ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನಕ್ಕೆ ಸೀಮಿತವಾದ ನೀರಿನ ಘಟಕಗಳು: ‘ಶುದ್ಧ’ ನೀರು ಸದ್ದಷ್ಟೇ ಜೋರು

ನೀರು ಶುದ್ಧವೋ ಅಶುದ್ಧವೋ ಅಸ್ಪಷ್ಟ
Last Updated 30 ಜೂನ್ 2019, 2:20 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಘಟಕಗಳು ನಿಜಕ್ಕೂ ಹೇಗೆ ನಡೆಯುತ್ತಿವೆ; ಅಸಲಿಗೆ ಶುದ್ಧ ನೀರು ಪೂರೈಸುತ್ತಿವೆಯೇ; ಕೆಟ್ಟು ನಿಂತ ಘಟಕಗಳ ಕತೆಯೇನು; ಸಮಸ್ಯೆಯ ಮೂಲ ಎಲ್ಲಿದೆ ಎಂಬ ಬಗ್ಗೆ ಕ್ಷಕಿರಣ ಬೀರುವ ಯತ್ನ ಈ ವಾರದ ‘ಒಳನೋಟ’.

***

ಬೆಂಗಳೂರು: ಒಂದು ತೊಟ್ಟು ನೀರನ್ನೇ ಒಸರದ ಘಟಕಗಳು, ಶುರುವಾದ ದಿನದಿಂದ ಬೀಗ ಜಡಿದೇ ಇರುವ ಬಾಗಿಲುಗಳು, ಕೆಟ್ಟು ಹೋಗಿರುವ ಫಿಲ್ಟರ್‌ಗಳಿಂದ ಬರುತ್ತಿರುವ ಅಶುದ್ಧ ಜಲ, ನಿರ್ವಹಣೆ ಗುತ್ತಿಗೆ ಪಡೆದು ಪರಾರಿಯಾಗಿರುವ ಖಾಸಗಿ ಕಂಪನಿಗಳು...

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಶುದ್ಧ ಕುಡಿಯುವ ನೀರು ಘಟಕ’ಗಳ ನೈಜ ಚಿತ್ರಣ ಇದು. ಇಲ್ಲಿಯವರೆಗೆ ಇದಕ್ಕಾಗಿ ಅಂದಾಜು ₹1,500 ಕೋಟಿ ಖರ್ಚಾಗಿದೆ.

ಶುದ್ಧ ನೀರು ಕೊಡುತ್ತೇವೆ, ಅಚ್ಚುಕಟ್ಟು ರಸ್ತೆ ನಿರ್ಮಿಸುತ್ತೇವೆ, ಸ್ವರ್ಗವನ್ನೇ ನಿಮ್ಮ ಮುಂದೆ ತಂದಿಳಿಸುತ್ತೇವೆ ಎಂದೆಲ್ಲ ಭರವಸೆ ಕೊಡುವ ಸರ್ಕಾರದ ಪ್ರತಿನಿಧಿಗಳು ಯಥಾನುಶಕ್ತಿ ದುಡ್ಡು ಬಾಚುವುದಕ್ಕೆ ಹೊಸ ದಾರಿ ಹುಡುಕುತ್ತಲೇ ಇರುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸದ್ಯದ ಸ್ಥಿತಿ ನೋಡಿದರೆ ಹಣ ಮಾಡುವವರಿಗೆ ಇದೂ ಒಂದು ಹೊಸ ಮಾರ್ಗವಾಯಿತೇ ಎಂಬ ಸಂಶಯವೂ ಮೂಡುತ್ತದೆ.

ನಿರಂತರ ಬರದಿಂದ ಕಂಗೆಟ್ಟಿರುವ, ಮೈಲುಗಟ್ಟಲೇ ನಡೆದು ಕುಡಿಯುವ ನೀರಿನ ಸೆಲೆ ಎಲ್ಲಿದೆ ಎಂದು ಹುಡುಕಬೇಕಾದ ದುರ್ದಿನಗಳಲ್ಲೇ ಇರುವ ನಾಡಿನ ಜನರಿಗೆ ನೀರೆಂಬುದು ಅಮೃತಸಮಾನ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲರ ಸಂಕಲ್ಪ ಬಲದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯ ಯೋಜನೆ ರೂಪುಗೊಂಡಿತು. 2014ರಲ್ಲಿ ಇದಕ್ಕೆ ಚಾಲನೆಯನ್ನೂ ನೀಡಲಾಯಿತು. ಸಮರ್ಪಕವಾಗಿ ಅನುಷ್ಠಾನವಾಗಿದ್ದರೆ ಇದೊಂದು ಅದ್ಭುತ ಹಾಗೂ ಜನೋಪಕಾರಿ ಯೋಜನೆ ಕೂಡ.

ಐದು ವರ್ಷಗಳಲ್ಲಿ 13,597 ಇಂತಹ ಘಟಕಗಳು ಕಾರ್ಯಾರಂಭ ಮಾಡಿವೆ. ಈ ಪೈಕಿ 899 ಸ್ಥಗಿತವಾಗಿದ್ದರೆ, ಒಂದು ಸಾವಿರಕ್ಕೂ ಹೆಚ್ಚು ಘಟಕಗಳಲ್ಲಿ ನಿರ್ವಹಣೆ ಸಮಸ್ಯೆ ಇದೆ ಎಂಬುದು ಸರ್ಕಾರದ ಮಾಹಿತಿ. ಆದರೆ, ವಾಸ್ತವದಲ್ಲಿ 1,134 ಘಟಕಗಳು ಸ್ತಬ್ಧವಾಗಿವೆ.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಸಚಿವ ಸಂಪುಟ ಸಭೆ ಮುಂದೆ ಇತ್ತೀಚೆಗೆ ಚರ್ಚೆ ನಡೆದಿತ್ತು. ‘9,800 ಘಟಕಗಳನ್ನು ಅಧಿಕೃತವಾಗಿ ಆರಂಭಿಸಲಾಗಿದ್ದು, ಶೇ 10ರಷ್ಟು ಅಂದರೆ 980 ಘಟಕಗಳು ದುರಸ್ತಿ ಮಾಡಲಾಗದಷ್ಟು ಕೆಟ್ಟುಹೋಗಿವೆ. ಶೇ 25ರಷ್ಟು ಅಂದರೆ 2,250 ಘಟಕಗಳು ಸಣ್ಣಪುಟ್ಟ ದುರಸ್ತಿ ಮಾಡಿದರೆ ಮರು ಚಾಲನೆಗೊಳ್ಳಲಿವೆ. ಶೇ 50ರಷ್ಟು ಮಾತ್ರ ಸುಸ್ಥಿತಿಯಲ್ಲಿದ್ದು, ನೀರು ಪೂರೈಸಲು ಸಮರ್ಥವಾಗಿವೆ’ ಎಂಬ ಮಾಹಿತಿಯನ್ನು ಸಭೆ ಮುಂದೆ ಇಡಲಾಯಿತು.

‘ಲೆಕ್ಕಾಚಾರದಂತೆ 12 ಸಾವಿರ ಘಟಕಗಳು ಕಾರ್ಯಾರಂಭ ಮಾಡ ಬೇಕಾಗಿತ್ತು. 1400 ಘಟಕಗಳ ಸ್ಥಾಪನೆಗೆ ಈಗಷ್ಟೇ ಟೆಂಡರ್ ಕರೆಯಲಾಗಿದೆ’ ಎಂದು ಸಂಬಂಧಿಸಿದ ಅಧಿಕಾರಿ ವಿವರ ನೀಡಿದರು. ‘ಆಗ ಬಹುತೇಕ ಸಚಿವರು, ಘಟಕಗಳ ನಿರ್ವಹಣಾ ಹೀನ ಸ್ಥಿತಿಗಳ ಬಗ್ಗೆ ಕಿಡಿಕಾರಿದರು. 2014ರಲ್ಲಿ ಗುತ್ತಿಗೆ ಪಡೆದವರಿಗೆ 5 ವರ್ಷಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು. ಹಣ ಪಡೆದವರು ನಿರ್ವಹಣೆಯನ್ನೇ ಮಾಡದೇ ಪರಾರಿಯಾಗಿದ್ದಾರೆ. ಮೂರ್ನಾಲ್ಕು ವರ್ಷ ಹಳೆಯದಾದ ಘಟಕಗಳಲ್ಲಿ ಮೆಂಬ್ರೇನ್‌ ಫಿಲ್ಟರ್‌ ಕೆಟ್ಟು ನಿಂತಿವೆ. ಹೀಗಾಗಿ ನೀರು ಶುದ್ಧೀಕರಣವೇ ಆಗುತ್ತಿಲ್ಲ.

ಕೊಳವೆಬಾವಿಗಳಿಂದ ಬರುವ ನೀರಿಗೂ ಘಟಕದ ನೀರಿಗೂ ವ್ಯತ್ಯಾಸವೇ ಇಲ್ಲ. ಇದು ಜನರಿಗೆ ಗೊತ್ತಾಗುತ್ತಿಲ್ಲ. ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಅಶುದ್ಧ ನೀರು ಕೊಡುತ್ತಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದೂ ಸಚಿವರು ಅಸಮಾಧಾನ ಹೊರಹಾಕಿದರು’ ಎಂದು ಇಲಾಖೆ ಮೂಲಗಳು ಹೇಳಿವೆ.

ಪೂರ್ವಸಿದ್ಧತೆ ಕೊರತೆ: ಯೋಜನೆ ಅನುಷ್ಠಾನಗೊಳಿಸುವ ಮುನ್ನ ಇಲಾಖೆ ಸಾಕಷ್ಟು ಸಿದ್ಧತೆ ನಡೆಸದೇ ಇರುವುದು ಈಗ ಗೊತ್ತಾಗಿದೆ. ಇಡೀ ರಾಜ್ಯದಲ್ಲಿ ಜಲಮೂಲಗಳ ಮಾದರಿಗಳು ಭಿನ್ನ ವಾಗಿವೆ. ಅದರಲ್ಲಿರುವ ವಿಷಕಾರಿ ಅಥವಾ ರಾಸಾಯನಿಕಗಳು ಒಂದೇ ರೀತಿಯಲ್ಲಿಲ್ಲ. ಕೆಲವೆಡೆ ನೀರಿನಲ್ಲಿ ಲವಣಾಂಶ ಜಾಸ್ತಿ ಇದೆ. ಘಟಕ ಸ್ಥಾಪಿಸುವ ಮುನ್ನ ಆಯಾ ಭಾಗದಲ್ಲಿ ಇರುವ ನೀರಿನ ಗುಣಲಕ್ಷಣಗಳನ್ನು ಪರೀಕ್ಷೆಗೆ ಒಳಪಡಿಸಬೇಕಾಗಿತ್ತು. ಹೀಗೆ ಮಾಡಿದಲ್ಲಿ ಲಭ್ಯ ಜಲಮೂಲದ ನೀರಿಗೆ ಅನುಗುಣವಾಗಿ ಫಿಲ್ಟರ್‌ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಬಹುದಾಗಿತ್ತು. ಕೇವಲ 5–6 ಮಾದರಿಯನ್ನು ಪಡೆದು, ಅವುಗಳನ್ನೇ ಎಲ್ಲ ಜಿಲ್ಲೆಗಳ ಘಟಕಗಳಲ್ಲಿ ಹಾಕಿರುವುದರಿಂದಾಗಿ ಬಹುಬೇಗ ಕೆಟ್ಟುಹೋಗಿವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಫಿಲ್ಟರ್‌ಗಳು ಕೆಟ್ಟು ನಿಂತಿರುವುದರಿಂದಾಗಿ ಘಟಕದಿಂದ ಜನರು ಪಡೆಯುತ್ತಿರುವ ನೀರು ವಿಷ ಮುಕ್ತ, ರೋಗಾಣು ಇಲ್ಲದ ಅಥವಾ ಪರಿಶುದ್ಧ ಎಂಬುದನ್ನು ಹೇಳುವಂತಿಲ್ಲ. ಘಟಕದ ನೀರು ಶುದ್ಧೀಕರಣವಾಗಿರುತ್ತದೆ ಎಂದು ನಂಬಿ ಜನರು ಕುಡಿಯುತ್ತಿದ್ದಾರೆ. ಇದರ ಬಗ್ಗೆ ಇಲಾಖೆ ನಿಗಾವಹಿಸಿಲ್ಲ ಎಂದು ದೂರುಗಳೂ ಇವೆ.

ತುಮಕೂರು ಜಿಲ್ಲೆಗೆ ಶುದ್ಧ ಕುಡಿಯುವ ನೀರು ಬೇಕು ಎಂದು ಹೋರಾಟ ನಡೆಸಿ, ಕೋರ್ಟ್‌ ಮೊರೆ ಹೋಗಿದ್ದ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ. ನಾಗಭೂಷಣ ರೆಡ್ಡಿ ಅವರು ಈ ವಿಷಯದಲ್ಲಿ ತಮ್ಮದೇ ವಾದ ಮುಂದಿಡುತ್ತಾರೆ. ‘ಘಟಕಗಳ ನೀರಿನ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ಸರ್ಕಾರವೇ ನಿಗದಿಪಡಿಸಿದ ಮಾನದಂಡದ ಪ್ರಕಾರ ಎಲ್ಲಿಯೂ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಎಲ್ಲರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಸಮಸ್ಯೆ ಪರಿಹಾರಕ್ಕೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಅವರು ಅಸಹನೆವ್ಯಕ್ತಪಡಿಸುತ್ತಾರೆ.

ವಿಷಯುಕ್ತ ನೀರು ಮರಳಿ ಮಣ್ಣಿಗೆ!!

ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸಲು ನಿರ್ಮಿಸಿರುವ ಘಟಕಗಳಲ್ಲಿ ಸಂಸ್ಕರಣೆ ಬಳಿಕ ಹೊರಬಿಡಲಾಗುತ್ತಿರುವ ವಿಷ ಅಥವಾ ರಾಸಾಯನಿಕ ಯುಕ್ತ ನೀರನ್ನು ಮರಳಿ ಮಣ್ಣಿಗೇ ಇಳಿ ಬಿಡುತ್ತಿರುವುದು ಆತಂಕಕಾರಿ ಸಂಗತಿ.

ನೀರಿನ ಘಟಕಗಳನ್ನು ಸ್ಥಾಪಿಸುವ ತರಾತುರಿಯಲ್ಲಿ ಸಂಸ್ಕರಣೆ ಬಳಿಕ ಹೊರಹಾಕಬೇಕಾದ ನೀರನ್ನು ಎಲ್ಲಿ ಸುರಿಯುವುದು, ಅದರಿಂದಾಗುವ ಪರಿಣಾಮಗಳ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ. ಒಂದು ಸಾವಿರ ಲೀಟರ್‌ ಶುದ್ಧ ಕುಡಿಯುವ ನೀರು ಬೇಕೆಂದರೆ ಸರಿಸುಮಾರು 200 ಲೀಟರ್‌ ನೀರು ತ್ಯಾಜ್ಯವಾಗಿ ಮಾರ್ಪಡುತ್ತದೆ. ಅದನ್ನು ಗಿಡ ಬೆಳೆಸಲು ಕೂಡ ಬಳಸುವಂತಿಲ್ಲ. ಬಹುತೇಕ ಘಟಕಗಳಲ್ಲಿ ತ್ಯಾಜ್ಯ ನೀರನ್ನು ‍ಪಕ್ಕದಲ್ಲೇ ಬಿಡಲಾಗುತ್ತಿದೆ. ಈ ನೀರಿನಲ್ಲಿ ಸಾಂದ್ರೀಕರಣಗೊಂಡಿರುವ ರಾಸಾಯನಿಕಗಳು, ವಿಷಕಾರಿ ಅಂಶಗಳು ಶುದ್ಧೀಕರಣಕ್ಕೆ ಮುನ್ನ ಬಳಸುವ ಕೊಳವೆಬಾವಿಗಳ ಪಕ್ಕವೇ ಹರಿದು ಅಂತರ್ಜಲ ಸೇರುತ್ತಿವೆ ಎಂದು ಮೂಲಗಳು ಹೇಳಿವೆ.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನೇಕ ಸಚಿವರು ಗಮನ ಸೆಳೆದರು. ಕೂಡಲೇ ಗಾಬರಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಒಂದು ಕಡೆ ಶುದ್ಧ ಕುಡಿಯುವ ನೀರು ಕೊಡಲು ಮತ್ತೊಂದು ಕಡೆ ಅಂತರ್ಜಲಕ್ಕೆ ವಿಷ ಸೇರಿಸುತ್ತಿರುವುದು ಸರಿಯಲ್ಲ. ಈ ನೀರನ್ನು ಸಂಸ್ಕರಿಸಿ ಹೊರಬಿಡುವ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.

ಗೋಲ್‌ಮಾಲ್‌ಗೆ ಚೀನಾ ಫಿಲ್ಟರ್‌!

ಹೆಚ್ಚು ಲಾಭ ಪಡೆಯಲು ಮುಂದಾದ ಗುತ್ತಿಗೆದಾರರು ಕಳಪೆ ದರ್ಜೆಯ ಚೀನಾ ಫಿಲ್ಟರ್ ಅಳವಡಿಸಿದ್ದೇ ಸಮಸ್ಯೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ವಲಯದ ಅಭಿಪ್ರಾಯ.

ಯೋಜನೆ ಅನುಷ್ಠಾನಕ್ಕೆ ತಂದ ಮೊದಲ ವರ್ಷ ಒಂದು ಘಟಕದ ಸ್ಥಾಪನೆ ಹಾಗೂ ಐದು ವರ್ಷದ ನಿರ್ವಹಣೆಗಾಗಿ ₹12 ಲಕ್ಷದಿಂದ ₹15 ಲಕ್ಷ ನಿಗದಿ ಮಾಡಲಾಗಿತ್ತು. ಈ ಲೆಕ್ಕದಲ್ಲಿ 500 ಘಟಕಗಳ ಗುತ್ತಿಗೆ ನೀಡಲಾಗಿತ್ತು. ಅದಾದ ಬಳಿಕ 2000 ಘಟಕಗಳ ಸ್ಥಾಪನೆಗೆ ಟೆಂಡರ್ ಕರೆದಾಗ ₹8 ಲಕ್ಷಕ್ಕೆ ಇಳಿಸಲಾಯಿತು. ಐದು ವರ್ಷದ ನಿರ್ವಹಣೆ ಇಲ್ಲದೇ 1000 ಘಟಕಗಳ ಸ್ಥಾಪನೆ ಟೆಂಡರ್ ಕರೆದಾಗ ₹6.50 ಲಕ್ಷಕ್ಕೆ ಇಳಿಕೆ ಮಾಡಲಾಯಿತು.

ಮೊದಲ ಹಂತಗಳಲ್ಲಿ ಯೋಜನೆ ಯಶಸ್ವಿ ಹಾಗೂ ಜನ ಮೆಚ್ಚುಗೆ ಪಡೆದ ಮೇಲೆ ಅದರ ಬಗ್ಗೆ ಸರ್ಕಾರಕ್ಕೆ ನಿಗಾ ಕಡಿಮೆಯಾಯಿತು. ಕೆಲವು ಅಧಿಕಾರಿಗಳು, ಸರ್ಕಾರದಲ್ಲಿದ್ದ ಪ್ರಭಾವಿಗಳು ಇದರ ರುಚಿ ಕಂಡರು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪವೂ ವ್ಯಕ್ತವಾಯಿತು.

‘ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದವರು, ಅಧಿಕಾರಿಗಳ ಆಪ್ತರಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ ಎಂದು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ಆರೋಪಿಸಿದ್ದರು. ತತ್‌ಕ್ಷಣಕ್ಕೆ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಬಿಟ್ಟರೆ ಕಳಪೆ ಕಾಮಗಾರಿ ಹಾಗೂ ಗುತ್ತಿಗೆಯಲ್ಲಿ ಅಕ್ರಮ ಮಾಡಿದ್ದ ಪ್ರಭಾವಿಗಳು, ಗುತ್ತಿಗೆದಾರರು ಬಚಾವಾದರು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಕೆಆರ್‌ಡಿಐಎಲ್‌ ಉಪ ಗುತ್ತಿಗೆ ಕೊಟ್ಟ ಘಟಕಗಳಲ್ಲಿ ಬಹಳಷ್ಟು ಅಕ್ರಮಗಳು ನಡೆದಿವೆ. ಅನೇಕ ಕಡೆಗಳಲ್ಲಿ ನೀರು ಪೂರೈಕೆಯೇ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ತಂದು, ನೀರು ಬರುತ್ತಿದೆ ಎಂದು ತೋರಿಸಿ ಬಿಲ್ ಪಡೆಯಲಾಗಿದೆ ಎಂಬ ದೂರುಗಳು ಇವೆ.

ಅತ್ಯುತ್ತಮ ಗುಣಮಟ್ಟದ ಮೆಂಬ್ರೇನ್ ಫಿಲ್ಟರ್ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ₹75 ಸಾವಿರದಿಂದ ₹80 ಸಾವಿರದವರೆಗೆ ಇದೆ. ಚೀನಾ ಮಾಡೆಲ್‌ ಫಿಲ್ಟರ್‌ ನೋಡಲು ಅದೇ ರೀತಿ ಇದ್ದು, ಬೆಲೆ ಮಾತ್ರ ಗರಿಷ್ಠ ₹25 ಸಾವಿರ ಇದೆ. ಅನೇಕ ಕಡೆಗಳಲ್ಲಿ ಇದನ್ನೇ ಅಳವಡಿಸಿದ್ದು, ನೀರಿನ ಗುಣಮಟ್ಟವೇ ಎಕ್ಕುಟ್ಟಿ ಹೋಗಿದೆ. ಇದರಿಂದಾಗಿ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಇವುಗಳ ನಿರ್ವಹಣೆಯೇ ಕಷ್ಟವಾಗಿದೆ. ಎಲ್ಲ ಕಡೆಯ ನೀರನ್ನೂ ಪರೀಕ್ಷಿಸುವ ಗೋಜಿಗೆ ಹೋಗುತ್ತಿಲ್ಲ. ನೀರನ್ನು ಪೂರೈಸುವ ಜತೆಗೆ ಅದೆಷ್ಟು ಶುದ್ಧವಾಗಿದೆ, ರೋಗಾಣುಗಳಿಂದ ಹೊರತಾಗಿದೆಯೇ ಎಂಬುದನ್ನು ಪರೀಕ್ಷಿಸಲು ಸರ್ಕಾರ ಹೊಸ ಯಂತ್ರಾಂಗವನ್ನು ಸೃಜಿಸಬೇಕಿದೆ ಎಂಬ ಬೇಡಿಕೆಯೂ ಇದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT