ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪರೀಕ್ಷೆ ಒತ್ತಡ: ಎಷ್ಟಿರಬೇಕು?

ಮಕ್ಕಳನ್ನು ಇಂದು ಹೆಚ್ಚಾಗಿ ಕಾಡುತ್ತಿರುವುದು ಪರೀಕ್ಷೆಯ ಆತಂಕವಲ್ಲ, ಸರಿಯಾದ ಕಲಿಕೆಯಿಲ್ಲದ, ಸಿದ್ಧತೆಯಿಲ್ಲದ ಆತಂಕ
Last Updated 5 ಮಾರ್ಚ್ 2023, 21:24 IST
ಅಕ್ಷರ ಗಾತ್ರ

ಪರೀಕ್ಷೆಗಳು ಎದುರಾಗುತ್ತಿವೆ. ಕೆಲವರ ಪರೀಕ್ಷೆಗಳು ಮುಗಿಯುವ ಹಂತ ತಲುಪಿವೆ. ಮತ್ತೆ ಕೆಲವರ ಪರೀಕ್ಷೆಗಳು ಈಗಷ್ಟೇ ಆರಂಭವಾಗುವ ಹೊತ್ತು. ಆದರೆ ಪರೀಕ್ಷೆ ಹೆಚ್ಚಿನ ಮಕ್ಕಳಿಗೆ ಒತ್ತಡವಾಗುವಂತೆ ಅದೇಕೋ ತೋರುತ್ತಿಲ್ಲ. ಆದರೆ ಅಪ್ಪಅಮ್ಮಂದಿರಿಗೆ ಮಾತ್ರ ಇದು ‘ಅತೀ ಒತ್ತಡ’ದ ಕಾಲ!

ಕೋವಿಡ್ ಪೂರ್ವದ ದಿನಗಳಿಗೆ ಹೋಲಿಸಿದರೆ ಮಕ್ಕಳ ಬರವಣಿಗೆಯ, ನಾಲ್ಕು ಸಾಲಿಗಿಂತ ಹೆಚ್ಚು ಉತ್ತರ ಬರೆಯುವ ಕೌಶಲವಂತೂ ಕಡಿಮೆಯಾಗಿದೆ. ಏಕಾಗ್ರತೆಯ ಅವಧಿಯೂ ಇಳಿಕೆಯಾಗಿದೆ. ಪ್ರಶ್ನೆಪತ್ರಿಕೆಯ ಮಾದರಿಯನ್ನೂ ಅದಕ್ಕೆ ತಕ್ಕಂತೆ ಮಾರ್ಪಡಿಸಲಾಗಿದೆ. ಮಕ್ಕಳು ಇಂದಿನ ಪಠ್ಯಕ್ರಮದಲ್ಲಿ ಪ್ರತಿವಾರ ಕಿರು ಪರೀಕ್ಷೆಗಳನ್ನು ಎದುರಿಸುವುದರಿಂದ, ಪರೀಕ್ಷೆ ಬರೆಯುವ ಕಾಲದ ಒತ್ತಡ ಗಣನೀಯವಾಗಿ ಇಳಿದಿದೆ. ಹಾಗಾಗಿ ಮಕ್ಕಳನ್ನು ಇದೀಗ ಕಾಡುತ್ತಿರುವುದು ಪರೀಕ್ಷೆಯ ಒತ್ತಡ ಎನ್ನುವ ಬದಲು ‘ಫಲಿತಾಂಶದ ಒತ್ತಡ’ ಎನ್ನುವುದೇ ಸರಿ. ‘ಫಲಿತಾಂಶದ ಒತ್ತಡ’ ಮಕ್ಕಳನ್ನು ಕಾಡುವುದಕ್ಕೆ ಕಾರಣವಾದರೂ ಏನು? ಪಠ್ಯಕ್ರಮದಲ್ಲಿ ಮಾದರಿಯಾಗಲಿ, ಪರೀಕ್ಷಾ ಕ್ರಮವಾಗಲಿ ಹಿಂದಿಗಿಂತ ಬಹಳಷ್ಟು ಮಾರ್ಪಾಟು ಕಂಡಿದ್ದರೂ, ಪರೀಕ್ಷೆಯನ್ನು ಅಪ್ಪಅಮ್ಮ, ಕೆಲಮಟ್ಟಿಗೆ ಶಿಕ್ಷಕರು ನೋಡುವ ರೀತಿ ಬದಲಾಗಿಲ್ಲ. ಪರೀಕ್ಷೆಯ ಫಲಿತಾಂಶ ಇಂದಿಗೂ ನಮಗೆ ಮಿಕ್ಕೆಲ್ಲ ವಿಷಯ, ಸಾಮರ್ಥ್ಯಕ್ಕಿಂತ ಬಲುಮುಖ್ಯವೇ ಆಗಿ ಉಳಿದುಬಿಟ್ಟಿದೆ.

‘ಪರೀಕ್ಷೆ’ ಎಂದರೆ ಮನೆಗಳಲ್ಲಿ ‘ಅಘೋಷಿತ ಕರ್ಫ್ಯೂ’ ಎಂಬಂತಹ ಪರಿಸ್ಥಿತಿ ಮೊದಲಿರುತ್ತಿತ್ತು. ಅಪ್ಪಅಮ್ಮ ತಮ್ಮ ಚಟುವಟಿಕೆಗಳನ್ನೂ ಕಡಿಮೆ ಮಾಡಿ, ಕೇಬಲ್ ತೆಗೆಸಿ, ಮನರಂಜನೆಯೇ ಇರದ ‘ಓದುವ ವಾತಾವರಣ’ ಮನೆಗಳಲ್ಲಿ ಜನವರಿಯಿಂದಲೇ ಮೊದಲಾಗುತ್ತಿತ್ತು. ಪರೀಕ್ಷೆಗಳಲ್ಲಿ ಅಂಕ ಗಳಿಸುವುದು, ತೇರ್ಗಡೆಯಾಗುವುದು, ಜೀವನದಲ್ಲಿ ತೇರ್ಗಡೆಯಾಗುವುದಕ್ಕೆ ಸಮವೆಂದೇ ಭಾವಿಸಲಾಗುತ್ತಿತ್ತು! ಅದು ಕೆಲಮಟ್ಟಿಗೆ ನಿಜವೂ ಆಗಿತ್ತು! ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಕಿರುಪರೀಕ್ಷೆಗಳ ಅಂಕಗಳು, ಇತರ ಪಠ್ಯಪೂರಕ ಚಟುವಟಿಕೆಗಳು ಇವುಗಳೆಲ್ಲದರ ಕ್ರೋಡೀಕೃತ ಅಂಕಗಳಿಂದ 9ನೇ ತರಗತಿಯವರೆಗಂತೂ ಬಹುತೇಕ ಎಲ್ಲರೂ ತೇರ್ಗಡೆಯಾಗುತ್ತಾರೆ. ಆದರೆ ಹತ್ತನೇ ತರಗತಿಯಿಂದ ಮತ್ತೆ ಒತ್ತಡ ಏರುತ್ತದೆ. ಜ್ಞಾನವಿರುತ್ತದೆಯೋ ಇಲ್ಲವೋ ತೇರ್ಗಡೆಯೊಂದೇ ಗುರಿಯಾಗಿ ಬಹುಮಂದಿ ಪರೀಕ್ಷೆ ಬರೆಯುತ್ತಾರೆ.

ಪರೀಕ್ಷೆ ಎಂಬ ಕ್ರಮ ಮೌಲ್ಯಮಾಪನಕ್ಕೆ ಬೇಕೇ ಬೇಕು ಎಂಬುದನ್ನು ಮನೋವೈದ್ಯರೂ ಸೇರಿದಂತೆ ಶಿಕ್ಷಣ ತಜ್ಞರು, ಪರಿಣತರು ಒಪ್ಪುತ್ತಾರೆ. ಒಂದು ನಿರ್ದಿಷ್ಟ ಹಂತದವರೆಗಿನ ಒತ್ತಡವು ಪರೀಕ್ಷೆಯಲ್ಲಿನ ಪ್ರದರ್ಶನವನ್ನು ಉತ್ತಮಗೊಳಿಸುತ್ತದೆ. ಒಂದಿಷ್ಟು ಹುರುಪು ತರುವ ಹಾರ್ಮೋನುಗಳನ್ನು ಬಿಡುಗಡೆ ಮಾಡಿ, ಏಕಾಗ್ರತೆ, ನೆನಪಿನ ಶಕ್ತಿಯನ್ನು ವರ್ಧಿಸುತ್ತದೆ. ಆದರೆ ಸಮಸ್ಯೆ ಎದುರಾಗುವುದು, ಈ ಆತಂಕ ಒಂದು ಹಂತ ದಾಟಿದಾಗ. ಆಗಲೇ ಪರೀಕ್ಷೆಯ ಮುನ್ನಾ ದಿನಗಳಲ್ಲಿ, ಪರೀಕ್ಷೆಯ ದಿನಗಳಲ್ಲಿ ಅಪ್ಪಅಮ್ಮ ಮಕ್ಕಳನ್ನು ‘ಬೆಳಿಗ್ಗೆಯಿಂದ ವಾಂತಿಯಾಗ್ತಾನೇ ಇದೆ ಡಾಕ್ಟ್ರೇ’, ‘ಇವಳು ಪರೀಕ್ಷೆಗೆ ಹೋಗೋದೇ ಇಲ್ಲ ಅಂತ ಕೂತ್ಬಿಟ್ಟಿದ್ದಾಳೆ’ ಎಂದೆಲ್ಲ ಕರೆತರುವುದು ನಡೆಯುತ್ತವೆ.

ಹೀಗೆ ಬರುವ ಮಕ್ಕಳಲ್ಲಿ ಸಾಮಾನ್ಯವಾಗಿರುವ ಸಮಸ್ಯೆಗಳೆಂದರೆ, ಇಡೀ ಶೈಕ್ಷಣಿಕ ವರ್ಷದ ಓದಿನ ಗ್ರಹಿಕೆಯಲ್ಲಿ ಕೊರತೆ, ವ್ಯಕ್ತಪಡಿಸುವ ಕೌಶಲವಿಲ್ಲದಿರುವುದು, ಕಿರುಪರೀಕ್ಷೆಗಳನ್ನು ಎದುರಿಸುವಾಗ ಗೈರುಹಾಜರಿ. ಶಿಕ್ಷಕರಿಗೆ ಹಾಗೂ ನೋಡುವ ಮನೋವೈದ್ಯರಿಗೆ ಸುಲಭವಾಗಿ ಕಾಣುವ ಇವುಗಳನ್ನು ಅಪ್ಪಅಮ್ಮ ಗ್ರಹಿಸುವಲ್ಲಿ ಸೋಲುತ್ತಾರೆ. ಒಂದೊಮ್ಮೆ ಕಂಡರೂ, ಒಪ್ಪಿಕೊಳ್ಳುವುದಿಲ್ಲ. ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಸಹಜವಾಗಿ ಅಪ್ಪಅಮ್ಮಂದಿರ ಈ ನಿರೀಕ್ಷೆಗಳನ್ನು ಅವರ ಮಾತು, ನಡವಳಿಕೆಗಳಲ್ಲಿ ನೋಡುವ ಮಕ್ಕಳು, ಅವರಿಗೆ ಎದುರು ಹೇಳಲಾಗದೆ ವಿವಿಧ ನೋವು, ಆತಂಕದಿಂದ ತಲೆದೋರುವ ಆರೋಗ್ಯ ಸಮಸ್ಯೆಗಳ ಹಿಂದೆ ರಕ್ಷಣೆ ಪಡೆಯುತ್ತಾರೆ. ಅಪ್ಪ-ಅಮ್ಮಮಕ್ಕಳು ಎಲ್ಲರೂ ಮತ್ತೆ ಮತ್ತೆ ನರಳುತ್ತಾರೆ.

ಪರೀಕ್ಷೆಯನ್ನು ಎದುರಿಸುವುದು ಹೇಗೆ, ಅಂಕ ಗಳಿಸುವುದು ಹೇಗೆ ಎಂಬ ಉಪನ್ಯಾಸ, ಕಾರ್ಯಾಗಾರಗಳೆಲ್ಲವೂ ನಿಜವಾಗಿ ಬದಲಾಗಬೇಕಾದದ್ದು ‘ಆನಂದದ ಕಲಿಕೆ ಹೇಗೆ?’ ‘ಅರ್ಥಪೂರ್ಣ ಜ್ಞಾನ ಗಳಿಸುವುದು ಹೇಗೆ?’ ಎಂಬ ಉಪನ್ಯಾಸ
ಗಳಾಗಿ! ವಿಪರ್ಯಾಸವೆಂದರೆ, ಬಹು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳ ಜ್ಞಾನವೂ ಇಂದು ಪ್ರಶ್ನಾರ್ಹ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮಕ್ಕಳನ್ನು ಕಾಡುತ್ತಿರುವುದು ಪರೀಕ್ಷೆಯ ಆತಂಕವಲ್ಲ. ಸರಿಯಾದ ಕಲಿಕೆಯಿಲ್ಲದ, ಸಿದ್ಧತೆಯಿಲ್ಲದ ಆತಂಕ. ಫಲಿತಾಂಶ ಬಂದಾಗ ಪೋಷಕರ, ಇತರರ ಪ್ರಶ್ನೆಗಳನ್ನು ಎದುರಿಸುವ ಆತಂಕ. ಹಾಗಾಗಿ ಪೋಷಕರು, ವಿದ್ಯಾರ್ಥಿಗಳು ಕೊಂಚ ಒತ್ತಡ ಮಾಡಿಕೊಂಡು, ತಮ್ಮ ಗಮನಹರಿಸಬೇಕಾದದ್ದು ಕಲಿಕೆಯ ಕಡೆಗೆ. ಹಾಗೆ ಕಲಿಕೆಯೇ ಗುರಿಯಾದ ಶಿಕ್ಷಣವನ್ನು ಶಿಕ್ಷಣ ಕ್ರಮವೂ ಪ್ರಚೋದಿಸುವಂತೆ ಇರಬೇಕು. ಆಗ ಪರೀಕ್ಷೆ ಎನ್ನುವುದು ಒತ್ತಡದ ಕಾಲವೆನಿಸಲಾರದು. ತನ್ನ ಕಲಿಕೆ, ಜ್ಞಾನವನ್ನು ಇತರರಿಗೆ ಪ್ರದರ್ಶಿಸುವ, ನಿರೂಪಿಸುವ ಆನಂದ ಪರೀಕ್ಷೆಯಲ್ಲಿ ದೊರೆಯಬಹುದು.

ಫಲಿತಾಂಶದ ಬಗ್ಗೆ ಚಿಂತೆ ಬಿಡಬೇಕು. ಫಲಿತಾಂಶ ಬಂದಾಗ ಪ್ರಾಮಾಣಿಕವಾಗಿ ಸ್ವೀಕರಿಸಬೇಕು. ‘ಅಂಕ ಗಳಿಕೆಯೇ ಗುರಿ’ ಎಂಬ ಅನಾದಿ ಕಾಲದ ತಪ್ಪು ನಂಬಿಕೆಯಿಂದ ಹೊರಬರಬೇಕು. ಅಂಕ ಬಂದೀತೋ ಇಲ್ಲವೋ, ನೆಮ್ಮದಿ, ಶಾಂತಿ ನಮ್ಮದಾಗುತ್ತವೆ. ಜೀವನ ಮುಂದೆ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT