ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–2: ನೀವೇ ದೇವರಾಗಿ!

Published : 15 ಆಗಸ್ಟ್ 2024, 23:55 IST
Last Updated : 15 ಆಗಸ್ಟ್ 2024, 23:55 IST
ಫಾಲೋ ಮಾಡಿ
Comments

ಮುದುಕನೊಬ್ಬ ರಸ್ತೆಯಲ್ಲಿ ಹೊರಟಿದ್ದ. ಅವನಿಗೆ ಫಿಟ್ಸ್ ಬಂದು ಕೆಳಕ್ಕೆ ಬಿದ್ದುಬಿಟ್ಟ. ಯುವಕನೊಬ್ಬ ಅವನನ್ನು ಹಿಡಿದು ಎತ್ತಿ ದವಾಖಾನೆಗೆ ಸೇರಿಸಿ ಆರೈಕೆ ಮಾಡಿದ. ಆಗ ಆ ಮುದುಕ ಯುವಕನ ಕೈ ಹಿಡಿದು ‘ನೋಡಪ, ನನಗೆ ಯಾರೂ ಇದ್ದಿದಿಲ್ಲ. ನೀನು ನನ್ನ ಪಾಲಿಗೆ ದೇವರು ಬಂದಂಗೆ ಬಂದೆ’ ಎಂದ. ಅಂದರೆ ಚಲೋ ಕೆಲಸ ಮಾಡಿದ್ದಕ್ಕೆ ದೇವರಾದ ಅವ. ನೀವು ದೀಪಾವಳಿ ಹಬ್ಬಕ್ಕೆ ಲಕ್ಷ್ಮೀ ಪೂಜೆ ಮಾಡ್ತೀರಿ. ದೇವರಿಗೆ ಬೆಳ್ಳಿ ಬಂಗಾರದ ಆಭರಣ ಎಲ್ಲಾ ಹಾಕಿ ಪೂಜೆ ಮಾಡುತ್ತೀರಿ. ರಾತ್ರಿ ಒಬ್ಬ ಕಳ್ಳ ಬರ್ತಾನ, ಬೆಳ್ಳಿ ಬಂಗಾರ ಎಲ್ಲಾ ತೆಗೆದುಕೊಂಡು ಹೋಗುವಾಗ ನೀವು ಸಾಕಿದ ನಾಯಿ ನಿಮ್ಮನ್ನು ಎಬ್ಬಿಸುತ್ತದೆ. ಬಂಗಾರ ಉಳೀತದೆ. ಮಾರನೇ ದಿನ ಮನೆಗೆ ಬಂದವರಿಗೆ ನೀವು ‘ನಾಯಿ ನಮ್ಮ ಪಾಲಿಗೆ ದೇವರಾಗಿ ಬಂತು’ ಅಂತೀರಿ. ಅಂದರೆ ಚಲೋ ಕೆಲಸ ಮಾಡಿದರೆ ನಾಯಿ ಕೂಡಾ ದೇವರಾಗಬಹುದಾದರೆ ಮನುಷ್ಯ ಯಾಕೆ ದೇವರಾಗುವುದಿಲ್ಲ?

ನಿಸರ್ಗದಲ್ಲಿ  ಯಾವುದೂ ತನ್ನ ಕೆಲಸವನ್ನು ಬಿಟ್ಟಿಲ್ಲ. ತೆಂಗಿನ ಮರ ನೋಡಿ. ತೆಂಗಿನಕಾಯಿಗೆ ಯಾರಾದರೂ ಮೆಶಿನ್ ಹಚ್ಚಿ ನೀರು ತುಂಬಿಸ್ಯಾರೇನು? ಸೂರ್ಯನಿಗೆ ಯಾರಾದರೂ ಅಲಾರಾಂ ಇಟ್ಟು ಎಬ್ಬಿಸ್ಯಾರೇನು? ಗಾಳಿಗೆ ಯಾರಾದರೂ ಫ್ಯಾನ್ ಹಚ್ಚಿ ಮುಂದಕ್ಕೆ ದಬ್ಯಾರೇನು? ನಾವು ಶನಿವಾರ ಹಾಫ್ ಡೇ, ಭಾನುವಾರ ಫುಲ್ ಡೇ ರಜಾ ಅಂತೀವಿ. ಹಾಗೆ ಗಾಳಿ ನಾಳೆ ಅರ್ಧದಿನ ಬೀಸೋದಿಲ್ಲ ಅಂತದೇನು? ಭೂಮಿ ತಾಯಿ ಸದಾ ಕೆಲಸ ಮಾಡ್ತಾಳೆ. ದುಡಿದವಳು ಅವಳು, ಬೆಳೆದವಳು ಅವಳು. ನಾವು ಬರೀ ಪ್ರಶಸ್ತಿ
ತಗೊಂಡೋರು ಅಷ್ಟೆ. ತುಂಗಭದ್ರೆ, ಕಾವೇರಿ, ಕೃಷ್ಣೆ ಮುಂತಾದ ನದಿಗಳು ಸದಾ ಹರಿಯುತ್ತವೆ. ಹರಿಯುವ ನದಿ ನಿಂತದೇನು? ಹರಿಯುವ ನದಿ ನಿಲ್ಲಬಾರದು. ನಿಂತರೆ ಗಡವಾಗಿ ವಾಸನೆ ಬರತೈತಿ. ನೀರು ನಿಂತರೆ ಕೆಡುತೈತಿ. ಮನುಷ್ಯ ಕುಂತರೆ ಕೆಡುತ್ತಾನೆ. ನೀರು ಹರಕೋತ ಇರಬೇಕು, ಮನುಷ್ಯ ದುಡುಕೋತ ಇರಬೇಕು.

ನಮ್ಮ ದೇಹ ನೋಡಿ. ಅದರ ಸಿಸ್ಟಂ ಎಷ್ಟು ಕರೆಕ್ಟಾಗಿ ಕೆಲಸ ಮಾಡುತ್ತದೆ. ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತದೆ. ಶ್ವಾಸಕೋಶಗಳು, ಹೃದಯ, ರಕ್ತನಾಳಗಳು ಕೆಲಸ ಮಾಡುತ್ತಲೇ ಇರುತ್ತವೆ. ಜೀರ್ಣಾಂಗ ಕೂಡಾ ಸುಮ್ಮನಿರಲ್ಲ. ಮಿದುಳು ಇದೆಯಲ್ಲ. ಅದು ಮಾಸ್ಟರ್. ದೇಹಕ್ಕೆ ಗೊತ್ತಿದೆ ಹೇಗೆ ಕೆಲಸ ಮಾಡಬೇಕು ಅಂತ. ನಾವೇ ಸಿಕ್ಕಿದ್ದೆಲ್ಲಾ ತಿಂದು ಕೆಡಿಸುತ್ತೇವೆ. ಒಮ್ಮೆ ಹೃದಯಕ್ಕೆ ಕೈ ಕೇಳಿತಂತೆ. ‘ನೀನು ಯಾವಾಗಲೂ ಕೆಲಸ ಮಾಡುತ್ತಾ ಇರುತ್ತಿ. ಆದರೂ ಮನುಷ್ಯರು ಬೆಳಿಗ್ಗೆ ಎದ್ದ ತಕ್ಷಣ ನಿನ್ನ ನೋಡಲ್ಲ. ಮುಖ ನೋಡಿಕೊಳ್ಳುತ್ತಾರೆ. ಸ್ನೋ ಹಚ್ಚುತ್ತಾರೆ. ಪೌಡರ್ ಬಳಿದುಕೊಳ್ಳುತ್ತಾರೆ. ಕೂದಲು ಸರಿ ಮಾಡ್ತಾರೆ. ಶಾಂಪು ಹಾಕುತ್ತಾರೆ. ಕೂದಲು ಏನೂ ಕೆಲಸ ಮಾಡಲ್ಲ. ಆದರೂ ಶೋಕಿ ಮಾಡ್ತಾರ.  ನೀನು ಬೆಳಗಿನಿಂದ ಬಡಕೋತನೇ ಇದ್ದರೂ ನಿನಗೆ ಗೌರವನೇ ಇಲ್ಲ’ ಅಂತ ಹೇಳಿತಂತೆ. ಅದಕ್ಕೆ ಹೃದಯ ‘ನಿನಗೆ ಕೂದಲ ಚಿಂತೆ ಯಾಕೆ. ಅದು ಬೆಳೀತದೆ. ಬೆಳ್ಳಗಾಗುತ್ತದೆ. ಒಂದು ದಿನ ಬಿದ್ದು ಹೋಗುತ್ತದೆ. ನಾನು ಯಾಕ ದುಡೀತೀನಂದ್ರ ದುಡಿಯೋರು ಬದುಕುತ್ತಾರ ಮತ್ತು ಬದುಕಿಸುತ್ತಾರ’ ಎಂದು ಹೇಳಿತಂತೆ. ಅದಕ್ಕ ನಾವು ಸದಾ ದುಡಕೋತ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT