ಸೋಮವಾರ, ಸೆಪ್ಟೆಂಬರ್ 26, 2022
24 °C
ಅಡಿಕೆ ಕೊಯ್ಲು, ಔಷಧ ಸಿಂಪಡಣೆಗೆ ತಂಡ, ಮನೆಗಳಿಗೆ ಇಂಟರ್‌ನೆಟ್ ಸಂಪರ್ಕ

ಒಳನೋಟ: ಹೊಸತನಕ್ಕೆ ತೆರೆದ ಸಹಕಾರ ರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಉತ್ತರ ಕನ್ನಡದ ಹಲವು ಸಹಕಾರ ಸಂಸ್ಥೆಗಳು ಸಾಂಪ್ರದಾಯಿಕ ವ್ಯವಹಾರ ಪದ್ಧತಿಯೊಂದಿಗೇ ಹೊಸತನವನ್ನೂ ಅಳವಡಿಸಿಕೊಳ್ಳುತ್ತಿವೆ. ಅಡಿಕೆ ಕೊಯ್ಲು ಹಾಗೂ ಔಷಧ ಸಿಂಪಡಣೆಗೆ ಪರಿಚಯಿಸಲಾದ ‘ಕಾರ್ಬನ್ ದೋಟಿ’, ಸದಸ್ಯರ ಮನೆಗಳಿಗೆ ವೇಗದ ಇಂಟರ್‌ನೆಟ್ ಸಂಪರ್ಕ ನೀಡಲು ‘ಎಫ್.ಟಿ.ಟಿ.ಎಚ್’ ಸೌಲಭ್ಯ, ಸಂಘದ ಸದಸ್ಯರಿಗೆ ವಿಮೆ, ಮೃತಪಟ್ಟರೆ ಕುಟುಂಬಕ್ಕೆ ಪರಿಹಾರ ವಿತರಣೆಯಂಥ ಕಾರ್ಯಕ್ರಮಗಳನ್ನೂ ಜಾರಿ ಮಾಡಿವೆ.

ಸಿದ್ದಾಪುರ ತಾಲ್ಲೂಕಿನ ನಾಣಿಕಟ್ಟಾ (ತ್ಯಾಗಲಿ) ಸೇವಾ ಸಹಕಾರ ಸಂಘ ಅಂಥ ಪ್ರಯತ್ನಗಳಲ್ಲಿ ಯಶಸ್ಸು ಕಂಡಿದೆ. ‘ಕಾರ್ಬನ್ ದೋಟಿಯನ್ನು ರಾಜ್ಯಕ್ಕೇ ಮೊದಲು ಪರಿಚಯಿಸಿದ್ದು ನಮ್ಮ ಸಂಸ್ಥೆಯೆಂಬ ಹೆಮ್ಮೆಯಿದೆ’ ಎಂದು ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಹೇಳುತ್ತಾರೆ.

‘ದೋಟಿಯನ್ನು ಪರಿಚಯಿಸಿದ್ದು ಮಾತ್ರವಲ್ಲ, ಅಡಿಕೆ ಕೊಯ್ಲು, ಔಷಧ ಸಿಂಪಡಣೆಗೆ ಕಾರ್ಮಿಕರ ತಂಡವನ್ನೂ ಕಟ್ಟಿದ್ದೇವೆ. ಸಂಘದ ಸದಸ್ಯ ಕೃಷಿಕರು ನಮಗೆ ಕರೆ ಮಾಡಿ ತಿಳಿಸಿದಾಗ ನಿಗದಿತ ದಿನದಂದು ಅವರ ತೋಟದಲ್ಲಿ ನಮ್ಮ ತಂಡವಿರುತ್ತದೆ. ಔಷಧ ಸಿಂಪಡಿಸಲು ಪಂಪ್, ದೋಟಿಯನ್ನೂ ತರುತ್ತೇವೆ’ ಎಂದು ಅವರು ವಿವರಿಸುತ್ತಾರೆ.

‘ತಂಡದ ಯುವ ಸದಸ್ಯರಿಗೆ ಸಂಘದಿಂದಲೇ ತರಬೇತಿಯನ್ನೂ ನೀಡಿ ಪರಿಣತರನ್ನಾಗಿ ಮಾಡಿದ್ದೇವೆ. ಇಂಥ ಕೌಶಲಯುಕ್ತ ಕೆಲಸಗಳನ್ನು ಮಾಡಲು ಯುವಕರು ಮುಂದೆ ಬರುತ್ತಿಲ್ಲ ಎಂಬ ಆತಂಕವನ್ನು ತಕ್ಕಮಟ್ಟಿಗೆ ನಿವಾರಿಸಿದ್ದೇವೆ. ಅಲ್ಲದೇ ಅಡಿಕೆ ಬೆಳೆಗಾರರ ಉತ್ಪನ್ನವನ್ನು ಉಳಿಸುವುದು ಹಾಗೂ ಜಮೀನು ಪರಭಾರೆ ಆಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೈತರಿಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ’ ಎಂದು ದೃಢವಾಗಿ ಹೇಳುತ್ತಾರೆ.

ಎಫ್‌.ಟಿ.ಟಿ.ಎಚ್ ಸಂಪರ್ಕ: ಮಲೆನಾಡಿನ ಅಡಿಕೆ ಬೆಳೆಗಾರರ ಬಹುತೇಕ ಕುಟುಂಬಗಳ ವಿದ್ಯಾವಂತ ಯುವಕರು ದೂರದ ನಗರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕೋವಿಡ್ ಲಾಕ್‌ಡೌನ್ ಜಾರಿಯಾದಾಗ ಅವರೆಲ್ಲ ಊರಿಗೆ ಮರಳಿದ್ದರು. ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿಗಳಿಂದ ಸೂಚನೆಯೂ ಬಂತು. ಆದರೆ, ಹಳ್ಳಿಗಾಡಿನಲ್ಲಿ ಕಾಡಿನ ನಡುವೆ ಇಂಟರ್‌ನೆಟ್ ಸಂಪರ್ಕ ಇರದೇ ಕಂಗೆಟ್ಟಿದ್ದರು. ಆಗ ನಾಣಿಕಟ್ಟಾ ಸೇವಾ ಸಹಕಾರ ಸಂಘ ನೆರವಿಗೆ ಬಂತು.

‘ನಮ್ಮ ಸೊಸೈಟಿಯ ಪರಿಧಿಯಲ್ಲಿರುವ ಸದಸ್ಯರ 180 ಮನೆಗಳಿಗೆ ತಲಾ ₹ 5,500ರಂತೆ ಶುಲ್ಕ ಪಡೆದು ಎಫ್‌.ಟಿ.ಟಿ.ಎಚ್ ಇಂಟರ್‌ನೆಟ್‌ ಸಂಪರ್ಕ ನೀಡಲು ನೆರವಾಗಿದ್ದೇವೆ. ನಮ್ಮ ವ್ಯಾಪ್ತಿಯಿಂದ ಹೊರಗಿನ ಮನೆಗಳಿಗೆ ಕೇಬಲ್ ಶುಲ್ಕವನ್ನು ಪಡೆದು ಸಂಪರ್ಕ ಒದಗಿಸಿದ್ದೇವೆ’ ಎಂದು ಎನ್.ಬಿ.ಹೆಗಡೆ ವಿವರಿಸುತ್ತಾರೆ.

ಶಿರಸಿ ತಾಲ್ಲೂಕಿನ ಹುಳಗೋಳ ಸಹಕಾರ ಸಂಘ ಕೂಡ ಗ್ರಾಮೀಣ ಕೃಷಿಕರ ಬದುಕಿಗೆ ಬೇಕಾದ ಉತ್ಪನ್ನಗಳನ್ನು ಒಂದೇ ಕಡೆ ಲಭಿಸುವಂತೆ ವ್ಯವಸ್ಥೆ ಮಾಡಿದೆ.

ಸಂಘದ ಸದಸ್ಯರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ‘ಮಹಾಪ್ರಸ್ಥಾನ ನಿಧಿ’ ಮೂಲಕ, ₹ 10 ಸಾವಿರ ‍ಪರಿಹಾರ ನೀಡುವ ಯೋಜನೆಯನ್ನು ಆರಂಭಿಸಿತ್ತು. ಕೋವಿಡ್ ಸಂದರ್ಭದಲ್ಲಿ ದಿನಸಿ, ದಿನಬಳಕೆ ಸಾಮಗ್ರಿ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವೂ ಆಗಿದೆ.

ವಿದ್ಯುತ್, ದೂರವಾಣಿ, ವಾಹನ ವಿಮೆ ಮುಂತಾದ ಖರ್ಚುಗಳನ್ನು ರೈತರು ಸಹಕಾರ ಸಂಸ್ಥೆಯ ಮೂಲಕ ಭರಿಸಲು ಅವಕಾಶವಾಗಿದೆ. ಆಯಾ ರೈತರ ಖಾತೆಗೆ ಖರ್ಚು ಹಾಕಿ ಅವರಿಗೆ ಸೇರಿದ ಬಿಲ್‌ಗಳನ್ನು ಸಂಸ್ಥೆಯೇ ಭರಿಸುತ್ತಿದೆ.

‘ನಮ್ಮ ಸಂಸ್ಥೆಗೆ 800 ಸದಸ್ಯರಿದ್ದಾರೆ. ಕಿರಾಣಿಗೆ 720 ಗ್ರಾಹಕರಿದ್ದಾರೆ. ಕಿರಾಣಿಯೊಂದಿಗೇ ಪಶು ಆಹಾರ, ನೀರಾವರಿ ಸಲಕರಣೆಗಳು, ಸಿಮೆಂಟ್, ಕೀಟನಾಶಕಗಳು, ರಸಗೊಬ್ಬರ, ಕಬ್ಬಿಣವನ್ನು ಮಾರಾಟ ಮಾಡುತ್ತಿದ್ದೇವೆ. ವಾರಕ್ಕೆ ಎರಡು ದಿನ ಹಣ್ಣು, ತರಕಾರಿ ಲಭಿಸುತ್ತದೆ. ಬಟ್ಟೆಯೂ ಮಾರಾಟವಾಗುತ್ತಿದೆ. ಪೆಟ್ರೋಲ್ ಮತ್ತು ಔಷಧಿ ಹೊರತಾಗಿ ಮತ್ತೆಲ್ಲವನ್ನೂ ಪೂರೈಕೆ ಮಾಡುತ್ತಿರುವ ಸಂತೃಪ್ತಿಯಿದೆ. ಭೈರುಂಬೆ, ಬೆಳಲೆ ಮತ್ತು ತಾರಗೋಡು ಶಾಖೆಗಳಿಂದ ವರ್ಷಕ್ಕೆ ₹ 7.43 ಕೋಟಿಯಷ್ಟು ವಹಿವಾಟು ಆಗಿದೆ’ ಎಂದು ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಹೇಳುತ್ತಾರೆ.

ದೃಢವಾದ ನಂಬಿಕೆ: ‘ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಶುದ್ಧ ಮತ್ತು ಕಲಬೆರಕೆಯನ್ನು ಗುರುತಿಸಲು ಗ್ರಾಹಕರಿಗೂ ಗೊಂದಲಗಳಿವೆ. ಆದರೆ, ಸಹಕಾರ ಸಂಸ್ಥೆಗಳು ರೈತರಿಂದಲೇ ಖರೀದಿಸಿದ ಉತ್ಪನ್ನಗಳನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಿ ಪುನಃ ಅವರಿಗೇ ಮಾರಾಟ ಮಾಡುತ್ತವೆ. ಇದರಿಂದ ಗುಣಮಟ್ಟದ ಉತ್ಪನ್ನಗಳು ದೊರೆತು ಸಹಕಾರ ರಂಗದ ಮೇಲಿನ ನಂಬಿಕೆ ದೃಢವಾಗುತ್ತಿದೆ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಸಾವಯವ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್. ಅವರು ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಘದ ಮಾರುಕಟ್ಟೆ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

ನಿರ್ವಹಣೆಗೆ ಸಮಸ್ಯೆ: ‘ಕಡಿಮೆ ಅವಧಿ ಹೊಂದಿರುವ ಉತ್ಪನ್ನಗಳನ್ನು (ಎಫ್.ಎಂ.ಸಿ.ಜಿ) ಹಾಳಾಗದಂತೆ ರಕ್ಷಿಸಿಡುವುದೇ ದೊಡ್ಡ ಸವಾಲು.  ಹಾಗಾಗಿ ಎಪಿಎಂಸಿ ಮೂಲಕ ಶೀತಲೀಕರಣ ಘಟಕದ ವ್ಯವಸ್ಥೆ ಮಾಡಿದರೆ ಒಳಿತು. ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳು ಇನ್ನಷ್ಟು ಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ಸೂಪರ್ ಮಾರ್ಕೆಟ್‌ಗಳು ಹೆಚ್ಚಾಗಿರುವ ಕಾರಣ, ಗ್ರಾಮೀಣ ಜನರ ‘ಖರೀದಿಯ ಒಲವು’ವೂ ಬದಲಾಗುತ್ತಿದೆ. ಸಹಕಾರ ಸಂಘಗಳು ಬ್ರ್ಯಾಂಡ್‌ ಆಗಿ ಬೆಳೆಯುತ್ತಿವೆ. ಬೆಂಗಳೂರಿನಿಂದ ಊರಿಗೆ ಬಂದವರು, ಅವರ ಸಂಬಂಧಿಕರು ಪುನಃ ಹೋಗುವಾಗ ಇಲ್ಲಿನ ಸೂಪರ್ ಮಾರ್ಕೆಟ್‌ಗಳಿಂದ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

‘ರೈತರು ಎಷ್ಟು ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ತಂದರೂ ನಾವು ಖರೀದಿಸುತ್ತೇವೆ. ಖರೀದಿ ಮತ್ತು ನಾವು ಅದನ್ನು ಮಾರಾಟ ಮಾಡುವ ದರಪಟ್ಟಿಯನ್ನು ಸೂಪರ್ ಮಾರ್ಕೆಟ್‌ನಲ್ಲಿ ಅಳವಡಿಸಿದ್ದೇವೆ. ಎಲೆಕ್ಟ್ರಾನಿಕ್ ತೂಕದ ಯಂತ್ರಗಳಿವೆ. ಹಾಗಾಗಿ ಪಾರದರ್ಶಕತೆಯನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಕದಂಬ ಸಹಕಾರ ಸಂಘದಲ್ಲಿ ಷೇರುದಾರ ಸದಸ್ಯರು 1,200 ಮಂದಿಯಿದ್ದರೆ, ಉತ್ಪನ್ನಗಳನ್ನು ಮಾರಾಟ ಮಾಡುವ ಸದಸ್ಯರು 5,000 ಇದ್ದಾರೆ. ಕಳೆದ ವರ್ಷ ₹ 48 ಕೋಟಿ ಮೌಲ್ಯದ ಅಡಿಕೆ ವಹಿವಾಟಾಗಿದೆ. ಸೂಪರ್ ಮಾರ್ಕೆಟ್‌ನಲ್ಲಿ ತಿಂಗಳಿಗೆ ಸರಾಸರಿ ₹ 25 ಲಕ್ಷದ ವ್ಯವಹಾರ ನಡೆಯುತ್ತದೆ’ ಎಂದು ವಿವರಿಸುತ್ತಾರೆ.

ಸಹಕಾರ ಸಂಸ್ಥೆಗಳು ಸೂಪರ್ ಮಾರ್ಕೆಟ್ ಆರಂಭಿಸಿದಾಗ ಕೆಲವು ವರ್ತಕರಿಂದ ಆರಂಭಿಕ ವಿರೋಧ, ಆಕ್ಷೇಪಗಳು ವ್ಯಕ್ತವಾದವು. ಆದರೆ, ಅವುಗಳನ್ನು ಎದುರಿಸಿ ನಿಂತು ತಾನೂ ಬೆಳೆಯುತ್ತ ಸದಸ್ಯರಿಗೂ ಅನುಕೂಲ ಮಾಡಿಕೊಡುವಲ್ಲಿ ಉತ್ತರ ಕನ್ನಡದ ಸಹಕಾರ ರಂಗ ಯಶಸ್ವಿಯಾಗಿದೆ.

‘ಒಂದೇ ಸಂಸ್ಥೆ ಬೆಳೆಯುವುದಲ್ಲ’

‘ಬೃಹದಾಗಿ ಬೆಳೆದಿರುವ ಸಹಕಾರ ಸಂಸ್ಥೆಯು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ತಾನೊಂದೇ ಬೆಳೆಯುವಂಥ ವ್ಯವಸ್ಥೆ ಬೇರೆ ಜಿಲ್ಲೆಗಳಲ್ಲಿದೆ. ಆದರೆ, ಇದರಿಂದ ಸಣ್ಣ ಸಹಕಾರ ಸಂಸ್ಥೆಗಳಿಗೆ ದೊಡ್ಡ ಆರ್ಥಿಕ ಹೊಡೆತ ಬೀಳುತ್ತಿದೆ. ಅದರ ಬದಲು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಹಿವಾಟು ಹೆಚ್ಚಿ ಅವು ಅಭಿವೃದ್ಧಿಯಾದವು. ಅಲ್ಲಿ ಸಹಕಾರ ಸಂಸ್ಥೆಗಳ ಅಸ್ತಿತ್ವವೇ ಹೋಗುವಂಥ ಸ್ಥಿತಿಯಿದೆ. ಆದರೆ, ಉತ್ತರ ಕನ್ನಡದಲ್ಲಿ ಪರಿಸ್ಥಿತಿ ಹಾಗಿಲ್ಲ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಸಾವಯವ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್. 

‘ಆಯಾ ಭಾಗದ ಸಹಕಾರ ಸಂಸ್ಥೆಗಳ ಮೂಲಕವೇ ಎಲ್ಲ ಖರೀದಿ ನಡೆಯುತ್ತದೆ. ಇದರಿಂದ ಸಂಸ್ಥೆಗಳು ತಾವಾಗೇ ಬೆಳೆಯುತ್ತವೆ’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು ತಾಲ್ಲೂಕುಗಳ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಇದೇ ಮಾದರಿಯ ವಹಿವಾಟು ನಡೆಯುತ್ತಿದೆ.

****

ಸಂಘದ ಕಾರ್ಯ ವ್ಯಾಪ್ತಿ ವಿಸ್ತರಿಸಿದ್ದರಿಂದ ದೂರದ ಮಾರುಕಟ್ಟೆಗೆ ಹೋಗಿ ಬರುವ ಸಮಯ, ಶ್ರಮ ಉಳಿತಾಯವಾಗಿದೆ. ವಯಸ್ಸಾದವರಿಗೆ, ಮಹಿಳೆಯರಿಗೆ ಅನುಕೂಲವಾಗಿದೆ.

– ಜಿ.ಎಂ.ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ಹುಳಗೋಳ ಸಹಕಾರ ಸಂಘ

ಸಹಕಾರ ಸಂಘವು ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ರೈತರಿಗೆ ಪ್ರತಿ ಹಂತದಲ್ಲೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಕಷ್ಟ ಕಾಲದಲ್ಲಿ ನೆರವಾಗುತ್ತಿದೆ.

– ಅನಂತ ಎಸ್.ಭಟ್ಟ, ಸದಸ್ಯ ಹುಳಗೋಳ ಸೇವಾ ಸಹಕಾರ ಸಂಘ

ದಶಕದ ಹಿಂದೆ ಮಾರುಕಟ್ಟೆಯಲ್ಲಿ ಅಡಿಕೆ ಮಾರಾಟ ಮಾಡಿ, ಅಗತ್ಯ ವಸ್ತುಗಳ ಖರೀದಿಗೆ ಪೇಟೆಯ ತುಂಬ ಸುತ್ತಾಡಬೇಕಿತ್ತು. ಹಣ ಕಳಿವಿನ ಆತಂಕವಿತ್ತು. ಈಗ ಅದು ತಪ್ಪಿದೆ.

-ಮಹಾಬಲೇಶ್ವರ ವಿ.ಭಟ್ಟ, ಕೊಡೆಮನೆ ಟಿ.ಎಸ್.ಎಸ್. ಸಂಸ್ಥೆಯ ಗ್ರಾಹಕ

*****

ಪೂರಕ ಮಾಹಿತಿ: ರವೀಂದ್ರ ಭಟ್ಟ, ಗಣಪತಿ ಹೆಗಡೆ, ವಿಜಯ್ ಜೋಶಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು