ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಪಶ್ಚಿಮ ಘಟ್ಟದಲ್ಲಿ ಅತಿಯಾದ ಹಸ್ತಕ್ಷೇಪ, ಎಚ್ಚರ ತಪ್ಪಿದರೆ ಅನಾಹುತ

ಚರ್ಮ ಸುಲಿದ ಮೇಲೆ...
Last Updated 28 ಸೆಪ್ಟೆಂಬರ್ 2019, 20:44 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಕೃತಿಯನ್ನು ಒಂದು ಜೀವಾಕೃತಿಯಾಗಿ ಕಲ್ಪಿಸಿಕೊಳ್ಳೋಣ. ಅದಕ್ಕೆ ಗೀರು ಗಾಯ ಮಾಡಿದೆವು. ಚರ್ಮ ಸುಲಿದೆವು. ಮಾಂಸವನ್ನೂ ಕೀಳಲಾರಂಭಿಸಿದೆವು. ಶೋಲಾ ಕಾಡಿನ ಧಮನಿಗಳೇ ನೀರಿನ ಬನಿಗಳು; ಜಲಪಥಗಳು. ಬಂಡೆಗಳಲ್ಲಿ ನೀರ ಹಿಡಿದಿಟ್ಟುಕೊಳ್ಳುವ ಪದರಗಳು. ಅವೆ ಲ್ಲವನ್ನೂ ಗೀರಿ, ಸವರಿ, ಸುಲಿದುದರ ಪರಿಣಾಮವೇ ಜಲಸ್ಫೋಟ’–ಪರಿಸರ ವಾದಿ ದಿನೇಶ್ ಹೊಳ್ಳ ಪಶ್ಚಿಮ ಘಟ್ಟ ಗಳ ಗುಡ್ಡಗಳು ಕರಗಿ, ಭೂಕುಸಿತ ಆಗಿರು ವುದನ್ನು ಹೀಗೆ ಜೀವನ್ಮುಖಿ ಸಂಕಥನದ ಮೂಲಕ ಮಂಡಿಸಲಾರಂಭಿಸಿದರು.

ಮಡಿಕೇರಿಯಿಂದ ಖಾನಾಪುರದವರೆಗೆ ಪಶ್ಚಿಮ ಘಟ್ಟದ ಮೇಲ್ಪದರದ ಹುಲ್ಲುಗಾವಲನ್ನು ಮಾನವ ಹಸ್ತಕ್ಷೇಪ ಹೆರೆಯತೊಡಗಿ ದಶಕಗಳೇ ಉರುಳಿವೆ. ಕಳೆದ ಎರಡು ದಶಕಗಳಿಂದ ಇದು ಅತಿಯಾಯಿತು. ಕಣಿವೆಗಳು, ನದಿ ಮೂಲಗಳು, ಕೊರಕಲುಗಳು, ಜಲಪಥ ಗಳು ದಶಕಗಟ್ಟಲೆ ಅತಿವೃಷ್ಟಿಯನ್ನು ಸಹಿಸಿಕೊಂಡೇ ಇದ್ದವು. ಈಗ ಚರ್ಮ ಸುಲಿದು, ನರನಾಡಿ–ಮಾಂಸ ಕಾಣಲಾರಂಭಿಸಿರುವುದು ಮೂರೇ ನಿಮಿಷಗಳಲ್ಲಿ ಆಗುವ ಜಲಸ್ಫೋಟಕ್ಕೆ ಕಾರಣ ಎಂಬ ಅವರ ಕಳಕಳಿ ಬೆರೆತ ಮಾತನ್ನು ಒಪ್ಪಿಕೊಳ್ಳಲೇಬೇಕು.

ಎರಡು ವರ್ಷಗಳಿಂದ ಮಳೆಗಾಲ ಬಂತೆಂದರೆ ಪಶ್ಚಿಮ ಘಟ್ಟದ ತಪ್ಪಲಿನ ಜನ ಥರಗುಡುತ್ತಿದ್ದಾರೆ. ಕಳೆದ ವರ್ಷ ಮಡಿಕೇರಿ, ಶಿರಾಡಿ ಘಾಟಿಯಲ್ಲಿ ಭೂಕುಸಿತದ ಬಿಸಿ. ಈ ಬಾರಿ ಬೆಳ್ತಂಗಡಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅದರ ದರ್ಶನ. ಬೆಳ್ತಂಗಡಿ ತಾಲ್ಲೂಕಿನ ಕೊಳಂಬೆ, ಅನಾರು, ಹೊಸ್ಮಠ, ಬಾಂಜಾರುಮಲೆ, ಕಾಟಾಜೆ, ಪರ್ಪಳ ಮುಂತಾದ ಪ್ರದೇಶಗಳ ಚಿತ್ರಣವೀಗ ಬದಲು. ಚಿಕ್ಕಮಗಳೂರಿನ ಮೂಡಿಗೆರೆಯ ಸುಮಾರು 70 ಕಿ.ಮೀ. ಭೂಕುಸಿತ ಸಂಭವಿ ಸಿರುವುದು ಅವಘಡದ ತೀವ್ರತೆಗೆ ಹಿಡಿದ ಕನ್ನಡಿ.

ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಜಲಪಾತಗಳು
ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಜಲಪಾತಗಳು

ಶಿವಮೊಗ್ಗದ ಮೂರು ತಾಲ್ಲೂಕು ಗಳ ವ್ಯಾಪ್ತಿಯಲ್ಲಿ ಈ ಬಾರಿ ಗುಡ್ಡಗಳು ಜರುಗಿವೆ. ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ, ಮಹಾದೇವ ಗುಡ್ಡ, ಶೆಟ್ಟಿಹಳ್ಳಿ, ಮಾದಲ ಮನೆ, ಅಲಸೆ, ಮಾಕೇರಿ, ಶಿರನಹಳ್ಳಿ, ದೊಡ್ಡ ಘಾಟಿ ಬಳಿ ಬೆಟ್ಟಗಳು ಕುಸಿದಿವೆ. ಹೆಗಲತ್ತಿ ಬಳಿ 5 ಕಿ.ಮೀ. ಗುಡ್ಡ ಕುಸಿದ ಪರಿಣಾಮ 30 ಎಕರೆ ಅಡಿಕೆ, ಬಾಳೆ ತೋಟಗಳು, ಭತ್ತದ ಗದ್ದೆ ಹಾಳಾದವು.

ಹೊಸನಗರ ತಾಲ್ಲೂಕು ಕೊಡಚಾದ್ರಿ ಬಳಿಯ ಸಂಪೆಕಟ್ಟೆ, ನಿಟ್ಟೂರು, ಸುಳುಗೋಡು, ಮೂಡೂರು, ಸುಂಕದ ಅರಮನೆ, ಸಾಗರ ತಾಲ್ಲೂಕಿನ ಆವಿನಹಳ್ಳಿ, ಬೇದೂರು, ವರದಳ್ಳಿ ಬಳಿ ಗುಡ್ಡಗಳು ಜರುಗಿದವು. ಕೆಲವು ಗುಡ್ಡಗಳಲ್ಲಿ ಬಿರುಕು. ಮುಂದೆ ಕಾದಿದೆ ಕರಾಳ ದಿನ ಎನ್ನುವುದನ್ನು ಚುರುಕು ಮುಟ್ಟಿಸಿ ಹೇಳುವ ಸೂಚನೆಗಳು ಇವು.

ಬೆಂಗಳೂರು–ಕರಾವಳಿ ಸಂಪರ್ಕಿ ಸುವ ರಾಷ್ಟ್ರೀಯ ಹೆದ್ದಾರಿಯ ಎಂಟು ಭಾಗಗಳಲ್ಲಿ ಕಳೆದ ವರ್ಷ ಭೂಕುಸಿತವಾಗಿತ್ತು. ದೋಣಿಗಾಲ್, ದೊಡ್ಡತಪ್ಪಲೆ, ಮಾರನಹಳ್ಳಿಯಲ್ಲಿ ದೊಡ್ಡ ಪ್ರಮಾಣ ದಲ್ಲಿ ಕುಸಿತ ಆಗಿ, ವಾಹನ ಸಂಚಾರ ಸ್ಥಗಿತಗೊಂಡ ಉದಾಹರಣೆ ಕಂಡಿದ್ದೇವೆ. ಹೆದ್ದಾರಿ ಪ್ರಾಧಿಕಾರದವರು ರಸ್ತೆ ವಿಸ್ತರಣೆ ಮಾಡುವಾಗ ಜೆಸಿಬಿ, ಹಿಟಾಚಿ ಬಳಸಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ.

ಅರಣ್ಯನಾಶ, ಗಣಿಗಾರಿಕೆ, ಜಲಾಶ ಯಗಳು, ವಿದ್ಯುತ್ ಯೋಜನೆಗಳು, ಆಧುನಿಕ ಕಾಮಗಾರಿಗಳು, ರೆಸಾರ್ಟ್‌ಗಳು, ಪ್ಲಾಂಟೇ ಷನ್‌ಗಳು, ಅಡಿಕೆ ತೋಟಗಳ ವಿಪರೀತ ಬೆಳೆ–ಇವೆಲ್ಲವುಗಳ ವ್ಯತಿರಿಕ್ತ ಕಾಣ್ಕೆಯಿಂದ ಮಣ್ಣು ನಿರಂತರವಾಗಿ ಸಡಿಲಗೊಂಡಿತು. ಪಶ್ಚಿಮ ಘಟ್ಟದಲ್ಲೀಗ ಗಡುಸುಮಣ್ಣು ಕರಗಿ, ಉಳಿದಿರುವುದು ಮೆದುಮಣ್ಣಷ್ಟೆ. ಚಾರ್ಮಾಡಿ, ಶಿರಾಡಿಯಲ್ಲಿ ಸತತ ಆರು ದಿನ ಮಳೆ ಬಂದರೆ ಅದನ್ನು ಹಿಡಿದಿಟ್ಟುಕೊಳ್ಳಲಾಗದ ಜಲಪದರಗಳು ಸ್ಫೋಟಗೊಂಡು, ಮಣ್ಣು–ಕೆಸರು–ಕಲ್ಲು ಎಲ್ಲವನ್ನೂ ಕೊಚ್ಚಿಕೊಂಡು ಹೋದದ್ದನ್ನು ದಿನೇಶ್ ಹೊಳ್ಳ ಉದಾಹರಿಸುತ್ತಾರೆ. 6 ಅಡಿ ಅಗಲ, 100 ಅಡಿ ಎತ್ತರದ ಮರ ಒಂದೂವರೆ ಕಿ.ಮೀನಷ್ಟು ದೂರಕ್ಕೆ ಸರಿದಿರುವುದನ್ನು ಕಂಡು ಬಾಯಮೇಲೆ ಬೆರಳಿಟ್ಟಿದ್ದಾರೆ. ವರ್ಷಪೂರ್ತಿ ಹೊಳೆಗಳಿಗೆ ನೀರುಪೂರಣ ಮಾಡುತ್ತಿದ್ದ ಜಲಪದರಗಳಲ್ಲಿ ಈಗ ನೀರೇ ಇಲ್ಲ!

ಕಳೆದ ವರ್ಷ ಬ್ರಹ್ಮಗಿರಿ ಬೆಟ್ಟಗಳಿಂದ ಶಿರಾಡಿವರೆಗೂ 600ಕ್ಕೂ ಅಧಿಕ ಕಡೆಗಳಲ್ಲಿ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ಬೃಹತ್‌ ಗುಡ್ಡಗಳಲ್ಲಿ ಕುಸಿತ ಉಂಟಾಗಿತ್ತು. ಅದುವರೆಗೆ ಇಷ್ಟುದೊಡ್ಡ ಪ್ರಮಾಣದ ಭೂಕುಸಿತ ಆಗಿಯೇ ಇರಲಿಲ್ಲ. ಸ್ವಾಭಾವಿಕ ಕಾಡನ್ನು ಬೋಳಿಸಿ, ಅಕೇಷಿಯಾ, ನೀಲಿಗಿರಿಯಂಥವನ್ನು ಬೆಳೆಸಿದ್ದರ ಫಲವಿದು. ಜೆಸಿಬಿ, ಹಿಟಾಚಿಗಳು ಇಲ್ಲಿನ ರಚನೆಗಳ ಮೇಲೆ ಹರಿದಾಡಿ ಹಾಳುಗೆಡಹಿವೆ ಎನ್ನುತ್ತಾರೆ ಶಿವಮೊಗ್ಗದ ಪರಿಸರವಾದಿ ಅಖಿಲೇಶ್ ಚಿಪ್ಪಳಿ.

ಪ್ರವಾಹದಲ್ಲಿ ಗುಡ್ಡದ ಸಮೀಪದ ಮನೆಗಳಿಗೆ ನುಗ್ಗಿರುವ ಮಣ್ಣು
ಪ್ರವಾಹದಲ್ಲಿ ಗುಡ್ಡದ ಸಮೀಪದ ಮನೆಗಳಿಗೆ ನುಗ್ಗಿರುವ ಮಣ್ಣು

ಕಾವೇರಿ, ಹೇಮಾವತಿ, ಅಘನಾಶಿನಿ, ಕಾಳಿ, ನೇತ್ರಾವತಿ, ಕುಮಾರಧಾರಾ, ತುಂಗಭದ್ರಾ, ಚಕ್ರಾ, ಶರಾವತಿಯಂತಹ ದೊಡ್ಡ ನದಿಗಳು. ಇವುಗಳಿಗೆ 300-–400 ಉಪನದಿಗಳು, ಹೊಳೆಗಳು. ಇವನ್ನೆಲ್ಲ ಜೀವಂತ ಆಕೃತಿಯಾಗಿ ಕಲ್ಪಿಸಿಕೊಳ್ಳುವುದೇ ರೋಮಾಂಚನ. ಈಗ ಈ ಜೀವ ಸಂಕಷ್ಟದಲ್ಲಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿನ ಭೂಕುಸಿತದಿಂದಾಗಿ ಆತಂಕಕ್ಕೆ ಒಳಗಾಗಿರುವ ಅರಣ್ಯ ನಿವಾಸಿಗಳು, ಹೊರಗೆ ಬರಲು ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಕೂಡ ಅದರ ಮುನ್ಸೂಚನೆ. ಮಾನವ ಹಸ್ತಕ್ಷೇಪವನ್ನು ಇಲ್ಲವಾಗಿಸುವುದಷ್ಟೇ ಈ ಅನಾಹುತಕ್ಕೆ ಶಾಶ್ವತ ಪರಿಹಾರ ಎನ್ನುವುದು ದಿನೇಶ್ ಹೊಳ್ಳ ಅಭಿಪ್ರಾಯವೂ ಹೌದು.

ಪಶ್ಚಿಮ ಘಟ್ಟದ ರಕ್ತ–ಮಾಂಸದ ಮೇಲೆ ಹಸಿರು ಚರ್ಮ ಬೆಳೆಸುವುದು, ಮಳೆಕಾಡು ದಟ್ಟೈಸುವಂತೆ ಮಾಡುವುದು ಶಾಶ್ವತ ಪರಿಹಾರ ಎನ್ನುವುದು ಬಹುತೇಕರ ಅಭಿಪ್ರಾಯ. ಸಚಿವ ವಿ. ಸೋಮಣ್ಣ ಇನ್ನು ಮಡಿಕೇರಿಯಲ್ಲಿ ವಾಣಿಜ್ಯೋದ್ದೇಶಕ್ಕೆ ಭೂಪರಿವರ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದು ಬೆಳ್ಳಿಗೆರೆಯಂತೆ ಕಾಣುತ್ತಿದೆ.

ನಿಯಂತ್ರಣ ಅನಿವಾರ್ಯ

ಪಶ್ಚಿಮ ಘಟ್ಟದ ಮಣ್ಣೀಗ ಅತಿ ಸೂಕ್ಷ್ಮ. ಮಡಿಕೇರಿಯಲ್ಲಿ ಎಲ್ಲೆಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಕಾಮಗಾರಿ ನಡೆದಿದೆಯೋ ಅಲ್ಲೆಲ್ಲ ಭೂಕುಸಿತ ಆಗಿದೆ. ಪ್ರವಾಸಿಗರಿಗೆ ನಿಯಂತ್ರಣ ಹೇರಬೇಕು. ದಿನಕ್ಕೆ ಇಂತಿಷ್ಟೇ ಜನರಿಗೆ ಎಂದು ಪಾಸ್‌ ನೀಡುವ ವ್ಯವಸ್ಥೆ ಬರಬೇಕು. ರೈಲ್ವೆ, ಚತುಷ್ಪಥ ರಸ್ತೆ ಕಾಮಗಾರಿಯ ಯೋಜನೆಗಳನ್ನೆಲ್ಲಾ ಕೈಬಿಡಬೇಕು. ಆಗಷ್ಟೇ ಪಶ್ಚಿಮ ಘಟ್ಟವನ್ನು ಈಗಿನ ಅತಿಸೂಕ್ಷ್ಮ ಸ್ಥಿತಿಯಲ್ಲಾದರೂ ಕಾಪಾಡಿಕೊಳ್ಳಲು ಸಾಧ್ಯ. ಜಲಾನಯನ ಪ್ರದೇಶಗಳ ಸಂರಕ್ಷಣೆಗೆಂದೇ ರಾಷ್ಟ್ರೀಯ ನಿಯಮವೊಂದು ರೂಪುಗೊಳ್ಳಬೇಕು. ‘ವೆಟ್ಟಿ ವೇರ್’ ಎಂಬ ಹುಲ್ಲು 10–12 ಅಡಿಯಷ್ಟು ಆಳಕ್ಕೆ ಬೇರು ಬಿಡುತ್ತದೆ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಕೆಲಸವನ್ನು ಸಂಘ–ಸಂಸ್ಥೆಗಳು ಚದುರಿದಂತೆ ಮಾಡುತ್ತಿವೆ. ಸರ್ಕಾರ ಕೇವಲ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಬದಲು ಇಂಥ ಕೆಲಸವನ್ನು ಮಾಡಲಿ ಎನ್ನುತ್ತಾರೆ ಕೂರ್ಗ್‌ ವೈಲ್ಡ್‌ ಲೈಫ್‌ ಸೊಸೈಟಿಯ ಮಾಜಿ ಅಧ್ಯಕ್ಷ, ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ.

ಕೃಷಿಭೂಮಿ ನಾಶ

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಪ್ರವಾಹ, ಭೂಕುಸಿತದಿಂದ ಅರಣ್ಯ ನಾಶ ಆಗಿಲ್ಲ. ಆದರೆ, ಭೂಕುಸಿತದಿಂದ ಕೃಷಿ ಭೂಮಿ ಮತ್ತು ಕಾಫಿ ತೋಟಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೂ ಭೂಕುಸಿತದಿಂದ ಕೃಷಿ ಭೂಮಿ ಹಾನಿಗೀಡಾಗಿವೆ. ಆದರೆ, ಅರಣ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ಎರಡೂ ಜಿಲ್ಲೆಗಳ ಉಪಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

***

ಕೊಡಗಿನದ್ದು ಅತಿ ಸೂಕ್ಷ್ಮ ಮಣ್ಣು. ಇಲ್ಲಿ ಎತ್ತರದ ಕಟ್ಟಡ, ರೆಸಾರ್ಟ್‌ಗಳನ್ನು ನಿರ್ಮಿಸುವುದು ಸರಿಯಲ್ಲ. ಉತ್ತರಾಖಂಡದ ಗ್ಯಾಂಜಸ್‌ ಮಾದರಿಯಲ್ಲಿ ಪ್ರವಾಸಿಗರ ಮೇಲೆ ನಿರ್ಬಂಧ ವಿಧಿಸಬೇಕು.
-ಸಿ.ಪಿ. ಮುತ್ತಣ್ಣ, ಪರಿಸರ ತಜ್ಞ, ಕೊಡಗು

***

ಪಶ್ಚಿಮಘಟ್ಟದ ನಡುಭಾಗದ ಜಲಪದರಗಳಲ್ಲೇ ಈಗ ಕುಸಿತ ಆಗುತ್ತಿದೆ. ಹುಲ್ಲುಗಾವಲು ಇಲ್ಲವಾದ ಪರಿಣಾಮವಿದು. ಇವೆಲ್ಲದರ ನಡುವೆ ಎತ್ತಿನಹೊಳೆಯಂಥ ಅವೈಜ್ಞಾನಿಕ ಯೋಜನೆ. ಕೆಂಪುನದಿ ನಿರ್ನಾಮವಾಗಿ, ನೇತ್ರಾವತಿ ನದಿಗೆ ಚಿತ್ರಹಿಂಸೆ ನೀಡುತ್ತಿರುವ ದಿನಗಳಿವು
-ದಿನೇಶ್ ಹೊಳ್ಳ, ಮಂಗಳೂರು

***
ದೇಶದಲ್ಲಿ ಶೇ 4ರಷ್ಟು ಮಾತ್ರ ಸಂರಕ್ಷಿತ ಅರಣ್ಯವಿದೆ. ಇದರ ಪ್ರಮಾಣ ಹೆಚ್ಚಾಗಬೇಕು. ಪಶ್ಚಿಮ ಘಟ್ಟದಲ್ಲೂ ಇಂಥ ಕಾಡುಗಳನ್ನಾದರೂ ಹೆಚ್ಚುಮಾಡಿದಲ್ಲಿ ಸ್ವಾಭಾವಿಕ ಜೈವಿಕ ಸಂರಕ್ಷಣೆ ಸಾಧ್ಯ. ಒಂದು ಹದ್ದು ಶೇ 90ರಷ್ಟು ಹಣ್ಣುಗಳನ್ನು ತಿಂದು, ಸಸಿಗಳು ಹುಟ್ಟಲು ಬೀಜಪ್ರಸರಣ ಮಾಡುತ್ತದೆ. ಮಂಗಟ್ಟೆ ಹಕ್ಕಿ ತನ್ನ ಜೀವಿತಾವಧಿಯಲ್ಲಿ 20 ಸಾವಿರ ಗಿಡಗಳನ್ನು ಬೆಳೆಸುತ್ತದೆ. ಇಂಥ ‘ಗ್ರೀನ್ ಕವರ್’ ನಮಗೆ ಬೇಕು.
-ಅಖಿಲೇಶ್ ಚಿಪ್ಪಳಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT