ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅವಳ ವ್ಯಥೆ; ಆಲಿಸಿ ಎಚ್ಚರಿಕೆಯ ಗಂಟೆ

ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತದೆ ಎಂಬುದಕ್ಕೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲೇ ಉತ್ತರ ಹುಡುಕಬೇಕು
Last Updated 30 ಜೂನ್ 2020, 22:48 IST
ಅಕ್ಷರ ಗಾತ್ರ

ಹೈದರಾಬಾದಿನ ಮೂವತ್ತೆರಡು ವರ್ಷದ ಲಾವಣ್ಯ ಲಹರಿ ಇತ್ತೀಚೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣನಾದ ಗಂಡನ ದೌರ್ಜನ್ಯ ಹಾಗೂ ಆತನ ವಿವಾಹಬಾಹಿರ ಸಂಬಂಧದ ಬಗ್ಗೆ ವಿಡಿಯೊ ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾಳೆ. ಮಕ್ಕಳಾಗದೇ ಇದ್ದುದಕ್ಕೆ ಲಾವಣ್ಯಳ ಗಂಡ ಮತ್ತು ಆತನ ಮನೆಯವರು ಅವಳನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ.

ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಲಾವಣ್ಯ, ಈ ಕಿರಿಕಿರಿಗೆ ಬೇಸತ್ತು ವರ್ಷದ ಹಿಂದೆ ಕೆಲಸವನ್ನೂ ಬಿಟ್ಟಿದ್ದಳು. ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಪೈಲಟ್ ಆಗಿರುವ ವೆಂಕಟೇಶ್ವರುಲು, ಲಾವಣ್ಯಳಿಗೆ ವಿಪರೀತವೆನಿಸು
ವಷ್ಟು ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆಕೆಯ ತವರು ಮನೆಯವರು ಆರೋಪ ಮಾಡಿದ್ದಾರೆ. ಆತ ಅವಳಿಗೆ ಹೊಡೆಯುತ್ತಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇಪ್ಪತ್ತೆರಡು ಸೆಕೆಂಡುಗಳ ಆ ಹಿಂಸಾತ್ಮಕ ವಿಡಿಯೊದಲ್ಲಿ ಪತ್ನಿಗೆಆತ ಮನಬಂದಂತೆ ಥಳಿಸುತ್ತಿರುವುದೂ ಯಜಮಾನಿಗೆ ಹೊಡೆಯುವುದನ್ನು ನೋಡಲಾಗದೆ ಅವರ ಮನೆಯ ನಾಯಿ ಮಧ್ಯೆ ಬರುತ್ತಿರುವುದೂ ಸೆರೆಯಾಗಿದೆ.

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ, ಸಂತಾನ ಹೀನತೆಯಂತಹ ವಿಚಾರಗಳಿಗೆ ಮಹಿಳೆಯರು ಮಾನಸಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿ ಕೊಳ್ಳುವುದು ನಮ್ಮ ದೇಶದಲ್ಲಿ ಸಾಮಾನ್ಯ ಸಂಗತಿ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‍ಸಿಆರ್‌ಬಿ) ಹೇಳುವಂತೆ, ದೇಶದಲ್ಲಿ ಪ್ರತಿವರ್ಷ ನಡೆಯುವ ಒಟ್ಟು ಆತ್ಮಹತ್ಯೆಗಳಲ್ಲಿ ವಿವಾಹಿತ ಮಹಿಳೆಯರ ಸಂಖ್ಯೆ ಶೇ 17. ಆದರೆ ಈ ಸಂಗತಿ ಅತ್ಯಂತ ನಿರ್ಲಕ್ಷಿಸಲ್ಪಟ್ಟಿರುವುದೂ ಹೌದು. ಬೇರೆ ಆತ್ಮಹತ್ಯೆಗಳಂತೆ ಈ ಆತ್ಮಹತ್ಯೆಗಳ ಪ್ರಮಾಣವೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಂತಹ ಮುಂದುವರಿದ ರಾಜ್ಯಗಳಲ್ಲೇ ಹೆಚ್ಚು.

ಆರ್ಥಿಕವಾಗಿ ಸಬಲಳಾದ ಲಾವಣ್ಯಳಂತಹ ಮಹಿಳೆಯಿರಲೀ ಅಥವಾ ದುರ್ಬಲವಾದ ಮಹಿಳೆ ಯಿರಲೀ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂದರೆ, ಉತ್ತರವನ್ನು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಹುಡುಕಬೇಕು. ಇಲ್ಲಿ ಹೆಣ್ಣಿನ ಬದುಕಿನ ಪರಮೋದ್ದೇಶವೇ ಮದುವೆ ಆಗುವುದು. ಇಂದಿಗೂ ಹೆಣ್ಣುಮಕ್ಕಳ ವಿವಾಹ ಎಂಬುದು ಕುಟುಂಬಕ್ಕೆ ಗೌರವ ತರುವ ಅಥವಾ ಕಳೆಯುವ ಸಂಗತಿ. ಹುಡುಗಿ ಎಷ್ಟೇ ವಿದ್ಯಾವಂತೆಯಾಗಲಿ, ಎಂತಹದ್ದೇ ಉದ್ಯೋಗದಲ್ಲಿರಲಿ ತಂದೆ– ತಾಯಿ ಹುಡುಕಿದ ಹುಡುಗನನ್ನೇ ಮರುಮಾತಿಲ್ಲದೆ ವಿವಾಹವಾದರೆ ಆಕೆ ‘ಒಳ್ಳೆಯ ಮಗಳು’. ಕುಟುಂಬ ದವರ ಇಷ್ಟ ಮೀರಿ ವಿವಾಹವಾದರೆ? ಅವರನ್ನು ಮನೆಯ ಮರ್ಯಾದೆಯ ಹೆಸರಿನಲ್ಲಿ ಕೊಲೆ ಮಾಡುವ ಮರ್ಯಾದೆಗೇಡು ಹತ್ಯೆಗಳು ಉತ್ತರಭಾರತದಿಂದ ದಕ್ಷಿಣಕ್ಕೂ ಕಾಲಿಟ್ಟು ಬಹಳ ದಿನಗಳಾಗಿವೆ.

ವಿವಾಹವಾಗದ ಅಥವಾ ವಿಚ್ಛೇದಿತ ಹೆಣ್ಣು ಮಕ್ಕಳು ಏನೇ ಸಾಧನೆ ಮಾಡಿದ್ದರೂ ಅದು ಗೌಣ. ‘ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ’ ಒಟ್ಟಿನಲ್ಲಿ ಅಂಜುತ್ತಲೇ ಬದುಕಿದರೂ ಪರವಾಗಿಲ್ಲ ಗಂಡನ ಮನೆಯಲ್ಲೇ ಬದುಕಬೇಕು ಎಂಬುದು ಸಹಸ್ರಾರು ವರ್ಷಗಳಿಂದ ನಮ್ಮ ಸಮಾಜ ಹೆಣ್ಣುಮಕ್ಕಳ ತಲೆಯಲ್ಲಿ ತುಂಬಿಸುತ್ತಿರುವ ಸಂಗತಿ.

ದುರ್ದೈವವಶಾತ್ ಈ ವಿಚಾರ ನಮ್ಮ ಹುಡುಗಿಯರ ತಲೆಯಲ್ಲಿಯೂ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ತಮ್ಮ ಬದುಕನ್ನು ಬಲಿ ಕೊಟ್ಟಾದರೂ ಅವರು ಆ ಕಿರೀಟವನ್ನು ಕಾಪಾಡಿಕೊಳ್ಳಲು ತಯಾರಿರುತ್ತಾರೆ! ಹಾಗಾಗಿಯೇ ವರದಕ್ಷಿಣೆ ಸಂಬಂಧಿತ ಮತ್ತು ಇತರೆ ಕಿರುಕುಳಗಳನ್ನು ಅವರು ತವರಿನವರ ಗಮನಕ್ಕೇ ತರುವುದಿಲ್ಲ. ಅಕಸ್ಮಾತ್ ತಂದರೂ ಲೋಕಾಪವಾದಕ್ಕೆ ಹೆದರಿ ಬಹುತೇಕ ಕುಟುಂಬಗಳು ‘ಹೊಂದಿಕೊಂಡು’ ಹೋಗಲು ಮಗಳಿಗೆ ಸಲಹೆ ಕೊಡುತ್ತವೆ. ಸಣ್ಣಪುಟ್ಟ ಸಮಸ್ಯೆಗಳಾದರೆ ಇದು ಸರಿಯೂ ಹೌದು. ಆದರೆ ಹೊಂದಾಣಿಕೆ ಸಾಧ್ಯವಾಗದ ಹಂತ ಬಂದಾಗಲೂ ಇಂತಹ ಸಲಹೆ ಪಡೆದುಕೊಂಡ ಹೆಣ್ಣುಮಕ್ಕಳೇ ಹೆಣಗಳಾಗಿ ಹೋಗುತ್ತಿರುವ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಆದರೂ ನಮ್ಮ ಸಮಾಜ ಬದಲಾಗಿಲ್ಲ.

ಇನ್ನು ಪ್ರೀತಿಸಿ ಮದುವೆಯಾದ ಪತಿಯೇ ಪೀಡಕ ನಾದರೆ ಆ ಹೆಣ್ಣುಮಕ್ಕಳ ಕಥೆ ಮುಗಿದೇ ಹೋಯಿತು. ಹಾಗಾಗಿಯೇ ಒಳ್ಳೆಯ ಓದು, ಕೆಲಸ ಇದ್ದರೂ ಮಾನಸಿಕ ಬೆಂಬಲ ದೊರಕದೇ ಲಾವಣ್ಯಳಂತಹ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆಗಳು ಸಮಾಜವೇ ಯೋಜಿಸಿ ಮಾಡಿದ ಕೊಲೆಗಳೇ ಸೈ. ಮೇಲಿನ ಘಟನೆಯಲ್ಲಿ, ಆಕೆ ಸತ್ತ ನಂತರ ತವರು ಮನೆಯವರು ಮಗಳನ್ನು ಅಳಿಯ ಹಿಂಸಿಸುತ್ತಿರುವ ವಿಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ದ್ದಾರೆ. ಮೊದಲೇ ಆ ಕೆಲಸ ಮಾಡಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ ಎಂದರೆ ಸಮಾಜದ ಭಯ!

ಇಂತಹ ಅಸಂಖ್ಯ ಘಟನೆಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿವೆ. ಈ ಹೆಣ್ಣುಗಳು ತಮಗಾದ ಅನ್ಯಾಯವನ್ನು ತಡವಾಗುವ ಮುನ್ನ ಬಹಿರಂಗಪಡಿಸುವ ಸ್ಥೈರ್ಯವನ್ನು ಕುಟುಂಬಗಳು ಅವರಿಗೆ ನೀಡಬೇಕು. ಈ ದೀರ್ಘಾವಧಿಯ ಸಾಮಾಜಿಕ ಬದಲಾವಣೆಯನ್ನು ಸಾಧ್ಯವಾಗಿಸಲು ತಜ್ಞರಿಂದ ಹಿಡಿದು ನಮ್ಮನಿಮ್ಮಂತಹ ಸಾಮಾನ್ಯರವರೆಗೆ ಎಲ್ಲರೂ ಕೈ ಜೋಡಿಸಬೇಕು. ಆದರೆ ಅಲ್ಲಿಯವರೆಗೂ ಮಗಳನ್ನು ಕಳೆದುಕೊಂಡು, ಜೀವಂತ ಶವಗಳಂತೆ ಬದುಕುವ ಶಿಕ್ಷೆಯನ್ನು ಅನುಭವಿಸುವ ಲಾವಣ್ಯಳ ಪಾಲಕರಂತಹ ಅಸಂಖ್ಯ ಹಿರಿಯ ಜೀವಗಳ ನೋವು ಮಾತ್ರ ಸಮಾಜದ ಅಂತಃಕರಣವನ್ನು ಕಲಕುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT