ಸೋಮವಾರ, ಸೆಪ್ಟೆಂಬರ್ 26, 2022
20 °C
ಖ್ಯಾತನಾಮರ ಕೇಂದ್ರಗಳಿಗೆ ಅನುದಾನದ ಕೊರತೆ l ಆಜೀವ ಟ್ರಸ್ಟಿಗಳಂತಾದ ಪದಾಧಿಕಾರಿಗಳು

ಒಳನೋಟ | ಕಳಾಹೀನ ಟ್ರಸ್ಟ್‌ಗಳು - ನಾಮಬಲವೇ ಆಸ್ತಿ: ಕಾಯಕ ನಾಸ್ತಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ವೈವಿಧ್ಯವನ್ನು ಚಿರಸ್ಥಾಯಿಯಾಗಿಸಿ, ಯುವ ಸಮುದಾಯಕ್ಕೆ ಪ್ರೇರಣೆ ನೀಡಬೇಕೆಂಬ ಆಶಯದಿಂದ ರಚನೆಯಾದ ‌ಖ್ಯಾತ ನಾಮರ ಹೆಸರಿನ ಟ್ರಸ್ಟ್‌ಗಳು ಮೂಲ ಆಶಯವನ್ನೇ ಮರೆತಿವೆ. ಸದುದ್ದೇಶದಿಂದ ಸರ್ಕಾರ ರಚಿಸಿರುವ ಟ್ರಸ್ಟ್‌ಗಳ ಪೈಕಿ ಕೆಲವು ಕೆಲವರ ಸ್ವಯಾರ್ಜಿತ ಆಸ್ತಿಯಂತಾಗಿದ್ದರೆ, ಅನುದಾನದ ತಾರತಮ್ಯ, ಜಿಲ್ಲಾಧಿಕಾರಿಗಳ ನಿರಾಸಕ್ತಿ, ಅಧ್ಯಕ್ಷರ ವಯೋಸಹಜ ಅನಾರೋಗ್ಯ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಈ ಟ್ರಸ್ಟ್‌ಗಳ ಅಸ್ತಿತ್ವವೇ ಅಲುಗಾಡತೊಡಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ 24 ಟ್ರಸ್ಟ್, ಪ್ರತಿಷ್ಠಾನಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಟ್ರಸ್ಟ್‌ಗಳು ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ‘ಸಾಹಿತ್ಯ, ಸಂಗೀತ ಮತ್ತು ಕಲಾಲೋಕದಲ್ಲಿ ಪ್ರಜ್ವಲಿಸಿ, ಮರೆಯಾದವರ ಹೆಸರು ಚಿರಸ್ಥಾಯಿ ಆಗಬೇಕು. ಅಂತಹವರ ಕೊಡುಗೆ ಮತ್ತು ವಿಚಾರಧಾರೆ ಎಲ್ಲೆಡೆ ಪಸರಿಸಬೇಕು’ ಎಂಬುದು ಟ್ರಸ್ಟ್‌ಗಳ ಸ್ಥಾಪನೆಯ ಮೂಲ ಉದ್ದೇಶ. ಈ ಟ್ರಸ್ಟ್‌ಗಳ ಕಾರ್ಯವೈಖರಿ ಅನುಸಾರ ಇಲಾಖೆಯು ₹ 5 ಲಕ್ಷದಿಂದ 15 ಲಕ್ಷದವರೆಗೆ ವಾರ್ಷಿಕ ಅನುದಾನ ನೀಡುತ್ತಿದೆ.

ಭವನ ನಿರ್ಮಾಣ, ಸಮಗ್ರ ಸಾಹಿತ್ಯ ಸಂಪುಟ ಹೊರತರುವುದೂ ಸೇರಿ ವಿವಿಧ ವಿಶೇಷ ಯೋಜನೆಗಳಿಗೆ ಪ್ರತ್ಯೇಕವಾಗಿ ಸರ್ಕಾರದಿಂದ ಅನುದಾನ ಪಡೆಯಲು ಅವಕಾಶವಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ಪ್ರವಾಹ, ಬರ, ಕೋವಿಡ್ ಸೇರಿ ವಿವಿಧ ಕಾರಣಗಳನ್ನು ನೀಡಿ, ಅನುದಾನಕ್ಕೆ ಕತ್ತರಿ ಹಾಕುತ್ತಲೇ ಬರಲಾಗಿದೆ. ಇದರಿಂದಾಗಿ ಪ್ರಶಸ್ತಿ ಪ್ರದಾನದಂತಹ ಕಾರ್ಯಕ್ರಮಗಳಿಗೆ ಟ್ರಸ್ಟ್‌ಗಳು ಸೀಮಿತ ಆಗುತ್ತಿವೆ. ನೀಡಿದ ಅನುದಾನಕ್ಕೆ ಉತ್ತರದಾಯಿತ್ವವೂ ಇಲ್ಲವಾಗಿದೆ. ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳಿಂದ ಟ್ರಸ್ಟ್‌‌ಗಳ ಕಾರ್ಯವೈಖರಿ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆಯೂ ನಡೆಯುತ್ತಿಲ್ಲ. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯೂ ಆಗುತ್ತಿಲ್ಲ. ಇದರಿಂದಾಗಿ ಅನುದಾನದ ಬಳಕೆಯಲ್ಲಿ ಪಾರದರ್ಶಕತೆ ಮರೆಯಾಗುತ್ತಿದೆ ಎಂಬ ಆರೋಪ ಸಹ ಸಾಂಸ್ಕೃತಿಕ ವಲಯದಲ್ಲಿದೆ. 

ಧಾರವಾಡದ ಮಲ್ಲಿಕಾರ್ಜುನ ಮನ್ಸೂರ ಟ್ರಸ್ಟ್, ಡಿ.ವಿ.ಜಿ. ಪ್ರತಿಷ್ಠಾನ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಧಾರವಾಡದ ಡಾ.ಬಸವರಾಜ ರಾಜಗುರು ಟ್ರಸ್ಟ್ ಸೇರಿ ಕೆಲ ಟ್ರಸ್ಟ್‌ಗಳಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಕಾರ್ಯದೊತ್ತಡಗಳಿಂದ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಕಡೆ ಅವರು ಗಮನ ಹರಿಸುತ್ತಿಲ್ಲ. ಇದರಿಂದಾಗಿ ಕೆಲ ಟ್ರಸ್ಟ್‌ಗಳು ನೀಡಲಾದ ವಾರ್ಷಿಕ ಅನುದಾನವನ್ನೂ ಉಳಿಸಿಕೊಳ್ಳುತ್ತಿವೆ.

ಇನ್ನು ಕೆಲ ಟ್ರಸ್ಟ್‌ಗಳ ಆಡಳಿತ ಕಚೇರಿ ಇರುವ ಸ್ಥಳಗಳಿಗೂ, ಅಧ್ಯಕ್ಷರು ವಾಸಿಸುವ ಸ್ಥಳಗಳಿಗೂ ಯಾವುದೇ ಸಂಬಂಧವಿಲ್ಲ. ಹಾವೇರಿಯಲ್ಲಿರುವ ಡಾ.ವಿ.ಕೃ. ಗೋಕಾಕ ಸ್ಮಾರಕ ಟ್ರಸ್ಟ್‌, ಶಿವಮೊಗ್ಗದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಮಂಡ್ಯದಲ್ಲಿರುವ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಸೇರಿ ಕೆಲ ಟ್ರಸ್ಟ್‌ಗಳ ಕಚೇರಿ ಹಾಗೂ ಅಧ್ಯಕ್ಷರ ನಿವಾಸ ಬೇರೆ ಬೇರೆ ಜಿಲ್ಲೆಯಲ್ಲಿವೆ.

ತುಮಕೂರಿನಲ್ಲಿರುವ ಡಾ. ಗುಬ್ಬಿ ವೀರಣ್ಣ ಟ್ರಸ್ಟ್, ಕೋಲಾರ ದಲ್ಲಿರುವ ಡಾ. ಮಾಸ್ತಿ ವೆಂಕಟೇಶ ಅಯ್ಯ‍ಂಗಾರ್ ಟ್ರಸ್ಟ್ ಸೇರಿ ಕೆಲ ಟ್ರಸ್ಟ್‌ಗಳ ಅಧ್ಯಕ್ಷರು ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ಟ್ರಸ್ಟ್‌ಗಳ ಅಧ್ಯಕ್ಷರ ವಯಸ್ಸು 60 ದಾಟಿರುವುದರಿಂದ ಅನಾರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತಿದ್ದು, ಪ್ರಯಾಣ ಕಷ್ಟಕರವಾಗಿದೆ. ಇದರಿಂದಾಗಿ ಟ್ರಸ್ಟ್‌ಗಳು ವರ್ಷಕ್ಕೆ ಒಂದೆರಡು ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ನಡೆಸಿ, ಕೈತೊಳೆದುಕೊಳ್ಳುತ್ತಿವೆ ಎಂಬ ಟೀಕೆಗಳೂ ಇದೆ.

ಕೆಲ ಟ್ರಸ್ಟ್‌ಗಳ ಪದಾಧಿಕಾರಿಗಳು ಖಾಸಗಿ ಸಂಘ–ಸಂಸ್ಥೆಗಳ ಅಧ್ಯಕ್ಷ ಹಾಗೂ ಸದಸ್ಯರೂ ಆಗಿದ್ದಾರೆ. ಇದರಿಂದಾಗಿ ತಮ್ಮ ಅಥವಾ ಬೇರೆ ಸಂಘ–ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಹಯೋಗ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬ ಆರೋಪಗಳೂ ಇವೆ. 

ಪಾಲನೆಯಾಗದ ಆದೇಶ:‌ ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರವು 2018ರಲ್ಲಿ ಮಾರ್ಗಸೂಚಿ ಹೊರಡಿಸಿತ್ತು. ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ನಿಗದಿಗೊಳಿಸುವುದು, ಯಾವುದು ಮೊದಲೋ ಅದನ್ನು ಪಾಲಿಸತಕ್ಕದ್ದು ಎಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಯಾವುದೇ ಟ್ರಸ್ಟ್‌ನ ಅಧ್ಯಕ್ಷರನ್ನು ಸರ್ಕಾರ ಬದಲಾಯಿಸಿಲ್ಲ. ಆಜೀವ ಟ್ರಸ್ಟಿಗಳಂತೆ ಅವರನ್ನೇ ಮುಂದುವರಿಸಲಾಗಿದೆ. 

ಪಠ್ಯಪುಸ್ತಕ ವಿಷಯದಲ್ಲಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಹಂ.ಪ. ನಾಗರಾಜಯ್ಯ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನಕ್ಕೆ ಎಸ್.ಜಿ. ಸಿದ್ಧರಾಮಯ್ಯ ಅವರು ರಾಜೀನಾಮೆ ಘೋಷಿಸಿದ್ದರು. ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷರಾಗಿದ್ದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಐದು ವರ್ಷದ ಅವಧಿ ಪೂರ್ಣಗೊಂಡಿದ್ದರಿಂದ ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಗಳು ಸರ್ಕಾರದ ಮಟ್ಟದಲ್ಲಿ ಅಂಗೀಕಾರವಾಗಿಲ್ಲ. 

ಬಹುತೇಕ ಟ್ರಸ್ಟ್‌ಗಳು ಸ್ವಂತ ಕಚೇರಿ, ಭವನ ಹೊಂದಿಲ್ಲ. ಅನುದಾನಕ್ಕಾಗಿ ಸರ್ಕಾರವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವ ಗೋಜಿಗೂ ಟ್ರಸ್ಟ್‌ಗಳ ಪದಾಧಿಕಾರಿಗಳು ಹೋಗುತ್ತಿಲ್ಲ. ಸರ್ಕಾರಗಳು ಕೂಡ ಟ್ರಸ್ಟ್‌ಗಳಿಗೆ ಅನುದಾನ ನೀಡುವಲ್ಲಿ ಉದಾರತೆ ತೋರುತ್ತಿಲ್ಲ. ಇದಕ್ಕೆ ಅಪವಾದ ಎಂಬಂತೆ ಕುವೆಂಪು ಪ್ರತಿಷ್ಠಾನ, ದ.ರಾ.ಬೇಂದ್ರೆ ಸ್ಮಾರಕ ಟ್ರಸ್ಟ್ ಸೇರಿ ಕೆಲ ಟ್ರಸ್ಟ್‌ಗಳು ಸರ್ಕಾರದಿಂದ ಅನುದಾನ ಪಡೆದು ಭವನ ನಿರ್ಮಾಣದಂತಹ ಕಾರ್ಯ ಮಾಡಿವೆ. 

ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ಗೆ ಬೆಂಗಳೂರಿನಲ್ಲಿ ಮಾಸ್ತಿ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ, ಒಂಬತ್ತು ವರ್ಷಗಳಾದ ಬಳಿಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನ ಘೋಷಿಸಿದೆ.

ಒಳನೋಟ | ಉತ್ತರ ಕರ್ನಾಟಕ: ನಿರ್ಜೀವವಾದ ಟ್ರಸ್ಟ್‌ಗಳು!ಎಸ್‌.ಜಿ. ಸಿದ್ಧರಾಮಯ್ಯ

‘ಸರ್ಕಾರದ ಹಸ್ತಕ್ಷೇಪ ತಪ್ಪಲಿ’

ಟ್ರಸ್ಟ್‌ಗಳೂ ಸೇರಿ ಸರ್ಕಾರಿ ಸಂಸ್ಥೆಗಳಿಗೆ ಸ್ವಾಯತ್ತತೆ ಇಲ್ಲವಾಗಿದೆ. ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಇದರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಿಷಯ ತಜ್ಞರು ಸಾಂಸ್ಕೃತಿಕ ಸಂಸ್ಥೆಗಳನ್ನು ಮುನ್ನಡೆಸಬೇಕು. ಸರ್ಕಾರದ ಹಸ್ತಕ್ಷೇಪ ತಪ್ಪಬೇಕು. ಅನುದಾನವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಳ ಮಾಡುತ್ತಾ ಹೋಗಬೇಕು. ಆದರೆ, ಇರುವ ಅನುದಾನವನ್ನೂ ಕಡಿತ ಮಾಡಲಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮನನೊಂದು ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನಕ್ಕೆ ರಾಜೀನಾಮೆ ನೀಡಿದ್ದೇನೆ. 

- ಎಸ್‌.ಜಿ. ಸಿದ್ಧರಾಮಯ್ಯ, ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ

‘ಅನುದಾನ, ಸ್ವಾಯತ್ತತೆ ಅಗತ್ಯ’ 

ಟ್ರಸ್ಟ್‌ಗಳು ಪ್ರಶಸ್ತಿ ವಿತರಣೆಯಂತಹ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತಿವೆ. ಅವುಗಳಿಗೆ ಸ್ವಾಯತ್ತತೆ ಇಲ್ಲದಿರುವುದರಿಂದ ಸರ್ಕಾರದ ಅಂಗಸಂಸ್ಥೆಯಂತಾಗಿವೆ. ಕೆಲವು ಟ್ರಸ್ಟ್‌ಗಳಿಗೆ ₹ 10 ಲಕ್ಷದಿಂದ ₹12 ಲಕ್ಷದವರೆಗೆ ವಾರ್ಷಿಕ ನೀಡಲಾಗುತ್ತಿದೆ. ಇಷ್ಟು ಅನುದಾನದಲ್ಲಿ ದೀರ್ಘಾವಧಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಸ್ವರೂಪವೂ ಟ್ರಸ್ಟ್‌ಗಳಿಗಿಲ್ಲ. ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷನಾಗಿದ್ದ ನಾನು, ಐದು ವರ್ಷ ಪೂರ್ಣವಾದ ಬಳಿಕ ರಾಜೀನಾಮೆ ನೀಡಿರುವೆ. ಟ್ರಸ್ಟ್‌ಗಳ ಪದಾಧಿಕಾರಿಗಳಿಗೂ ಅಕಾಡೆಮಿ, ಪ್ರಾಧಿಕಾರಗಳ ರೀತಿ ಅಧಿಕಾರಾವಧಿ ನಿಗದಿಪಡಿಸಬೇಕು.

- ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಹಿತಿ


ಪದಾಧಿಕಾರಿಗಳ ಬದಲಾವಣೆಗೆ ಪ್ರಸ್ತಾವ ಸಲ್ಲಿಕೆ

‘ಟ್ರಸ್ಟ್‌ಗಳ ಕಾರ್ಯಚಟುವಟಿಕೆ ಅನುಸಾರ ಇರುವ ಅನುದಾನವನ್ನು ಹಂಚಿಕೆ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನ ಒದಗಿಸುವಂತೆ ಆರ್ಥಿಕ ಇಲಾಖೆ ಮುಂದೆ ಪ್ರಸ್ತಾವನೆ ಇದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ. ನಿಟ್ಟಾಲಿ ತಿಳಿಸಿದರು.

‘ಕೆಲ ಟ್ರಸ್ಟ್‌ಗಳಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದಾರೆ. ಕೆಲವರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಎಲ್ಲ ಟ್ರಸ್ಟ್, ಪ್ರತಿಷ್ಠಾನಗಳ ಪದಾಧಿಕಾರಿಗಳ ಬದಲಾವಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಹೇಳಿದರು. 

‘ಸಿದ್ದಯ್ಯ ಪುರಾಣಿಕ, ಸಿದ್ಧರಾಮ ಜಂಬಲದಿನ್ನಿ, ಕೃಷ್ಣಮೂರ್ತಿ ಪುರಾಣಿಕ ಹಾಗೂ ಎಂ.ಎಂ. ಕಲಬುರ್ಗಿ ಅವರ ಟ್ರಸ್ಟ್‌ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.ನಾ. ಮೊಗಸಾಲೆ

‘ಕರಾವಳಿ ಭಾಗ ಕಡೆಗಣನೆ’

ಟ್ರಸ್ಟ್‌ಗಳ ಸ್ಥಾಪನೆಗೆ ಸಂಬಂಧಿಸಿದಂತೆ ಎಲ್ಲ ಸರ್ಕಾರಗಳು ಕರಾವಳಿ ಭಾಗವನ್ನು ಕಡೆಗಣಿಸುತ್ತಾ ಬಂದಿವೆ. ಮುದ್ದಣ, ಕಡೆಂಗೋಡ್ಲು ಶಂಕರ ಭಟ್ಟ, ಪಂಜೆ ಮಂಗೇಶರಾಯರು,  ಗೋಪಾಲಕೃಷ್ಣ ಅಡಿಗ, ಮಂಜೇಶ್ವರ ಗೋವಿಂದ ಪೈ, ದಿನಕರ ದೇಸಾಯಿ ಹಾಗೂ ಗೌರೀಶ ಕಾಯ್ಕಿಣಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ಗಡಿ ಪ್ರದೇಶದಲ್ಲಿ ಕನ್ನಡಕ್ಕಾಗಿ ಹೋರಾಡಿದ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿಯೂ ಟ್ರಸ್ಟ್ ಸ್ಥಾಪನೆಯಾಗಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಆಗ್ರಹಿಸುತ್ತಲೇ ಬರಲಾಗಿದೆ.

- ನಾ. ಮೊಗಸಾಲೆ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು