ಮಂಗಳವಾರ, ಜೂನ್ 2, 2020
27 °C
ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಇದು ಸಕಾಲ

ಅತ್ತ ಕೊರೊನಾ, ಇತ್ತ ಹಸಿವು

ಶಾರದಾ ಗೋಪಾಲ Updated:

ಅಕ್ಷರ ಗಾತ್ರ : | |

ಜಗತ್ತಿನಾದ್ಯಂತ ಪಸರಿಸಿರುವ ಕೊರೊನಾ-2 ವೈರಸ್‌, ಜನರನ್ನು ತನ್ನ ಬಿಗಿಮುಷ್ಟಿಯಲ್ಲಿ ಹಿಡಿದು ಅಲ್ಲಾಡಿಸುತ್ತಿದೆ. ವ್ಯಾಪಾರ– ವಹಿವಾಟು, ಕೂಲಿನಾಲಿಯೆಲ್ಲವೂ ಬಂದ್ ಆಗಿ, ನಿತ್ಯ ದುಡಿದು ತಿನ್ನುವವರ ಹೊಟ್ಟೆಯ ಮೇಲೆ ದೊಡ್ಡ ಗುದ್ದು ಬಿದ್ದಿದೆ. ಮೊದಲೇ ಬಡತನದಿಂದ ಕಂಗೆಟ್ಟಿರುವ ಉತ್ತರದ ರಾಜ್ಯಗಳ ಕೂಲಿಕಾರರ ಸ್ಥಿತಿಯಂತೂ ಯಾರಿಗೂ ಬೇಡ.

ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ. ಸೋಂಕು ಮಹಾಮಾರಿಯಾಗಿ ಹಬ್ಬುವುದನ್ನು ತಡೆಗಟ್ಟಲು ರಾಜ್ಯ– ರಾಜ್ಯಗಳ ನಡುವಿನ ವಿಮಾನ, ರೈಲು ಮತ್ತು ಬಸ್ ಸಂಚಾರಗಳನ್ನು ರದ್ದುಗೊಳಿಸಿವೆ. ಮಕ್ಕಳು ಬಲುಬೇಗ ರೋಗಕ್ಕೆ ತುತ್ತಾಗುವರೆಂಬ ಕಾರಣದಿಂದ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಕೆಲವು ಪರೀಕ್ಷೆಗಳನ್ನು ರದ್ದುಪಡಿಸಿ, ಇನ್ನು ಕೆಲವನ್ನು ಮುಂದೂಡಲಾಗಿದೆ.

ಹೆಚ್ಚು ಜನ ಸೇರುತ್ತಿದ್ದ ಧಾರ್ಮಿಕ ಕ್ಷೇತ್ರಗಳು, ಜಾತ್ರೆಗಳು, ಮದುವೆ, ಸಂತೆ ಮುಂತಾದ ಎಲ್ಲ ಜಾಗಗಳನ್ನೂ ಬಂದ್ ಮಾಡಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಕೆಲಸಗಾರರಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಿವೆ. ಕೆಲವರು ಇಂಟರ್‌ನೆಟ್, ವಾಟ್ಸ್‌ಆ್ಯಪ್‍ಗಳ ಮೂಲಕ ಇನ್ನೂ ಹೆಚ್ಚೆಚ್ಚು ಭಯವನ್ನು ಫಾರ್ವರ್ಡ್ ಮಾಡುತ್ತಲೂ ಇದ್ದಾರೆ.

ಸಂಬಳ ಮತ್ತು ನೌಕರಿಯ ಖಾತರಿ ಇರುವವರ ಕತೆ ಇದಾಯಿತು. ಬಹಳ ಚಿಕ್ಕ ಸಂಖ್ಯೆಯಿದು. ಇನ್ನು, ದಿನನಿತ್ಯ ದುಡಿತವಿಲ್ಲದೇ ಸಂಜೆಗೆ ಊಟವಿಲ್ಲ ಎನ್ನುವವರದ್ದೇನು ಕತೆ? ಇಂಥವರ ಸಂಖ್ಯೆ ಬಲು ದೊಡ್ಡದು. ದಿನಗೂಲಿಯವರು, ಹಳ್ಳಿ ಬಿಟ್ಟು ಪಟ್ಟಣಕ್ಕೆ ವಲಸೆ ಬಂದಿರುವವರು, ಹೂ, ಹಣ್ಣು, ತರಕಾರಿ ಮಾರುವವರು, ಹಮಾಲಿಗಳು, ಮನೆಗೆಲಸದ ಹೆಣ್ಣುಮಕ್ಕಳು, ನಿತ್ಯದ ಊಟಕ್ಕಾಗಿ ಸರ್ಕಾರದ ಪಡಿತರವನ್ನೇ ಅವಲಂಬಿಸಿರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಮನೆಯಲ್ಲಿ ಕುಳಿತು ಮಾಡುವಂಥ ಕೆಲಸವಲ್ಲ ಅವರದ್ದು. ಯಾವುದೇ ವಿಕೋಪವಾದರೂ- ಮನುಷ್ಯ ನಿರ್ಮಿತವಿರಲಿ, ನೈಸರ್ಗಿಕವಿರಲಿ– ಮೊದಲು ಬಾಧಿಸುವುದು ಈ ಗುಂಪಿನ ಜನರನ್ನು. ಇಂದಿನ ಆರ್ಥಿಕ ಹಿಂಜರಿತದ ಬೆನ್ನಲ್ಲೇ ಆರೋಗ್ಯಕ್ಕೆ ಸಂಬಂಧಿಸಿದ ಈ ಸಂಕಟವೂ ಎದುರಾಗಿದ್ದು, ಅದು ಈ ಗುಂಪಿನ ಜನರನ್ನು ಮತ್ತಷ್ಟು ನಿರುದ್ಯೋಗದತ್ತ, ಸಂಕಟದತ್ತ ನೂಕುತ್ತದೆ. ದೇಶದಲ್ಲಿನ ಕ್ಷಯ ರೋಗಿಗಳು, ಎಚ್.ಐ.ವಿ ಸೋಂಕಿತರು ಹಾಗೂ ಅಪೌಷ್ಟಿಕತೆಗೆ ಒಳಗಾದವರಲ್ಲಿ ಹೆಚ್ಚಿನವರು ಈ ಗುಂಪಿನಲ್ಲಿದ್ದಾರೆ. ಈ ಗುಂಪಿಗೇನಾದರೂ ಕೊರೊನಾ ಸೋಂಕು ತಗುಲಿತೆಂದರೆ, ಅದು ಮಾಡುವ ಹಾಹಾಕಾರ ನಮ್ಮ ಕಲ್ಪನೆಗೆ ಮೀರಿದ್ದು.

ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಇದು ಸಕಾಲ. ಪ್ರತೀ ಜಿಲ್ಲಾಸ್ಪತ್ರೆಯೂ ಕೊರೊನಾ ಸೋಂಕು ಪರೀಕ್ಷಾ ಘಟಕವನ್ನು ಹೊಂದಿರಬೇಕು. ಇದರ ಜೊತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಾಮರ್ಥ್ಯ ವೃದ್ಧಿ, ಆರೋಗ್ಯ ರಕ್ಷಕರ ಬಲವರ್ಧನೆ, ಶಂಕಿತ ಸೋಂಕಿತರನ್ನು ಪ್ರತ್ಯೇಕವಾಗಿ ಇಡಬೇಕಾದ ವಾರ್ಡ್‌ಗಳು, ಸ್ವಚ್ಛ ಹಾಸಿಗೆ, ಸ್ವಚ್ಛ ಸ್ನಾನಗೃಹಗಳು, ಸೋಪು, ನೀರು, ಸ್ವಚ್ಛ ಶೌಚಾಲಯಗಳು, ಔಷಧ, ಗ್ಲೌಸ್, ಮಾಸ್ಕ್ ಇವೆಲ್ಲವನ್ನೂ ಮೊದಲು ಒದಗಿಸಬೇಕಾಗಿದೆ.

ಖಾಸಗಿ ಆಸ್ಪತ್ರೆಗಳು ಒಂದೊಂದಾಗಿ ಮುಚ್ಚಿಕೊಳ್ಳುತ್ತಿವೆ, ಹಾಗೆಯೇ ಖಾಸಗಿ ಔಷಧದ ಅಂಗಡಿಗಳು. ತಮ್ಮ ಆರೋಗ್ಯ, ತಮ್ಮ ಲಾಭಕ್ಕಾಗಿ ಇರುವ ವ್ಯವಸ್ಥೆಗಳು ಅವು. ಆದರೆ ಸಾರ್ವಜನಿಕ ಆಸ್ಪತ್ರೆಗಳು ಸಾರ್ವಜನಿಕರ ಹಣದಿಂದ ನಡೆಯುವಂಥವು. ಅವು ಈಗ ಸಾರ್ವಜನಿಕರಿಗಾಗಿ ಸಜ್ಜಾಗದಿದ್ದರೆ ಆತ್ಮವಂಚನೆಯಾಗುತ್ತದೆ. ಸ್ಪೇನ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳು ಸಾಕಾಗುತ್ತಿಲ್ಲ ಎನಿಸಿದಾಗ ಸರ್ಕಾರವು ಎಲ್ಲ ಖಾಸಗಿ ಆಸ್ಪತ್ರೆಗಳನ್ನೂ ತನ್ನ ಅಧೀನಕ್ಕೆ ಒಳಪಡಿಸಿತು. ಚೀನಾದಲ್ಲಿ ಹತ್ತೇ ದಿನಗಳಲ್ಲಿ ಸಾವಿರಾರು ರೋಗಿಗಳನ್ನು ಇರಿಸಬಲ್ಲ ಆಸ್ಪತ್ರೆ ಸೃಷ್ಟಿಯಾಯಿತು. ನಾವು ಇವರ ಮಾದರಿಯನ್ನಾದರೂ ಅನುಸರಿಸಬೇಕು, ಇಲ್ಲವೇ ಇದಕ್ಕಿಂತ ಹೆಚ್ಚಿನದನ್ನು ಮಾಡಿ ತೋರಿಸಬೇಕು. ಸಜ್ಜಾಗಿದ್ದೇವೆಯೇ?

ಬಹುತೇಕ ರಾಜ್ಯಗಳು ಉಚಿತ ರೇಷನ್ ಹಂಚಿಕೆಯನ್ನು ಘೋಷಿಸಿವೆ. ನಮ್ಮ ರಾಜ್ಯ ಕೂಡ ಹಾಗೆ ಮಾಡಿದೆ. ಸರ್ಕಾರದ ಈ ಘೋಷಣೆಯು ಕೃತಿಗಿಳಿದು ಹಳ್ಳಿ ಹಳ್ಳಿಗೆ, ಕೊಳೆಗೇರಿಗಳಿಗೆ, ಮನೆ ಮನೆಗೆ ಸರಿಯಾಗಿ ತಲುಪುವುದು ಅತಿ ಮಹತ್ವದ್ದು. ಘೋಷಣೆಯಾಗುತ್ತದೆ, ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ, ಶಬ್ದಗಳು ಆವಿಯಾಗಿ ಹೋಗುತ್ತವೆ. ಹಾಗಾಗಬಾರದು. ಅಲ್ಲಿ ಖಾಲಿ ಚೀಲ ಹಿಡಿದು ಕಾಯುತ್ತಿರುವವರು ಕಾಯುತ್ತಲೇ ಇರುತ್ತಾರೆ.

ಹಲವಾರು ಹಳ್ಳಿಗಳಲ್ಲಿ ಇನ್ನೂ ಮಾರ್ಚ್ ತಿಂಗಳಿನ ಪಡಿತರ ವಿತರಣೆಯೇ ಆಗಿಲ್ಲ. ಅದನ್ನೂ ಸೇರಿಸಿ ಮೂರು ತಿಂಗಳ ರೇಷನ್‌ ಕೊಡಬೇಕಿದೆ. ವಿತರಣೆ ಆಗಿರುವಲ್ಲಿ ಕೂಡ ಬರೀ ಅಕ್ಕಿ ಸಿಗುತ್ತಿದೆ. ಪಡಿತರ ವ್ಯವಸ್ಥೆಯಲ್ಲಿ ಸಹ ಹೆಚ್ಚಿನದನ್ನು ಮಾಡಿ ತೋರಿಸಬೇಕಿದೆ. ಬಡವರಿಗೆ ಪಡಿತರವೆಂದರೆ ಬರೀ ಅಕ್ಕಿ ಅಥವಾ ಗೋಧಿಯಲ್ಲ ಎಂದು ತಜ್ಞರು ಸಾರುತ್ತಾ ಬಂದು ಕಾಲು ಶತಮಾನ ಕಳೆಯುತ್ತಿದೆ. ಉತ್ತಮ ಗುಣಮಟ್ಟದ, ಪ್ರೋಟೀನ್‍ಯುಕ್ತ ಬೇಳೆ, ಕಾಳುಗಳು, ಎಣ್ಣೆ ಕೂಡ ಪಡಿತರದಲ್ಲಿ ಸೇರಬೇಕು. ಇಂದು, ಕೊರೊನಾ– 2 ಸಮುದಾಯ ಮಟ್ಟಕ್ಕೆ ಪ್ರವೇಶ ಮಾಡಿತೆಂದರೆ ರೋಗನಿರೋಧಕಶಕ್ತಿಯೊಂದೇ ಒಬ್ಬೊಬ್ಬ ವ್ಯಕ್ತಿಯನ್ನೂ ರೋಗದ ವಿರುದ್ಧ ಹೋರಾಡಿ ಗೆಲ್ಲಿಸಬಲ್ಲದು.

ಹಾಗಿರುವಾಗ ದೇಶವನ್ನು ಕಟ್ಟುತ್ತಿರುವ ನಮ್ಮ ಜನರಿಗೆ ರೋಗನಿರೋಧಕಶಕ್ತಿ ತುಂಬಬಲ್ಲ ಸತ್ವಯುತವಾದ ಆಹಾರವನ್ನು ತಲುಪಿಸುವ ಕೆಲಸವನ್ನು ಸರ್ಕಾರವು ಆದ್ಯತೆಯ ಕೆಲಸವಾಗಿ ಮಾಡಬೇಕಿದೆ. ನಮ್ಮ ಕೇಂದ್ರ ಗೋದಾಮುಗಳು ಭರ್ತಿ ಇವೆ. ತುಂಬಿ ತುಳುಕುತ್ತಿವೆ. ಆ ಧಾನ್ಯವನ್ನು ಬಿಡುಗಡೆ ಮಾಡುವ, ತ್ವರಿತವಾಗಿ ಊರಿಂದೂರಿಗೆ ಸಾಗಿಸುವ ವ್ಯವಸ್ಥೆಯಾಗಬೇಕು. ಹೆಚ್ಚಿನ ಹಂಚಿಕೆಗೆ ಹೆಚ್ಚಿನ ಸಿಬ್ಬಂದಿಯ ತುರ್ತು ನೇಮಕವಾಗಬೇಕು. ಅವರಿಗೆ ಹೆಚ್ಚಿನ ಸಂಬಳ, ಸಾರಿಗೆ ವ್ಯವಸ್ಥೆಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಆಪತ್ಕಾಲ
ದಲ್ಲಿ ಬೆರಳಚ್ಚು, ಆಧಾರ್‌ ಕಾರ್ಡ್‌ಗಳನ್ನು ಬದಿಗಿಟ್ಟು, ಜನರಿಗೆ ಪಡಿತರ ದೊರಕಿಸಿಕೊಡಬೇಕು.

ಶಾಲೆಗಳೆಲ್ಲ ಮುಚ್ಚಿವೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ? ಮಾರ್ಚ್‌ 20ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಪ್ರತೀ ಮಗುವಿಗೂ ಆಯಾ ಶಾಲೆಯಲ್ಲಿ ಬಿಸಿಯೂಟವನ್ನು ಕೊಡಬೇಕು. ಆಗದಿದ್ದರೆ ಮಗುವಿಗೆ ದಿನದ ಊಟದ ಭತ್ಯೆ ಕೊಡಬೇಕು. ಇಂದಿನ ಪರಿಸ್ಥಿತಿಯಲ್ಲಿ ಬಿಸಿಯೂಟವನ್ನು ಶಾಲೆಯೊಳಗೆ ನೀಡುವುದಂತೂ ಅಸಾಧ್ಯದ ಮಾತು. ಅಂಗನವಾಡಿಗಳು ಮುಚ್ಚಿದ್ದು, ಮಕ್ಕಳು ಮತ್ತು ಗರ್ಭಿಣಿಯರಿಗೂ ಊಟ ಸಿಗುತ್ತಿಲ್ಲ. ಮಕ್ಕಳು ಅತಿ ಹೆಚ್ಚು ಅಪಾಯದ ಅಂಚಿನಲ್ಲಿ ಇರುವವರು. ಅವರ ರೋಗನಿರೋಧಕ ಸಾಮರ್ಥ್ಯ ಹೆಚ್ಚಬೇಕೆಂದರೆ ಒಳ್ಳೆಯ ಊಟ ಸಿಗಲೇಬೇಕು. ಇದಕ್ಕಾಗಿ ನಮ್ಮ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಸ್ಥಳೀಯ ಆಡಳಿತ ಯಾವ ರೀತಿಯಲ್ಲಿ ಸಜ್ಜಾಗಿವೆ? 

ಸಂತೆಗಳು ಬಂದ್ ಆದುವೆಂದರೆ, ಹಳ್ಳಿಗರಿಗೆ ವಾರದ ಆಹಾರ ವಸ್ತುಗಳು ಎಲ್ಲಿಂದ ಸಿಗಬೇಕು? ವಾರದ ಕೂಲಿಯನ್ನೇ ನೆಚ್ಚಿ ಕೆಲಸ ಮಾಡುವ ದಿನಗೂಲಿಗಳು, ಹಮಾಲಿಗಳು, ಕಟ್ಟಡ ಕಾರ್ಮಿಕರು, ಎಲ್ಲಕ್ಕಿಂತ ದೇಶದ ಕಾರ್ಮಿಕರಲ್ಲಿ ಶೇ 90ರಷ್ಟಿರುವ ಅಸಂಘಟಿತ ಕಾರ್ಮಿಕರು... ಅವರೆಲ್ಲರ ಗತಿ ಏನು? ನೆರೆ, ಬರ, ಸುನಾಮಿಯಂಥ ಪ್ರಕೃತಿ ವಿಕೋಪದ ಪರಿಸ್ಥಿತಿಯಲ್ಲಿ ಕೈಗೊಳ್ಳುವಂತಹ ತ್ವರಿತ ಕ್ರಮಗಳನ್ನು ಸರ್ಕಾರದಿಂದ ಇಂದು ಸಮಾಜ ನಿರೀಕ್ಷಿಸುತ್ತಿದೆ.

ಕೇರಳವು ಇತ್ತೀಚಿನ ನೆರೆಯ ಸಂದರ್ಭದಲ್ಲಿ ವಿಕೋಪವನ್ನು ಎದುರಿಸಲು ಸಜ್ಜಾಗಿದ್ದರಿಂದ ಕೊರೊನಾವನ್ನೂ ಎದುರಿಸಲು ಸಾಧ್ಯವಾಗಿದೆ. ಮನೆಮನೆಗೆ ಆಹಾರ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಜನರ ಖಾತೆಗೆ ಹೆಚ್ಚಿನ ಹಣ ಹಾಕುತ್ತಿದೆ. ಇಂಥ ಉತ್ತಮ ನಡೆಗಳು ತ್ವರಿತವಾಗಿ ಅನುಷ್ಠಾನವಾಗಬೇಕಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಸರ್ಕಾರ ಮತ್ತು ಸಮಾಜ ಒಟ್ಟಾಗಿ ಯುವ ಕಾರ್ಯಪಡೆಯೊಂದನ್ನು ರಚಿಸಿ, ದಿನಗೂಲಿ ಕಳೆದುಕೊಂಡವರಿಗೆ ಮನೆಮನೆಗೆ ಆಹಾರವಸ್ತುಗಳನ್ನು ತಲುಪಿಸುವಂಥ ಕಾರ್ಯಕ್ಕೆ ಮುನ್ನುಗ್ಗಬೇಕಿದೆ.


ಶಾರದಾ ಗೋಪಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು