೊ. ಮೇವಾಸಿಂಗ್ ಅವರಂಥ ಅನೇಕ ಹಿರಿಯ ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ. ಆದರೂ ಸಮೀಕ್ಷೆ ಸಾಗಿದೆ. ‘ಜೀವವೈವಿಧ್ಯದ ಕುರಿತು ಕಾಳಜಿ ವಹಿಸಿ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿರುವ ಈ ಪರಿಸರ ದಿನಾಚರಣೆಯ ಸಂದರ್ಭ ದಲ್ಲೇ ಸಹ್ಯಾದ್ರಿ ಗರ್ಭವನ್ನು ಕೊರೆಯುತ್ತಿರುವುದು ವಿಡಂಬನೆಯಲ್ಲವೇ?

ಕೇವಲ ಎರಡು ಸಾವಿರ ಮೆ.ವಾ. ವಿದ್ಯುತ್ತಿಗಾಗಿ, ಸುಮಾರು ಆರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಪಿಸಿಯು ಈ ಯೋಜನೆ ಕೈಗೆತ್ತಿಕೊಳ್ಳುತ್ತಿದೆ. ಸಾವಿರಾರು ಎಕರೆ ದಟ್ಟ ಕಾಡನ್ನು ಕಡಿದು, ಕಣಿವೆಯನ್ನೇ ಛಿದ್ರ ಮಾಡುವ ಕಾಮಗಾರಿ. ಗೇರುಸೊಪ್ಪೆ ಜಲಾಶಯದಿಂದ ತಲಕಳಲೆಯವರೆಗೆ ಭೂಗತ ಕೊಳವೆಮಾರ್ಗದಲ್ಲಿ ನೀರನ್ನು ಮೇಲೆತ್ತಿ ಒಯ್ಯಲೇ ಅಪಾರ ವಿದ್ಯುತ್ ಬೇಕು. ಈ ಹಣವನ್ನು ಈಗಿರುವ ಸ್ಥಾವರಗಳ ಆಧುನೀಕರಣಕ್ಕೆ, ಸಾಗಣೆ ಮಾರ್ಗಗಳ ಕ್ಷಮತೆ ಹೆಚ್ಚಿಸಲು ವ್ಯಯಿಸಿದರೆ, ಅದಕ್ಕೂ ಹೆಚ್ಚಿನ ವಿದ್ಯುತ್ ಉಳಿಸಬಹುದೆಂದು ಶಕ್ತಿತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಕೆಪಿಸಿಯ ಅಸ್ತಿತ್ವ ಉಳಿಸುವುದೇ ಉದ್ದೇಶವಾದರೆ, ಸೌರವಿದ್ಯುತ್ ಅಥವಾ ನೀರಾವರಿ ಕಾಲುವೆಗಳ ಹರಿವಿ ನಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳಂಥ ಸುಸ್ಥಿರ ಕ್ರಮಗಳಿಗೆ ಮುಂದಾಗಬಹುದಿತ್ತು. ಇದನ್ನು ಬಿಟ್ಟು, ಈ ಬಗೆಯ ವಿನಾಶಕಾರಿ ಯೋಜನೆಗೆ ಮುಂದಾ ಗಿರುವುದೇಕೆ? ಕೆಪಿಸಿಯ ಪ್ರಾವೀಣ್ಯತೆ ವೈಫಲ್ಯವೆಂದು ಅರ್ಥೈಸಿಕೊಳ್ಳಬೇಕೋ ಅಥವಾ ಕಾಮಗಾರಿಗಳ ಗುತ್ತಿಗೆ ಪಡೆಯಲಿರುವ ಉದ್ಯಮಗಳ ಒತ್ತಡವೆಂದೋ?


ಕೇಶವ ಎಚ್. ಕೊರ್ಸೆ

ಮುನ್ನೂರು ಅಡಿಗೂ ಮಿಕ್ಕಿ ಆಳಕ್ಕೆ ನೆಲ ಕೊರೆದು ನಿರ್ಮಿಸಲಿರುವ ಈ ಬೃಹತ್ ವಿದ್ಯುತ್ ಸ್ಥಾವರ ಪ್ರದೇಶದ ಪರಿಸರಸೂಕ್ಷ್ಮತೆಯಾದರೋ ತೀರಾ ಸಂಕೀರ್ಣವಾದದ್ದು. ವಾರ್ಷಿಕ ಮೂರು ಸಾವಿರ ಮಿ.ಮೀ.ಗೂ ಹೆಚ್ಚು ಮಳೆಬೀಳುವ ಈ ಸಹ್ಯಾದ್ರಿ ತಪ್ಪಲನ್ನು ಈವರೆಗೆ ಕಾಪಿಟ್ಟುಕೊಂಡು ಬಂದಿರುವುದು ಇಲ್ಲಿ ಬೆಳೆದುನಿಂತಿರುವ ದಟ್ಟ ಮಳೆಕಾಡು ಮಾತ್ರ. ಆದರೆ, ಇದರಡಿಯ ಭೂಸ್ತರ ಗಟ್ಟಿಯಾಗಿಲ್ಲ. ಸಡಿಲ ಮಣ್ಣಿನ, ಬಿರುಕುಗಳುಳ್ಳ ಪದರುಗಳಿರುವ ಈ ಭೂಪ್ರದೇಶದಲ್ಲಿ, ಭವಿಷ್ಯದಲ್ಲಿ ಭೂಕುಸಿತವಾಗುವ ಸಂಭವ ಹೆಚ್ಚೆಂದು ಸಂಶೋಧನೆಗಳು ಹೇಳುತ್ತಿವೆ. ಶರಾವತಿ ಜಲಾನಯನ ಪ್ರದೇಶದಲ್ಲಿ ದೀರ್ಘಕಾಲ ಅಧ್ಯಯನ ಕೈಗೊಂಡಿರುವ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಈ ಕುರಿತು ವರದಿ ನೀಡಿ, ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಈ ವಿವೇಕದ ಧ್ವನಿಗೆ ಮನ್ನಣೆ ನೀಡದೆ, ಮುನ್ನುಗ್ಗುತ್ತಿರುವ ಲಾಭಪ್ರೇರಿತ ಅಭಿವೃದ್ಧಿಯಂತ್ರದ ಕುರುಡು ಚಾಲನೆಗೆ ಏನೆನ್ನಬೇಕು?

ಕರ್ನಾಟಕ ಸಹ್ಯಾದ್ರಿಯು ಕೊನೆಯುಸಿರು ಎಳೆಯುತ್ತಿರುವಂತಿದೆ. ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿರುವ ಅಣುಸ್ಥಾವರ ಯೋಜನೆಯಿಂದಾಗಿ, ಕಾಳಿನದಿ ಕಣಿವೆಯು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗುತ್ತಿದೆ. ಬೇಡ್ತಿನದಿ ಕಣಿವೆಯಲ್ಲಿ ಪ್ರತಿವರ್ಷವೂ ಭೂಕುಸಿತ ವಾಗುತ್ತಿದ್ದರೂ ಇಳಿಜಾರಿನ ಕಣಿವೆಯನ್ನೇ ಸೀಳಿ ಹುಬ್ಬಳ್ಳಿ- ಅಂಕೋಲಾ ರೈಲುಮಾರ್ಗ ಜಾರಿಯಾಗಹೊರಟಿದೆ. ತುಂಗಾ-ಭದ್ರಾ, ಕಾವೇರಿ ನದಿಗಳ ಜಲಾ ನಯನ ಪ್ರದೇಶವು ಅವ್ಯಾಹತ ಅರಣ್ಯನಾಶ ಹಾಗೂ ಅತಿಕ್ರಮಣಕ್ಕೆ ಒಳಗಾಗಿ, ಅವುಗಳ ಹರಿವೇ ಕಡಿಮೆಯಾಗುತ್ತಿದೆ. ನೇತ್ರಾವತಿ ನದಿ ಮಡಿಲು ಅವೈಜ್ಞಾನಿಕವಾಗಿ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಕಾಮಗಾರಿ ಯಲ್ಲಿ ತೊಳೆದುಹೋಗುತ್ತಿದೆ. ಇವೆಲ್ಲವುಗಳಿಂದಾಗಿ, ಇತ್ತ ಕರಾವಳಿಗೆ ನದಿನೀರಿನ ಹರಿವು ಕಡಿಮೆಯಾಗಿ, ಸಾಗರ ಸೇರುವ ಪೋಷಕಾಂಶ ಇಲ್ಲದಾಗಿ, ನಾಡಿನ ಸಮುದ್ರದಲ್ಲಿ ಮೀನಿಗೂ ಬರ ಬರುತ್ತಿದೆ. ಅತ್ತ ಪೂರ್ವಕ್ಕೆ ಹರಿಯುವ ನದಿಗಳಲ್ಲಿ ನೀರಿಲ್ಲದಾಗಿ, ವಿಶಾಲ ಒಳನಾಡಿನ ಜನ ನೀರಿನ ಕೊರತೆಯಿಂದಾಗಿ ಗುಳೆ ಹೋಗುತ್ತಿದ್ದಾರೆ. ಶರಾವತಿ ನದಿ ತಪ್ಪಲಿನ ಜನರಂತೂ ಕ್ವಾರಿ, ಅರಣ್ಯ ಅತಿಕ್ರಮಣ, ಏಕಸಸ್ಯ ನೆಡುತೋಪು, ಮಂಗನಕಾಯಿಲೆ ಹಾಗೂ ಬೇಸಿಗೆಯ ನೀರಿನ ಕೊರತೆಯಿಂದಾಗಿ ಈಗಾಗಲೇ ನಲುಗಿಹೋಗಿದ್ದಾರೆ. ಇದೀಗ, ಶವದ ಪೆಟ್ಟಿಗೆಗೆ ಕೊನೆ ಮೊಳೆಯೆಂಬಂತೆ, ಸಹ್ಯಾದ್ರಿಯ ಗರ್ಭವನ್ನೇ ಸ್ಫೋಟಿಸುವ ಈ ಯೋಜನೆಗೆ ಚಾಲನೆ ದೊರೆತಿದೆ.

ಶರಾವತಿ ಕಣಿವೆಯಲ್ಲಿ ಸಮೀಕ್ಷೆಗಾಗಿ ನಡೆಸಿರುವ ಭೂಗರ್ಭ ಸಿಡಿತವು, ಪರಿಸರ ದಿನಾಚರಣೆಗೆ ಬಡಿಯು ತ್ತಿರುವ ಭೇರಿಯೇ? ಮುಂಬರುವ ದಿನಗಳಲ್ಲಿ ಘಟಿಸ ಬಹುದಾದ ಭೂಕುಸಿತದ ಮುನ್ಸೂಚನೆ ಸಹ ಇದ್ದೀತು! ಸರ್ಕಾರ ಈ ಯೋಜನೆಯನ್ನು ತಡೆಹಿಡಿಯದಿದ್ದಲ್ಲಿ, ಭವಿಷ್ಯದಲ್ಲಿ ಭಾರಿ ಭೂಕುಸಿತದೊಂದಿಗೆ ಸಹ್ಯಾದ್ರಿಯ ಕೊನೆಯ ಆಕ್ರಂದನವೂ ಕೇಳಿಸೀತು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು