ಭಾನುವಾರ, ಜೂನ್ 26, 2022
22 °C
ಕೋವಿಡ್‌ ಸಂಕಷ್ಟ ಕಾಲದಲ್ಲಿ ಕೈಹಿಡಿದ ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ಕೆಲಸ

ಒಳನೋಟ: ದುಡಿಮೆಗೊಂದು ಹಾದಿ, ದಿನದ ಖರ್ಚಿಗಿಲ್ಲ ಚಿಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ದಾವಣಗೆರೆ: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ಜೊಮ್ಯಾಟೊ, ಸ್ವಿಗ್ಗಿಯಂತಹ ಕಂಪನಿಗಳು ಪುಟಿದೆದ್ದಿದ್ದವು. ಎರಡನೇ ಹಂತದ ನಗರಗಳಲ್ಲೂ ಸಾವಿರಾರು ಜನರ ಕೈಗೆ ಕೆಲಸ ನೀಡಿ ಬದುಕಿಗೆ ಆಸರೆಯಾಗಿದ್ದವು. ಆದರೆ, ಕೋವಿಡ್‌ ಕಾರ್ಮೋಡ ಕರಗುತ್ತಿದ್ದಂತೆ ಅವಕಾಶಗಳೂ ಕಡಿಮೆಯಾಗುತ್ತಿವೆ. ಆಹಾರ ಡೆಲಿವರಿ ಬಾಯ್‌ಗಳು ಮತ್ತೆ ಬೇರೆ ಕೆಲಸಗಳತ್ತ ಮುಖ ಮಾಡುವಂತಾಗಿದೆ.

ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಕಲಬುರಗಿಯಂತಹ ನಗರಗಳಲ್ಲಿ ಹಲವರು ಜೊಮ್ಯಾಟೊ, ಸ್ವಿಗ್ಗಿ ಕಂಪನಿಗಳ ಆಹಾರ ಡೆಲಿವರಿ ಬಾಯ್‌ಗಳಾಗಿ ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ದಿನದ ಖರ್ಚಿಗೇನೂ ತೊಂದರೆಯಾಗುತ್ತಿರಲಿಲ್ಲ. ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ ಮೂಲಕ ಆರ್ಡರ್‌ ನೀಡುತ್ತಿದ್ದರು. ಹೋಟೆಲ್‌ಗಳಿಗೆ ಹೋಗುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಡೆಲಿವರಿ ಬಾಯ್‌ಗಳು ಕೆಲಸಕ್ಕೆ ಸೇರಿಕೊಂಡಿದ್ದರಿಂದ ಮೊದಲಿನಷ್ಟು ಆರ್ಡರ್‌ಗಳು ಬರುತ್ತಿಲ್ಲ.

‘ಪದವಿ ಮುಗಿಸಿದ್ದ ನನಗೆ ಖರ್ಚಿಗೂ ಹಣವಿಲ್ಲದಂತಾಗಿತ್ತು. ಹೀಗಾಗಿ ಜೊಮ್ಯಾಟೊದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಉಳಿದುಕೊಳ್ಳಲು ರೂಮಿಗೆ ಹಾಗೂ ಮೂರು ಹೊತ್ತಿನ ಊಟಕ್ಕೆ ತೊಂದರೆಯಿಲ್ಲ. ಕೆಲಸಕ್ಕಾಗಿ ಅಲೆಯುತ್ತಿದ್ದ ನನ್ನ ಕೈಗೆ ಈಗ ಒಂದಿಷ್ಟು ಹಣ ಸೇರುತ್ತಿದೆ’ ಎನ್ನುತ್ತಾರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ಮೈಸೂರಿಗೆ ಬಂದು ಫುಡ್‌ ಡೆಲಿವರಿ ಬಾಯ್‌ ಆಗಿರುವ ಮನೋಜ್‌. ಈಗ ಅವರು ದಿನಕ್ಕೆ ಏನಿಲ್ಲವೆಂದರೂ ₹ 500ರಿಂದ ₹ 600 ದುಡಿಯುತ್ತಿದ್ದಾರೆ.

ಮೈಸೂರಿನಲ್ಲಿ ಜೊಮ್ಯಾಟೊ ಹಾಗೂ ಸ್ವಿಗ್ಗಿ ಕಂಪನಿಗಳಲ್ಲಿ ತಲಾ ಎರಡು ಸಾವಿರಕ್ಕೂ ಅಧಿಕ ಡೆಲಿವರಿ ಬಾಯ್‌ಗಳಿದ್ದಾರೆ. ಸ್ವಿಗ್ಗಿ ಕಂಪನಿಯಲ್ಲಿ ಆರ್ಡರ್‌ಗಳಿಗೆ ಸಿಗುವ ದಿನದ ಕಮಿಷನ್‌ ಮೊತ್ತ ₹ 425 ದಾಟಿದರೆ ₹ 175 ಬೋನಸ್‌ ಕೊಡುತ್ತಾರೆ. ಜೊಮ್ಯಾಟೊದಲ್ಲೂ ಇದೇ ರೀತಿಯ ವ್ಯವಸ್ಥೆ ಇದೆ. ಆದರೆ, ಹೆಚ್ಚು ಯುವಕರು ಕೆಲಸಕ್ಕೆ ಸೇರುತ್ತಿರುವುದರಿಂದ ಆರ್ಡರ್‌ ಬರುವುದು ತಡವಾಗುತ್ತಿದೆ. ಒಬ್ಬರಿಗೆ ದಿನಕ್ಕೆ 15 ಆರ್ಡರ್‌ಗಳು ಬಂದರೆ ಅದೃಷ್ಟ ಎಂಬಂತಾಗಿದೆ ಎಂಬುದು ಡೆಲಿವರಿ ಬಾಯ್‌ಗಳ ಅಳಲು.

‘ನಮಗೆ ಇಷ್ಟಬಂದ ಸಮಯದಲ್ಲಿ ಕೆಲಸ ಮಾಡುವ ಆಯ್ಕೆ ಇದೆ. ಸುಮ್ಮನೆ ಕಾಲ ಕಳೆಯುವ ಯುವಕರಿಗೆ ಇದರಲ್ಲಿ ದುಡಿಮೆಗೆ ಅವಕಾಶವಿದೆ. ಪಾರ್ಟ್‌ ಟೈಮ್‌ ಆಗಿಯೂ ಕೆಲಸ ಮಾಡಬಹುದು’ ಎನ್ನುವುದು ಮೈಸೂರಿನ ರಾಮಕೃಷ್ಣನಗರದ ತ್ಯಾಗರಾಜ್‌ ಅಭಿಪ್ರಾಯ.

ಕಲಬುರಗಿ ನಗರದಲ್ಲಿ 750ಕ್ಕೂ ಹೆಚ್ಚು ಯುವಕರು ಇದನ್ನೇ ನಂಬಿಕೊಂಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ದಿನಕ್ಕೆ ₹ 500ರಿಂದ ₹ 800ರಷ್ಟು ಗಳಿಸುತ್ತಿದ್ದರು. ಆದರೆ, ಪೆಟ್ರೋಲ್‌ ದರ ಹೆಚ್ಚಾದ ಮೇಲೆ ₹ 200ರಿಂದ ₹ 400ರ ವರೆಗೆ ಮಾತ್ರ ಉಳಿಯುತ್ತಿದೆ.

‘ಈ ಮೊದಲು ವಾರಕ್ಕೆ 130 ಆರ್ಡರ್‌ ಡೆಲಿವರಿ ಮಾಡಿದರೆ ಕಂಪನಿಯವರು ₹ 7,000 ನೀಡುತ್ತಿದ್ದರು. ಈಗ ಕಿ.ಮೀ ಲೆಕ್ಕದಲ್ಲಿ ಹಣ ನೀಡುತ್ತಾರೆ. ಕೆಲವೊಮ್ಮೆ ದಿನಕ್ಕೆ ಎರಡೇ ಆರ್ಡರ್‌ ಸಿಗುತ್ತಿದ್ದು, ದಿನಕ್ಕೆ ₹ 200 ಉಳಿಯುತ್ತದೆ. ಕಾಯುತ್ತ ಕುಳಿತುಕೊಳ್ಳುವ ಬದಲು ಬೇರೆ ಕೆಲಸ ಹುಡುಕುತ್ತಿದ್ದೇನೆ’ ಎನ್ನುತ್ತಾರೆ ಕಲಬುರಗಿಯ ಮುಸ್ತಫಾ ದೊಡಮನಿ.

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೂ ‘ಹಂಗ್ರಿವಿಲ್‌’ ಎಂಬ ಆನ್‌ಲೈನ್‌ ಫುಡ್‌ ಡೆಲಿವರಿ ವೇದಿಕೆಯನ್ನು ಆರಂಭಿಸಿದ್ದಾರೆ. ಅದರಲ್ಲೂ 50 ವಿದ್ಯಾರ್ಥಿಗಳು ಪಾರ್ಟ್‌ಟೈಮ್‌ ಕೆಲಸ ಕಂಡುಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕೋವಿಡ್‌ ತೀವ್ರಗೊಂಡಿದ್ದಾಗ ವೈದ್ಯಕೀಯ ಸಿಬ್ಬಂದಿ ಮನೆಗೆ ತೆರಳದೇ ಆನ್‌ಲೈನ್‌ ಮೂಲಕವೇ ಆಹಾರ ತರಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಆನ್‌ಲೈನ್‌ ವಹಿವಾಟು ಹೆಚ್ಚಾಗಿತ್ತು. ಜೊಮ್ಯಾಟೊ, ಸ್ವಿಗಿಯಲ್ಲಿದ್ದ ಡೆಲಿವರಿ ಬಾಯ್‌ಗಳ ಸಂಖ್ಯೆಯೂ ದುಪ್ಪಟ್ಟಾಯಿತು. ಆದರೆ, ಲಾಕ್‌ಡೌನ್‌ ತೆರವಾದ ಬಳಿಕ ಆರ್ಡರ್‌ಗಳ ಸಂಖ್ಯೆ ಇಳಿಕೆಯಾಗಿ ಸಂಪಾದನೆಯೂ ಕಡಿಮೆಯಾಯಿತು. ಮನೆಗಳಿಗೆ ಪೇಂಟ್‌ ಹಚ್ಚಿದರೆ ದಿನಕ್ಕೆ ₹800ರಿಂದ ₹1,000 ಸಿಗುತ್ತಿರುವುದರಿಂದ ಕೆಲವರು ಆ ಕೆಲಸದತ್ತ ಮುಖ ಮಾಡುತ್ತಿದ್ದಾರೆ.

‘ಒಂದು ವಾರದಲ್ಲಿ ಕನಿಷ್ಠ 90 ಆರ್ಡರ್‌ಗಳನ್ನು ಪಡೆಯಬೇಕು. ಇದರಿಂದ ತಿಂಗಳಿಗೆ ₹20 ಸಾವಿರ ಗಳಿಸಬಹುದು. ಪೆಟ್ರೋಲ್‌ಗೇ ₹ 5 ಸಾವಿರ ಖರ್ಚಾಗುತ್ತದೆ. ಉಳಿದ ಹಣದಲ್ಲೇ ಸಂಸಾರ ಸಾಗಿಸಬೇಕಾಗಿದೆ. ಹೀಗಾಗಿ ಡೆಲಿವರಿ ಬಾಯ್‌ಗಳು ಬೇರೆ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ’ ಎನ್ನುತ್ತಾರೆ ಹುಬ್ಬಳ್ಳಿಯ ಜೊಮ್ಯಾಟೊ ಆಹಾರ ಡೆಲಿವರಿ ಪಾರ್ಟ್‌ನರ್‌ ಮೊಹಮ್ಮದ್ ರಫಿ.

ದಾವಣಗೆರೆ ನಗರದಲ್ಲಿ ಬೆಣ್ಣೆದೋಸೆ, ನಾನ್‌ವೆಜ್‌ ಆಹಾರಗಳಿಗೆ ಹೆಚ್ಚಿನ ಆರ್ಡರ್‌ಗಳು ಬರುತ್ತಿವೆ. ಇಲ್ಲಿ 200ರಿಂದ 300 ಮಂದಿ ಡೆಲಿವರಿ ಬಾಯ್‌ಗಳಿದ್ದು, ಗ್ರಾಮೀಣ ಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ಕೋವಿಡ್‌ ತೀವ್ರವಾಗಿದ್ದಾಗ ದಿನಕ್ಕೆ ₹1,000ದಿಂದ ₹1,200 ಸಿಗುತ್ತಿತ್ತು. ಈಗ ₹600ರಿಂದ ₹ 700 ಸಿಕ್ಕರೆ ಹೆಚ್ಚು’ ಎನ್ನುತ್ತಾರೆ ದಾವಣಗೆರೆಯ ಜೊಮ್ಯಾಟೊ ಡೆಲಿವರಿ ಬಾಯ್ ವೀರೇಶ್.

ಮಂಗಳೂರಿನಲ್ಲೂ ಆಹಾರ ಪೂರೈಕೆ ಕಂಪನಿಗಳ ವಹಿವಾಟು ವಿಸ್ತರಣೆಯಾಗಿತ್ತು. ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಹಲವರಿಗೆ ಆಸರೆಯಾಗಿವೆ.

‘ನಾನು ಕೆಲಸ ಮಾಡುತ್ತಿದ್ದ ಕಂಪನಿಯ ವಹಿವಾಟು ಸ್ಥಗಿತಗೊಂಡಿತು. ಉದ್ಯೋಗ ಇಲ್ಲದಿದ್ದಾಗ ಫುಡ್‌ ಡೆಲಿವರಿ ಕೆಲಸ ಕೈಹಿಡಿಯಿತು. ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಗಳಿಕೆಯಾಗುತ್ತಿದೆ’ ಎನ್ನುತ್ತಾರೆ ಮಂಗಳೂರಿನ ಹರೀಶ್‌.

(ವರದಿ: ವಿನಾಯಕ ಭಟ್, ಕೆ. ಓಂಕಾರಮೂರ್ತಿ, ಸಂತೋಷ ಈ. ಚಿನಗುಡಿ, ಪ್ರಮೋದ, ಡಿ.ಕೆ. ಬಸವರಾಜು, ಚಿದಂಬರ ಪ್ರಸಾದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು