ಶುಕ್ರವಾರ, ಮೇ 14, 2021
35 °C
ಏರುತ್ತಿರುವ ಕೋವಿಡ್‌ ರೋಗದಿಂದಾಗುವ ಹಾನಿ ತಡೆಯಲು ಸರ್ಕಾರದ ಮುಂದಿರುವ ಏಕೈಕ ಪ್ರಬಲ ಅಸ್ತ್ರವೆಂದರೆ ಕೋವಿಡ್ ಲಸಿಕೆಯೊಂದೇ

ಸಂಗತ: ವೈರುಧ್ಯದಲ್ಲಿ ದೇಶದ ಆರೋಗ್ಯ

ಡಾ. ಲಕ್ಷ್ಮಣ ವಿ.ಎ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಗುಡ್ಡಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ ದಿನ ಎಂದಿನಂತೆ ಲಸಿಕೆ ನೀಡುವ ವ್ಯವಸ್ಥಾಪನದಲ್ಲಿ ಮಗ್ನನಾಗಿದ್ದೆ. ಭಾನುವಾರವೂ ಬಿಡುವಿರದ ಈ ಲಸಿಕೆ ಅಭಿಯಾನದ ಒಂದು ಭಾಗವಾಗಿ, ಸೀಮಿತ ಆರೋಗ್ಯ ಸಿಬ್ಬಂದಿಯೊಂದಿಗೆ ನಮಗೆ ನೀಡಿದ ಲಸಿಕೆ ಹಾಗೂ ಕೋವಿಡ್ ಟೆಸ್ಟಿಂಗ್ ಆಯಾ ದಿನದ ಗುರಿ ತಲುಪುವುದು ಸವಾಲೇ ಸರಿ.

ಇಂತಹ ಒಂದು ನಿಗಿ ನಿಗಿ ಕೆಂಡದಂತಹ ಮಾರ್ಚ್‌ ತಿಂಗಳಿನ ಮಧ್ಯಾಹ್ನ ಒಬ್ಬ ಶ್ರೀಮಂತ ಯುವಕ, ಜೊತೆಗೆ ಇಬ್ಬರು ತರುಣಿಯರು ನನ್ನ ಮುಂದೆ ನಿಂತರು. ಕಾರಣ ಕೇಳಿದರೆ, ಲಸಿಕೆ ಪಡೆಯಬೇಕೆಂದರು. ನಾನು ಅವರ ಆಧಾರ್‌ ಕಾರ್ಡ್ ನೋಡಿ, ನಿಮಗೆ ಕಡಿಮೆ ವಯಸ್ಸಾದ್ದ ರಿಂದ ಲಸಿಕೆ ನೀಡಲು ಸಾಧ್ಯವಿಲ್ಲವೆಂದೆ. ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಖಾಸಗಿ ಆಸ್ಪತ್ರೆ ಗಳಲ್ಲಿ ಕೊಡುತ್ತಿದ್ದಾರೆ, ನಿಮಗೇಕೆ ಕೊಡಲಾಗುವುದಿಲ್ಲ ಎಂದು ಪಟ್ಟು ಹಿಡಿದರು. ಖಾಸಗಿ ಆಸ್ಪತ್ರೆಗೇ ತೆರಳಿ ಲಸಿಕೆ ಪಡೆಯಲು ಹೇಳಿದೆ. ಇಲ್ಲ, ಅವರಿಗೆ ಆಗುವು
ದಿಲ್ಲವಂತೆ. ದುಡ್ಡು ಕೊಟ್ಟರೆ (ಲಂಚ) ಸರ್ಕಾರಿ ಆಸ್ಪತ್ರೆಯಲ್ಲಿ ಕೊಡುತ್ತಾರೆ ಅಂತ ಅವರೇ ಹೇಳಿ ಕಳುಹಿಸಿದರು ಎಂದು ಹೇಳಿದಾಗ, ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ, ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ವಿವರಿಸಲು ನೋಡಿದೆ. ಆದರೆ ಆ ಯುವಕ ಎಷ್ಟು ದುಡ್ಡು ಕೊಟ್ಟಾದರೂ ಸರಿ ತಮಗೆ ಲಸಿಕೆ ಬೇಕೆಂದು ಹಟ ಹಿಡಿದು ಇನ್ನಿಲ್ಲದ ಆಮಿಷವೊಡ್ಡಿ, ಕೊನೆಗೆ ತನ್ನ ಡ್ರೈವರನನ್ನೂ ಸಂಧಾನಕ್ಕೆ ಕಳುಹಿಸಿ ವ್ಯವಹಾರ ಕುದುರಿಸಲು ನೋಡಿದ. ಕೊನೆಗೆ ಅವನನ್ನು ಉದಾಸೀನ ಮಾಡಿ ಆಸ್ಪತ್ರೆಯಿಂದ ಆಚೆ ಹಾಕುವುದು ಒಂದು ಸಾಹಸವೇ ಆಯಿತು.

ಆ ಯುವಕ– ಯುವತಿಯರಿಗೆ ಲಸಿಕೆ ಪಡೆಯುವ ಆಸೆ ಇದ್ದದ್ದು ತಪ್ಪಲ್ಲ. ಭಾರತ ಬಿಟ್ಟು ಬೇರೆ ದೇಶಗಳಲ್ಲಿ ಇದು ಈಗ ಸಾಧ್ಯವೂ ಆಗಿರಬಹುದು. ಆದರೆ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.

ಈಗಿರುವ ನೀತಿಯಂತೆ, ಮೊದಲು ಆರೋಗ್ಯ ಕಾರ್ಯಕರ್ತರಿಗೆ ನಂತರ ಕೋವಿಡ್ ಕರ್ತವ್ಯದ ಮುಂಚೂಣಿ ಯೋಧರಿಗೆ ಹಾಗೂ ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ವರ್ಗದವರೆಲ್ಲಾ ಕೋವಿಡ್ ಲಸಿಕೆಯನ್ನು ಪಡೆಯುವ ಅದೃಷ್ಟದ ಫಲಾನುಭವಿಗಳೆಂದೇ ಪರಿಗಣಿಸಬಹುದು.

ಆದರೆ ಅದೃಷ್ಟದ ಈ ಮುಂಚೂಣಿ ಗುಂಪು ಲಸಿಕೆ ಪಡೆಯುವಲ್ಲಿ ಉದಾಸೀನ ಮಾಡುತ್ತಿರುವುದರ ಹಿಂದಿನ ಮರ್ಮವಾದರೂ ಏನಿರಬಹುದು? ನಾನು ಕೆಲಸ ಮಾಡುವ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ಮೂವತ್ತಾರು ಸಾವಿರ ಜನಸಂಖ್ಯೆ ಇದೆ. ಲಸಿಕೆ ನೀಡಲು ಆರೂವರೆ ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಆರೋಗ್ಯ ವ್ಯವಸ್ಥೆಯ ಬೇರುಮೂಲವಾದ ‘ಆಶಾ’ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆಯಲು ಪ್ರೋತ್ಸಾಹಿಸಿ, ಬಂದು ಹೋಗಲು ವಾಹನ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರೂ ಫಲಾನುಭವಿಗಳು ಹಿಂದೇಟು ಹಾಕುತ್ತಾರೆ. ಇದಕ್ಕೆ, ಲಸಿಕೆಯ ನಿರೀಕ್ಷಿತ ಫಲಿತಾಂಶದ ಬಗೆಗಿರುವ ಗೊಂದಲ, ಲಸಿಕೆ ನಂತರ ಉಂಟಾಗುವ ಅಡ್ಡ ಪರಿಣಾಮ ಅಥವಾ ಆಮೇಲೆ ತೆಗೆದುಕೊಂಡರಾಯಿತು ಎಂಬ ಉಡಾಫೆ, ಸಾಮಾಜಿಕ ಮಾಧ್ಯಮದಲ್ಲಿ ಲಸಿಕೆಯ ಬಗೆಗಿನ ಅಪಪ್ರಚಾರ ಇನ್ನೂ ಹತ್ತು ಹಲವು ಕಾರಣಗಳಿವೆ.

ಲಸಿಕೆ ಪಡೆದ ಮೇಲೆ ವ್ಯಕ್ತಿ ಕೊರೊನಾದಿಂದ ಸಂಪೂರ್ಣವಾಗಿ ಸುರಕ್ಷೆ ಪಡೆಯುತ್ತಾನೆ ಎಂಬುದಾಗಿ ವಿಜ್ಞಾನಿಗಳು ಎಲ್ಲಿಯೂ ಹೇಳಿಲ್ಲ. ಮಕ್ಕಳಿಗೆ ನೀಡುವ ಟೆಟಾನಸ್‌, ಡಿಪಿಟಿ, ದಡಾರ ಮುಂತಾದ ಲಸಿಕೆಗಳಂತೆ ಕೋವಿಡ್ ಲಸಿಕೆ ಕೂಡ ತನ್ನ ಇತಿಮಿತಿಯಲ್ಲೇ ಕೆಲಸ ಮಾಡುತ್ತದೆ. ಮಾಸ್ಕ್‌ ಧರಿಸುವಿಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹೇಗೆ ಕೊರೊನಾ ತಡೆಗೆ ಸಹಕಾರಿಯೋ ಹಾಗೇ ಲಸಿಕೆ ಕೂಡ ಕೊರೊನಾದ ವಿರುದ್ಧ ದೇಹಕ್ಕೆ ಬಲ ನೀಡುವ ಒಂದು ಆಯುಧ. ಎರಡು ಡೋಸ್‌ ಲಸಿಕೆ ಪಡೆದ 45 ದಿನಗಳಲ್ಲಿ ದೇಹ ಕೊರೊನಾ ಎದುರಿಸಲು ಸಜ್ಜಾಗುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಲಸಿಕೆ ಪಡೆದ ನಂತರವೂ ದೇಹ ಹೊಕ್ಕರೆ ಕೊರೊನಾ ಬಲು ಬೇಗ ದೇಹದ ಇಮ್ಯೂನ್‌ ವಿರುದ್ಧ ಸೋಲುತ್ತದೆ. ಹೃದಯಾಘಾತ, ಪಾರ್ಶ್ವವಾಯು ಇನ್ನಿತರ ಗಂಭೀರ ಹಾನಿ ಹಾಗೂ ಸಾವನ್ನೂ ತಡೆಯಬಹುದು. ಏರುತ್ತಿರುವ ಕೋವಿಡ್‌ ರೋಗದಿಂದಾಗುವ ಹಾನಿ ತಡೆಯಲು ಸರ್ಕಾರದ ಮುಂದಿರುವ ಏಕೈಕ ಪ್ರಬಲ ಅಸ್ತ್ರವೆಂದರೆ ಕೋವಿಡ್ ಲಸಿಕೆಯೊಂದೇ.

ಒಂದು ಕಡೆ ಎಷ್ಟು ದುಡ್ಡು ಕೊಟ್ಟಾದರೂ ಲಸಿಕೆ ಪಡೆಯುತ್ತೇನೆಂಬ ಉಳ್ಳ ಯುವಕರ ಉತ್ಸಾಹ, ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಕೊಡುತ್ತೇವೆಂದರೂ ಒಪ್ಪದ ಮಧ್ಯಮವರ್ಗ. ಭಾರತದ ಆರೋಗ್ಯ ಸದ್ಯ ಈ ಎರಡರ ವೈರುಧ್ಯದಲ್ಲಿ ಜೀಕುತ್ತಿದೆ.

ಕೋವಿಡ್‌ನಿಂದ ಜಗತ್ತಿನಲ್ಲಿ ಆಗುತ್ತಿರುವ ತಲ್ಲಣ, ಸಾವು ನೋವು, ಆತ್ಮಹತ್ಯೆ, ಮನೆಯವರನ್ನು ಕಳೆದುಕೊಳ್ಳುವ ನೋವು, ಇದಕ್ಕಿರುವ ಈಗಿನ ಏಕೈಕ ಪರಿಹಾರವೆಂದರೆ ಲಸಿಕೆಯೊಂದೇ. ಜೊತೆಗೆ ಕೋವಿಡ್‌ ಮಾರ್ಗಸೂಚಿಯ ಸೂಕ್ತ ಪಾಲನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು