ಮಂಗಳವಾರ, ಜೂನ್ 2, 2020
27 °C

ನೆಮ್ಮದಿ ಕೇಂದ್ರಕ್ಕೆ ಮರಳಲಿ ಮನಸ್ಸು

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಕಾಸದ ಹಾದಿಯಲ್ಲಿ ಕಡೆಯವನಾಗಿ ಅವತರಿಸಿದವನು ಈ ಮನುಷ್ಯ ಪ್ರಾಣಿ. ಆದರೂ ಉಳಿದ 84 ದಶಲಕ್ಷ ಜೀವಪ್ರಭೇದಗಳೆಲ್ಲಾ ತನ್ನ ಸ್ವಾರ್ಥಕ್ಕಾಗಿಯೇ ಜನ್ಮವೆತ್ತಿದವು ಎಂದು ನಿರ್ಲಜ್ಜೆಯಿಂದ ಭಾವಿಸಿದವನು. ಯಃಕಶ್ಚಿತ್ ಕೊರೊನಾ ಎನ್ನುವ ವೈರಾಣುವೊಂದು ತನ್ನ ಅಹಂಕಾರವನ್ನು ಕೊಡವಿ ಕೆಡವಬಹುದೆಂಬಂತಹ ಹಲವಾರು ನಿದರ್ಶನಗಳು ಆಗಾಗ್ಗೆ ಎದುರಾದರೂ ಎಲ್ಲಾ ಮರೆತು, ತಾನೇ ಸರ್ವಶಕ್ತ, ಸರ್ವಜ್ಞ, ಸರ್ವಶ್ರೇಷ್ಠ ಅಂತೆಲ್ಲಾ ತನ್ನಷ್ಟಕ್ಕೆ ತಾನು ಆತ್ಮರತಿಯ ಅಲೆಯಲ್ಲಿ ತೇಲುವವನು. ಹಾಗಿದ್ದೂ ತನ್ನನ್ನು ನಿತ್ಯ ಕಾಡುವ ಸರಳ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಹೈರಾಣಾಗುತ್ತಾನೆ.

ನೆಮ್ಮದಿ ಅಂದರೇನು? ಸುಖ- ಶಾಂತಿಯನ್ನು ಹೊಂದುವುದು ಹೇಗೆ? ಅದು ಬುದ್ಧಿವಂತಿಕೆಯೇ? ವಸ್ತುಗಳಲ್ಲಿದೆಯೇ? ದುಡ್ಡಿನಲ್ಲೇ? ಸಂಬಂಧಗಳಲ್ಲೇ ಅಥವಾ ಅಂತಸ್ತಿನಲ್ಲೇ... ಅನ್ನುವಂಥ ಪ್ರಶ್ನೆಗಳಿಗೆಲ್ಲಾ ಸಿಗುವ ಸರಳ ಉತ್ತರವೆಂದರೆ, ಅದು ಸಮಷ್ಟಿಯ ಮನಃಸ್ಥಿತಿ. ಸರಳವಾದ, ಆರೋಗ್ಯಕರ ಜೀವನಶೈಲಿಯ ಸಹಜಕೃಷಿಯಲ್ಲಿದೆ ಎಂಬುದು. ನೆಮ್ಮದಿಯನ್ನು ಅರಸಿ ಜಗತ್ತನ್ನೆಲ್ಲಾ ಸುತ್ತಿ ಬಂದವನೊಬ್ಬನಿಗೆ, ಅದು ತನ್ನೊಳಗೆ ಮಾತ್ರ ಸಿಗಬಹುದಾದ ಅನುಭೂತಿ ಅಂತ ಕೊನೆಯಲ್ಲಿ ಅರ್ಥವಾಯಿತಂತೆ...!

ಜಗತ್ತಿನ ಅತೀ ಹೆಚ್ಚು ಅಸಂತುಷ್ಟ ಜೀವಿ ಯಾರು ಅಂತ ಹುಡುಕಿದರೆ ಸಿಗುವ ಒಂದು ಹೆಸರು ಮನುಷ್ಯ ಪ್ರಾಣಿಯದ್ದು. ಹಣ, ಖ್ಯಾತಿ, ಆಸ್ತಿ, ಅಧಿಕಾರವೆಂಬ ಮಾಯಾಮೃಗದ ಬೆನ್ನುಬಿದ್ದು, ತನ್ನ ಅಮೂಲ್ಯ ನಿದ್ದೆ, ನೆಮ್ಮದಿಯನ್ನು ಕಳೆದುಕೊಂಡು ಒದ್ದಾಡುತ್ತಿರುವವನು ಇವನೊಬ್ಬನೇ. ಬುದ್ಧಿವಂತ ಜೀವಿ ಎನಿಸಿಕೊಂಡರೂ ಮನದ ಬಯಕೆಯೆಂಬ ಹುಚ್ಚು ಕುದುರೆಯನ್ನು ಹತೋಟಿಯಲ್ಲಿ ಇಡುವಲ್ಲಿ ಆತನದ್ದು ಸಂಪೂರ್ಣ ವೈಫಲ್ಯ. ಕೈಲಿದ್ದ ಸ್ವಯಂನಿಯಂತ್ರಣವೆಂಬ ಮಂತ್ರದಂಡವನ್ನು ನಿತ್ಯವೂ ಕಳೆದುಕೊಂಡು ಪರದಾಡುವಾತ.

ಕಾರ್ಪೊರೇಟ್ ಜಗತ್ತು ಹುಟ್ಟುಹಾಕಿದ ಕೊಳ್ಳುಬಾಕ ಮನಃಸ್ಥಿತಿಯ ಜಾಹೀರಾತುಗಳು ಮನುಷ್ಯನನ್ನು ಅತೃಪ್ತ ಆತ್ಮವನ್ನಾಗಿ ಪರಿವರ್ತಿಸಿಬಿಟ್ಟಿವೆ. ಮಿಕ್ಕೆಲ್ಲಾ ಜೀವಿಗಳು ತಮ್ಮ ಜೀವಿತಾವಧಿಯನ್ನು ಸಂತೋಷದಿಂದ ಸವಿಯುತ್ತಿರುವುದಕ್ಕಿರುವ ಒಂದೇ ಕಾರಣವೆಂದರೆ ‘ಅವೆಲ್ಲಾ ತಮ್ಮಷ್ಟಕ್ಕೆ, ತಮ್ಮಿಷ್ಟಕ್ಕೆ ತಾವು ಬದುಕುತ್ತವೆ ಮತ್ತು ಯಾರನ್ನೂ ಮೆಚ್ಚಿಸಲಿಕ್ಕಾಗಿ ಪ್ರಯತ್ನಿಸುವುದಿಲ್ಲ’ ಎಂಬುದು. ಇಂಥದ್ದೊಂದು ಸೂಕ್ಷ್ಮವನ್ನು ಗ್ರಹಿಸದ ಮನುಷ್ಯನಿಗೆ ತಾನು ಬೀಳುತ್ತಿರುವ ಅತೃಪ್ತಿಯೆಂಬ ಗುಂಡಿಯ ಆಳವನ್ನು ಗುರುತಿಸಲಾರದಷ್ಟು ಹಗಲುಗುರುಡು!

ಅಧ್ಯಯನವೊಂದರ ಪ್ರಕಾರ, ಶ್ರೀಮಂತವರ್ಗ ತಮ್ಮ ಮನೆಗಳಲ್ಲಿ ಕೊಂಡುತಂದು ತುಂಬಿಕೊಂಡಿರುವ ಶೇ 70ರಷ್ಟು ಮತ್ತು ಮಧ್ಯಮವರ್ಗದ ಶೇ 50ರಷ್ಟು ವಸ್ತುಗಳು ನಿರುಪಯುಕ್ತವಾಗಿರುತ್ತವೆ! ಪ್ರತಿಯೊಂದು ವಸ್ತುವಿನ ತಯಾರಿಕೆಗೂ ಕಚ್ಚಾವಸ್ತುಗಳು ಬೇಕು. ಜೊತೆಗೆ ಅದರ ಹಿಂದೆ ಅಪಾರ ಶ್ರಮ ಮತ್ತು ಅಮೂಲ್ಯ ಸಮಯದ ಬಳಕೆಯಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಹೊಂದುವುದು ಕೂಡ ಪಾಪವೇ! ಹಾಗಾಗಿ, ವಸ್ತುಗಳ ಬಳಕೆಯ ಪೂರ್ವದಲ್ಲಿ ಅದರ ಅಗತ್ಯ ಮತ್ತು ಮೌಲ್ಯಗಳ ಅವಲೋಕನವೊಂದು ನಮ್ಮೊಳಗೆ ನಡೆದಿರಬೇಕು. ಮನೆಗಳಲ್ಲಿ ತಂದು ರಾಶಿಯೊಡ್ಡುವ ಅನುಪಯುಕ್ತ ಸಾಮಗ್ರಿಗಳೆಲ್ಲ ನಂತರದಲ್ಲಿ ತ್ಯಾಜ್ಯವಾಗಿ ಪರಿಸರಕ್ಕೆ ಎಸೆಯಲ್ಪಡುತ್ತವೆ. ಮಣ್ಣು, ಗಾಳಿ, ಜಲಮೂಲಗಳು ವಿಷಮಯಗೊಂಡು ಕೈಮೀರುತ್ತಿರುವ ಮಾಲಿನ್ಯದಿಂದಾಗಿ, ಇದೀಗ ನಮಗಿರುವ ಒಂದೇ ಭೂಮಿಯೂ ವಾಸಯೋಗ್ಯ ಜಾಗವಾಗಿ ಉಳಿಯುತ್ತಿಲ್ಲ.

ನದಿಯ ಹರಿವು, ಹಕ್ಕಿಹಾಡು, ಮಣ್ಣಿನ ಸ್ಪರ್ಶ, ಬರಿಗಾಲ ನಡಿಗೆಯ ಸುಖ, ಮಳೆಯಲ್ಲಿ ತೋಯುವ ಖುಷಿ, ಸೂರ್ಯೋದಯ- ಸೂರ್ಯಾಸ್ತಗಳ ವೈಭವ, ರಾತ್ರಿ ನಕ್ಷತ್ರಗಳ ಬೆರಗಿನ ಲೋಕವನ್ನು ಕಣ್ತುಂಬಿಕೊಳ್ಳುತ್ತಾ ಕಂಡುಕೊಳ್ಳಬಹುದಾದ ಪುಟ್ಟಪುಟ್ಟ ಖುಷಿಗಳನ್ನು ಮರೆತಿದೆ ಇವತ್ತಿನ ಜಗತ್ತು.

ವಾಯುಮಾಲಿನ್ಯದಿಂದ ಜಗತ್ತು ನರಳುತ್ತಿದೆ. ನಾವೆಲ್ಲ ಪೆಟ್ರೋಲಿಯಂ ಇಂಧನಗಳನ್ನು ಉರಿಸುತ್ತಿರುವ ವೇಗಕ್ಕೆ ಭೂಗ್ರಹವು ಮುಂದೆಂದೂ ರಿಪೇರಿಯಾಗಲಾರದಷ್ಟು ಕೆಟ್ಟುಹೋಗುತ್ತಿದೆ. ಸಂವೇದನೆ ಮರೆತ ಮನಸ್ಸುಗಳಲ್ಲಿ ಭ್ರಾಮಕ ಜಗತ್ತು ಸೃಷ್ಟಿಯಾಗಿಬಿಟ್ಟಿದೆ.

ಹಣ, ಆಸ್ತಿ, ಅಧಿಕಾರವನ್ನು ಆದರ್ಶ ಎಂದುಕೊಂಡ ಇಂದಿನ ಜನಮನವು ನೈತಿಕತೆ, ಸಾವಧಾನವನ್ನು ಹೀಗೆಯೇ ಮರೆಯುತ್ತಾ ಹೊರಟರೆ, ನಮ್ಮ ನಾಳೆಗಳು ಕರಾಳವಾಗಿರುವುದರಲ್ಲಿ ಅನುಮಾನವಿಲ್ಲ. ಮಾರ್ಗ ಯಾವುದಾದರೂ ಸರಿಯೇ ಗಂಟು ಕಟ್ಟಲೇಬೇಕೆಂದು ಹೊರಟವರು, ದುಡ್ಡು ಬರುವ ಹೊತ್ತಿಗೆ ತಮ್ಮ ಅತ್ಯಮೂಲ್ಯ ನೆಮ್ಮದಿ, ಸಮಾಧಾನ, ಆರೋಗ್ಯ, ಬಾಂಧವ್ಯಗಳಿಂದ ಹಿಂದಿರುಗಲಾರದ ದೂರವನ್ನು ತಲುಪಿಬಿಟ್ಟಿರುತ್ತಾರೆ. ನಮ್ಮೆಲ್ಲ ಮಾನಸಿಕ ಕ್ಷೋಭೆಗಳಿಗೆ, ‘ಆಸೆಯೇ ದುಃಖದ ಮೂಲ’ವೆಂದ ಬುದ್ಧನ ಪ್ರೇರಣೆಯು ಚಿಕಿತ್ಸೆಯಾಗಿ ಪೊರೆಯಬೇಕಿದೆ.

ಗಾಂಧಿತತ್ವವಾದ ಸರಳಜೀವನದತ್ತ ಮನುಷ್ಯ ಸಂತತಿಯು ಮುಖಮಾಡಿ ಸಂಪನ್ಮೂಲಗಳ ಹಿತಮಿತ ಬಳಕೆ, ಪರಿಸರಪೂರಕ ಜೀವನ ವಿಧಾನ, ಸುಸ್ಥಿರ ಅಭಿವೃದ್ಧಿ, ಜೀವಮುಖಿ ಚಿಂತನೆಯೊಂದಿಗೆ ಅರಿವಿನ ದಾರಿಯನ್ನು ಹುಡುಕಬೇಕಿದೆ. ಆ ನೆಮ್ಮದಿಯ ಕೇಂದ್ರಕ್ಕೆ ಮನಸ್ಸು ಮರಳಬೇಕಿದೆ. ಶರಣರು ಪ್ರತಿಪಾ ದಿಸಿದ ‘ಅಸಂಗ್ರಹ’ ಮಾದರಿಯನ್ನು ಮರುಶೋಧಿಸಿಕೊಳ್ಳಬೇಕಾದ ಅಗತ್ಯವೀಗ ಮೊದಲಿಗಿಂತ ಹೆಚ್ಚಾಗಿದೆ. ಅಂತಹ ಬೆಳಕಿಗೆ, ಎದೆಯೊಳಗೇ ಇರುವ ಸಾವಧಾನದ ಕದ ತೆರೆಯುಂತಾಗಲಿ ಎಂಬುದು ಆಶಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು