ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ದರ ಏರಿಳಿತವೇ ಮೌಲ್ಯವರ್ಧನೆಗೆ ಕರಿನೆರಳು

Last Updated 18 ಡಿಸೆಂಬರ್ 2021, 19:19 IST
ಅಕ್ಷರ ಗಾತ್ರ

ಮಂಗಳೂರು: ಎರಡು ದಶಕಗಳಿಂದ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದರೂ, ಗ್ರಾಹಕ ಸಮೂಹವನ್ನು ಸೆಳೆಯುವಲ್ಲಿ ಇವು ಹಿಂದೆ ಬಿದ್ದಿವೆ. ಮಾರುಕಟ್ಟೆಯಲ್ಲಿ ದರ ಏರಿಳಿತವೇ ಇದಕ್ಕೆ ಕರಿನೆರಳಾಗಿದೆ ಎನ್ನುವುದು ತಜ್ಞರ ವಿಶ್ಲೇಷಣೆ.

ಅಡಿಕೆಯಿಂದ ಚಹಾ, ಚಾಕೊಲೇಟ್, ಉಪ್ಪಿನಕಾಯಿ, ಹೋಳಿಗೆ, ಮಧುಮೇಹ ನಿಯಂತ್ರಣಕ್ಕೆ ಪೌಡರ್, ವೈನ್, ಸಾಬೂನು, ಸೊಳ್ಳೆಬತ್ತಿ ಮೊದಲಾದ ಉತ್ಪನ್ನಗಳ ಪ್ರಯೋಗಗಳು ನಡೆದಿವೆ. ಅವುಗಳಲ್ಲಿ ‘ಅರೇಕಾ ಟೀ' ಹೊರತುಪಡಿಸಿ, ಇನ್ನುಳಿದ ಉತ್ಪನ್ನಗಳು ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರನ್ನು ಸೆಳೆದಿಲ್ಲ. ಬೆಳೆಯುವ ಪ್ರದೇಶಕ್ಕೆ ಸೀಮಿತಗೊಂಡು, ಅಡಿಕೆ ಅಗಿಯುವ ಉತ್ತರ ಭಾರತದ ರಾಜ್ಯಗಳಲ್ಲಿ ಈ ಉತ್ಪನ್ನಗಳು ಹೆಚ್ಚು ಪ್ರಚಾರಕ್ಕೆ ಬರದಿರುವುದು ಕೂಡ ಉಪ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಹಿನ್ನಡೆಯಾಗಿದೆ.

‘ಬದನಾಜೆ ಶಂಕರ ಭಟ್ಟರು ಸ್ವಂತ ವೆಚ್ಚದಲ್ಲಿ, ಅನೇಕ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಅಡಿಕೆ ಮೌಲ್ಯವರ್ಧನೆ ಕುರಿತು 2001ರಿಂದ ಪ್ರಯೋಗಗಳು ನಡೆಯುತ್ತಿವೆ. ಆದರೆ, ಅಡಿಕೆ ಮೇಲಿನ ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆ ಪ್ರಯತ್ನಗಳು ಅಷ್ಟಾಗಿ ನಡೆದಿಲ್ಲ. ಧಾರಣೆ ಕುಸಿತ ಕಂಡಾಗ ಮಾತ್ರ ಇಂತಹ ಪ್ರಯತ್ನಗಳಾಗುತ್ತವೆ. ಧಾರಣೆ ಏರುಗತಿಯಲ್ಲಿದ್ದಾಗ ಸಹ ಇದು ಮುಂದುವರಿದರೆ, ಬೆಲೆ ಬಿದ್ದಾಗ ಲಾಭವಾಗಬಹುದು. ಉತ್ಪಾದನೆಯಾಗುವ ಪ್ರದೇಶಕ್ಕಿಂತ, ಬಳಕೆಯಾಗುವ ಪ್ರದೇಶ ಮಾರುಕಟ್ಟೆಗೆ ಹೆಚ್ಚು ಸೂಕ್ತ. ಗ್ರಾಹಕರ ಮನಸ್ಥಿತಿ ಅರಿತು ಮಾರುಕಟ್ಟೆ ಬಗ್ಗೆ ಯೋಚಿಸಬೇಕು’ ಎನ್ನುತ್ತಾರೆ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ.

‘ಜರ್ಮನಿಯಲ್ಲಿ ರೇಸ್‌ ಕುದುರೆಗಳ ಆಹಾರಕ್ಕೆ ವಿಶೇಷ ಪೌಡರ್ ಬಳಸುತ್ತಾರೆ. ಅದೇ ಅಂಶಗಳು ಅಡಿಕೆಯಲ್ಲೂ ಇವೆ. ಈ ಉತ್ಪನ್ನದಿಂದ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಮತ್ತು ಅಡಿಕೆಯ ವ್ಯಾಪಕ ಬಳಕೆಯ ಸಾಧ್ಯತೆ ತೆರೆದುಕೊಳ್ಳುತ್ತದೆ. ಉತ್ಪಾದಕನಿಗೆ ಮಾರುಕಟ್ಟೆ ಕೌಶಲ ತಿಳಿಯದು. ಬಹುರಾಷ್ಟ್ರೀಯ ಕಂಪನಿಗಳ ಸಹಯೋಗವಿದ್ದರೆ, ಅಡಿಕೆ ಉತ್ಪನ್ನಗಳನ್ನು ಹೆಚ್ಚು ಪ್ರಚಲಿತಕ್ಕೆ ತರಬಹುದು’ ಎಂಬುದು ಅವರ ಅಭಿಮತ.

ಆರ್ಥಿಕ ನೆರವು ಕಡಿತ: ‘ತಿನಿಸುಗಳು ಮಾರುಕಟ್ಟೆಗೆ ಬಂದರೂ, ಅದಕ್ಕೆ ಬಳಕೆಯಾಗುವ ಅಡಿಕೆ ಪ್ರಮಾಣ ಕಡಿಮೆ. ಅಲ್ಲದೆ, ವೈಜ್ಞಾನಿಕ ಅಧ್ಯಯನ ನಡೆಯದ ವಿನಾ ಇವುಗಳ ಲಾಭವನ್ನು ನಿಖರವಾಗಿ ಹೇಳಲು ಆಗದು. 1970ರ ದಶಕದಲ್ಲಿ ಅಡಿಕೆ ಚೊಗರಿನಿಂದ ಬಣ್ಣ ತಯಾರಿಕೆಯ ಪ್ರಯೋಗ ನಡೆದಿತ್ತು. ಆದರೆ, ಇದು ವೆಚ್ಚದಾಯಕ. ಅಡಿಕೆಯಲ್ಲಿರುವ ಅಂಶಗಳ ಕುರಿತ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ, ಸಂಶೋಧನೆಗೆ ಸಿಗುತ್ತಿದ್ದ ಹಣಕಾಸಿನ ನೆರವು ತಗ್ಗಿದೆ. ಇದರಿಂದ ಸಂಶೋಧನೆಗೆ ಹಿನ್ನಡೆಯಾಗಿದೆ’ ಎನ್ನುತ್ತಾರೆ ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ. ರವಿ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT