ಶನಿವಾರ, ಜೂನ್ 6, 2020
27 °C
ಸಂದರ್ಭ ಒದಗಿದಾಗಲೆಲ್ಲ ಮಾಂಸ ಮಾರಾಟಕ್ಕೆ ತಡೆಯೊಡ್ಡಲು ಯತ್ನಿಸುವುದೇಕೆ?

ಸಂಗತ | ಕೊರೊನಾ ಮತ್ತು ಆಹಾರ ರಾಜಕೀಯ

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ಲಾಕ್‍ಡೌನ್ ವಿಧಿಸಿದ ನಂತರ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಗುಂಪುಗೂಡುವುದು ಸಹಜವಾಗಿ ಎಲ್ಲೆಡೆಯೂ ಕಂಡುಬಂತು. ತರಕಾರಿ, ದಿನಸಿ, ಹಾಲು ಮತ್ತಿತರ ವಸ್ತುಗಳ ಖರೀದಿಗಾಗಿ ಜನ ಮುಗಿಬಿದ್ದಾಗ, ದೈಹಿಕ ಅಂತರ ಕಾಯ್ದುಕೊಳ್ಳದ ಕುರಿತು ಟೀಕೆ ವ್ಯಕ್ತವಾಯಿತೇ ವಿನಾ ಯಾರೂ ಅಪಹಾಸ್ಯ ಮಾಡಲು ಹೋಗಲಿಲ್ಲ. ಆದರೆ, ಲಾಕ್‍ಡೌನ್ ವೇಳೆಯಲ್ಲಿ ಮಾಂಸ ಖರೀದಿಸಲು ಅಂಗಡಿಗಳ ಮುಂದೆ ಸರದಿಯಲ್ಲಿ ಜನ ನಿಂತದ್ದನ್ನು ಹಲವರು ಅಪಹಾಸ್ಯ ಮಾಡಲು ಬಳಸಿಕೊಂಡರು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಇವರಿಗೆ ಮಾಂಸ ತಿನ್ನುವ ಆಸೆ ಅದುಮಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಅಂತೆಲ್ಲ ಪ್ರಶ್ನಿಸಿದರು. ಮಾಂಸ ಮಾರಾಟದ ವಿರುದ್ಧವಾಗಿ ಅಭಿಪ್ರಾಯ ರೂಪಿಸಲು ದೃಶ್ಯಮಾಧ್ಯಮ ಕೂಡ ಕೈಜೋಡಿಸಿತು.

ಆಹಾರ ಪದಾರ್ಥಗಳ ಪೂರೈಕೆ ಅಗತ್ಯ ಸೇವೆಯಾಗಿ ಪರಿಗಣಿಸಲ್ಪಟ್ಟಿರುವಾಗ ಮಾಂಸಾಹಾರ ಸೇವನೆ ಮತ್ತು ಮಾರಾಟ ಮಾತ್ರ ಏಕೆ ಚರ್ಚೆಗೆ ಆಸ್ಪದ ನೀಡುತ್ತದೆ? ಆಹಾರದಲ್ಲೂ ಅಗತ್ಯ ಮತ್ತು ಅನಗತ್ಯವೆಂದು ವಿಂಗಡಣೆ ಮಾಡಲು ಸಾಧ್ಯವೇ? ಹಾಗೊಮ್ಮೆ ಮಾಡುವುದೇ ಆದಲ್ಲಿ ಪೌಷ್ಟಿಕಾಂಶಭರಿತ ಆಹಾರ ಅಗತ್ಯವೆಂದೂ ಜಂಕ್‌ಫುಡ್ ಅನಗತ್ಯವೆಂದೂ ಪರಿಗಣಿಸುವುದು ಸಮಂಜಸವಲ್ಲವೇ? ಮಾಂಸವು ಪೌಷ್ಟಿಕ ಆಹಾರವೆಂದು ಜಗತ್ತೇ ಒಪ್ಪಿಕೊಂಡಿರುವಾಗ, ನಾವೇಕೆ ಅದರ ಕುರಿತು ಅನಾದರ ಬೆಳೆಸಿಕೊಂಡಿದ್ದೇವೆ ಮತ್ತು ಸಂದರ್ಭ ಒದಗಿದಾಗಲೆಲ್ಲ ಅದರ ಮಾರಾಟಕ್ಕೆ ತಡೆಯೊಡ್ಡಲು ಏಕೆ ಅನುವು ಮಾಡಿಕೊಡಲಾಗುತ್ತಿದೆ? ಇದರ ಹಿನ್ನೆಲೆಯಲ್ಲಿ, ಸಸ್ಯಾಹಾರ ಶ್ರೇಷ್ಠ ಮತ್ತು ಮಾಂಸಾಹಾರ ಸೇವನೆ ಕೀಳೆಂಬ ಪ್ರಜ್ಞೆ ಬಿತ್ತುವ ಆಹಾರ ರಾಜಕೀಯ ಇರುವುದನ್ನು ಅಲ್ಲಗಳೆಯಲಾಗುವುದೇ?

ಕೊರೊನಾ ಹರಡಲಾರಂಭಿಸಿದ ಆರಂಭದ ದಿನಗಳಲ್ಲಿ ಮಾಂಸಾಹಾರಕ್ಕೂ ಕೊರೊನಾಗೂ ನಂಟು ಬೆಸೆದು, ಮಾಂಸ ಸೇವಿಸುವುದರಿಂದಲೂ ಕೊರೊನಾ ಬರುವ ಸಾಧ್ಯತೆ ಇದೆ ಎನ್ನುವ ತಪ್ಪುಕಲ್ಪನೆಯನ್ನು ಜನರಲ್ಲಿ ಬಿತ್ತಲು ದೃಶ್ಯಮಾಧ್ಯಮ ಏಕೆ ನೆರವಾಯಿತು? ಚೀನಾದ ವುಹಾನ್ ಮಾಂಸ ಮಾರುಕಟ್ಟೆಯು ಕೊರೊನಾ ವೈರಾಣು ಹರಡಲು ಮೂಲವಾಗಿರಬಹುದು ಎನ್ನುವ ಅಂಶವನ್ನೇ ಇಟ್ಟುಕೊಂಡು, ಜನ ಮಾಂಸಾಹಾರ ಸೇವಿಸಲೇ ಹಿಂಜರಿಯುವಷ್ಟು ಅಪಪ್ರಚಾರ ಮಾಡುವ ಅಗತ್ಯವಿತ್ತೇ?

ಲಾಕ್‍ಡೌನ್ ನಂತರ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದ ರೈತರು ಮಾರುಕಟ್ಟೆಗೆ ಪೂರೈಸಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಲೇ ಇದ್ದಾರೆ. ಒಂದು ವೇಳೆ ಮಾರಾಟ ಮಾಡಲು ಸಾಧ್ಯವಾದರೂ ನಿರೀಕ್ಷಿಸಿದಷ್ಟು ಬೆಲೆ ಸಿಗದೆ ಹತಾಶರಾಗುತ್ತಿದ್ದಾರೆ. ಕೊರೊನಾ ಕುರಿತು ಜನರಲ್ಲಿ ಬೇರೂರತೊಡಗಿದ ತಪ್ಪುಕಲ್ಪನೆ ಮತ್ತು ಮಾಂಸ ಮಾರಾಟಕ್ಕೆ ಅಲ್ಲಲ್ಲಿ ತಡೆಯೊಡ್ಡಿದ ಕಾರಣಕ್ಕೆ ಕೋಳಿ, ಕುರಿ, ಹಂದಿ, ಮೀನು, ಮೊಲ ಮತ್ತಿತರ ಆಹಾರವಾಗಿ ಸೇವಿಸುವ ಪ್ರಾಣಿ-ಪಕ್ಷಿಗಳ ಸಾಕಾಣಿಕೆಯನ್ನೇ ವೃತ್ತಿಯಾಗಿಸಿಕೊಂಡಿರುವ ಗ್ರಾಮೀಣ ಭಾಗದ ಹಲವರು ಕೂಡ ನಷ್ಟ ಅನುಭವಿಸಿದರು. ಹಕ್ಕಿಜ್ವರ ಹರಡುವ ಭೀತಿಯಿಂದ ರಾಜ್ಯದ ಕೆಲವೆಡೆ ಕೊರೊನಾ ಹರಡುವ ಮುನ್ನವೇ ಕೋಳಿ ಮಾಂಸ ಮಾರಾಟಕ್ಕೆ ತಡೆ ಬಿದ್ದಿತ್ತು. ಆನಂತರ ಕೊರೊನಾಗೂ ಮಾಂಸಾಹಾರಕ್ಕೂ ಸಂಬಂಧ ಕಲ್ಪಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಯಿತು.

ಮಾಂಸಕ್ಕಾಗಿ ಪ್ರಾಣಿ-ಪಕ್ಷಿಗಳ ಸಾಕಣೆ ಮತ್ತು ಮಾರಾಟವೂ ಒಂದು ಉದ್ಯಮವೇ ಆಗಿದೆ. ಈ ಕ್ಷೇತ್ರ ಹಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಲ್ಲದೆ ಆರ್ಥಿಕತೆಗೂ ತನ್ನದೇ ಕೊಡುಗೆ ನೀಡುತ್ತಿದೆ. ಹತ್ತಾರು ವರ್ಷಗಳ ಕಾಲ ನಗರದ ಬಾರ್ ಒಂದರಲ್ಲಿ ಕೆಲಸ ಮಾಡಿದ ಸಂಬಂಧಿಯೊಬ್ಬರು, ಕಳೆದ ನಾಲ್ಕು ವರ್ಷಗಳಿಂದ ಕೋಳಿ ಸಾಕಣೆಯನ್ನೇ ಕಸುಬಾಗಿಸಿಕೊಂಡು ತಮ್ಮ ಹಳ್ಳಿಯಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ. ಇಂತಹ ಬಹಳಷ್ಟು ನಿದರ್ಶನಗಳಿವೆ.

ಭಾರತದಲ್ಲಿ ಕೊರೊನಾ ತೀವ್ರವಾಗಿ ಹರಡದಿರಲು ಸಸ್ಯಾಹಾರವೇ ಪ್ರಧಾನವಾಗಿರುವ ಭಾರತೀಯರ ಜೀವನ ಪದ್ಧತಿಯೂ ಒಂದು ಮುಖ್ಯ ಕಾರಣವೆನ್ನುವ ವಾದವೂ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿತ್ತು. ಭಾರತದಲ್ಲಿರುವ ಸಸ್ಯಾಹಾರಿಗಳ ಸಂಖ್ಯೆ ಎಷ್ಟು? ಮಾಂಸ ಸೇವನೆ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಅರಿಯಲು ಹೆಚ್ಚೇನೂ ಶ್ರಮ ಹಾಕುವ ಅಗತ್ಯವೇ ಇಲ್ಲದಿರುವಾಗಲೂ ಸಸ್ಯಾಹಾರ ಭಾರತೀಯರ ಆಹಾರಶೈಲಿ ಎಂದು ಬಿಂಬಿಸುವುದೇಕೆ?

ಆಹಾರದ ರಾಜಕಾರಣ ನಮ್ಮನ್ನು ಮೊದಲಿನಿಂದಲೂ ಬಾಧಿಸುತ್ತಲೇ ಇದೆ. ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ಮಾಂಸಾಹಾರ ಸೇವಿಸುವವರನ್ನು ಹೀಗಳೆಯಲು ಮತ್ತು ಸ್ವತಃ ಮಾಂಸಾಹಾರಿಗಳಲ್ಲೇ ಮಾಂಸ ಸೇವನೆ ತಪ್ಪೆಂಬ ಅಪರಾಧಿ ಪ್ರಜ್ಞೆ ಬಿತ್ತಲು ಬಳಸಿಕೊಳ್ಳುವುದು ಏನನ್ನು ಸೂಚಿಸುತ್ತದೆ?

ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಮೂಲಕ ಅಪೌಷ್ಟಿಕತೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂದಾದರೆ ಅದಕ್ಕೂ ಆಕ್ಷೇಪ ವ್ಯಕ್ತವಾಗುವುದು ಯಾರಿಂದ ಮತ್ತು ಏಕೆ ಎಂಬುದನ್ನು ಅರಿಯುವ ಅಗತ್ಯವಿದೆ. ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದೇ ಆಗಲಿ ಶ್ರೇಷ್ಠವೂ ಅಲ್ಲ ನಿಕೃಷ್ಟವೂ ಅಲ್ಲ ಎನ್ನುವ ಪ್ರಜ್ಞೆ ಬಿತ್ತಬೇಕೇ ಹೊರತು, ತಪ್ಪುಕಲ್ಪನೆ ಮೂಡಿಸುವ ಮೂಲಕ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚಲು ಕಾರಣವಾಗಬಾರದಲ್ಲವೇ? ಮಾಂಸಾಹಾರ ಸೇವಿಸಬೇಕೇ ಬೇಡವೇ ಎನ್ನುವುದನ್ನು ಆಯಾ ವ್ಯಕ್ತಿ ನಿರ್ಧರಿಸಬೇಕೇ ವಿನಾ, ಅದನ್ನು ಆಹಾರ ರಾಜಕೀಯವು ಬಿತ್ತುವ ಆಲೋಚನಾಕ್ರಮ ನಿಯಂತ್ರಿಸಬಾರದಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು