ಶನಿವಾರ, ಅಕ್ಟೋಬರ್ 16, 2021
29 °C

ಒಳನೋಟ| ಥಳುಕಿನ ಅಡಿಯ ಹುಳುಕು: ಗಗನಕುಸುಮವಾದ ಕ್ರೀಡಾ ಮೂಲಸೌಕರ್ಯ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನ ಸಿಂಥೆಟಿಕ್ ಟ್ರ್ಯಾಕ್‌ನ ರಬ್ಬರ್ ತೆಗೆದು ಒಂದೂವರೆ ವರ್ಷ ಕಳೆದಿದೆ. ಅದನ್ನು ಪುನಃ ಹಾಕುವ ಕೆಲಸ ಇನ್ನೂ ಮುಗಿದಿಲ್ಲ. ಅನತಿ ದೂರದಲ್ಲೇ ಇರುವ ಸಂಪಂಗಿರಾಮನಗರದ ಶಾಲೆಗಳ ಕ್ರೀಡಾಸಕ್ತ ಮಕ್ಕಳ ಕಡೆ ನೋಡಿದರೆ ವ್ಯಂಗ್ಯವೊಂದು ವ್ಯಕ್ತಗೊಳ್ಳುತ್ತದೆ. ಕಂಠೀರವ ಕ್ರೀಡಾಂಗಣಕ್ಕೆ ಅಗತ್ಯವಿರುವ ಬಾಡಿಗೆ ತೆತ್ತು, ಮಕ್ಕಳ ಅಭ್ಯಾಸಕ್ಕೆ ಅಣಿ ಮಾಡಿಸುವ ಶಕ್ತಿ ಅಲ್ಲಿನ ಶಾಲೆಗಳಿಗೆ ಇಲ್ಲ.

ಮಹಾನಗರದ ಕ್ರೀಡಾ ಪರಿಸ್ಥಿತಿಯ ವ್ಯಂಗ್ಯವೇ ಹೀಗಿದೆ. ಇನ್ನು ಹಳ್ಳಿಗಳಲ್ಲಿನ ದುಃಸ್ಥಿತಿಯ ಕುರಿತು ಮಾತನಾಡದಿರುವುದೇ ಒಳಿತು. ವಿಜಯಪುರದ ವೆಲೋಡ್ರೋಂ ಕಾಮಗಾರಿಯ ಆಮೆಗತಿ, ಕ್ರೀಡಾಕ್ಷೇತ್ರದ ಸ್ಥಿತಿಗತಿಗೆ ಉದಾಹರಣೆ. ಮಳೆ ಧಾರಾಕಾರವಾಗಿ ಸುರಿಯುವ ಎಷ್ಟೋ ಕಡೆ ವ್ಯತಿರಿಕ್ತ ಪರಿಸ್ಥಿತಿಯನ್ನೂ ಮೀರಿ, ತರಬೇತಿ ನೀಡುವ ವ್ಯವಸ್ಥೆ ಇಲ್ಲ. ಹಳ್ಳಿಗಾಡಿನಲ್ಲಿ ಯಾವುದೋ ಸ್ಪರ್ಧೆಯಲ್ಲಿ ಹುರಿಯಾಳು ಗಳಾಗಬಲ್ಲವರು ಹೆಚ್ಚುವರಿ ತರಬೇತಿ ಗಾಗಿ ದೂರದ ಇನ್ಯಾವುದೋ ನಗರಿಗೆ ಹೋಗಬೇಕಾದದ್ದು ಅನಿವಾರ್ಯ. 

ಒಲಿಂಪಿಕ್ಸ್ ಪದಕಗಳ ಕನಸು ಕಾಣುತ್ತಾ ಅಂಗಾತ ಮಲಗುವ ಕರ್ನಾಟಕದ ಕ್ರೀಡಾಪಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲು ಇಂಥ ಪರಿಸ್ಥಿತಿಯೇ ಕಾರಣ.

ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟ್ ಪ್ರಿಯಾ ಮೋಹನ್ ಬೆಂಗಳೂರಿನಲ್ಲಿ ಭರವಸೆ ಮೂಡಿಸಿರುವುದನ್ನು ಹಿರಿಯ ತರಬೇತುದಾರ ವಿಶ್ವನಾಥರಾವ್ ಬೀಡು ಉದಾಹರಿಸುತ್ತಲೇ, ತರಬೇತಿಗಾಗಿ ಅವರು ಪಟ್ಟಿದ್ದ ಕಷ್ಟವನ್ನೂ ತೆರೆದಿಟ್ಟರು.

ದೂರದ ವಿದ್ಯಾನಗರದಲ್ಲಿ ಪ್ರಿಯಾಈಗ ತರಬೇತಿ ಪಡೆಯುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲೇ ಅದು ಸಾಧ್ಯವಿದ್ದಿದ್ದರೆ ಪರಿಸ್ಥಿತಿ ಇನ್ನೂ ಚೆನ್ನಾಗಿರುತ್ತಿತ್ತು ಎನ್ನುವ ಬೀಡು, ತರಬೇತುದಾರರ ಸಂಬಳಕ್ಕೂ ಈಗಿನ ಪರಿಸ್ಥಿತಿಗೂ ಇರುವ ಸಾವಯವ ಸಂಬಂಧವನ್ನೂ ಅನಾವರಣಗೊಳಿಸುತ್ತಾರೆ.

ತರಬೇತುದಾರರಿಗೆ ಈಗ ಸರ್ಕಾರ ₹ 40 ಸಾವಿರ ಸಂಬಳ ನಿಗದಿಪಡಿಸಿದೆ. ಪ್ರತಿಭಾವಂತ ಅಥ್ಲೀಟ್‌ಗಳ ಕೌಶಲ ಹೆಚ್ಚಿಸಲು ಕೊಡಬೇಕಾದ ವೈಯಕ್ತಿಕ ನಿಗಾವನ್ನು ಅವರು ಸಂಬಳ ಕಡಿಮೆ ಎನ್ನುವ ಕಾರಣಕ್ಕಾಗಿಯೇ ನೀಡುತ್ತಿಲ್ಲ. ಇನ್ನಷ್ಟು ಸಾಣೆ ಸಿಗಬೇಕಾದರೆ ಅಥ್ಲೀಟ್‌ಗಳು ತಮ್ಮ ಕಿಸೆಯಿಂದ ಹಣ ತೆರಬೇಕು.

ಕಂಠೀರವ ಕ್ರೀಡಾಂಗಣವನ್ನು ಫುಟ್‌ಬಾಲ್ ಪಂದ್ಯಗಳಿಗೆ ಬರೀ ₹ 35ಸಾವಿರ ಬಾಡಿಗೆ ಪಡೆದು ನೀಡುವ ಅಧಿಕಾರಿಗಳು, 10ಕೆ ರನ್‌ ಸ್ಪರ್ಧೆ ನಡೆದಾಗ ₹ 80 ಸಾವಿರ ಬಾಡಿಗೆ ಪಡೆದವಸ್ತುಸ್ಥಿತಿಗೂ ಬೀಡು ಕನ್ನಡಿ ಹಿಡಿಯುತ್ತಾರೆ.

ಟೆನಿಸ್‌ನಲ್ಲಿ ದೊಡ್ಡದನ್ನು ಸಾಧಿಸಬೇಕೆಂಬ ಕನಸು ಕಾಣುತ್ತಿರುವ ದಾವಣಗೆರೆಯ ಅಲೋಕ್, ಬೆಂಗಳೂರಿನ ಮಹೇಶ್ ಭೂಪತಿ ಅಕಾಡೆಮಿಯಲ್ಲಿ ತಿಂಗಳಿಗೆ ₹80 ಸಾವಿರದಷ್ಟು ಅಂದಾಜು ವೆಚ್ಚದಲ್ಲಿ ತರಬೇತಿ ಪಡೆದ ಅನುಭವವನ್ನು ಹಿಂದೊಮ್ಮೆ ಹಂಚಿಕೊಂಡಿದ್ದರು. ಕ್ರೀಡೆಯ ಕನಸು ಕಾಣುವ ಎಷ್ಟು ಹಳ್ಳಿಗರಿಗೆ ಇಷ್ಟೊಂದು ಹಣ ಭರಿಸುವ ಶಕ್ತಿ ಇದ್ದೀತು?

ಬಳ್ಳಾರಿಯ ಜೆಎಸ್‌ಡಬ್ಲ್ಯು ಇನ್‌ಸ್ಪೈರ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಕೌಶಲ ಹೆಚ್ಚಿಸಿ ಕೊಂಡು, ಒಲಿಂಪಿಕ್ಸ್‌ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದುಬಂದ ನೀರಜ್ ಚೋಪ್ರಾ ಈ ಕದಡಿದ ವಾತಾವರಣದಲ್ಲೂ ಆಮ್ಲಜನಕ ಇದೆ ಎನ್ನುವುದನ್ನು ಸಾಬೀತುಪಡಿಸಿದರು. ರಾಷ್ಟ್ರೀಯ ಶಿಬಿರದಲ್ಲಿ ಅವರು ತೋರಿದ ಬದ್ಧತೆಯಿಂದಲೇ ಇಷ್ಟು ಎತ್ತರಕ್ಕೆ ಬೆಳೆಯಲು ಅವರಿಗೆ ಸಾಧ್ಯವಾದದ್ದು. ಜೆಎಸ್‌ಡಬ್ಲ್ಯುನಲ್ಲಿ ತರಬೇತಿ ನೀಡುವ ವಿದೇಶಿ ಕೋಚ್‌ಗೆ ಏನಿಲ್ಲವೆಂದರೂ ತಿಂಗಳಿಗೆ ₹ 6 ಲಕ್ಷ ನೀಡುತ್ತಾರೆ. ಇಂತಹ ಕಡೆ ತರಬೇತಿ ಪಡೆಯುವ ಆರ್ಥಿಕ ಚೈತನ್ಯ ಬಡ ಅಥ್ಲೀಟ್‌ಗಳಿಗೆ ಇಲ್ಲವೆನ್ನುವುದೂ ಸತ್ಯ.

ನಾಲ್ಕೂವರೆ ದಶಕ ಅಥ್ಲೀಟ್‌ಗಳಿಗೆ ತರಬೇತಿ ನೀಡಿರುವ, ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನ ರಾದ ಬೀಡು ಇಲ್ಲಿನ ಏಳುಬೀಳುಗಳನ್ನು ಕಂಡಿ ದ್ದಾರೆ. ಅವರ ಪ್ರಕಾರ 1970–80ರ ದಶಕದಲ್ಲಿಯೇ ಕರ್ನಾಟಕದ ಕ್ರೀಡಾಕ್ಷೇತ್ರ ಉತ್ತಮವಾಗಿತ್ತು. ಈಗಿನಂತೆ ಲೆವೆಲ್ ಒನ್, ಲೆವೆಲ್ ಟು ಎಂಬ ಕೋಚ್‌ಗಳಿಗೆ ಇರುವ ತರಬೇತಿ ಆಗ ಇರಲಿಲ್ಲ. ಒಂದು ವರ್ಷ ಸ್ಪರ್ಧೆಗೆ ಅಣಿಗೊಳಿಸುವ ಸೂಕ್ಷ್ಮಗಳನ್ನೆಲ್ಲ ಕೋಚ್‌ಗಳಿಗೆ ಕಲಿಸಲಾಗುತ್ತಿತ್ತು. ಈಗ ಕ್ರೀಡಾ ಮತ್ತು ಯುವಜನ ಇಲಾಖೆಯ ಆಯಕಟ್ಟಿನಲ್ಲಿರುವ ಎಷ್ಟೋ ಅಧಿಕಾರಿಗಳಿಗೆ ಸ್ಪರ್ಧೆಗಳನ್ನು ನೋಡುವ ಆಸಕ್ತಿಯೂ ಇಲ್ಲ.

ಐಪಿಎಸ್ ಅಧಿಕಾರಿಯಾಗಿದ್ದ ಎ.ಜೆ.ಆನಂದನ್‌ 1970–80ರ ದಶಕದಲ್ಲಿ ಕ್ರೀಡಾ ಮತ್ತು ಯುವಜನ ಇಲಾಖೆಯಲ್ಲಿ ಮಾಡಿದ ಕೆಲಸಗಳನ್ನು ಬೀಡು ಸ್ಮರಿಸುತ್ತಾರೆ. ಎಲ್ಲ ಕೋಚ್‌ಗಳ ಹೆಸರನ್ನು ಬಾಯಲ್ಲಿಟ್ಟುಕೊಂಡಿದ್ದ ಆನಂದನ್‌, ಪ್ರಮುಖ ಕ್ರೀಡಾಕೂಟಗಳನ್ನು ಆಸಕ್ತಿಯಿಂದ ನೋಡುತ್ತಿದ್ದರಂತೆ. 1982ರಲ್ಲಿ ದೆಹಲಿಯಲ್ಲಿ ಏಷ್ಯನ್ ಗೇಮ್ಸ್ ಯಶಸ್ವಿಯಾಗಿ ನಡೆದಿದ್ದರಲ್ಲಿ ಅವರ ಪಾಲೂ ಇತ್ತೆನ್ನುವುದನ್ನು ನೆನೆಯುತ್ತಾರೆ. ಇಂತಹ ಅಧಿಕಾರಿಗಳ ಅಗತ್ಯ ಕರ್ನಾಟಕಕ್ಕೆ ಇದೆ ಎನ್ನುವ ಅವರ ಅನುಭವ ಮಾತು ಬರೀ ಹಳಹಳಿಕೆಯಷ್ಟೆ ಅಲ್ಲ.

ಹರಿಯಾಣದಲ್ಲಿ ಅಥ್ಲೆಟಿಕ್ಸ್‌ನ ಎಲ್ಲ ಸ್ಪರ್ಧೆಗಳಲ್ಲಿ ನುರಿತವರನ್ನು ಅಣಿಗೊಳಿಸಲು ಕೋಚ್‌ ಗಳಿದ್ದಾರೆ. ಇಲ್ಲಿ ಜಿಮ್ನಾಸ್ಟಿಕ್ಸ್ ಕಲಿಸಲು ಯಾರೂ ಇಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಂತಿಮ ಹಂತ ಪ್ರವೇಶಿಸಿದ್ದ ಶ್ರೀಹರಿ ನಟರಾಜ್, ಈಜು ಕಲಿಕೆಯಲ್ಲಿನ ಲೋಪಗಳ ಕುರಿತು ಈಗಲೂ ಮುಕ್ತವಾಗಿ ವಿಶ್ಲೇಷಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಮುಂದಿನ ಒಲಿಂಪಿಕ್ಸ್‌ಗೆ 75 ಅರ್ಹರನ್ನು ಹೆಕ್ಕಿ, ಅಣಿಗೊಳಿಸುವ ಯೋಜನೆ ಯೊಂದನ್ನು ಕ್ರೀಡಾ ಸಚಿವರು ಪ್ರಕಟಿಸಿದ್ದಾರಷ್ಟೆ. ಅದು ಸಾಕಾರಗೊಳ್ಳಬೇಕಿದ್ದರೆ, ಮೂಲಸೌಕರ್ಯದ ಹುಳುಕುಗಳನ್ನೆಲ್ಲ ಮುಚ್ಚಬೇಕು. ಗ್ರಾಮೀಣ ಪ್ರತಿಭೆಗಳಿಗೆ ನೀರೆರೆಯಬೇಕು.

***

ತಮಿಳುನಾಡಿನ ನೆಹರೂ ಕ್ರೀಡಾಂಗಣವನ್ನು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಬಾಡಿಗೆಗೆ ಕೊಡುತ್ತಾರೆ. ಉಳಿದ ಅವಧಿ ಕ್ರೀಡಾಪಟುಗಳಿಗೆ ಮೀಸಲು. ಈ ಪದ್ಧತಿ ನಮ್ಮಲ್ಲೂ ಬರಬೇಕು

- ವಿಶ್ವನಾಥರಾವ್ ಬೀಡು, ಅಥ್ಲೆಟಿಕ್ಸ್ ತರಬೇತುದಾರ

ಒಲಿಂಪಿಕ್ಸ್‌ಗೆಂದೇ ಗುರುತಿಸಲಾಗುವ ಕ್ರೀಡಾಪಟುಗಳಿಗೆ ವಿಶೇಷ ಅಕಾಡೆಮಿ ರೂಪಿಸಿ, ಅವರಿಗೆ ಅಲ್ಲಿಯೇ ತರಬೇತಿ ನೀಡುವ ವ್ಯವಸ್ಥೆಯಾಗಬೇಕು

- ಜೆ.ಜೆ. ಶೋಭಾ, ಏಷ್ಯನ್ ಗೇಮ್ಸ್‌ ಪದಕ ವಿಜೇತ ಅಥ್ಲೀಟ್

***

ಇವುಗಳನ್ನೂ ಓದಿ

ಒಳನೋಟ–Interview| ಕ್ರೀಡೆ ಬಲ್ಲ ಅಧಿಕಾರಿಗಳ ನೇಮಕ: ಸಚಿವ ನಾರಾಯಣಗೌಡ

ಒಳನೋಟ–ಸಂದರ್ಶನ| ಪ್ರೋತ್ಸಾಹ ನೀಡದೇ ಪದಕ ನಿರೀಕ್ಷಿಸುವುದು ಸರಿಯೇ?: ಈಜುಪಟು

ಒಳನೋಟ| ಪರಿಸ್ಥಿತಿ ಸುಧಾರಿಸಿದೆ, ಪ್ರೋತ್ಸಾಹ ಸಿಗುತ್ತಿದೆ: ಪ್ರಿಯಾ ಮೋಹನ್‌

ಒಳನೋಟ| ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೇಕು ತರಬೇತಿ

ಒಳನೋಟ| ಕಾಡುವ ಕಾಲ: ಅಭ್ಯಾಸಕ್ಕೆ ಕೂಡದ ಸಕಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು