ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಒತ್ತುವರಿ ತಡೆಗೆ ಹೊಸ ಅಸ್ತ್ರ

Last Updated 15 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಭೂ ದಾಖಲೆಯ ವ್ಯವಸ್ಥಿತ ನಿರ್ವಹಣೆ, ಸಂಪೂರ್ಣ ಡಿಜಿಟ ಲೀಕರಣ ಮತ್ತು ಭೂ ಆಧಾರ್‌ ನಂಬರ್ ವಿಧಾನ ಜಾರಿಗೆ ತರಲು ದೇಶದ ಸಮಗ್ರ ಭೂ ದಾಖಲೀಕರಣ ಯೋಜನೆ (ನ್ಯಾಷನಲ್ ಜನರಿಕ್ ಡಾಕ್ಯುಮೆಂಟ್ ರಿಜಿಸ್ಟ್ರೇಶನ್ ಸಿಸ್ಟಮ್- ಎನ್‌ಜಿಡಿಆರ್‌ಎಸ್) ಪ್ರಕಟಿಸಿರುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ.

ಬೆಂಗಳೂರು ನಗರ ಮತ್ತು ಸುತ್ತಲಿನ ಭಾಗದಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಗುರುತಿಸಿ ವರದಿ ನೀಡಲು ಸರ್ಕಾರ 2007ರಲ್ಲಿ ಎ.ಟಿ.ರಾಮಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಮೂವತ್ತು ಸಾವಿರ ಎಕರೆ ಭೂಮಿ ಒತ್ತುವರಿಯಾಗಿ ರುವುದಾಗಿ ವರದಿ ನೀಡಿತು. ಇದರ ಅನ್ವಯ, ಸುಮಾರು 7,000 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತು. ವಿಚಿತ್ರ ಸಂಗತಿ ಎಂದರೆ, ವಶಪಡಿಸಿಕೊಂಡ ಈ ಭೂಮಿಗೆ ಬೇಲಿ ಹಾಕಿ ರಕ್ಷಣೆ ಮಾಡದೇ ಇದ್ದುದರಿಂದ ಪುನಃ ಈ ಭೂಮಿಯನ್ನು ಒತ್ತುವರಿ ಮಾಡಲಾಗಿದೆ.

ದೇಶದ ತುಂಬ ದೇವಾಲಯಗಳ, ಐತಿಹಾಸಿಕ ಸ್ಮಾರಕಗಳ, ಸಾರ್ವಜನಿಕ ಟ್ರಸ್ಟ್, ಗೋಮಾಳ, ಸರ್ಕಾರಿ ಭೂಮಿಯ ದೊಡ್ಡ ಪ್ರಮಾಣದ ಅತಿಕ್ರಮಣ ನಡೆದಿದೆ. ಭೂ ದಾಖಲೀಕರಣದ ಹೊಸ ವ್ಯವಸ್ಥೆಯಿಂದ ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಅನುಕೂಲವಾಗುತ್ತದೆ.

ದೇಶದ ನ್ಯಾಯಾಲಯಗಳಲ್ಲಿ ಗಣನೀಯ ಪ್ರಮಾ ಣದ ವ್ಯಾಜ್ಯಗಳು ಭೂಮಿಗೆ ಸಂಬಂಧಿಸಿದ ಪ್ರಕರಣಗಳಾಗಿರುವುದು ಗಮನಿಸಬೇಕಾದ ಸಂಗತಿ. ಜಮೀನು ಹಂಚಿಕೆಯ ವಿವಾದಗಳಿಂದಾಗಿ ಕುಟುಂಬ ಸದಸ್ಯರ ನೆಮ್ಮದಿ ಹಾಳಾಗಿದೆ. ಪಾಲುಗಾರರ ನಡುವೆ ಕಲಹಗಳು ಹುಟ್ಟಿಕೊಂಡಿವೆ. ಭೂಮಿ ಭೌತಿಕ ಸಂಪತ್ತಾಗಿರುವುದರ ಜೊತೆಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ.

ಭಾರತದಲ್ಲಿ ಮೌರ್ಯ ಅರಸರ ಕಾಲಕ್ಕೆ ಖಾಸಗಿ ಆಸ್ತಿಯಾಗಿ ಭೂಮಿ ಗಡಿ ನಿರ್ಧರಿಸುವ ಕೆಲಸ ಆರಂಭವಾಯಿತು. ಮೊಘಲರ ಕಾಲದಲ್ಲಿ ಇದು ಮುಂದುವರಿಯಿತು. ಬ್ರಿಟಿಷರ ಆಡಳಿತದ ಕಾಲಕ್ಕೆ ಭೂ ದಾಖಲೆ ತಯಾರಿಕೆಗೆ ಹೆಚ್ಚು ಒತ್ತು ನೀಡಲಾಯಿತು. ಲಿಖಿತ ದಾಖಲೆ ಸಿದ್ಧಪಡಿಸುವ ಪರಿ ಪಾಟವೂ ಆರಂಭವಾಯಿತು. ಆಗ ದೇಶದಲ್ಲಿದ್ದ ಸಂಸ್ಥಾನಿಕರು ತಮ್ಮ ಸಂಸ್ಥಾನಕ್ಕೆ ಸಂಬಂಧಿಸಿ ಭಿನ್ನ ಭಿನ್ನ ನಿಯಮಗಳನ್ನು ಜಾರಿಗೆ ತಂದಿದ್ದರು. ಆಳರಸರ ನಡುವಿನ ತಿಕ್ಕಾಟ ಹಾಗೂ ಬ್ರಿಟಿಷರ ಕಾನೂನು ಗೊಂದಲದಿಂದಾಗಿ ಭೂ ಕಬಳಿಕೆ ವಿಪರೀತವಾಗಿ ನಡೆಯಿತು. ಬಲಶಾಲಿಗಳು ಭಯ ಹುಟ್ಟಿಸುವ ಮೂಲಕ ದುರ್ಬಲ ರೈತರ ಭೂಮಿಯನ್ನು ತಮ್ಮದನ್ನಾಗಿ ಮಾಡಿಕೊಂಡರು. ಜಮೀನ್ದಾರಿ ಪದ್ಧತಿಯಲ್ಲಿ ಸಾವಿರಾರು ಎಕರೆ ಸಾಗುವಳಿ ಭೂಮಿಯನ್ನು ಒಬ್ಬನೇ ಹೊಂದಿರುವುದಕ್ಕೆ ಅವಕಾಶವಿತ್ತು. ಜಮೀನ್ದಾರ ತನ್ನ ಭೂಮಿಯಲ್ಲಿ ದುಡಿಯುವ ರೈತರನ್ನು ಗುಲಾಮರಂತೆ ನಡೆಸಿಕೊಳುತ್ತಿದ್ದ. ಸ್ವಾತಂತ್ರ್ಯ ಬಂದ ನಂತರವೂ ಅದೇ ಪದ್ಧತಿ ಮುಂದುವರಿಯಿತು.

ಕರ್ನಾಟಕದಲ್ಲಿ ಗೇಣಿ ಪದ್ಧತಿ ವಿರೋಧಿಸಿ 1951ರಲ್ಲಿ ನಡೆದ ಸಾಗರ ತಾಲ್ಲೂಕು ಕಾಗೋಡು ರೈತ ಸತ್ಯಾಗ್ರಹ ನಾಡಿನ ಇತಿಹಾಸದಲ್ಲಿ ಒಂದು ಚಿರಸ್ಮರಣೀಯ ಅಧ್ಯಾಯ. ಭೂ ಸುಧಾರಣೆ ಶಾಸನದ ಸ್ಫೂರ್ತಿಯ ನೆಲೆ. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡರು ಈ ಹೋರಾಟದ ನೇತೃತ್ವ ವಹಿಸಿದ್ದರು. ಇದರಿಂದ ರೈತರಲ್ಲಿ ಜಾಗೃತಿ ಮೂಡಿತು ಮಾತ್ರವಲ್ಲ, ಹೊಸ ಸಾಮಾಜಿಕ ಚಿಂತನೆ ಗಳು ಆರಂಭವಾದವು.

ಭೂಮಿ ದಾಖಲೀಕರಣ ಯೋಜನೆಯ ಸಮರ್ಪಕ ನಿರ್ವಹಣೆಯಿಂದ ವ್ಯಕ್ತಿಯೊಬ್ಬ ಹೊರ ರಾಜ್ಯಗಳೂ ಸೇರಿದಂತೆ ಬೇರೆ ಬೇರೆ ಕಡೆ ಹೊಂದಿದ ಭೂ ಸಂಪತ್ತಿನ ಸ್ಪಷ್ಟ ವಿವರ ದೊರಕುತ್ತದೆ. ಪ್ರತೀ ತುಂಡು ಭೂಮಿಗೆ 14 ಸಂಖ್ಯೆಯ ಒಂದು ಡಿಜಿಟಲ್ ನಂಬರ್ ಕೊಡಲಾಗುವುದು. ಅದನ್ನು ‘ಭೂ ಆಧಾರ್‌’ ನಂಬರ್‌ ಎಂದು ಕರೆಯಲಾಗುತ್ತದೆ. ವ್ಯಕ್ತಿಯೊಬ್ಬ ಕೃಷಿ ಭೂಮಿ ಹೊಂದುವುದಕ್ಕೆ ಮಿತಿ ನಿಗದಿಪಡಿಸಲಾ
ಗಿದೆ. ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನಗಳನ್ನು ಹೊಂದುವುದಕ್ಕೆ ಮಿತಿ ಇಲ್ಲ. ಈ ಹೊಸ ವಿಧಾನದಿಂದ ನಿವೇಶನಗಳನ್ನು ಹೊಂದಿದ ಮಾಹಿತಿ ದೊರೆಯುವುದು. ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮುಚ್ಚಿ ಇಡಬಹುದು, ಆದರೆ ಭೂ ಸಂಪತ್ತನ್ನು ಮುಚ್ಚಿಡಲು ಸಾಧ್ಯವಿಲ್ಲ. ಭೂ ಆಧಾರ್‌ ನಂಬರ್‌ನಿಂದ ಈ ಮಾಹಿತಿ ಬಹಿರಂಗಗೊಳ್ಳುತ್ತದೆ.

ಪ್ರತೀ ರಾಜ್ಯದಲ್ಲಿ ಭೂ ಕಾನೂನುಗಳು ಭಿನ್ನವಾಗಿವೆ. ಉದಾಹರಣೆಗೆ, ಹಿಮಾಚಲ ಪ್ರದೇಶದಲ್ಲಿ ನಗರ ಮತ್ತು ಗ್ರಾಮೀಣ ಎಂಬ ವರ್ಗೀಕರಣ ಇಲ್ಲ. ಕೃಷಿ ಸಂಶೋಧನೆಯ ಕಾರ್ಯ ಕೈಗೊಳ್ಳುವುದಕ್ಕೆ ಬಳಸುವ ಭೂಮಿ ಖರೀದಿಗೆ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರದಲ್ಲಿ ಬಹಳ ರಿಯಾಯಿತಿಗಳು ಇವೆ. ಆದರೆ ಆಂಧ್ರಪ್ರದೇಶದಲ್ಲಿ ಕೆಲವು ನಿಬಂಧನೆಗಳಿವೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುವ ಭೂ ದಾಖಲೀ ಕರಣದಲ್ಲಿ ಇದನ್ನು ಗಮನಿಸುವುದು ಅವಶ್ಯ. ಭೂಮಿಯ ವ್ಯವಸ್ಥಿತ ದಾಖಲೀಕರಣದಿಂದ ಎಲ್ಲಕ್ಕಿಂತ ಮುಖ್ಯವಾಗಿ ಸಂಪತ್ತಿನ ಕರ ವಸೂಲಿಗೆ ಅನುಕೂಲವಾಗುವುದು. ಸಂಪತ್ತು ಹೊಂದಿರುವುದಕ್ಕೆ ಆದಾಯದ ಮೂಲಗಳನ್ನು ವಿಚಾರಿಸಲು ನೆರವಾಗುವುದು. ಇದರಿಂದ ಅನೇಕ ಆರ್ಥಿಕ ಅಕ್ರಮ ವ್ಯವಹಾರಗಳನ್ನು ತಡೆಯಬಹುದಾಗಿದೆ.

ರಾಜ್ಯಗಳ ಮಟ್ಟದಲ್ಲಿ ಭೂ ಕಾನೂನು ಸುಧಾ ರಣೆಯ ಪ್ರಯತ್ನಗಳು ಆಗಾಗ ನಡೆದಿವೆ. ಆದರೆ ಸಮರ್ಪಕವಾಗಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ನಿಷ್ಠುರವಾಗಿ ಈ ಯೋಜನೆ ಕಾರ್ಯರೂಪಕ್ಕೆ ತರುವುದು ತೀರ ಅವಶ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT