ಶನಿವಾರ, ಸೆಪ್ಟೆಂಬರ್ 18, 2021
22 °C

ಒಳನೋಟ | ಖಾಸಗಿ ಸಾಲ ಎಂಬ ‘ಪ್ರೀತಿಯ ಶೂಲ’

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆಯಲು ಆಗದ ರೈತರು, ಸಿಕ್ಕ ಬೆಳೆಸಾಲ ಕಡಿಮೆ ಎಂಬ ಕಾರಣಕ್ಕೆ ತುರ್ತು ಅಗತ್ಯಗಳಿಗಾಗಿ ಖಾಸಗಿ ಸಾಲಗಾರರ ಮೊರೆಹೋಗುವುದು ತಪ್ಪಿಲ್ಲ. ಬಹುಪಾಲು ರೈತರಿಗೆ ಸಾಲ ಕೊಡುವವರು ಅವರ ಕೃಷಿ ಉತ್ಪನ್ನ ಖರೀದಿಸುವ ದಲ್ಲಾಳಿಗಳೇ.

ಬೀಜ–ಗೊಬ್ಬರ ಖರೀದಿ ಇರಲಿ, ಮನೆಯಲ್ಲಿ ಯಾವುದೇ ಸಮಾರಂಭ ಇರಲಿ ರೈತರು ಸಾಲ ತರುವುದು ಅವರ ಬಳಿಯೇ. ಆದರೆ, ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಇವರ ಬಳಿ ಮಾರಾಟ ಮಾಡಬೇಕು ಎಂಬುದು ಅಲಿಖಿತ ಒಪ್ಪಂದ. ಉತ್ಪನ್ನ ಮಾರಾಟ ಮಾಡಿದ ನಂತರ, ಮುಂಗಡ ಹಣ ಮತ್ತು ಅದರ ಮೇಲಿನ ಬಡ್ಡಿ ಕಡಿತಗೊಳಿಸಿಕೊಂಡು ಉಳಿದ ಹಣವನ್ನು ರೈತರಿಗೆ ನೀಡಲಾಗುತ್ತದೆ.

ಬೀದರ್‌, ಹಾಸನ, ಬೆಳಗಾವಿ, ಕಲಬುರ್ಗಿ, ರಾಯಚೂರು ಎಲ್ಲೆಡೆಯೂ ಇದೇ ಪದ್ಧತಿ ಇದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮನೆ ಬಳಿ ಬರುವ ಮಧ್ಯವರ್ತಿಗಳಿಗೆ ಕೃಷಿ ಉತ್ಪನ್ನ ಮಾರಾಟ ಮಾಡುವುದೇ ಹೆಚ್ಚು. ರೈತರಿಗೆ ನೀಡುವ ‘ನೆರವಿಗೆ’ ಇಲ್ಲಿ ತಿಂಗಳಿಗೆ ಶೇ 1.5 ಬಡ್ಡಿ ವಿಧಿಸಲಾಗುತ್ತಿದೆ.

ಇನ್ನು ಕೆಲವೆಡೆ ಬೆಳೆ ನೋಡಿ ಸಾಲ ನೀಡುವ ಪದ್ಧತಿಯೂ ಜಾರಿಯಲ್ಲಿದೆ. ಇಲ್ಲಿ ಹೇಗೆ ವಂಚನೆ ನಡೆಯುತ್ತದೆ ಎಂಬುದನ್ನು ಹಾಸನ ತಾಲ್ಲೂಕಿನ ಬಿಟ್ಟಹಳ್ಳಿಯ ರೈತ ದೊಡ್ಡಯ್ಯ ಅವರು ವಿವರಿಸುವುದು ಹೀಗೆ: ‘ನಮ್ಮ ಹೊಲಕ್ಕೆ ಬಂದು ಬೆಳೆ ನೋಡಿದ ನಂತರವೇ ವರ್ತಕ ಸಾಲ ಕೊಡುತ್ತಾನೆ. ಉದಾಹರಣೆಗೆ ವರ್ತಕ ₹50 ಸಾವಿರ ಬಡ್ಡಿ ರಹಿತ ಸಾಲ ನೀಡಿ, ಫಸಲು ಬಂದಾಗ ಮಾರುಕಟ್ಟೆ ದರಕ್ಕೆ ಖರೀದಿಸುತ್ತಿರುವುದಾಗಿ ಹೇಳುತ್ತಾನೆ. ಆದರೆ, ಫಸಲನ್ನು ಕ್ವಿಂಟಲ್‌ಗೆ ₹100ರಿಂದ ₹200 ಕಡಿಮೆ ಬೆಲೆಗೆ ಖರೀದಿಸಿ, ಪರೋಕ್ಷವಾಗಿ ಬಡ್ಡಿ ಕಡಿತ ಮಾಡಿಕೊಳ್ಳುತ್ತಾನೆ. ರೈತರು ತಮಗೆ ಅರಿವಿಲ್ಲದಂತೆ ವಂಚನೆಗೆ ಒಳಗಾಗುತ್ತಾರೆ’.

‘ಬಡ್ಡಿ ವ್ಯವಹಾರ ಮಾಡುವ, ಕೃಷಿ ಉತ್ಪನ್ನ ತಮ್ಮಲ್ಲಿಯೇ ಮಾರಾಟ ಮಾಡುವಂತೆ ರೈತರನ್ನು ಹಿಡಿದಿಟ್ಟುಕೊಳ್ಳುವ, ಕಡಿಮೆ ದರಕ್ಕೆ ಖರೀದಿಸಿ ಲಾಭ ಮಾಡಿಕೊಳ್ಳುವ ತಂತ್ರಗಾರಿಕೆಯೂ ಇದರಲ್ಲಿದೆ’ ಎಂಬುದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕು ಹುಲ್ಲೂರು ಗ್ರಾಮದ ರೈತ ವಿರೂಪಾಕ್ಷಪ್ಪ ಮುದಕಣ್ಣವರ ಅವರ ದೂರು. ಧಾರವಾಡದ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಅವರೂ ಇದನ್ನೇ ಹೇಳುತ್ತಾರೆ.

‘ರಾತ್ರಿ ಹೋಗಿ ಕೇಳಿದರೂ ತಕ್ಷಣ ಹಣ ಕೊಟ್ಟು ನಮ್ಮ ನೆರವಿಗೆ ಬರುತ್ತಾರೆ’ ಎಂದು ಬಹುಪಾಲು ರೈತರು ದಲ್ಲಾಳಿಗಳ ಮೇಲೆ ಪ್ರೀತಿ ತೋರಿಸುವುದೂ ಇದೆ.

ಯಾದಗಿರಿ ಜಿಲ್ಲೆಯ ಸುರಪುರದ ಭಾಗದಲ್ಲಿ ಹೆಚ್ಚಿನ ಸಾಲ ಬೇಕಾದರೆ ರೈತರು ಖಾಸಗಿ ಲೇವಾದೇವಿದಾರರಿಗೆ ತಮ್ಮ ಜಮೀನು ಮಾರಾಟ ಕರಾರು ಪತ್ರ ಬರೆದುಕೊಡಬೇಕು. ಮದುವೆಗಾಗಿ ಸಾಲ ಮಾಡುವವರೇ ಹೆಚ್ಚು. ನಾಲ್ಕು ವರ್ಷಗಳಲ್ಲಿ ಅಸಲು–ಬಡ್ಡಿ ಸೇರಿ ದುಪ್ಪಟ್ಟಾಗಿರುತ್ತದೆ. ಬಿಡಿಸಿಕೊಳ್ಳಲು ಹಣ ಇರುವುದಿಲ್ಲ. ಅನಿವಾರ್ಯವಾಗಿ ಮಾರಾಟ ಮಾಡುತ್ತಾರೆ. ಆ ರೈತ ಅದೇ ಜಮೀನಿನಲ್ಲಿ ‘ಆಳಾಗಿ’ ದುಡಿಯಬೇಕಾಗುತ್ತದೆ.
 


ಅಂಕಿಅಂಶ

ಅಡವಿಟ್ಟ ಚಿನ್ನ ವಾಪಸ್‌ ಬರಲೇ ಇಲ್ಲ

ಚಿನ್ನದ ಮೇಲೆ ಸಾಲ ನೀಡುವವರು ಆ ಚಿನ್ನದ ಮೌಲ್ಯದ ಅರ್ಧಕ್ಕಿಂತ ಕಡಿಮೆ ಸಾಲ ನೀಡುತ್ತಾರೆ. ದುಬಾರಿ ಬಡ್ಡಿ ವಿಧಿಸುತ್ತಾರೆ. ವರ್ಷವಾಗುವಷ್ಟರಲ್ಲಿ ಆ ಚಿನ್ನ ‘ಮಾರಿಕೊಂಡು ಹೊಂದಾಣಿಕೆ’ ಮಾಡಿಕೊಳ್ಳುತ್ತಾರೆ ಎಂಬುದು ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ.

‘ಮಗನ ಮದುವೆಗೆ ಹಣ ಬೇಕಿತ್ತು. ಆಭರಣಗಳ ಮೇಲೆ ಸಾಲ ನೀಡುವ ವ್ಯಕ್ತಿಯೊಬ್ಬರ ಬಳಿ ಆಭರಣಗಳನ್ನು ಒತ್ತೆ ಇಟ್ಟು ಹಣ ತಂದೆ. 50 ಗ್ರಾಂ ಚಿನ್ನಕ್ಕೆ ಅವರು ನೀಡಿದ್ದು ₹1 ಲಕ್ಷ ಸಾಲ ಮಾತ್ರ. ಇಂತಿಷ್ಟು ದಿನದಲ್ಲಿ ಬಿಡಿಸಿಕೊಂಡು ಹೋಗಬೇಕು ಎಂಬ ಷರತ್ತು. ಒಂದು ವರ್ಷ ಆಗುವಷ್ಟರಲ್ಲಿ ಅಸಲು–ಬಡ್ಡಿ ಸೇರಿ ಎರಡು ಲಕ್ಷವಾಗಿದ್ದು ಬಿಡಿಸಿಕೊಂಡು ಹೋಗಿ ಎಂದರು. ಕೈಯಲ್ಲಿ ಹಣ ಇರಲಿಲ್ಲ. ಸ್ವಲ್ಪ ದಿನದ ನಂತರ ನಿಮ್ಮ ಚಿನ್ನ ಮಾರಿ ಸಾಲ–ಬಡ್ಡಿಗೆ ಜಮೆ ಮಾಡಿಕೊಂಡಿದ್ದೇನೆ ಎಂಬ ಉತ್ತರ ಬಂತು. ಒಂದು ಲಕ್ಷಕ್ಕೆ ಎರಡೂವರೆ ಲಕ್ಷ ಮೌಲ್ಯದ ಚಿನ್ನ ಕಳೆದುಕೊಳ್ಳುವಂತಾಯಿತು’ ಎಂದು ಬೀದರ್‌ ಜಿಲ್ಲೆಯ ಕಮಲನಗರದ ರೈತರೊಬ್ಬರು ಹಳಹಳಿಸಿದರು.
 

ಸಾಲ ನೀಡುವಾಗಲೇ ಬಡ್ಡಿ ಕಡಿತ!

‘ಬಾಣಂತನಕ್ಕೆ ಬಂದಿದ್ದ ಮಗಳನ್ನು ಗಂಡನ ಮನೆಗೆ ಕಳಿಸಬೇಕಿತ್ತು. ಮೊಮ್ಮಗನಿಗೆ ಬೆಳ್ಳಿ ಆಭರಣ, ತೊಟ್ಟಿಲು, ಬಟ್ಟೆ ಕೊಡಿಸಲು ಕಲಬುರ್ಗಿಯ ಖಾಸಗಿ ಫೈನಾನ್ಸ್‌ವೊಂದರಲ್ಲಿ ₹10 ಸಾವಿರ ಸಾಲ ಮಾಡಿದೆ. ಮೂರು ತಿಂಗಳ ಬಡ್ಡಿ ₹1 ಸಾವಿರ ಮುರಿದುಕೊಂಡು ₹9 ಸಾವಿರ ಮಾತ್ರ ಕೊಟ್ಟರು. ಚಕ್ರಬಡ್ಡಿಗೆ ಹೆದರಿ ಮತ್ತೆ ಬೇರೆಯವರಲ್ಲಿ ಸಾಲ ಮಾಡಿ ಈ ಸಾಲ ತೀರಿಸಿದೆ’  ಎಂದು ಸೇಡಂನ ಸಣ್ಣ ರೈತ ಶರಣಪ್ಪ ಹೇಳಿಕೊಂಡರು.

ಬ್ಯಾಂಕ್‌ಗಳಿಂದ ಕೃಷಿ ಮತ್ತು ಬೆಳೆ ಸಾಲ ನೀಡುವುದು ಹೆಚ್ಚಿದ್ದರಿಂದ ಖಾಸಗಿ ಲೇವಾದೇವಿದಾರರ ವಹಿವಾಟಿಗೆ ಬಹುತೇಕ ಕಡಿವಾಣ ಬಿದ್ದಿದೆ. ಫೈನಾನ್ಸ್‌ಗಳು ಅಲ್ಪ ಸಾಲ ನೀಡಿ, ಮೂರು ತಿಂಗಳಿಗೆ ಶೇ 10ರಷ್ಟು ದುಬಾರಿ ಬಡ್ಡಿ– ಚಕ್ರಬಡ್ಡಿ ವಿಧಿಸುವುದು ನಡೆದೇ ಇದೆ ಎಂಬುದು ರೈತರು ಹೇಳುವ ಮಾತು.

****

ನಮ್ಮ ಎರಡೂವರೆ ಎಕರೆ ಜಮೀನಿಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರ ಬ್ಯಾಂಕಿನಲ್ಲಿ ಸಿಕ್ಕ ಸಾಲ ₹34 ಸಾವಿರ ಮಾತ್ರ. ಇದು ಬೀಜ–ಗೊಬ್ಬರ, ಕೀಟನಾಶಕ ಖರೀದಿಗೂ ಸಾಲುವುದಿಲ್ಲ. ಬ್ಯಾಂಕ್‌ನಿಂದ ನೀಡುವ ಸಾಲದ ಪ್ರಮಾಣ ಹೆಚ್ಚಿಸಿದರೆ ರೈತರು ಖಾಸಗಿ ಸಾಲಕ್ಕೆ ಮೊರೆಹೋಗುವುದು ತಪ್ಪುತ್ತದೆ.

–ಶಿವರಾಜ್‌ ಟಿ., ಆರುಂಡಿ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು