ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಪಿಂಚಣಿ: ಇಳಿಗಾಲಕ್ಕೆ ಕಾಡುವ ಚಿಂತೆ; ಬೀದಿಗಿಳಿದ ನೌಕರರು

ಪಿಂಚಣಿ ಭವಿಷ್ಯಕ್ಕೆ ಸಾಲದು ಎನ್ನುವ ಕೂಗು
Last Updated 26 ನವೆಂಬರ್ 2022, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬಾಗೇಪಲ್ಲಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಕೇವಲ 1,322 ರೂಪಾಯಿ. ಬಾಳಿನ ಮುಸ್ಸಂಜೆಯಲ್ಲಿ ಆರ್ಥಿಕ ಅಭದ್ರತೆ ಬದುಕಿನ ನೆಮ್ಮದಿ ಕಸಿದುಕೊಂಡಿರುವುದು ಆತಂಕ ಮೂಡಿಸಿದೆ. ಬಾಗಲಕೋಟೆಯ ನಿವೃತ್ತ ಪಿಎಸ್‌ಐವೊಬ್ಬರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಬಳಿಕ ಪೊಲೀಸ್‌ ಇಲಾಖೆ ಸೇರಿದ್ದರು. ಈಗ ಇವರಿಗೆ ದೊರೆಯುತ್ತಿರುವ ಪಿಂಚಣಿ 2,500 ರೂಪಾಯಿ.

ಹೊಸ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ತಂದ ಆಪತ್ತು ಇದು ಎನ್ನುವುದು ರಾಜ್ಯ ಸರ್ಕಾರಿ ನೌಕರರ ಅಳಲು. ‘ಈಗಿನ ದುಬಾರಿ ಯುಗದಲ್ಲಿಪುಡಿಗಾಸಿನ ಪಿಂಚಣಿಯಲ್ಲಿ ಬದುಕಲು ಸಾಧ್ಯವೇ? ಏರುತ್ತಿರುವ ಬೆಲೆ, ದುಬಾರಿಯಾದ ಚಿಕಿ‌ತ್ಸೆ, ಇಳಿಯುತ್ತಿರುವ ಠೇವಣಿ ಮೇಲಿನ ಬ್ಯಾಂಕ್‌ ಬಡ್ಡಿ ದರದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವೇ’ ಎನ್ನುವ ಪ್ರಶ್ನೆಯನ್ನು ನೌಕರರು ಮುಂದಿಡುತ್ತಾರೆ.ಎನ್‌ಪಿಎಸ್‌ ಹಣಕಾಸಿನ ಸಂಕಷ್ಟದ ಜತೆ ಸಾಮಾಜಿಕ ಅಭದ್ರತೆಯನ್ನೂ ಸೃಷ್ಟಿಸಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ.

ಎನ್‌ಪಿಎಸ್‌ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನೇ (ಒಪಿಎಸ್‌) ಜಾರಿಗೊಳಿಸುವಂತೆ ನೌಕ
ರರು ನಡೆಸುತ್ತಿರುವ ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉದ್ಯೋಗದ ಭದ್ರತೆಯಲ್ಲಿ ಸಂಭ್ರಮಿ ಸುವ ಸರ್ಕಾರಿ ನೌಕರರು ಎನ್‌ಪಿಎಸ್‌ ತಮ್ಮ ಬದುಕಿಗೆ ಮಾರಕ ಎಂದೇ ಪ್ರತಿಪಾದಿಸುತ್ತಿದ್ದಾರೆ.

ಈ ಪಿಂಚಣಿ ಯೋಜನೆ ಪ್ರಮುಖ ರಾಜಕೀಯ ವಿಷಯವಾಗಿಯೂ ಪರಿವರ್ತನೆಗೊಂಡಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತ ಸೆಳೆಯುವ ತಂತ್ರವಾಗಿ ಒಪಿಎಸ್‌ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಸರ್ಕಾರಿ ನೌಕರರಿಗೆ ಭರವಸೆಯ ಮಹಾಪೂರವನ್ನೇ ಹರಿಸುತ್ತಿವೆ. ಪಂಜಾಬ್‌, ರಾಜಸ್ಥಾನ, ಛತ್ತೀಸಗಡ, ಜಾರ್ಖಂಡ್‌ ರಾಜ್ಯ ಸರ್ಕಾರಗಳು ಎನ್‍ಪಿಎಸ್ ರದ್ದುಪಡಿಸಿವೆ. ಪಶ್ಚಿಮ ಬಂಗಾಳದಲ್ಲಿ ಎನ್‌ಪಿಎಸ್‌ ಜಾರಿಗೊಳಿಸಿಯೇ ಇಲ್ಲ.

ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಲು ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರ ಅನುಮೋ ದನೆ ನೀಡಿದೆ. 2004ರಲ್ಲಿ ಪಂಜಾಬ್‌ನಲ್ಲಿ ಈ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಎನ್‌ಪಿ ಎಸ್‌ ವಂತಿಗೆ ₹16,746 ಕೋಟಿ ಸಂಗ್ರಹವಾಗಿದ್ದು, ಈ ಮೊತ್ತವನ್ನು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ) ಮರುಪಾವತಿಸಬೇಕು ಎಂದು ಪಂಜಾಬ್‌ ಸರ್ಕಾರ ಕೋರಿದೆ. ಛತ್ತೀಸಗಡ ಸರ್ಕಾರ ಸಹ ತನ್ನ ನೌಕರರ ₹17 ಸಾವಿರ ಕೋಟಿ ಮೊತ್ತವನ್ನು ಮರುಪಾವತಿಸುವಂತೆ ಮನವಿ ಮಾಡಿದೆ. ಈ ಮೊತ್ತವನ್ನು ಸಾಮಾನ್ಯ ಭವಿಷ್ಯ ನಿಧಿಯಲ್ಲಿ(ಜಿಪಿಎಫ್‌) ತೊಡಗಿಸಲಾಗುವುದು ಎಂದು ಅದು ತಿಳಿಸಿದೆ.

ಗುಜರಾತ್‌ನಲ್ಲಿಯೂ ಅಧಿಕಾರಕ್ಕೆ ಬಂದರೆ ಒಪಿಎಸ್‌ ಮರುಜಾರಿಗೊಳಿ ಸುವುದಾಗಿ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ನೌಕರರಿಗೆ ಭರವಸೆ ನೀಡುತ್ತಿವೆ. ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣಾ ಪ್ರಚಾರ ದಲ್ಲೂ ಇದೇ ವಿಷಯ ಪ್ರಮುಖ ಚರ್ಚೆಗೆ ಕಾರಣವಾಗಿತ್ತು. ಅಸ್ಸಾಂನಲ್ಲೂ ಸರ್ಕಾರಿ ನೌಕ ರರು ಒಪಿಎಸ್‌ ಜಾರಿಗೆ ನಿರಂತರ ಹೋರಾಟ ನಡೆಸುತ್ತಿದ್ದಾರೆ.

‘ಹಳೇ ಪಿಂಚಣಿ ವ್ಯವಸ್ಥೆಯಲ್ಲಿ ಕೊನೆಯ ತಿಂಗಳ ಸಂಬಳದ ಅರ್ಧದಷ್ಟಾದರೂ ಪಿಂಚಣಿ ದೊರೆಯುವುದು ನಿಶ್ಚಿತವಾಗಿತ್ತು. ಜತೆಗೆ, ಸರ್ಕಾರ ಆಗಾಗ ಕೈಗೊಳ್ಳುವ ನಿರ್ಧಾರದಂತೆ ಇತರ ಭತ್ಯೆಗಳ ಹೆಚ್ಚಳದ ಸೌಲಭ್ಯ ದೊರೆಯುತ್ತಿತ್ತು. ಆದರೆ, ಎನ್‌ಪಿಎಸ್‌ ಹಣಕಾಸಿನ ಸಂಕಷ್ಟದ ಜತೆ ಸಾಮಾಜಿಕ ಅಭದ್ರತೆ ಸೃಷ್ಟಿಸಿದೆ. ಪುಡಿಗಾಸಿನ ಪಿಂಚಣಿಯಲ್ಲಿ ಬದುಕುವುದು ಹೇಗೆ? ಬಾಳಿನ ಸಂಧ್ಯಾ ಕಾಲದಲ್ಲಿ ನಮ್ಮ ಗೌರವ ಮತ್ತು ಘನತೆ ಉಳಿಸುವುದು ಸರ್ಕಾರದ ಹೊಣೆಗಾರಿಕೆಯಲ್ಲವೇ’ ಎಂದು ನೌಕರರು ಪ್ರಶ್ನಿಸುತ್ತಾರೆ.

ಚಿತ್ರ
ಚಿತ್ರ

ರಾಜ್ಯದಲ್ಲಿ ಎನ್‌ಪಿಎಸ್‌ ಜಾರಿಯಾಗಿ 16 ವರ್ಷಗಳು ಸಂದಿವೆ. 2006ರ ಏಪ್ರಿಲ್‌ 1ರಿಂದ ಸೇರಿದ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ಜಾರಿಗೊಳಿಸಲಾಗಿದೆ. ಸುಮಾರು 2.5 ಲಕ್ಷ ನೌಕರರು ಈ ವ್ಯವಸ್ಥೆ ವ್ಯಾಪ್ತಿಯಲ್ಲಿದ್ದಾರೆ. ಈ ಯೋಜನೆ ಅಡಿಯಲ್ಲಿ ಮೂಲ ವೇತನದಲ್ಲಿನ ಶೇ 10ರಷ್ಟು ವಂತಿಗೆಯನ್ನು ನೌಕರರು ಹಾಗೂ ಶೇ 14ರಷ್ಟು ವಂತಿಗೆಯನ್ನು ಸರ್ಕಾರ ಪಾವತಿಸುತ್ತದೆ.

ಎನ್‌ಪಿಎಸ್‌ಗೆ ಒಳಪಟ್ಟು ನಿವೃತ್ತಿಗೊಂಡಿರುವ ಹಲವು ನೌಕರರು ಮಾಸಿಕ ಪಡೆಯುತ್ತಿರುವ ಪಿಂಚಣಿ ಮೊತ್ತವು ವೃದ್ಧಾಪ್ಯ ವೇತನ ಯೋಜನೆಯಡಿ ಪಡೆಯುವ ಮೊತ್ತದಷ್ಟಿದೆ. ಇದಕ್ಕೆ ಕಳೆದ ಏಪ್ರಿಲ್‌ನಲ್ಲಿ ನಿವೃತ್ತರಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬದನಗೋಡು–ಕಾನಗೋಡು ಗ್ರಾಮದ ಮುತ್ತು ಪೂಜಾರಿ ಅವರ ಪಿಂಚಣಿ ಮೊತ್ತವೇ ಒಂದು ನಿದರ್ಶನ.

ಗ್ರಾಮ ಪಂಚಾಯಿತಿಯ ಬಿಲ್‌ ಕಲೆಕ್ಟರ್‌ ಆಗಿ 1989ರಲ್ಲಿ ಕೆಲಸಕ್ಕೆ ಸೇರಿದ್ದ ಅವರಿಗೆ 20 ವರ್ಷಗಳ ಬಳಿಕ ‘ಕಾರ್ಯದರ್ಶಿ’ ಹುದ್ದೆಗೆ ಬಡ್ತಿ ದೊರೆಯಿತು. 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದಾಗ ಎನ್‌ಪಿಎಸ್‌ನಲ್ಲಿ ವೃದ್ಧಿಸಿದ್ದ ಅವರ ಒಟ್ಟು ಮೊತ್ತ ₹ 7.39 ಲಕ್ಷ. ಸರ್ಕಾರದ 60:40ರ ಮಾನದಂಡದಡಿ ಶೇ 60ರಷ್ಟು ಹಣವನ್ನು ಅವರು ವಾಪಸ್‌ ಪಡೆದರು. ಉಳಿದ ಶೇ 40ರಷ್ಟು ಹಣಕ್ಕೆ ಅವರಿಗೆ ಲಭಿಸುತ್ತಿರುವ ಮಾಸಿಕ ಪಿಂಚಣಿ ಒಂದು ಸಾವಿರ ರೂಪಾಯಿ.

‘ಹಳೆ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದ್ದರೆ ನನಗೆ ಮಾಸಿಕ ₹ 15 ಸಾವಿರವರೆಗೆ ಪಿಂಚಣಿ ಸಿಗುತ್ತಿತ್ತು. ವಾರ್ಷಿಕ ತುಟ್ಟಿಭತ್ಯೆಯೂ ಅದಕ್ಕೆ ಸೇರ್ಪಡೆಯಾಗುತ್ತಿತ್ತು. ಮೂರು ದಶಕಗಳ ಕಾಲ ಸರ್ಕಾರಿ ಕೆಲಸ ಮಾಡಿದ ಬಳಿಕ ಅತ್ಯಲ್ಪ ಮೊತ್ತವು ಕನಿಷ್ಠ ಅಡುಗೆ ಅನಿಲ ಸಿಲಿಂಡರ್‌ ಖರೀದಿಗೂ ಸಾಕಾಗುವುದಿಲ್ಲ. ಇನ್ನು ಆರೋಗ್ಯ ಚಿಕಿತ್ಸೆಗೆ ಎಲ್ಲಿಂದ ಹಣ ತರಬೇಕು’ ಎಂದು ಮುತ್ತು ಪೂಜಾರಿ ನೋವು ತೋಡಿಕೊಳ್ಳುತ್ತಾರೆ.

ಕಾಯ್ದೆ ಮೂಲಕ ಯೋಜನೆ ಜಾರಿ:ಎನ್‌ಪಿಎಸ್‌ ಜಾರಿಗೊಳಿಸುವ ಉದ್ದೇಶದಿಂದ 'ಪಿಎಫ್‌ಆರ್‌ಡಿಎ' ಕಾಯ್ದೆ ರೂಪಿಸಲಾಯಿತು. ಆದರೆ, ಇದಕ್ಕೂ ಮೊದಲೇ ಕೇಂದ್ರ ಸರ್ಕಾರ 2003ರ ಅಕ್ಟೋಬರ್‌ 29ರಂದು ಕಾರ್ಯಾದೇಶದ ಮೂಲಕ ಪ್ರಾಧಿಕಾರ ಸ್ಥಾಪಿಸಿತ್ತು. ಎನ್‌ಡಿಎ ಸರ್ಕಾರದ ಈ ಆದೇಶವನ್ನು ಯುಪಿಎ ಸರ್ಕಾರವೂ ಯಾವುದೇ ಬದಲಾವಣೆಗಳಿಲ್ಲದೆಯೇ ಮುಂದುವರಿಸಿತು. 2004ರ ಜನವರಿ 1ರಿಂದ ನೇಮಕವಾಗುವ ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ನಿವೃತ್ತಿ ಯೋಜನೆ ಜಾರಿಗೊಳಿಸಲಾಯಿತು. ಈಗಾಗಲೇ 27 ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ಜಾರಿಗೊಳಿಸಿವೆ.

ಎನ್‌ಪಿಎಸ್‌ ‘ಹೂಡಿಕೆ ಆಧಾರಿತ’ ಯೋಜನೆಯಾಗಿದ್ದು, ಸರ್ಕಾರ ಮತ್ತು ನೌಕರರ ನಡುವಣ ಸಂಬಂಧವನ್ನು ಕಡಿಮೆಗೊಳಿಸಿ, ‘ಸಹಜೀವನ’ ರೀತಿಯ ಪದ್ಧತಿ ರೂಪಿಸಲಾಗಿದೆ. ಇನ್ನೊಂದೆಡೆ ಸರ್ಕಾರದ ಹುದ್ದೆಗಳನ್ನು ಕಡಿಮೆ ಮಾಡುವ ಹುನ್ನಾರವೂ ಈ ಯೋಜನೆಯಲ್ಲಿ ಅಡಗಿದೆ. ಷೇರು ಮಾರುಕಟ್ಟೆಯಲ್ಲಿ ನೌಕರರ ಹಣವನ್ನು ಹೂಡುವುದರಿಂದ ಖಾಸಗಿ ಕಂಪನಿಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಬಳಸಿಕೊಳ್ಳುತ್ತಿವೆ’ ಎಂದು ನೌಕರರು ವಿಶ್ಲೇಷಿಸುತ್ತಾರೆ.

‘ಎನ್‌ಪಿಎಸ್‌ ವ್ಯವಸ್ಥೆಯನ್ನು ಪಿಂಚಣಿ ದೃಷ್ಟಿಕೋನಕ್ಕೆ ಮಾತ್ರ ಸೀಮಿತಗೊಳಿಸಬಾರದು. ಇಡೀ ಸರ್ಕಾರಿ ವಲಯವನ್ನು ಹಂತ ಹಂತವಾಗಿ ದುರ್ಬಲಗೊಳಿಸುವ ಹುನ್ನಾರವೂ ಇದರಲ್ಲಿದೆ. ಉದ್ಯೋಗದ ಅಭದ್ರತೆ ಸೃಷ್ಟಿಸುವ ಪ್ರಯತ್ನ ಇದಾಗಿದೆ. ಆಡಳಿತ ಸುಧಾರಣೆ ಹೆಸರಿನಲ್ಲಿ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಸರ್ಕಾರಗಳು ಮುಂದಾದಾಗ ನೌಕರರನ್ನೇ ಮೊದಲು ಗುರಿಯಾಗಿರಿಸಿಕೊಳ್ಳಲಾಯಿತು. ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಹುದ್ದೆಗಳನ್ನು ಕಡಿತಗೊಳಿಸುವ ಯೋಜನೆಗಳನ್ನು ರೂಪಿಸಲಾಯಿತು. ಸರ್ಕಾರಿ ನೌಕರಿಗೆ ಇರುವ ಆಕರ್ಷಣೆ ಕಡಿಮೆಗೊಳಿಸಬೇಕು ಎನ್ನುವ ಉದ್ದೇಶವೂ ಇದರಲ್ಲಿ ಅಡಗಿದೆ. ಖಾಸಗಿ ವಲಯವನ್ನು ಬಲಿಷ್ಠಗೊಳಿಸುವುದು ಈ ವ್ಯವಸ್ಥೆಯ ಪ್ರಮುಖ ಅಂಶ’ ಎನ್ನುವುದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ಅವರ ಅಭಿಪ್ರಾಯ.

‘ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಪ್ರತಿ ತಿಂಗಳು ಸರ್ಕಾರ ಈಗ ₹350ಕೋಟಿಯಿಂದ ₹400 ಕೋಟಿ ಮೊತ್ತವನ್ನು ಎನ್‌ಪಿಎಸ್‌ಗಾಗಿ ತೆಗೆದಿಡುತ್ತಿದೆ. ಜತೆಗೆ, ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಹಣವನ್ನು ಠೇವಣಿಯಾಗಿ ಇರಿಸಿರುವುದರಿಂದ ಸೇವಾ ಶುಲ್ಕ ರೂಪದ‌ಲ್ಲಿ ಒಂದು ವರ್ಷಕ್ಕೆ ₹4 ಕೋಟಿಗೂ ಹೆಚ್ಚು ಮೊತ್ತವನ್ನು ನೀಡಲಾಗುತ್ತಿದೆ. ನಮ್ಮ ದುಡ್ಡು ನಿರ್ವಹಿಸಲು ಎನ್‌ಎಸ್‌ಡಿಎಲ್‌ಗೆ ನಾಲ್ಕು ಕೋಟಿ ನೀಡಲಾಗುತ್ತಿದೆ. ಎನ್‌ಪಿಎಸ್‌ ಟ್ರಸ್ಟ್‌ನಲ್ಲಿ ಈಗಾಗಲೇ ವಂತಿಗೆಯ ಮೊತ್ತವೇ ₹14 ಸಾವಿರ ಕೋಟಿಗೂ ಹೆಚ್ಚು ಇದೆ. ಒಪಿಎಸ್‌ ಜಾರಿಯಾದರೆ ವಂತಿಗೆ ನೀಡುವುದು ತಪ್ಪುತ್ತದೆ ಮತ್ತು ಎನ್‌ಪಿಎಸ್‌ ರದ್ದುಗೊಳಿಸಿದಾಗ ಈ ಹಣವೂ ವಾಪಸ್‌ ಬಡ್ಡಿ ಸಮೇತ ದೊರೆಯುತ್ತದೆ. ಇದನ್ನು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೂ ಬಳಸಬಹುದು. ಜತೆಗೆ, ಸಾಮಾನ್ಯ ಭವಿಷ್ಯ ನಿಧಿಗೆ (ಜಿಪಿಎಫ್‌) ಪರಿವರ್ತಿಸಿದರೆ ಎರಡು ವರ್ಷ ಹಣವನ್ನು ವಾಪಸ್‌ ತೆಗೆದುಕೊಳ್ಳದಿರಲು ನೌಕರರು ಸಿದ್ಧರಿದ್ದಾರೆ’ ಎಂದು ಶಾಂತಾರಾಮ್‌ ಹೇಳುತ್ತಾರೆ.

ಹೊಸ‍ಪಿಂಚಣಿ ವ್ಯವಸ್ಥೆಯಿಂದ ಕೆಳ ಹಂತದ ನೌಕರರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಐಎಎಸ್‌, ಐಪಿಎಸ್‌ ಮಟ್ಟದ ಅಧಿಕಾರಿಗಳು ಮೌನವಹಿಸಿದ್ದಾರೆ ಎನ್ನುವುದು ಶಾಲಾ ಶಿಕ್ಷಕರು ಸೇರಿದಂತೆ ಹಲವು ವರ್ಗಗಳ ನೌಕರರ ಆರೋಪ.

ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರಲ್ಲಿ ಶೇ 50ಕ್ಕಿಂತ ಹೆಚ್ಚು ಶಿಕ್ಷಕರಿದ್ದಾರೆ. ವೃಂದ ಎ, ಮತ್ತು ಬಿ ನೌಕರರಿಗೆ ಹೆಚ್ಚಿನ ವೇತನ ಸೌಲಭ್ಯಗಳು ದೊರೆಯುವ ಕಾರಣ ಅವರಿಗೆ ಪಿಂಚಣಿ ಒಂದು ಸಮಸ್ಯೆಯೇ ಅಲ್ಲ ಎನ್ನುವುದು ಶಿಕ್ಷಕರ ಸಂಘದ ಪದಾಧಿಕಾರಿಗಳ ವಾದ.

ಕಾಯ್ದೆ ಅವಕಾಶ ನೀಡುವುದಿಲ್ಲ: ರಾಜ್ಯ ಸರ್ಕಾರಗಳು ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡುವ ನಿರ್ಧಾರ ಕೈಗೊಂಡರೂ, ಕೇಂದ್ರ ಸರ್ಕಾರದ ಪಿಎಫ್‌ಆರ್‌ಡಿಎ ಕಾಯ್ದೆ ಅದಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದಾಗಿ,ನೌಕರರಿಂದ ಸಂಗ್ರಹಿಸಿದ್ದ ಎನ್‌ಪಿಎಸ್‌ ವಂತಿಗೆ ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.ಪಿಎಫ್‌ಆರ್‌ಡಿಎ ಕಾಯ್ದೆಯೇ ಇದಕ್ಕೆ ಅಡ್ಡಿಯಾಗಲಿದೆ. ಕೇಂದ್ರ ಸರ್ಕಾರ ಪಿಎಫ್‌ಆರ್‌ಡಿಎ ಕಾಯ್ದೆಗೆತಿದ್ದುಪಡಿ ತರಬೇಕು ಎನ್ನುವುದು ದೇಶದಾದ್ಯಂತ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಹಳೇ ಪಿಂಚಣಿ ಮರುಸ್ಥಾಪನಾ ಸಂಯುಕ್ತರಂಗದ ಒತ್ತಾಯ.

‘ಎನ್‌ಪಿಎಸ್‌ ರದ್ದುಪಡಿಸಿರುವ ರಾಜ್ಯಗಳ ನೌಕರರು ನೀಡಿದ್ದ ವಂತಿಗೆಯನ್ನು ಹಿಂದಿರುಗಿಸಲುಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರಾಕರಿಸಿದೆ. ಮರಳಿಸುವ ಅಧಿಕಾರ ತನಗಿಲ್ಲ ಎಂದು ಪ್ರತಿಕ್ರಿಯಿಸಿದೆ. ಈಗಾಗಲೇ ನೌಕರರಿಂದ ಸಂಗ್ರಹಿಸಿದ ಹಣವನ್ನು ಕೇಂದ್ರ ಸರ್ಕಾರ ಷೇರು ಮಾರುಕಟ್ಟೆ ಮೇಲೆ ವಿನಿಯೋಗಿಸಿದೆ. ಇದರಿಂದ ಕಾಯ್ದೆ ರದ್ದಾಗದ ಹೊರತು ರಾಜ್ಯಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಕಾನೂನು ಸಮ್ಮತಿ ದೊರೆಯದು. ನೀಡಿರುವ ಹಣಕ್ಕೆ ಖಾತ್ರಿಯೂ ಸಿಗದು, ಹಳೇ ಪದ್ಧತಿಯೂ ಜಾರಿಯಾಗದು’ ಎನ್ನುತ್ತಾರೆ ತೆಲಂಗಾಣ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಂಪತ್‌ಕುಮಾರ್ ಸ್ವಾಮಿ.

ಎನ್‌ಪಿಎಸ್‌ ಲೆಕ್ಕಾಚಾರ ಹೇಗೆ

ಎನ್‌ಪಿಎಸ್‌ ಜಾರಿಗೆ ಬರುವುದಕ್ಕಿಂತಲೂ ಮೊದಲು ಇದ್ದ ಪಿಂಚಣಿ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರಿಗೆ ನಿಶ್ಚಿತ ಮೊತ್ತವು ಪಿಂಚಣಿಯಾಗಿ ಸಿಗುತ್ತಿತ್ತು. ಆಗ, ತೆರಿಗೆದಾರರ ಹಣವನ್ನು ಬಳಸಿ ಈ ಪಿಂಚಣಿ ನೀಡಲಾಗುತ್ತಿತ್ತು. ಆದರೆ, ಎನ್‌ಪಿಎಸ್‌ ವ್ಯವಸ್ಥೆಯ ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ಸಿಗುತ್ತದೆ ಎಂಬುದನ್ನು ಒಂದೇ ಸಾಲಿನಲ್ಲಿ ಉತ್ತರಿಸುವುದು ಕಷ್ಟ.

ನೌಕರನು ಪ್ರತಿ ತಿಂಗಳು ಎನ್‌ಪಿಎಸ್‌ ಖಾತೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡುತ್ತಾನೆ, ಅದಕ್ಕೆ ಪ್ರತಿಯಾಗಿ ಉದ್ಯೋಗದಾತ ಸಂಸ್ಥೆ, ಇಲಾಖೆ ಅಥವಾ ಕಂಪನಿ ಎಷ್ಟು ಹಣವನ್ನು ಜಮಾ ಮಾಡುತ್ತದೆ ಹಾಗೂ ಆ ರೀತಿ ಜಮಾ ಆದ ಮೊತ್ತಕ್ಕೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕಬೇಕಾಗುತ್ತದೆ.

ಉದಾಹರಣೆಗೆ, ರವಿ (ಕಾಲ್ಪನಿಕ ವ್ಯಕ್ತಿ) ಎಂಬ ವ್ಯಕ್ತಿಗೆ ಈಗ 30 ವರ್ಷ ವಯಸ್ಸು ಎಂದು ಭಾವಿಸಿ. ರವಿ ಈಗಿಂದಲೇ ‍ಪ್ರತಿ ತಿಂಗಳು ₹ 3,000ವನ್ನು ಎನ್‌ಪಿಎಸ್‌ ಅಡಿಯಲ್ಲಿ ಹೂಡಿಕೆ ಮಾಡಲು ಆರಂಭಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವರ ಉದ್ಯೋಗದಾತರಿಂದಲೂ ಅಷ್ಟೇ ಮೊತ್ತ ಎನ್‌ಪಿಎಸ್‌ಗೆ ಜಮಾ ಆಗುತ್ತದೆ ಎಂದು ಭಾವಿಸಿ. ಅಂದರೆ, ಎನ್‌ಪಿಎಸ್‌ ಖಾತೆಗೆ ಜಮಾ ಆಗುವ ತಿಂಗಳ ಮೊತ್ತ ₹ 6,000. ಇಷ್ಟನ್ನು ರವಿ ಅವರು ತಮ್ಮ 60 ವರ್ಷ ವಯಸ್ಸಿನವರೆಗೆ ಮುಂದುವರಿಸುತ್ತಾರೆ ಎಂದು ಭಾವಿಸಿ. ಆಗ ಅವರು 60 ವರ್ಷ ವಯಸ್ಸಾಗುವ ಹೊತ್ತಿಗೆ ₹ 21.60 ಲಕ್ಷವನ್ನು ಹೂಡಿಕೆ ಮಾಡಿರುತ್ತಾರೆ. ಈ ಮೊತ್ತಕ್ಕೆ ವಾರ್ಷಿಕ ಶೇ 8ರಷ್ಟು ಲಾಭ ಸಿಗುತ್ತದೆ ಎಂದು ಅಂದಾಜಿಸಬಹುದು.

ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಹಣವನ್ನು ಷೇರುಪೇಟೆಯಲ್ಲಿಯೂ, ಸರ್ಕಾರದ ಬಾಂಡ್‌ಗಳಲ್ಲಿಯೂ ತೊಡಗಿಸಲಾಗುತ್ತದೆ. ಷೇರುಪೇಟೆಯಲ್ಲಿ ಹೆಚ್ಚಿನ ಮೊತ್ತ ತೊಡಗಿಸಿದರೆ ವಾರ್ಷಿಕವಾಗಿ ಶೇಕಡ 10ರಿಂದ
ಶೇ 12ರವರೆಗೆ ಲಾಭ ಪಡೆಯುವ ಸಾಧ್ಯತೆಯೂ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಲಾಭದಲ್ಲಿ ಏರಿಳಿತ ಇರುವ ಕಾರಣ 30 ವರ್ಷಗಳ ಅವಧಿಯಲ್ಲಿ ಶೇ 8ರಷ್ಟು ವಾರ್ಷಿಕ ಸರಾಸರಿ ಲಾಭ ಸಿಗುತ್ತದೆ ಎಂದು ಪರಿಗಣಿಸುವುದು ಎಂಬ ಮಾತನ್ನು ಹಣಕಾಸು ತಜ್ಞರು ಹೇಳುತ್ತಾರೆ.

ಎನ್‌ಪಿಎಸ್‌ನಲ್ಲಿ ರವಿ ತೊಡಗಿಸಿದ ಒಟ್ಟು ₹ 21.60 ಲಕ್ಷಕ್ಕೆ ಪ್ರತಿಯಾಗಿ 30 ವರ್ಷಗಳಲ್ಲಿ ₹ 67.45 ಲಕ್ಷ ಲಾಭ (ಅಂದರೆ ಬಡ್ಡಿ) ಸಿಕ್ಕಿರುತ್ತದೆ. ಅಂದರೆ, ನಿವೃತ್ತಿಯ ಸಂದರ್ಭದಲ್ಲಿ ರವಿಗೆ ಇಡುಗಂಟಿನ ರೂಪದಲ್ಲಿ ₹ 89.05 ಲಕ್ಷ ಸಿಗುತ್ತದೆ. ಈ ಮೊತ್ತದಲ್ಲಿ ಕನಿಷ್ಠ ಶೇಕಡ 40ರಷ್ಟನ್ನು ಮಾಸಿಕ ಪಿಂಚಣಿ ಕೊಡುವ ಆ್ಯನ್ಯುಟಿ ಯೋಜನೆಗಳಲ್ಲಿ ತೊಡಗಿಸಬೇಕು. ರವಿ ಅವರು ತಮಗೆ ಎನ್‌ಪಿಎಸ್‌ ಮೂಲಕ ದೊರೆತ ಅಷ್ಟೂ ಮೊತ್ತವನ್ನು (₹ 89.05 ಲಕ್ಷವನ್ನು) ಆ್ಯನ್ಯುಟಿ ಯೋಜನೆಯಲ್ಲಿ ತೊಡಗಿಸಿದರೆ, ಆ ಯೋಜನೆಯ ಅಡಿಯಲ್ಲಿ ವಾರ್ಷಿಕ ಶೇ 6ರಷ್ಟು ಬಡ್ಡಿ ಸಿಗುತ್ತದೆ ಎಂದಾದರೆ, ಅವರಿಗೆ ಪ್ರತಿ ತಿಂಗಳು ಸಿಗುವ ಪಿಂಚಣಿ ಮೊತ್ತ ₹ 44,529.

ಎನ್‌ಪಿಎಸ್‌ ಅಡಿಯಲ್ಲಿ ಸಿಗುವ ಪಿಂಚಣಿ ಮೊತ್ತಕ್ಕೂ, ನೌಕರ ನಿವೃತ್ತಿಯ ಸಂದರ್ಭದಲ್ಲಿ ಪಡೆಯುತ್ತಿದ್ದ ವೇತನಕ್ಕೂ ನೇರ ಸಂಬಂಧ ಇಲ್ಲ. ಆದರೆ, ನೌಕರ ಎನ್‌ಪಿಎಸ್‌ನಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದ್ದಾನೆ, ಅದಕ್ಕೆ ಎಷ್ಟು ಲಾಭ ಸಿಕ್ಕಿದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತ ತೀರ್ಮಾನವಾಗುತ್ತದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಪಿಎಫ್‌ಆರ್‌ಡಿಎ ಕಾಯ್ದೆಗೆ ತಿದ್ದುಪಡಿ ತರಬೇಕು

ರಾಷ್ಟ್ರೀಯ ಹಳೆ ಪಿಂಚಣಿ ಮರುಸ್ಥಾಪನಾ ಸಂಯುಕ್ತರಂಗ ಹಮ್ಮಿಕೊಂಡಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೈಜೊಡಿಸಿದೆ.ಎನ್‌ಪಿಎಸ್‌ ರದ್ದು ಮಾಡುವ ನಿರ್ಧಾರ ತೆಗೆದುಕೊಂಡರೂ, ವಂತಿಗೆ ಹಣ ಹಿಂಪಡೆಯಲು ಅವಕಾಶ ಇರುವುದಿಲ್ಲ. ಹೀಗಾಗಿ, ಪಿಎಫ್‌ಆರ್‌ಡಿಎ ಕಾಯ್ದೆಗೆ ಕೇಂದ್ರ ಸರ್ಕಾರ ತಕ್ಷಣ ತಿದ್ದುಪಡಿ ತರಬೇಕು. ದೇಶದ ಎಲ್ಲ ರಾಜ್ಯಗಳ ನೌಕರರಿಗೂ ‘ಒಂದೇ ರಾಷ್ಟ್ರ–ಒಂದೇ ಪಿಂಚಣಿ’ ಯೋಜನೆ ಅಳವಡಿಸಬೇಕು

ಸಿ.ಎಸ್.ಷಡಾಕ್ಷರಿ,ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.

***

ಎನ್‌ಪಿಎಸ್‌ನಿಂದ ಸಾಮಾಜಿಕ ಭದ್ರತೆಯೂ ಇಲ್ಲ

ನಿವೃತ್ತಿ ಹೊಂದಿದ ನಂತರ ಪಿಂಚಣಿಯ ಕಾರಣಕ್ಕೆ ಮಗ ಅಥವಾ ಮಗಳು ತಮ್ಮ ತಂದೆ, ತಾಯಿಯನ್ನು ನೋಡಿಕೊಳ್ಳಬಹುದು. ಇಲ್ಲದಿದ್ದರೆ ವೃದ್ಧಾಶ್ರಮಕ್ಕೂ ತಳ್ಳಬಹುದು. ಒಪಿಎಸ್‌ ನೌಕರದಾರರಿಗಿರುವ ಜಿಪಿಎಫ್‌ ಮೊತ್ತ ಬಹುದೊಡ್ಡ ಆಸರೆ. ಈ ಆಸೆಯೂ ಎನ್‌ಪಿಎಸ್‌ನವರಿಗಿಲ್ಲ. ನಾವು ಸೇವೆಯಲ್ಲಿಯಲ್ಲಿರುವಾಗಲೇ ಈ ಹಳೆ ಪಿಂಚಣಿ ಭಾಗ್ಯ ಒದಗಿ ಬಂದರೆ ನಾವು ಬದುಕಿರುವಷ್ಟು ಕಾಲವೂ ಹಸನಾದೀತು. ಮುಪ್ಪಿನಲ್ಲಿ ನಮಗಿರುವ ಆಧಾರ ಇದೇ ಅಲ್ಲವೇ? ಎನ್‌ಪಿಎಸ್‌ನಿಂದ ಭದ್ರತೆ ಇಲ್ಲ.

ಡಾ.ನಿಂಗಪ್ಪ ಮುದೇನೂರು,ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲ

ಸಂವಿಧಾನ ಬದ್ಧ ಹಕ್ಕು ಪಡೆಯಲು ಹೋರಾಟ’

ಸಂವಿಧಾನ ಬದ್ಧವಾಗಿ ದೊರೆಯುವ ನನ್ನ ದುಡ್ಡಿಗೆ ನಾನೇ ಒಡೆಯನಾಗಿರಬೇಕು. ಅದು ನನ್ನ ಹಕ್ಕು. ಆದರೆ, ಈಗ ಸರ್ಕಾರಿ ನೌಕರರನ್ನು ಬಲಿಪಶು ಮಾಡಲಾಗುತ್ತಿದೆ. ವಿಶ್ವಬ್ಯಾಂಕ್‌ ಮತ್ತು ಐಎಂಎಫ್‌ ಸೂಚನೆಗಳ ಅನ್ವಯ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಿದರೆ ಯಾವುದೇ ರೀತಿ ಕಾನೂನು ತೊಡಕುಗಳಿಲ್ಲ. ಇದು ಎನ್‌ಪಿಎಸ್‌ ಟ್ರಸ್ಟ್‌ ಮತ್ತು ಸರ್ಕಾರದ ನಡುವಣ ಒಪ್ಪಂದವಾಗಿರುವುದರಿಂದ ಸಮಸ್ಯೆ ಇಲ್ಲ

ಶಾಂತಾರಾಮ,ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ

___

ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಕೆ.ಎಚ್. ಓಬಳೇಶ್‌, ವಿಜಯ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT