ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಗುರಿ ತಲುಪದ ಮಹಿಳಾ ವಿವಿ

Last Updated 25 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ರಾಜ್ಯದಲ್ಲಿರುವ ಐದು ವಿಶೇಷ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ ಮತ್ತು ದುರಾಡಳಿತದ ನೆರಳಿನಲ್ಲಿ ತಮ್ಮ ಘನ ಉದ್ದೇಶವನ್ನೇ ಮರೆತಂತಿವೆ. ಈ ವಿಶ್ವವಿದ್ಯಾಲಯಗಳ ಕಾಯಕಲ್ಪ ಆಗಬೇಕಿರುವುದು ಹೇಗೆ? ಇವುಗಳನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಪ್ರಶ್ನೆಗಳನ್ನು ‘ಪ್ರಜಾವಾಣಿ’ಯು ತಜ್ಞರ ಮುಂದಿರಿಸಿತು. ಸಮಸ್ಯೆಗಳ ಸುಳಿಯನ್ನು ಎಲ್ಲಿಂದ ಬಿಡಿಸಬೇಕು ಎಂಬುದಕ್ಕೆ ಪರಿಣತರು ಇಲ್ಲಿ ಉತ್ತರಿಸಿದ್ದಾರೆ. ಪ್ರತಿ ವಿಶ್ವವಿದ್ಯಾಲಯದಲ್ಲಿಯೂ ಕಾಯಂ ಬೋಧಕರ ನೇಮಕಾತಿಗೆ ಕ್ರಮ ಕೈಗೊಂಡರೆ ನಿರೀಕ್ಷಿತ ಫಲ ಸಿಗುತ್ತದೆ ಎಂಬುದು ಎಲ್ಲರ ಒಕ್ಕೊರಲಿನ ಮಾತು. ಜೊತೆಗೆ ಕೆಲವು ಸಕಾರಾತ್ಮಕ ಸಲಹೆಗಳೂ ಇಲ್ಲಿವೆ. ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಾಗ ಇರುವ ಉತ್ಸಾಹ, ಅವುಗಳನ್ನು ಬೆಳೆಸುವವರೆಗೂ, ಅವು ಸ್ವಾಯತ್ತವಾಗಿ ಬೆಳೆಯುವವರೆಗೂ ಪೋಷಿಸುವಷ್ಟು ಇದ್ದರೆ, ಅಭಿವೃದ್ಧಿ ಸುಸ್ಥಿರವಾಗುತ್ತದೆ. ಇಲ್ಲದಿದ್ದಲ್ಲಿ ಕೆಲವೆಡೆ ಕೇವಲ ಕಟ್ಟಡ ಸಂಸ್ಕೃತಿಯೂ, ಇನ್ನೂ ಕೆಲವೆಡೆ ಕೇವಲ ಕಡತಗಳ ಸಂಸ್ಕೃತಿಯೂ ಬೆಳೆಯುತ್ತದೆ. ಪರಿಣತರು ಏನು ಹೇಳುತ್ತಾರೆ ಇಲ್ಲಿದೆ..

***

ವಿಜಯಪುರ: ಲಿಂಗ ತಾರತಮ್ಯ ನಿವಾರಿಸುವುದು, ಗ್ರಾಮೀಣ ಮತ್ತು ಹಿಂದುಳಿದ ಮಹಿಳೆಯರನ್ನು ಮುಖ್ಯವಾಹಿನಿಗೆ ಸೇರುವಂತೆ ಸಹಾಯ ಮಾಡುವುದು, ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವುದು, ಸಮಾಜದ ಎಲ್ಲ ಸ್ತರಗಳಲ್ಲಿ ಮಹಿಳೆಯರು ಪರಿಣಾಮಕಾರಿ ಮತ್ತು ರಚನಾತ್ಮಕ ಪಾತ್ರ ನಿರ್ವಹಿಸುವಂತೆ ಸಮರ್ಥರಾಗಲು ಪ್ರೇರಣೆ ನೀಡುವ ಉದ್ದೇಶದೊಂದಿಗೆಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆರಂಭವಾಗಿದೆ.

ಆದರೆ, ಆರ್ಥಿಕ ಅಡಚಣೆ, ಸಿಬ್ಬಂದಿ ಕೊರತೆ, ಕಟ್ಟಡಗಳ ಕೊರತೆ, ಸರ್ಕಾರದ ನಿರ್ಲಕ್ಷ್ಯದಿಂದ ಉದ್ದೇಶಿತ ಗುರಿ ತಲುಪಲು ಇದುವರೆಗೂ ಸಾಧ್ಯವಾಗಿಲ್ಲ.

ವಿವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಸದ್ಯ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಇರುವುದರಿಂದ ವಿಶೇಷ ಅನುದಾನ ಲಭಿಸದೆ ಅಭಿವೃದ್ಧಿಗೆ ತೊಡಕಾಗಿದೆ.

**
ಬೇಕಿದೆ ವಿಶೇಷ ಸ್ಥಾನಮಾನ
ಆರಂಭದಲ್ಲಿ ಉತ್ತರ ಕರ್ನಾಟಕ 13 ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಸರ್ಕಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಆದರೆ, ಈ ಆದೇಶ ಇನ್ನೂ ಆಡಳಿತಾತ್ಮಕವಾಗಿ ಜಾರಿ ಆಗಿಲ್ಲ.

ಈ ವಿಶ್ವವಿದ್ಯಾಲಯದ ಪಠ್ಯದಲ್ಲಿ ಲಿಂಗಸೂಕ್ಷ್ಮತೆ, ಮಹಿಳಾ ಸಬಲೀಕರಣದ ಮಾದರಿ ನೀಡಿಕೆ ಮತ್ತು ಎಲ್ಲ ಜ್ಞಾನಶಿಸ್ತುಗಳಲ್ಲಿ ಮಹಿಳಾ ಲೋಕದೃಷ್ಟಿಯ ವಿನ್ಯಾಸ ತಿಳಿಸುವ, ಬೆಳೆಸುವ ಕ್ರಮವನ್ನು ಜಾರಿ ಮಾಡಬೇಕಿದೆ. ಶಿಕ್ಷಣದ ಸಿದ್ಧಚೌಕಟ್ಟಿನ ಮಾದರಿಗಳನ್ನು ಮುರಿದುಕಟ್ಟುವ ಬಗೆಯನ್ನು ಶೋಧಿಸಬೇಕಾಗಿದೆ.

ಈ ವಿವಿಯು ಹತ್ತರಲ್ಲಿ ಒಂದಷ್ಟೆ ಎಂಬ ಸರ್ಕಾರದ ಧೋರಣೆಯನ್ನು ಪರಾಮರ್ಶಿಸಿ ಕೊಳ್ಳುವಂತೆ ಒತ್ತಾಯಿಸಿ, ವಿಶೇಷ ಸ್ಥಾನಮಾನಕ್ಕಾಗಿ ಪ್ರಯತ್ನಿಸಬೇಕಿದೆ.

-ಪ್ರೊ.ಸಬಿಹಾ ಭೂಮಿಗೌಡ, ನಿಕಟಪೂರ್ವ ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
-ಪ್ರೊ.ಸಬಿಹಾ ಭೂಮಿಗೌಡ, ನಿಕಟಪೂರ್ವ ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

**

ಸ್ತ್ರೀನೋಟದ ಕುಲಪತಿ ಬೇಕು
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಹಿಳಾ ಅಸ್ಮಿತೆಯ, ಮಹಿಳಾ ಪರ ದೃಷ್ಟಿಕೋನ ಇರುವ, ಲಿಂಗಸಮಾನತೆ ಸಾರುವ ದೃಢಸಂಕಲ್ಪ ಹಾಗೂ ಕಣ್ಣೋಟ ಇರುವ ಒಬ್ಬ ಮುತ್ಸದ್ಧಿ ಕುಲಪತಿ ಬೇಕು. ಸರ್ಕಾರದ ಜೊತೆ ಮಾತುಕತೆ ನಡೆಸಿ, ಹೆಚ್ಚಿನ ಅನುದಾನ ತರುವ, ಕೆಲಸ ಚುರುಕುಗೊಳಿಸುವ ಅಕಾಡೆಮಿಕ್‌ ಆಗಿರುವ ಕುಲಪತಿ ಇರಬೇಕು.

ಈಗಿನ ಮಹಿಳಾ ವಿವಿ ಕೇವಲ ಮಹಿಳಾ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದೆಯೇ ಹೊರತು ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. 2004ರ ಉನ್ನತ ಶಿಕ್ಷಣ ಕಾರ್ಯಪಡೆ ವರದಿ ಹೇಳಿರುವಂತೆ ಇತರೆ ವಿವಿಗಳಂತೆ ಮಹಿಳಾ ವಿವಿ ಆಗಬಾರದು. ಮಹಿಳಾ ಪರ ಇರುವ ಕೋರ್ಸ್‌, ಲಿಂಗ ಸಂವೇದನೆ ತರಬೇತಿ ನೀಡುವ ವಿವಿ ಆಗಬೇಕು. ಮಹಿಳಾ ಅಧ್ಯಯನ ಎಂಬುದು ಕೇವಲ ವಿಷಯ ವಸ್ತುವಲ್ಲ. ಜ್ಞಾನಶಿಸ್ತು ಆಗಬೇಕು. ಆದರೆ, ಇಂದಿಗೂ ಅದು ಮಾಡಲು ಸಾಧ್ಯವಾಗಿಲ್ಲ. ಜಡತ್ವಕ್ಕೆ ಜಾರಿರುವ ಮಹಿಳಾ ವಿಶ್ವವಿದ್ಯಾಲಯವನ್ನು ಮಹಿಳಾ ಪರಿಕಲ್ಪನೆ ಮೇಲೆ ಪುನರ್‌ ಕಟ್ಟುವ ಕೆಲಸವಾಗಬೇಕು.

-ಮೀನಾಕ್ಷಿ ಬಾಳಿ, ಪ್ರಾಧ್ಯಾಪಕಿ, ಕಲಬುರ್ಗಿ
-ಮೀನಾಕ್ಷಿ ಬಾಳಿ, ಪ್ರಾಧ್ಯಾಪಕಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT