ಶುಕ್ರವಾರ, ಜನವರಿ 15, 2021
21 °C
ರೈತರ ಪಾಲಿಗೆ ವರದಾನವಾದ ಯೋಜನೆ

ಒಳನೋಟ: ಹರಿದುಬಂದ ನೀರು ‘ಬರ’ ನೀಗಿಸಿತು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೆರೆಗೆ ನೀರು ತುಂಬಿಸುವ ಯೋಜನೆ ವಿಜಯಪುರ, ಬೆಳಗಾವಿ, ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಗಳ ರೈತರ ಪಾಲಿಗೆ ವರದಾನವಾಗಿದೆ. ವಿಜಯಪುರ ಜಿಲ್ಲೆ ಕೆರೆಗಳ ಪಾಲಿಗೆ ಕೃಷ್ಣೆ ವರವಾಗಿದ್ದಾಳೆ. ಜಿಲ್ಲೆಯಲ್ಲಿ 266ಕ್ಕೂ ಹೆಚ್ಚು ಕೆರೆಗಳಿದ್ದು, ಕೆಬಿಜಿಎನ್‌ಎಲ್‌ ಕಾಲುವೆಗಳ ಮೂಲಕ ನೀರು ತುಂಬಿಸಲಾಗುತ್ತಿದೆ.

ಹೊಸಪೇಟೆ ತಾಲ್ಲೂಕಿನ 22 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ₹245 ಕೋಟಿ ವೆಚ್ಚದ ಕಾಮಗಾರಿ ಆರಂಭಗೊಂಡಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲು ಕೆರೆಗೆ ನೀರು ತುಂಬಿಸಲಾಗಿದೆ. ಭದ್ರಾ ಹಿನ್ನೀರಿನಿಂದ ತಾಲ್ಲೂಕಿನ 15 ಕೆರೆ ತುಂಬಿಸಲು ಉದ್ದೇಶಿಸಲಾಗಿದ್ದರೂ ಅದು ಘೋಷಣೆಗಷ್ಟೇ ಸೀಮಿತವಾಗಿದೆ.

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಏತ ನೀರಾವರಿಯ ನಾಲೆಗಳಿಂದ  ದೊಡ್ಡ ಕೆರೆಗಳನ್ನು ತುಂಬಿಸಲಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರ ದುರ್ಗಾದೇವಿ ಕೆರೆ ಹಾಗೂ ದೂದೀಹಳ್ಳಿ ಗ್ರಾಮದ 6 ಕೆರೆಗಳನ್ನು ತುಂಬಿಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ರಟ್ಟೀಹಳ್ಳಿ, ಬ್ಯಾಡಗಿ, ಹಾನಗಲ್‌ ತಾಲ್ಲೂಕಿನ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಕೆರೆಗಳಿಗೆ ನೀರು ತುಂಬಿಸ ಲಾಗಿದೆ. ಕೆಲವೆಡೆ ಯೋಜನೆಗಳು ಕಾಗದದಲ್ಲೇ ಉಳಿದಿವೆ. ಹುಕ್ಕೇರಿ ಕ್ಷೇತ್ರದ 27 ಕೆರೆಗಳು ಮತ್ತು ಚಿಕ್ಕೋಡಿ ತಾಲ್ಲೂಕಿನ 5 ಕೆರೆಗಳಲ್ಲಿ ನೀರು ತುಂಬ ಲಾಗುತ್ತಿದೆ.  ಚಿಕ್ಕೋಡಿ ತಾಲ್ಲೂಕಿನ 11 ಕೆರೆಗಳಿಗೆ ಕೃಷ್ಣಾ, ದೂಧ್‌ಗಂಗಾ ಮತ್ತು ಹಿರಣ್ಯಕೇಶಿ ನದಿಗಳಿಂದ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡಿದೆ. ಗೋಕಾಕ ತಾಲ್ಲೂಕಿನ 56 ಕೆರೆಗಳಿಗೆ ನೀರು ತುಂಬಿಸುವ ಮೂರು ಯೋಜನೆಗಳಿಗೆ ಅನುಮೋದನೆಗಾಗಿ ಸರ್ಕಾರಕ್ಕೆ 2018–19ರಲ್ಲೇ ಕಳುಹಿಸ ಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಘಟಪ್ರಭಾ ಬಲದಂಡೆ ಕಾಲುವೆ 3ನೇ ಡಿವಿಷನ್ ಕಾರ್ಯಪಾಲಕ ಎಂಜಿನಿಯರ್ ಯು.ಜಿ. ಬೆಣ್ಣೆರ ‘ಪ್ರಜಾವಾಣಿ‘ಗೆ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕೆರೆಗಳಿಗೆ ಪೈಪ್‌ಗಳನ್ನು ಅಳವಡಿಸಲಾಗಿದೆ. 2018ರಲ್ಲಿ ಜಾರಿಯಾದ ಕಾಮಗಾರಿ ಶೇ 50ಕ್ಕಿಂತ ಹೆಚ್ಚು ಮುಗಿದಿದೆ. ವರದಾ ನದಿಯಿಂದ ಬನವಾಸಿಯ 65 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮುಕ್ತಾಯದ ಹಂತದಲ್ಲಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳ ಭಾಗದಲ್ಲಿನ ಕೆಲ ಕೆರೆಗಳನ್ನು ತುಂಬಿಸುವ ಯೋಜನೆ ಸಾಕಾರಗೊಂಡಿಲ್ಲ. 

ಅರೆಕಾಸಿನ ಮಜ್ಜಿಗೆ

ಬಾಗಲಕೋಟೆ: ಸಮೀಪದ ಮುಚಖಂಡಿಯ ಕೆರೆ 875 ಎಕರೆ ವಿಸ್ತೀರ್ಣ ಮತ್ತು 5.8 ಕೋಟಿ ಘನ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಮಳೆ ಕೊರತೆಯಿಂದ ಕಳೆದ 20 ವರ್ಷಗಳಿಂದ ಈ ಕೆರೆ ತುಂಬಿರಲಿಲ್ಲ.

ಆಲಮಟ್ಟಿ ಹಿನ್ನೀರಿನಿಂದ ಮುಚಖಂಡಿ ಕೆರೆಗೆ ನೀರು ಹರಿಸುವ ಯೋಜನೆಯನ್ನು 2016ರಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿತ್ತು. ಕಾರಿಹಳ್ಳದ ಹಿನ್ನೀರಿನಿಂದ 6.5 ಕಿ.ಮೀ ದೂರ ಪೈಪ್‌ಲೈನ್‌ ನಿರ್ಮಿಸಿ ಮುಚಖಂಡಿ ಕೆರೆಗೆ ಹರಿಸಲಾಗಿತ್ತು. 2017ರ ಆಗಸ್ಟ್ 19ರಂದು ನೀರು ಹರಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಕೆರೆ ತುಂಬಿಸುವ ಕನಸು ಸಾಕಾರಗೊಳ್ಳಲಿಲ್ಲ.

* ‘ಹಿರಣ್ಯಕೇಶಿ ನದಿಯಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರು ತುಂಬಿಸಿದ್ದರಿಂದ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.

-ಶಿವನಗೌಡ ಪಾಟೀಲ, ಯಾದಗೂಡ ರೈತ

* ಮುಗಳಿ ಗ್ರಾಮದ ಕೆರೆಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಯೋಜನೆಯಲ್ಲಿ ಕಳಪೆಮಟ್ಟದ ಕಾಮಗಾರಿಯಿಂದಾಗಿ ಸಮರ್ಪಕವಾಗಿ ನೀರು ತುಂಬುತ್ತಿಲ್ಲ.

-ಈರಗೌಡ ಪಾಟೀಲ, ಚಿಕ್ಕೋಡಿಯ ರೈತ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು