ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಅನಾಮಧೇಯ ಆಟಗಾರನ ರಣಾಂಗಣ

ಕಂಪ್ಯೂಟರ್ ಆಟಗಳು ಮಕ್ಕಳಲ್ಲಿ ವ್ಯಸನ ಹುಟ್ಟಿಸುವುದರ ಜೊತೆಗೆ ಅವರ ಮನೋವಿಕಾಸ, ಮನೋವಿಲಾಸಗಳನ್ನು ಹೆಚ್ಚಿಸಬಲ್ಲ ಗುಣವನ್ನೂ ಹೊಂದಿರುವುದು ಗಮನಾರ್ಹ
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಆಟ ಆಡುವುದಕ್ಕೆ ಯಾರಿಗೆ ತಾನೇ ಇಷ್ಟವಿರುವು ದಿಲ್ಲ? ಆದರೂ ಆಟಗಳೇನೂ ಸದಾಕಾಲ ಎಲ್ಲರಿಗೂ ಸುಖ, ಹಿತ ಕೊಡುವುದಿಲ್ಲ ಎನ್ನುವುದು ತಿಳಿಯದ ಸಂಗತಿಯೇನಲ್ಲ. ಜೂಜಾಟ, ಪಗಡೆಯಾಟಗಳನ್ನಾಡಿ ದೇಶ, ಕೋಶಗಳನ್ನು ಕಳೆದುಕೊಂಡ ಶೂರಾಧಿಶೂರರ ಕತೆಯು ಪುರಾಣಗಳಲ್ಲಿ ತುಂಬಿದೆ. ಧಾರ್ಮಿಕ, ನೈತಿಕ ಗೊಂದಲಗಳ ನಡುವೆಯೂ, ಅವುಗಳಿನ್ನೂ ಕುತೂಹಲ ಕೆರಳಿಸಬಲ್ಲವಾಗಿವೆ.

ಆಟ ಅಂದಮೇಲೆ ನಿಯಮ, ರೀತಿ, ಆಟಿಕೆಗಳು ಇರಲೇಬೇಕು. ಬದಲಾದ ವೇಗ- ಆವೇಗ ಪ್ರಧಾನ
ವಾಗುತ್ತಿರುವ ಈ ಕಾಲದಲ್ಲಿ, ಆಟ ಆಡುವುದಕ್ಕೆ ಅಂಗೈ ಅಗಲದ ಕಂಪ್ಯೂಟರ್, ಮೊಬೈಲ್ ಸಲಕರಣೆಗಳು ಬಂದಿವೆ. ಹಳೆಯ ಆಟಗಳಿಗೆ ಪೈಪೋಟಿಯೊಡ್ಡಬಲ್ಲ ಅಮೋಘ ಸಾಮರ್ಥ್ಯ, ಶಕ್ತಿ ಅವುಗಳಲ್ಲಿ ಅಡಗಿರುವುದ ರಿಂದಲೇ ಅತಿ ಜನಪ್ರಿಯತೆ ಪಡೆದಿವೆ.

ಈ ಆಟಗಳನ್ನು ರಚಿಸುವುದಕ್ಕೆ ತಂತ್ರಜ್ಞಾನದ ನೈಪುಣ್ಯ ಇರಬೇಕಾಗುತ್ತದೆ. ಅತಿ ಸೂಕ್ಷ್ಮ ಮತ್ತು ವಿಚಿತ್ರ ಎನ್ನುವಂತಹ ಸಮಸ್ಯೆಗಳನ್ನು ಸೃಷ್ಟಿಸುವುದು, ಅದಕ್ಕೆ ಪರಿಹಾರ ಕೊಡುವ ಕ್ರಿಯೆಗಳನ್ನು ರಚಿಸುವ ತಂತ್ರ ಸುಲಭ ಅಥವಾ ಬೇಕಾಬಿಟ್ಟಿಯ ಕೆಲಸವಲ್ಲ. ಯಂತ್ರಗಳ ಮೂಲಕ ಮನುಷ್ಯನ ಮನಸ್ಸಿನಲ್ಲಿ ಅಡಗಿರುವ ರಹಸ್ಯಗಳನ್ನು ಬಯಲಿಗೆಳೆಯುವಷ್ಟು ಚಾತುರ್ಯ ಈ ಕಂಪ್ಯೂಟರ್ ಆಟಗಳಲ್ಲಿದೆ. ಹೀಗಾಗಿ ಇವುಗಳನ್ನು ಆಡುವವರಲ್ಲಿಯೂ ಉನ್ನತ ಮಟ್ಟದ ಮಾನಸಿಕ ಶಕ್ತಿ ಇರಬೇಕಾಗುತ್ತದೆ.

ಇಂತಹದೊಂದು ಕಂಪ್ಯೂಟರ್, ಮೊಬೈಲ್‌ ಆಟವಿದೀಗ ಖ್ಯಾತಿ, ಕುಖ್ಯಾತಿಯನ್ನು ಏಕಕಾಲದಲ್ಲಿ ಪಡೆದಿದ್ದು, ಜನರಲ್ಲಿ ಭಯ, ಭೀತಿಯ ಭಾವನೆಗಳಿಗೆ ಕಾರಣವಾಗಿದೆ. ಪಬ್-ಜಿ (ಅನಾಮಧೇಯ ಆಟ ಗಾರನ ಕಾಳಗಗಳು) ಎಂದು ಕರೆಯ ಲಾಗುವ ಈ ಆಟದ ಉದ್ದೇಶವೆಂದರೆ, ಸದಾ ಸವಾಲುಗಳನ್ನು ಒಡ್ಡುವ ವೈರಿಗಳನ್ನು ಏಕಾಏಕಿ ಸದೆಬಡಿಯುವುದು. ಶತ್ರುಗಳ ಪ್ರತಿಯೊಂದು ದಾಳಿಯನ್ನೂ ಪ್ರತಿಅಸ್ತ್ರ, ಯುಕ್ತಿಯ ಮೂಲಕ ಸಂಹಾರ ಮಾಡುವ ಕಪೋಲ ಕಲ್ಪಿತ ಚಲನವಲನಗಳ ಆಟವಿದು. ಹೊಸಹೊಸ ಕಠಿಣ ಸವಾಲುಗಳನ್ನು ಒಡ್ಡುವ ಆಟವೆಂದು ಕೋಟ್ಯಾನುಕೋಟಿ ಜನ ಇದನ್ನಿಂದು ಬಳಸುತ್ತಿದ್ದಾರೆ. ಉದಾಹರಣೆಗೆ, ನೀವು ಈ ಬರಹವನ್ನು ಓದಿ ಮುಗಿಸುವುದರೊಳಗೆ ಕೋಟಿ ಜನರು ಈ ಆಟದಲ್ಲಿ ಮಗ್ನರಾಗಿರಬಹುದು.

ವೇಗ, ಸರಳತೆ, ಸುಲಭ ಲಭ್ಯತೆ, ಚಿತ್ರವಿಚಿತ್ರ ಸನ್ನಿವೇಶಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸುವ ಹೇರಳ ಚಟುವಟಿಕೆಗಳಿಂದ ಕಂಪ್ಯೂಟರ್ ಆಟಗಳು ಎಲ್ಲ ವಯಸ್ಸಿನವರಿಗೂ ಅತ್ಯಾಕರ್ಷಕ. ಅನ್ನ, ನಿದ್ದೆ, ಓದು, ಕೆಲಸಗಳಿಂದ ತಪ್ಪಿಸಿಕೊಳ್ಳಬೇಕೆಂಬ ಮನಸ್ಸಿನವರಿಗೆ ಇದಂತೂ ಮಹಾಹಿತ ಕೊಡುವಂತಹ ಸೆಳೆತವೇ ಸರಿ. ಅಂತೆಯೇ ಆಕ್ರೋಶ, ಆವೇಶದ ಸ್ವಭಾವದವರಿಗೆ ಇದೇ ರಸ ದೌತಣ ಇದ್ದಂತೆ. ಹೀಗಾಗಿ ದುರಭ್ಯಾಸವಿರುವ, ಅತೃಪ್ತ ಮನಸ್ಸಿನ, ಅದರಲ್ಲಿಯೂ ತಂತ್ರಜ್ಞಾನದತ್ತ ಒಲವು ಇರುವವರಿಗೆ ಹೇಳಿಮಾಡಿಸಿದ ಚಟುವಟಿಕೆ.

ದುರಭ್ಯಾಸ ಹುಟ್ಟಿಸುವ ಮನದ ಅತೃಪ್ತಿಗೆ ಕಾರಣಗಳು ಹಲವಾರು: ಬಾಲ್ಯದ ಮನೋವಿಕಾಸಕ್ಕೆ ತಡೆಯೊಡ್ಡುವ ಸಾಮಾಜಿಕ ಸನ್ನಿವೇಶಗಳು, ಸದಾ ಅಪಮಾನ, ಹಿಂಸೆ, ದಬ್ಬಾಳಿಕೆಯ ಧಾರ್ಮಿಕ, ನೈತಿಕ ವಾತಾವರಣವು ಬೆಳೆಯುವ ಮಕ್ಕಳ, ವಯಸ್ಕರ ವ್ಯಸನ, ಮನೋದೌರ್ಬಲ್ಯಕ್ಕೆ ಪ್ರೇರಕ. ಕಂಪ್ಯೂಟರ್ ಆಟಗಳು ಸರ್ವಾಧಿಕಾರ ಮತ್ತು ನಿರಂಕುಶ ಬಲದ ಭಾವನಾನುಭವ ಒದಗಿಸುತ್ತವೆ. ಎಡೆಬಿಡದ ಪುರಸ್ಕಾರದ ಆಕರ್ಷಣೆಗಳು ಆಟಕ್ಕೆ ಅಂಟಿಕೊಂಡಿರುವಂತೆ ಮಾಡುತ್ತವೆ. ಧ್ವಂಸ, ದಾಳಿಗೆ ಅಗತ್ಯವಾದ ಕುತಂತ್ರ ರಚಿಸುವುದನ್ನು ಉತ್ತೇಜಿಸುವ ವರ್ಣಮಯ ಸನ್ನಿವೇಶ, ಶಬ್ದ, ಸಂಗೀತ, ಮುಖಭಾವ, ಭಂಗಿಗಳು ಆಡುಗರ ಮನಸ್ಸನ್ನು ವಶಪಡಿಸಿಕೊಳ್ಳಬಲ್ಲವಾಗಿರುತ್ತವೆ. ಎಷ್ಟೋ ಸಲ ಇಂತಹ ಆಟಗಳಿಗೆ ಸಮಯ, ಸನ್ನಿವೇಶ, ಹಣವು ಬೇಕಾಗಿರುವುದಿಲ್ಲ.

ಹತಾಶೆ ಹೆಚ್ಚಾದಾಗ ಬೆನ್ನಟ್ಟಿ ಬರುವ ಹಂಬಲಗಳು ಅವಲಂಬನೆಯ ಚಟುವಟಿಕೆ ಗಳತ್ತ ವಾಲುವುದರ ಮೂಲಕ ವಾಸ್ತವದಿಂದ ದೂರ ಸರಿಯುವಂತೆ ಮಾಡುತ್ತವೆ. ಸಾಮಾಜಿಕ ಸ್ವರೂಪದ ಸಮಸ್ಯೆಗಳೇ ಹತಾಶೆಗಳಿಗೆ ಮಹಾಪ್ರೇರಣೆ. ಹೀಗಾಗಿ ಇಂತಹದೊಂದು ಸ್ಥಿತಿಯಿಂದ ಮೂಡುವನಡೆನುಡಿಗಳಲ್ಲಿ ಕಂಡುಬರುವ ಅಸಾಮಾನ್ಯತೆ ಯನ್ನು ಮನೋರೋಗವೆಂದು ಪರಿಗಣಿಸುತ್ತವೆ ವಿಶ್ವದ ಪ್ರಮುಖ ಮನೋರೋಗ ಗುರುತಿಸುವ ಸಂಸ್ಥೆಗಳು. ಹೀಗಾಗಿ ಕಂಪ್ಯೂಟರ್ ಗೇಮ್‌ಗಳು ಉಂಟುಮಾಡುವ
ಸಾಮಾನ್ಯವಲ್ಲದ ಮಾನಸಿಕತೆಯನ್ನು ಮನೋಅಸ್ವಸ್ಥತೆಯ ಸಂಕೇತ ಎನ್ನುತ್ತವೆ ಅಧ್ಯಯನಗಳು. ಈ
ಅಭಿಪ್ರಾಯಗಳನ್ನು ಅಲ್ಲಗಳೆಯುವ ವೈಜ್ಞಾನಿಕ ಅಧ್ಯಯನಗಳೇನೂ ಕಡಿಮೆಯಿಲ್ಲ.

ಕಂಪ್ಯೂಟರ್ ಆಟಗಳು ಮಕ್ಕಳೆಲ್ಲರಲ್ಲಿ ವ್ಯಸನ ಹುಟ್ಟಿಸುವುದರಿಂದ ಅಪಾಯಕಾರಿಯಾ ಗಿದ್ದು ಅವುಗಳ ನಿಷೇಧವೇ ಪರಿಹಾರ ಎನ್ನುವ ಅಭಿ ಪ್ರಾಯಗಳು ಬಲವಾಗಿವೆ. ಹೆಚ್ಚಿನ ಸಮಯದಲ್ಲಿ ಇವು ತಪ್ಪುಕಲ್ಪನೆಗಳಾಗಿರುವುದಂತೂ ಸತ್ಯ. ಇಂತಹ ತಪ್ಪುಕಲ್ಪನೆಗಳನ್ನು ಬಂಡವಾಳವನ್ನಾಗಿಸಿಕೊಳ್ಳುವುದಕ್ಕೆ ಸದಾ ಕಾದಿರುತ್ತವೆ ಪುರೋಗಾಮಿ ರಾಜಕೀಯ, ಧಾರ್ಮಿಕ ವಲಯಗಳು. ಆದರೆ ಮಕ್ಕಳ ಮನೋವಿಕಾಸ, ಮನೋವಿಲಾಸಗಳನ್ನು ಹೆಚ್ಚಿಸಬಲ್ಲ ಗುಣವೂ ಈ ಆಟಗಳಲ್ಲಿ ಇರುವುದುಂಟು. ಅಷ್ಟೇಅಲ್ಲ ಕೆಲವೊಂದು ಮಾನಸಿಕ ದುಃಸ್ಥಿತಿಗಳನ್ನು ಸಕಾರಾತ್ಮಕ ವಾಗಿ ಎದುರಿಸುವಂತಹ ಮಾರ್ಗವನ್ನೂ ಆಟಗಳು ಒದಗಿಸಬಲ್ಲವು ಎನ್ನುವುದನ್ನು ಮರೆಮಾಚಲಾಗದು.

ಲೇಖಕ: ಮನೋವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT