ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಎರಡು ದಶಕ ಕಳೆದರೂ ಪೂರ್ಣಗೊಳ್ಳದ ವಾಡಿ–ಗದಗ ಮಾರ್ಗ

Last Updated 2 ಜನವರಿ 2021, 20:25 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕವನ್ನು ಬೆಸೆಯುವ ವಾಡಿ– ಗದಗ ರೈಲು ಮಾರ್ಗ ಮಂಜೂರಾಗಿ ಎರಡು ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಈ ಯೋಜನೆಯ ನೀಲನಕ್ಷೆ ಸಿದ್ಧವಾಗಿದ್ದುಬ್ರಿಟಿಷರ ಕಾಲದಲ್ಲಿ. 1965ರಲ್ಲಿ ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡಿತ್ತು. ಆ ನಂತರ ಇದು ನನೆಗುದಿಗೆ ಬಿದ್ದಿತ್ತು.

ಐ.ಕೆ. ಗುಜ್ರಾಲ್‌ ಅವರು ಪ್ರಧಾನಿಯಾಗಿದ್ದಾಗ (1997–98) ಕೊಪ್ಪಳ ಸಂಸದರಾಗಿದ್ದ ಬಸವರಾಜ ರಾಯರಡ್ಡಿ ಹಾಗೂ ಈ ಭಾಗದ ಜನಪ್ರತಿನಿಧಿಗಳ ಒತ್ತಾಸೆಯ ಮೇರೆಗೆ ಈ ಮಾರ್ಗಕ್ಕೆ ಮಂಜೂರಾತಿ ದೊರೆತಿತ್ತು.ಸುರೇಶ ಪ್ರಭು ರೈಲ್ವೆ ಸಚಿವರಿದ್ದಾಗ ಕಾಮಗಾರಿಗೆ ಚಾಲನೆ ನೀಡಿದ್ದರು.

ಕಲಬುರ್ಗಿ ಜಿಲ್ಲೆಯ ವಾಡಿಯಿಂದ ಯಾದಗಿರಿ ಜಿಲ್ಲೆಯ ಸುರಪುರ, ದೇವಾಪುರ, ಕಕ್ಕೇರಾ, ರಾಯಚೂರು ಜಿಲ್ಲೆಯ ಗುರಗುಂಟಾ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಗುಡದೂರ, ಲಿಂಗನಬಂಡಿ, ಯಲಬುರ್ಗಾ, ಕುಕನೂರ ತಾಲ್ಲೂಕಿನ ಮೂಲಕ ಗದಗ ಜಂಕ್ಷನ್‌ ತಲುಪುವ ಈಮಾರ್ಗದ ಉದ್ದ 257.26 ಕಿಲೋ ಮೀಟರ್‌.ಒಟ್ಟು 18 ರೈಲು ನಿಲ್ದಾಣಗಳು ಸ್ಥಾಪನೆಯಾಗಲಿದ್ದು,ಪರಿಷ್ಕೃತ ಅಂದಾಜು ₹1,922 ಕೋಟಿ.

ಗದಗ ಕಡೆಯಿಂದ ಅಂದಾಜು 125 ಕಿ.ಮೀ.ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಜಂಕ್ಷನ್‌ನಿಂದ ಬಂಡ್ ಹಾಕುವ ಕಾರ್ಯ ನಡೆದಿದೆ. ಯಲಬುರ್ಗಾದ ಕೊನೆಯ ಗ್ರಾಮ ಹಿರೇಅರಳಿಹಳ್ಳಿವರೆಗೆ ಒಡ್ಡು ನಿರ್ಮಾಣ ಮಾಡಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ₹17 ಲಕ್ಷ ನೀಡಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಭೂಸ್ವಾಧೀನ ಇನ್ನೂ ಪೂರ್ಣಗೊಂಡಿಲ್ಲ.

‘ಈ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರವು ಉಚಿತವಾಗಿ ರೈಲ್ವೆ ಇಲಾಖೆಗೆ ನೀಡುತ್ತಿದ್ದು,ಭೂಸ್ವಾಧೀನಕ್ಕೆ ₹200 ಕೋಟಿ ಬಿಡುಗಡೆ ಮಾಡಲಾಗಿದೆ’ ಎನ್ನುತ್ತವೆ ಸರ್ಕಾರದ ಮೂಲಗಳು.

‘ಕಲ್ಯಾಣ ಕರ್ನಾಟಕದ ಪ್ರಗತಿಗೆ ಪೂರಕವಾಗಲಿರುವ ಈ ಮಾರ್ಗದ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸಬೇಕು’ ಎನ್ನುವುದು ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಅವರ ಒತ್ತಾಯ.

ಕಲಬುರ್ಗಿ ರೈಲ್ವೆ ವಿಭಾಗ
ಕಲಬುರ್ಗಿ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಯುಪಿಎ–2 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ, 2014ರ ಫೆಬ್ರುವರಿಯಲ್ಲಿ ಕಲಬುರ್ಗಿಯಲ್ಲಿ ಹೊಸ ರೈಲ್ವೆ ವಿಭಾಗ ಕಚೇರಿ ಸ್ಥಾಪನೆ ಘೋಷಿಸಿದ್ದರು.ಒಂದೇ ತಿಂಗಳಲ್ಲಿ ಕಲಬುರ್ಗಿ ನಗರದಲ್ಲಿ 37 ಎಕರೆ ಜಮೀನನ್ನು ರೈಲ್ವೆಗೆ ಹಸ್ತಾಂತರಿಸಲಾಯಿತು. ಈ ವಿಭಾಗದ ಚಟುವಟಿಕೆ ಆರಂಭಿಸಲು ವಿಶೇಷ ಅಧಿಕಾರಿಯನ್ನೂ ನೇಮಿಸಲಾಯಿತು. ಆದರೆ, ರೈಲ್ವೆ ಸಚಿವ ಸ್ಥಾನದಿಂದ ಖರ್ಗೆ ನಿರ್ಗಮಿಸಿದ ನಂತರ ಎಲ್ಲವೂ ಸ್ಥಗಿತಗೊಂಡುಬಿಟ್ಟಿತು. ರೈಲ್ವೆ ಇಲಾಖೆ ಈ ಬೇಡಿಕೆ ಬಗ್ಗೆ ಈಗ
ಕಾರ ಎತ್ತುತ್ತಿಲ್ಲ!‌

ಬಳಕೆಯಾಗದ ಬೀದರ್‌–ಕಲಬುರ್ಗಿ ಮಾರ್ಗ
ಕಲಬುರ್ಗಿ ಮತ್ತು ಬೀದರ್‌ ಮಧ್ಯದ 107 ಕಿ.ಮೀ. ಉದ್ದದ ರೈಲು ಮಾರ್ಗ ಉದ್ಘಾಟನೆಯಾಗಿ ಮೂರು ವರ್ಷ ಉರುಳಿವೆ. ಇಲ್ಲಿ ಒಂದು ಡೆಮು ರೈಲು ಮಾತ್ರ ಸಂಚರಿಸುತ್ತಿತ್ತು. ಕೊರೊನಾ ಕಾರಣದಿಂದಾಗಿ ಆ ರೈಲು ಸೇವೆ ಸಹ ಸ್ಥಗಿತಗೊಂಡಿದೆ. ₹1,542 ಕೋಟಿ ವ್ಯಯಿಸಿ ನಿರ್ಮಿಸಿರುವ ಈ ಮಾರ್ಗದಲ್ಲಿ ಈಗ ಯಾವ ರೈಲೂ ಸಂಚರಿಸುತ್ತಿಲ್ಲ. ಬೀದರ್‌ನಿಂದ ಕಲಬುರ್ಗಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಸೇವೆ ಆರಂಭಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.

*
ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯ ಫಲವಾಗಿ ವಾಡಿ–ಗದಗ ಯೋಜನೆಯಲ್ಲಿ ಪ್ರಗತಿ ಕಂಡುಬಂದಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬೇಕಾಗುತ್ತದೆ.
-ಸಂಗಣ್ಣ ಕರಡಿ,ಕೊಪ್ಪಳ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT