ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಅದಿರು ಅಕ್ರಮ ಸಾಗಣೆ: ದೂಳು ತಿನ್ನುತ್ತಿದೆ ಎಚ್‌.ಕೆ ಪಾಟೀಲರ ವರದಿ!

ಬೊಕ್ಕಸಕ್ಕೆ ನಷ್ಟ ₹ 12,228 ಕೋಟಿ ಅಲ್ಲ ₹ 1.50 ಲಕ್ಷ ಕೋಟಿ
Last Updated 24 ಜುಲೈ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2006ರಿಂದ 2010ರ ಅವಧಿಯಲ್ಲಿ 2.98 ಕೋಟಿ ಟನ್‌ನಷ್ಟು ಅದಿರು ಅಕ್ರಮವಾಗಿ ರಫ್ತಾಗಿ, ಬೊಕ್ಕಸಕ್ಕೆ ₹ 12,228 ಕೋಟಿ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಅಂದಾಜಿಸಲಾಗಿದೆ. ಆದರೆ, ಅಕ್ರಮವಾಗಿ 35 ಕೋಟಿ ಟನ್‌ ಸಾಗಣೆಯಾಗಿ ₹ 1.50 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲರ ನೇತೃತ್ವದ ಸಂಪುಟ ಉಪ ಸಮಿತಿ ಅಂದಾಜಿಸಿತ್ತು!

ರಾಜ್ಯ ಕಂಡ ಈ ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣದ ಆಳ–ಅಗಲವನ್ನು ಮತ್ತಷ್ಟು ವಿಸ್ತರಿಸಿ, ಅಗಾಧ ಪ್ರಮಾಣದ ನಷ್ಟವನ್ನು ಬಹಿರಂಗಪಡಿಸಿದ್ದ ಪಾಟೀಲರ ವರದಿ ದೂಳು ತಿನ್ನುತ್ತಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸಿದ್ದರು. 2013ರ ವಿಧಾನಸಭೆ ಚುನಾವಣೆ ಯಲ್ಲಿ ಈ ವಿಚಾರವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಅವರು, ‘ನಾವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಲೂಟಿಕೋರರಿಂದ ವಸೂಲು ಮಾಡುತ್ತೇವೆ’ ಎಂದು ಸಾರಿದ್ದರು. 2013ರ ಮೇ 13ರಂದು ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಏರಿದರು. ಆನಂತರ ಲೋಕಾಯುಕ್ತರು ನೀಡಿದ್ದ ವರದಿಗಳಲ್ಲಿನ ಶಿಫಾರಸುಗಳ ಅನುಷ್ಠಾನ ಮತ್ತು ವಿವಿಧ ಇಲಾಖೆಗಳು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಮೇಲುಸ್ತುವಾರಿಗೆ ಪಾಟೀಲರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು.‌

ಸರ್ಕಾರದ ಅಧಿಕಾರ ಅವಧಿಯ ಕೊನೆಯ ಹಂತದಲ್ಲಿ (2017ರ ನ. 3 ಮತ್ತು 4) ಅಂತಿಮ ಸಭೆ ನಡೆಸಿದ್ದ ಸಮಿತಿ, ಅಕ್ರಮ ಗಣಿಗಾರಿಕೆ ಮಾಡಿರುವವರಿಂದ ನಷ್ಟ ವಸೂಲಿಗೆ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಬೇಕು, ಸಿಬಿಐ ಪ್ರಾಥಮಿಕ ತನಿಖೆ ನಡೆಸಿ ಕ್ರಿಮಿನಲ್‌ ಮೊಕದ್ದಮೆ ಸಾಧ್ಯವಾಗದೆ ಕೈ ಚೆಲ್ಲಿರುವ ಪ್ರಕರಣಗಳನ್ನು ಲೋಕಾಯುಕ್ತ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸಬೇಕು ಎಂದು ಸಚಿವ ಸಂಪುಟ ಸಭೆಗೆ ವರದಿ ಮಂಡಿಸಿತ್ತು. ಶಿಫಾರಸುಗಳನ್ನು ಯಥಾವತ್‌ ಜಾರಿಗೆ ತರುವ ಜೊತೆಗೆ ಎಸ್‌ಐಟಿಗೆ ಅಂತರರಾಜ್ಯ ಪ್ರಕರಣಗಳ ತನಿಖೆಗೆ ಅಗತ್ಯವಾದ ಕಾನೂನು ಬಲ ನೀಡುವ ಪ್ರಸ್ತಾಪಕ್ಕೂ ಅಂದು ಸಂಪುಟ ಒಪ್ಪಿಗೆ ನೀಡಿತ್ತು. ಆದರೆ, ನಂತರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ ಸರ್ಕಾರ ಈ ಹಗರಣವನ್ನು ಮರೆತವು.

ಸಂಪುಟ ಉಪ ಸಮಿತಿ ಎದುರು ಹಾಜರಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಇಲಾಖೆಯ ನಿರ್ದೇಶಕರನ್ನು ಪದೇಪದೇ ವರ್ಗಾವಣೆ ಮಾಡಿದ್ದರಿಂದ ಆಸ್ತಿ ಮುಟ್ಟುಗೋಲು ಹಾಗೂ ದಂಡ ವಸೂಲಿಗೆ ಕ್ರಮ ತೆಗೆದುಕೊಳ್ಳಲು ವಿಳಂಬವಾಗಿದೆ ಎಂದಿದ್ದರು. ನಷ್ಟ ವಸೂಲಿ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 17 ಗಣಿ ಗುತ್ತಿಗೆದಾರರಿಗೆ ನೋಟಿಸ್‌ ನೀಡಿತ್ತು. ಆದರೆ, 2017ರ ಜೂನ್‌ 6ರಂದು ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರು ಗಣಿ ಇಲಾಖೆಗೆ ಪತ್ರ ಬರೆದು ನೋಟಿಸ್‌ ನೀಡದಂತೆ ಸೂಚಿಸಿದ್ದು ಪಾಟೀಲರ ವರದಿಯಲ್ಲಿದೆ. 2014ರ ಜನವರಿಯಲ್ಲಿ ಎರಡು ವರ್ಷಗಳ ಅವಧಿಗೆ ಎಸ್‌ಐಟಿ ರಚಿಸಲಾಗಿತ್ತು. ಬಳಿಕ ಪ್ರತಿ ವರ್ಷ ಅವಧಿ ವಿಸ್ತರಿಸಲಾಗುತ್ತಿದೆ. 2022 ಜನವರಿಗೆ ಎಸ್‌ಐಟಿ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಎಲ್ಲ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳುವುದು ಅನುಮಾನ. ಮತ್ತೆ ಅವಧಿ ವಿಸ್ತರಣೆ ಖಚಿತ ಎನ್ನುತ್ತವೆ ಎಸ್‌ಐಟಿ ಮೂಲಗಳು.

ಪಾಟೀಲರ ವರದಿಯಲ್ಲಿ ಏನಿದೆ?: ರಾಜ್ಯದ ಹತ್ತು ಬಂದರು ಹಾಗೂ ಗೋವಾ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧ ಬಂದರುಗಳಿಂದ ರಫ್ತಾದ ಕಬ್ಬಿಣದ ಅದಿರು ಮತ್ತು ಸುಂಕ ಇಲಾಖೆಯ ಮಾಹಿತಿ ಆಧರಿಸಿ 2.98 ಕೋಟಿ ಟನ್‍ಗಳಷ್ಟು ಅಕ್ರಮ ಅದಿರು ರಪ್ತಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿದೆ.

ಆದರೆ, ಬಳ್ಳಾರಿಯಿಂದ ಹೊರಗಡೆ 6 ರೈಲು ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್‍ಗಳಿಂದ 2006ರಿಂದ 2010ರ ಅವಧಿಯಲ್ಲಿ 20 ಕೋಟಿ ಟನ್‍ಗಳಷ್ಟು ಅದಿರು ಸಾಗಿಸಲಾಗಿದೆ ಎಂದು ರೈಲ್ವೆ ಇಲಾಖೆಯ ದಾಖಲೆಗಳಲ್ಲಿದೆ. 2009ರ ಸೆಪ್ಟಂಬರ್‌ನಿಂದ 2010ರ ಜೂನ್‌ ಅವಧಿಯಲ್ಲಿ 14 ಕೋಟಿ ಟನ್‍ಗಳಷ್ಟು ಅದಿರು ದಿನವೂ 20 ಸಾವಿರ ಟ್ರಕ್‍ಗಳಲ್ಲಿ ಸಾಗಣೆಯಾಗಿದೆ. ರೈಲ್ವೆಯ ವ್ಯಾಗನ್‍, ಟ್ರಕ್‌ಗಳ ಹಾಗೂ ಅಧಿಕಾರಸ್ಥ ರಾಜಕಾರಣಿಗಳ ತೋಳ್ಬಲದ ಮೂಲಕ ಸಾಗಣೆಯಾಗಿದೆ ಎಂಬ ಅಂಶವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT