ಶನಿವಾರ, ಅಕ್ಟೋಬರ್ 31, 2020
22 °C
ಕನ್ನಡ ಮಾಧ್ಯಮದಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾದಾಗ ಮೂಡುವ ಭೀತಿ, ಯಾವುದೇ ಹಂತದಲ್ಲಿ ಮಾಧ್ಯಮ ಬದಲಾಯಿಸುವಾಗಲೂ ಎದುರಾಗುವಂಥದ್ದು

ಸಂಗತ: ಮಾಧ್ಯಮ ಎಂಬ ಮಾನಸಿಕ ಭೀತಿ

ಸ.ರ.ಸುದರ್ಶನ Updated:

ಅಕ್ಷರ ಗಾತ್ರ : | |

Prajavani

ಪದವಿಪೂರ್ವ (ಪಿ.ಯು) ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ದಾರಿಯನ್ನು ನಿರ್ಧರಿಸುವ ಹಂತ. ಆದರೆ ಈ ಹಂತದಲ್ಲಿ ದೊರೆಯುವ ಅವಕಾಶಗಳಿಗೆ ವಿದ್ಯಾರ್ಥಿಯ ಆಸಕ್ತಿಯ ಜೊತೆಗೆ ಅಂಕ ಗಳಿಕೆಯೂ ಮುಖ್ಯವಾಗುತ್ತದೆ. ಎಸ್ಎಸ್ಎಲ್‌ಸಿ ತನಕ ಕನ್ನಡ ಮಾಧ್ಯಮದಲ್ಲಿ ಓದಿ, ಪಿ.ಯುವಿನಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲಿಷಿಗೆ ಬದಲಾದಾಗ ಓದಲು ಕಷ್ಟವಾಗುತ್ತದೆಂಬ ಭಾವನೆ ಮಕ್ಕಳಲ್ಲಿ ಮೂಡುವುದು ಸಹಜ. ಆದರೆ ಇದು ಒಂದು ಮಾನಸಿಕ ಭೀತಿ. ಸೈಕಲ್ ಕಲಿತವನು ಮುಂದೆ ಸ್ಕೂಟರ್ ಓಡಿಸಲು ಕಲಿಯುವಾಗ ಮೂಡುವಂತಹದು. ಸ್ವಲ್ಪ ಕಾಲಾನಂತರ ಸ್ಕೂಟರ್ ಅನ್ನು ಸರಾಗವಾಗಿ ಓಡಿಸುವಂತೆ, ಇಂಗ್ಲಿಷ್ ಮಾಧ್ಯಮದಲ್ಲಿ ಮುಂದುವರಿಯಬಹುದು. ಇದು ಯಾವುದೇ ಹಂತದಲ್ಲಿ ಬದಲಾವಣೆಯಾದಾಗ ಎದುರಾಗುವಂಥ ಭಾವನೆ.

ಪಿ.ಯುವನ್ನು ಕನ್ನಡ ಮಾಧ್ಯಮದಲ್ಲಿ ಓದಿದವರಿಗೂ ಮುಂದಿನ ಹಂತದಲ್ಲಿ ಮಾಧ್ಯಮ ಬದಲಾವಣೆಯಾದಾಗ ಕಷ್ಟ ಎಂಬ ಭಾವನೆ ಮೂಡುತ್ತದೆ. ಕೀಳರಿಮೆ ಬಿಟ್ಟು ತುಸು ಪರಿಶ್ರಮಪಟ್ಟರೆ ಅಲ್ಲೂ ಯಶಸ್ಸಿನ ದಾರಿ ಖಂಡಿತ.

ಆದರೆ ಮಾಧ್ಯಮ ಬದಲಾವಣೆಯಾದಾಗ ಹೆಚ್ಚು ಬುದ್ಧಿವಂತರು ನಿಭಾಯಿಸುತ್ತಾರೆ. ಉಳಿದವರು ಅನಗತ್ಯ ಭೀತಿಯಿಂದ ಸ್ವಲ್ಪ ಹಿಂದೆ ಬೀಳುತ್ತಾರೆ. ಆದ್ದರಿಂದ ವಿಷಯ ಕಲಿಕೆ ಮತ್ತು ಅಂಕ ಗಳಿಕೆ ಎರಡು ದೃಷ್ಟಿಯಿಂದಲೂ ಎಸ್ಎಸ್ಎಲ್‌ಸಿ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾವಣೆ ಹೊಂದುವ ಬದಲು, ಪಿ.ಯು ನಂತರ ಅನಿವಾರ್ಯವಾದ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.

ನಾವು ಮೈಸೂರಿನಲ್ಲಿ ಕಳೆದ ವರ್ಷ ನೃಪತುಂಗ ಪದವಿಪೂರ್ವ ಕಾಲೇಜನ್ನು ತೆರೆದಿದ್ದೇವೆ. ಪ್ರಸ್ತುತ ರಾಜ್ಯದ ಏಕೈಕ ಕನ್ನಡ ಮಾಧ್ಯಮ ವಿಜ್ಞಾನ ಪದವಿಪೂರ್ವ ಕಾಲೇಜು ಇದು. ನಾವು ಕಾಲೇಜು ಪ್ರಾರಂಭದ ಸಮಯದಲ್ಲಿ ಸುತ್ತಮುತ್ತಲಿನ ಸುಮಾರು 30 ಪ್ರೌಢಶಾಲೆಗಳಿಗೆ ಭೇಟಿ ನೀಡಿ, ಪಿ.ಯುವಿನಲ್ಲಿ ಎಷ್ಟು ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲು ಬಯಸುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಿದೆವು. ಸುಮಾರು 700ಕ್ಕೂ ಹೆಚ್ಚು ಮಕ್ಕಳು ಅಂತಹ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅವರಲ್ಲಿ ಒಬ್ಬರೂ ಸೇರಲಿಲ್ಲ. ಮಕ್ಕಳ ಮಾಧ್ಯಮದ ಆಯ್ಕೆಯು ಪೋಷಕರ ಆಯ್ಕೆಗೆ ಬಲಿಯಾಗಿತ್ತು.

–ಸ.ರ.ಸುದರ್ಶನ, ಮೈಸೂರು

**
ಪರಿಹಾರವಿಲ್ಲದ ಸಮಸ್ಯೆಯಲ್ಲ
ಕನ್ನಡದಲ್ಲಿ ತಂದಿರುವ ಪಿ.ಯು ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂಬಂಧಿಸಿದ ನನ್ನ ಲೇಖನಕ್ಕೆ (ಪ್ರ.ವಾ., ಸೆ. 12) ಡಾ. ಜಿ.ಬೈರೇಗೌಡ (ಚರ್ಚೆ, ಸೆ. 15) ಮತ್ತು ಪ್ರೊ. ಅಬ್ದುಲ್ ರೆಹಮಾನ್ ಪಾಷ (ಚರ್ಚೆ, ಸೆ. 22) ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಇರಬೇಕೆಂಬ ಕೇಂದ್ರ ಸರ್ಕಾರದ ಆಶಯದಂತೆ ಕರ್ನಾಟಕದಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಗೆ 2012-13ರಿಂದಲೂ ಎನ್‌ಸಿಇಆರ್‌ಟಿ ಪಠ್ಯವನ್ನೇ ಬೋಧಿಸಲಾಗುತ್ತಿದೆ. ಆದರೆ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೂ ‘ನೀಟ್’ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿರುವುದರಿಂದ, ಈ ವರ್ಷ ಪಿ.ಯು ಮಂಡಳಿಯು ಕನ್ನಡದಲ್ಲಿ ಪಿ.ಯು ವಿಜ್ಞಾನ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಿದೆ. ಇದು ಸ್ವಾಗತಿಸಬೇಕಾದದ್ದೇ. ಆದರೆ ಅನುವಾದಿಸುವಾಗ ಪಾರಿಭಾಷಿಕ ಪದಗಳ ವಿಚಾರದಲ್ಲಿ  ಗೊಂದಲ ಸೃಷ್ಟಿಯಾಗಿದೆ. ಕನ್ನಡದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರಿಸಲು ಅವಕಾಶವಿರುವಾಗ ಇಂಥ ಗೊಂದಲಗಳು ಇರಬಾರದು. ಬೈರೇಗೌಡ ಅವರು ಕೆಲವು ಪದಗಳು ಇಂಗ್ಲಿಷ್‍ನಲ್ಲಿ ಇದ್ದರೂ ಅಭ್ಯಂತರವಿಲ್ಲ ಎಂದಿದ್ದಾರೆ. ಆದರೆ ಪರೀಕ್ಷೆಯಲ್ಲಿ ಉತ್ತರಿಸುವಾಗ ಪ್ರಶ್ನೆ ಮತ್ತು ಉತ್ತರ ಎರಡೂ ಕನ್ನಡದಲ್ಲಿರುತ್ತವೆ ಎಂಬುದನ್ನು ಮರೆಯಬಾರದು. ಅಲ್ಲದೆ ಕನ್ನಡದಲ್ಲಿ ವಿಜ್ಞಾನ ಶಬ್ದಗಳಿಗೇನೂ ಕೊರತೆ ಇಲ್ಲ.

ಇನ್ನು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವಿನ ಅಂತರ ತಗ್ಗಿಸಲು ಬ್ರಿಜ್ ಕೋರ್ಸ್ ಕುರಿತು ಪಾಷ ಅವರು ಸೂಚಿಸಿರುವುದು ಯುಕ್ತವೇ ಆಗಿದೆ. ಆದರೆ ಅನುವಾದ ಮಾಡಿರುವ ಪುಸ್ತಕದಲ್ಲಿ ಶಿಷ್ಟ ಪಾರಿಭಾಷಿಕ ಪದಗಳಿಗೆ ಆವರಣದಲ್ಲಿ ಸಂವಾದಿಯಾದ ಇಂಗ್ಲಿಷ್ ಪದವನ್ನು ಕೊಟ್ಟರೆ ವಿದ್ಯಾರ್ಥಿಗಳ ಗ್ರಹಿಕೆಗೆ ಸುಲಭವಾಗುತ್ತದೆ. ಹೆಚ್ಚು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು. ವಿಜ್ಞಾನ ಪಠ್ಯಗಳನ್ನು ಕನ್ನಡದಲ್ಲಿ ರಚಿಸುವಾಗ ವಿಜ್ಞಾನ ಬರಹಗಾರರೇ ಇರಬೇಕು ಎಂಬುದು ಸಮಂಜಸವಲ್ಲ. ಕರ್ನಾಟಕದಲ್ಲಿ ವಿಜ್ಞಾನದ ಅನುಭವಿ ಶಿಕ್ಷಕರಿದ್ದಾರೆ, ಅವರ ಜೊತೆಗೆ ವಿಜ್ಞಾನ ಲೇಖಕರು ಸಮಿತಿಯಲ್ಲಿದ್ದರೆ ಕೃತಿ ರಚನೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು.

ಮೂಲ ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ಅನುವಾದದ ಬದಲು ಸ್ವತಂತ್ರವಾಗಿಯೇ ರಚನೆಯಾಗಬೇಕು ಎಂಬ ಸಲಹೆ ಕೂಡ ಕಾರ್ಯಸಾಧುವಲ್ಲ. ಎನ್‌ಸಿಇಆರ್‌ಟಿ ಪಠ್ಯದ ಎಲ್ಲ ಅಂಶಗಳೂ ಬಿಟ್ಟುಹೋಗದಂತೆ ರಚಿಸಬೇಕು. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಮೂಲ ಪಠ್ಯವನ್ನೇ ಆಧರಿಸಿರುತ್ತವೆ. ಈಗ ಮಾಡಬೇಕಾದದ್ದಿಷ್ಟೇ. ಈಗಾಗಲೇ ಪ್ರಕಟವಾಗಿರುವ ಕನ್ನಡ ಪಿ.ಯು ವಿಜ್ಞಾನ ಪಠ್ಯದಲ್ಲಿ ತಿದ್ದುಪಡಿಗಳನ್ನು ಹಾಕಬೇಕು. ಆ ಪುಸ್ತಕಗಳನ್ನು ಬರೀ ಪಿ.ಯು ಕಾಲೇಜಿನ ಪುಸ್ತಕ ಭಂಡಾರಕ್ಕೆ ನೀಡಿದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಲ್ಲರಿಗೂ ಲಭ್ಯವಾಗಬೇಕು.

–ಟಿ.ಆರ್.ಅನಂತರಾಮು, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು