ಜೀವನ ಎಂದೂ ಹೀಗೇ ಇರೋದಿಲ್ಲ. ಜೀವನದಲ್ಲಿ ಯಾವಾಗಲೂ ಲಾಭ ಇರ್ತದೇನು? ಗೆಲುವು ಇರ್ತದೇನು? ಶ್ರೀಮಂತಿಕೆ ಇರ್ತದೇನು? ಸನ್ಮಾನ ಇರ್ತದೇನು? ಜೀವನ ಎನ್ನುವುದು ಎಲ್ಲದರ ಮಿಶ್ರಣ. ಒಮ್ಮೆ ಗೆಲುವು, ಒಮ್ಮೆ ಸೋಲು, ಒಮ್ಮೆ ಲಾಭ, ಒಮ್ಮೆ ಹಾನಿ, ಒಮ್ಮೆ ಸನ್ಮಾನ, ಒಮ್ಮೆ ಅವಮಾನ, ಒಮ್ಮೆ ಶ್ರೀಮಂತಿಕೆ, ಒಮ್ಮೆ ಬಡತನ. ಈ ಎರಡರ ನಡುವೆಯೇ ಮನುಷ್ಯ ಸಂತೋಷವಾಗಿ ಬದುಕುವುದನ್ನು ಕಲೀಬೇಕು.
ಯಾರು ತಪಸ್ವಿ? ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿರ್ತಾರಲ್ಲ, ಅವರನ್ನು ತಪಸ್ವಿ ಅನಬೇಕು ಅಂತ ನಾವು ತಿಳಕೊಂಡೇವಿ. ಹಾಂಗಾದರೆ ಬಾವಲಿಗಳೂ ತಲೆ ಕೆಳಗೆ ಮಾಡಿಕೊಂಡಿರುತ್ತವೆ, ಅವುಗಳನ್ನು ತಪಸ್ವಿ ಅನ್ನಲಿಕ್ಕಾಗತೈತೇನು? ತಪ್ಪಳ ತಿಂದು ಬದುಕುವವರು ತಪಸ್ವಿಗಳು ಅಂತಾರ, ಆದರ ಹೊಲದಾಗಿನ ಕೀಟಗಳೂ ತಪ್ಪಳ ತಿಂದು ಬದುಕುತಾವ, ಅವುಗಳನ್ನು ತಪಸ್ವಿಗಳು ಅನ್ನಲಿಕ್ಕಾಗತದೇನು? ಅವರಲ್ಲ ತಪಸ್ವಿಗಳು. ಬಡತನ ಶ್ರೀಮಂತಿಕೆ, ಮಾನ-ಅವಮಾನ, ಹುಟ್ಟು-ಸಾವು, ಲಾಭ-ಹಾನಿ ಎಲ್ಲವನ್ನೂ ಸಮನಾಗಿ ಸ್ವೀಕರಿಸುವವನು ನಿಜವಾದ ತಪಸ್ವಿ.
ಜಗತ್ತು ಎನ್ನುವುದರ ಅರ್ಥವೇ ಏನಿದೆಯೋ, ಅದು ಹಾಗೆ ಉಳಿಯೋದಿಲ್ಲ ಅಂತ ಅರ್ಥ. ಕಾಣತೈತಿ ಆದರ ಕಂಡಂಗಿರಲ್ಲ. ಜಗತ್ತಿನ ಲಕ್ಷಣ ಏನು ಅಂದರ ಯಾವುದೂ ಇದ್ದಂಗೆ ಇರಲ್ಲ. ಸದಾ ಪರಿವರ್ತನಶೀಲ. ನಮ್ಮನ್ನೇ ತಗೊಳ್ಳಿ. ಬಾಲಕರಿದ್ವಿ, ಯುವಕರಾದ್ವಿ, ಮುದುಕರಾದ್ವಿ, ಒಂದಿನ ಸತ್ತೋದ್ವಿ. ಬೀಜ ಬೀಜವಾಗೇ ಉಳೀತೈತೇನು? ಬೀಜ ಗಿಡವಾಗುತ್ತದೆ, ಮರವಾಗುತ್ತದೆ, ಹೂವಾಗುತ್ತದೆ, ಮತ್ತೆ ಬೀಜವಾಗುತ್ತದೆ. ಒಂದಿನ ಮುರಿದು ಬೀಳುತ್ತದೆ.
ಉಣ್ಣುವಾಗ ಮೊದಲು ಏನ್ ಉಣ್ಣುತ್ತೀರಿ? ರೊಟ್ಟಿ, ಚಪಾತಿ ತಿನ್ನುತ್ತೀರಿ. ನಂತರ ಹೋಳಿಗೆ, ಹುಗ್ಗಿ, ಕೊನೆಗೆ ಅನ್ನ ಉಣ್ಣುತ್ತೀರಿ. ಅನ್ನ ಉಣ್ಣಕ ಶುರುಮಾಡಿದಿರಿ ಅಂದರ ಊಟ ಮುಗಿಯಾಕ ಬಂತು ಅರ್ಥ. ತಲೆಕೂದಲು ಬೆಳ್ಳಗಾಗಕ ಹತ್ತೈತಿ ಅಂದರ ಜೀವನ ಮುಗಿಯಾಕ ಬಂದೈತಿ ಅಂತ ಅರ್ಥ. ಬಣ್ಣ ಗೊತ್ತಾಗಬಾರದು ಅಂತ ಕೂದಲಿಗೆ ಬಣ್ಣ ಹಚಕೋತೀರಿ. ಕೂದಲಿಗೆ ಬಣ್ಣ ಹಚ್ಚಿದರ ಆ ಬಣ್ಣ ಅನತೈತಿ, ‘ನಾ ಹೋದರ ನಿನ್ನ ಬಣ್ಣ ಬಯಲಾಗತೈತಿ’ ಅಂತ. ಏರಿದ್ದು ಬೀಳಬೇಕಾಗತೈತಿ, ಹುಟ್ಟಿದ್ದು ಸಾಯಬೇಕಾಗತೈತಿ, ಕಟ್ಟಿದ್ದು ಬೀಳಬೇಕಾಗತೈತಿ. ಇದು ಜೀವನದ ಸತ್ಯ.
‘ಜೀವನದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಅಂತ ಪತಂಜಲಿ ಹೇಳುತ್ತಾನೆ. ಯಾಕ ಸೋಲಾತು ಅಂತ ವಿಮರ್ಶೆ ಮಾಡಿಕೋಬೇಕು. ಈ ಬದುಕನ್ನು ಹ್ಯಾಂಗ ಸ್ವೀಕಾರ ಮಾಡಬೇಕು ಅನ್ನೋದು ನಮಗೆ ಗೊತ್ತಿಲ್ಲ. ಆಡಂಬರದ ಬದುಕಿಗೆ ಒಗ್ಗಿ ಹೋಗಿದ್ದೇವೆ. ಜನ ಬಹಳ ಸಾಲ ಮಾಡಿ ಮನೆ ಕಟ್ಟಿಸ್ತಾರ. ಸಾಲ ತೀರಿಸಾಕ ಮನೆ ಬಾಡಿಗೆ ಕೊಡ್ತಾರ. ಸಾಲ ಇನ್ನೂ ತೀರಿಲ್ಲ ಅಂತ ಕಟ್ಟಿಸಿದ ಮನೆ ಮಾರಾಟ ಮಾಡಿ ಕಾಯಂ ಬಾಡಿಗೆ ಮನೆಯಲ್ಲಿಯೇ ಇರ್ತಾರ. ಸಾಲ ಎಷ್ಟು ಮಾಡಬೇಕು ಅಂದರ ತೀರಿಸುವಷ್ಟು ಸಾಲ ಮಾಡಬೇಕು, ನಾವೇ ತೀರಿಹೋಗುವಷ್ಟು ಸಾಲ ಮಾಡಬಾರದು. ಇದು ಆತ್ಮಾವಲೋಕನ. ಜೀವನದಲ್ಲಿ ಕಷ್ಟಗಳು ಇಲ್ಲದೇ ಇದ್ದರೆ ಅದಕ್ಕೆ ಬೆಲೆನೇ ಇಲ್ಲ. ಜೀವನ ಅಂದರೆ ಒಂದು ಅವಕಾಶ. ಸಂತೋಷದ, ಸ್ವರ್ಗೀಯ, ಸುಖದ ಬದುಕು ನಮ್ಮದಾಗಬೇಕು ಅಂದರ ಬದಲಾವಣೆಗೆ ನಾವು ಹೊಂದಿಕೋಬೇಕು. ಅದನ್ನು ಮೊದಲು ತಿಳಕೋಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.