ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಆಹಾರ ಯೋಜನೆ: ಕೋವಿಡ್‌ ಕಾಲದಲ್ಲಿ ಹೊಟ್ಟೆ ತುಂಬಿಸಿತು

ಗಿರಿಜನರಿಗೆ ಪೌಷ್ಟಿಕ ಆಹಾರ ವಿತರಣೆ ಯೋಜನೆ
Last Updated 14 ಆಗಸ್ಟ್ 2021, 20:52 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೋವಿಡ್‌ ಲಾಕ್‌ಡೌನ್‌ನಲ್ಲಿ ನಮಗೆ ಕೆಲಸ ಇರಲಿಲ್ಲ. ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಲೂ ಆಗದ ಹೊತ್ತಲ್ಲಿ, ನಮ್ಮ ಹಸಿವನ್ನು ನೀಗಿಸಿದ್ದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪೂರೈಸಿದ ಪೌಷ್ಟಿಕ ಆಹಾರ. ಆದರೆ, ಸರಿಯಾದ ಸಮಯಕ್ಕೆ ಹಂಚಿದರೆ ಅನುಕೂಲ ಆಗುತ್ತದೆ’

–ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಂಗ್ಲೆ ಪೋಡಿನ ಸೋಲಿಗ ಮಹಿಳೆ ಭಂಗಿ ಮಾದಮ್ಮನ ಮಾತುಗಳಿವು.

ರಾಜ್ಯ ಸರ್ಕಾರವು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪೂರೈಸುತ್ತಿರುವ ಪೌಷ್ಟಿಕ ಆಹಾರದ ಬಗ್ಗೆ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಇರುವ ಬಹುತೇಕ ಅರಣ್ಯವಾಸಿಗಳದ್ದೂ ಇದೇ ಅಭಿಪ್ರಾಯ.

‘ಗುಣಮಟ್ಟದ ಕಡಲೆ, ಹೆಸರುಕಾಳು ನೀಡಬೇಕು ಎಂದು ಅನೇಕ ಬಾರಿ ಬೇಡಿಕೆ ಮಂಡಿಸಿದ್ದೇವೆ. ತೀರಾ ಚಿಕ್ಕ ಮೊಟ್ಟೆ ನೀಡಲಾಗುತ್ತಿದೆ. ಗಿರಿಜನರಿಗೆ ವಿತರಿಸುವ ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂಬುದು ದಕ್ಷಿಣಕನ್ನಡ ಜಿಲ್ಲೆ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀನಿವಾಸ ಮಲೆಕುಡಿಯ ಅವರ ಆಗ್ರಹ.

‘ಮೊಟ್ಟೆಗಳು ಕಳಪೆಯಾಗಿರುತ್ತವೆ, ಕೆಲವು ಬಾರಿ ಬೇಳೆಕಾಳು ಚೆನ್ನಾಗಿರುವುದಿಲ್ಲ, ಸಮಯಕ್ಕೆ ಸರಿಯಾಗಿ ಆಹಾರ ವಿತರಿಸುವುದಿಲ್ಲ’ ಎಂಬ ದೂರುಗಳ ನಡುವೆಯೂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಭಾಗಶಃ ಸಫಲವಾಗಿದೆ.

ರಾಜ್ಯದಾದ್ಯಂತ ಕಾಡು ಹಾಗೂ ಅವುಗಳ ಅಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಲ್ಲಿ ಪೌಷ್ಟಿಕಾಂಶ ವೃದ್ಧಿಗಾಗಿ 2013ರಿಂದ ಗಿರಿಜನರಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಮೊದಲು, ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ತಿಂಗಳು ಪೌಷ್ಟಿಕ ಆಹಾರ ಪೂರೈಸಲಾಗುತ್ತಿತ್ತು. ಈಗ, ಪ್ರತಿ 45 ದಿನಗಳಿಗೊಮ್ಮೆ ವರ್ಷದಲ್ಲಿ ಆರು ಬಾರಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆ ಅಂತ್ಯದಿಂದ ಮುಂದಿನ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ಮೈಸೂರು ಜಿಲ್ಲೆಯ 12,872 ಬುಡಕಟ್ಟು ಕುಟುಂಬಗಳು,ಚಾಮರಾಜನಗರದ 7,600, ಉತ್ತರ ಕನ್ನಡದಲ್ಲಿ 4,143 ಕುಟುಂಬಗಳು, ದಕ್ಷಿಣ ಕನ್ನಡದಲ್ಲಿ 1,600ಕ್ಕೂ ಹೆಚ್ಚು ಕುಟುಂಬಗಳು ಯೋಜನೆಯ ಫಲವನ್ನು ಉಣ್ಣುತ್ತಿವೆ.

’ಚಟಕ್ಕೆ ಬಿದ್ದವರು ಆಹಾರ ಪದಾರ್ಥಗಳನ್ನು ಮಾರಿಕೊಳ್ಳುತ್ತಾರೆ. ಯೋಜನೆಯಿಂದ ಹಲವರಿಗೆ ಅನುಕೂಲವಾಗಿದೆ. ಕೊಡಗಿನಲ್ಲಿ ಅಸಹಾಯಕ ವೃದ್ಧರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಅನುಕೂಲವಾಗಿದೆ. ರಕ್ತಹೀನತೆಯಿಂದ ಬಳಲುತ್ತಿದ್ದ ಮಹಿಳೆಯರು–ಮಕ್ಕಳು ಚೇತರಿಸಿಕೊಂಡಿದ್ದಾರೆ’ ಎನ್ನುತ್ತಾರೆ ಮುಖಂಡರು.

ಕಿಟ್‌ನಲ್ಲಿ ಏನಿದೆ?

ಅಕ್ಕಿ/ರಾಗಿ (8 ಕೆಜಿ), ತೊಗರಿಬೇಳೆ (3 ಕೆಜಿ), ಕಡಲೆಕಾಳು (1 ಕೆಜಿ), ಕಡಲೆ ಬೀಜ (1 ಕೆಜಿ), ಹುರುಳಿಕಾಳು (1 ಕೆಜಿ), ಅಲಸಂದೆ (1 ಕೆಜಿ), ಹೆಸರುಕಾಳು (1 ಕೆಜಿ), ಸಕ್ಕರೆ/ಬೆಲ್ಲ (2 ಕೆಜಿ), ಅಡುಗೆಎಣ್ಣೆ (2 ಲೀಟರ್‌), ಮೊಟ್ಟೆ (30), ನಂದಿನಿ ತುಪ್ಪ (ಅರ್ಧ ಲೀಟರ್‌)

ಪೂರಕ ಮಾಹಿತಿ: ಸಿ.ಮೋಹನ್‌ಕುಮಾರ್‌,ಕೆ.ಎ.ಆದಿತ್ಯ, ಸಂಧ್ಯಾ ಹೆಗಡೆ, ಸದಾಶಿವ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT