ಬುಧವಾರ, ನವೆಂಬರ್ 25, 2020
19 °C
‘ಕನ್ನಡ ಕಾಯಕ’ದಡಿ ಎಲ್ಲ ಕನ್ನಡ ಶಾಲೆಗಳಿಗೆ ಆಗಬೇಕು ಕಾಯಕಲ್ಪ

ಶಾಶ್ವತವಾಗಿಸೋಣ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಶತಮಾನದ ಶಾಲೆಗಳಿಗೆ ಶಕ್ತಿ ತುಂಬೋಣ’ ಎಂಬ ಜಿ.ಎಸ್.ಜಯದೇವ ಮತ್ತು ಕೃಷ್ಣಮೂರ್ತಿ ಹನೂರು ಅವರ ವಿಶ್ಲೇಷಣೆ (ಪ್ರ.ವಾ., ನ. 2) ಅರ್ಥಪೂರ್ಣ ಹಾಗೂ ಸಮಯೋಚಿತವಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿ, ಶತಮಾನ ತುಂಬಿದ 35 ಶಾಲೆಗಳನ್ನು ಗುರುತಿಸಿ ಅವುಗಳ ಪುನರುತ್ಥಾನದ ಸಂಕಲ್ಪ ತೊಟ್ಟಿರುವುದು ಮೆಚ್ಚುವ ಸಂಗತಿ.

ಆಧುನಿಕ ಶಿಕ್ಷಣ ಪದ್ಧತಿಗೆ ರಾಜ್ಯ ಹಾಗೂ ಜಿಲ್ಲೆಗಳನ್ನು ಸಜ್ಜುಗೊಳಿಸಲು ಮೈಸೂರು ಸಂಸ್ಥಾನವು 1857ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ತೆರೆಯಿತು. ಇದರ ಮೇಲ್ವಿಚಾರಣೆಯಲ್ಲಿ ರಾಜ್ಯದಾದ್ಯಂತ ಆಯ್ದ ಸ್ಥಳಗಳಲ್ಲಿ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಲಾಯಿತು. ತತ್ಪರಿಣಾಮವಾಗಿ ವರ್ತಮಾನದಲ್ಲಿ ನೂರಾರು ಶಾಲೆಗಳು ಶತಮಾನದ ಹೊಸಿಲನ್ನು ದಾಟಿ ಇಂದಿಗೂ ಶಿಕ್ಷಣದ ಐತಿಹಾಸಿಕ ಕುರುಹುಗಳಾಗಿ ಕಂಡುಬರುತ್ತಿವೆ.

ದಾವಣಗೆರೆ ಜಿಲ್ಲೆಯಲ್ಲಿ 71 ಶಾಲೆಗಳು ಶತಮಾನ ಪೂರೈಸಿವೆ. ಇವುಗಳಲ್ಲಿ ಮೂರು ಉರ್ದು ಶಾಲೆಗಳೂ ಸೇರಿವೆ. ಇಷ್ಟೇ ಪ್ರಮಾಣದ ಶಾಲೆಗಳು ಶತಮಾನದ ಸಮೀಪದಲ್ಲಿವೆ. ದಾವಣಗೆರೆ ಜಿಲ್ಲೆಯ ಕೊಡಗನೂರು ಮತ್ತು ಚೆನ್ನಗಿರಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 155 ವರ್ಷಗಳು ಸಂದಿರುವುದು ಅಚ್ಚರಿ ಮತ್ತು ಹೆಗ್ಗಳಿಕೆಯ ಸಂಗತಿಯಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ದಾವಣಗೆರೆ ನಗರದ ಹಳೆಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದವರಾಗಿದ್ದು ಈ ಶಾಲೆಯೂ ಇದೀಗ 120 ವರ್ಷಗಳನ್ನು ಪೂರೈಸಿದೆ.

ಅಚ್ಚರಿ ಮೂಡಿಸುವ ಇಂತಹ ಶತಮಾನದ ಶಾಲೆ ಗಳು ರಾಜ್ಯದಾದ್ಯಂತ ಇದ್ದು, ಅವುಗಳನ್ನು ಪುನಶ್ಚೇತನಗೊಳಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ದಿಸೆಯಲ್ಲಿ ಸರ್ಕಾರವು ಶತಮಾನ ದಾಟಿದ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಶಾಲಾ ಸಬಲೀಕರಣ ಸಮಿತಿಯನ್ನು ರಚಿಸಿ, ಅದರ ಮೂಲಕ ದೀರ್ಘಕಾಲೀನ ಶಾಶ್ವತ ಯೋಜನೆಗಳನ್ನು ರೂಪಿಸುವ ಐತಿಹಾಸಿಕ ಉಪಕ್ರಮವನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ಪ್ರೊ. ಮಲ್ಲಿಕಾರ್ಜುನ ಕಲಮರಹಳ್ಳಿ, ದಾವಣಗೆರೆ

***

ಮಹತ್ವದ ಸಂಗತಿ

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸಶಕ್ತವಾಗಿ ರೂಪಿಸಬೇಕು ಎನ್ನುವ ಕೂಗು ಗಟ್ಟಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಶತಮಾನದ ಶಾಲೆಗಳಿಗೆ ಶಕ್ತಿ ತುಂಬುವ ಆಲೋಚನೆಯು ಸಮಯೋಚಿತವಾಗಿದೆ ‌ಹಾಗೂ ಲೇಖನವು ಮೌಲ್ಯಯುತ ಅಂಶಗಳಿಂದ ಕೂಡಿದೆ. ಸರ್ಕಾರಿ ಶಾಲೆಗಳಿಗೆ ಆಯ್ಕೆಯಾದ ಶಿಕ್ಷಕರು ಪ್ರತಿಭಾವಂತರಾಗಿರುತ್ತಾರೆ. ಅವರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆದರೂ ಪಾಲಕರು ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹದಿಂದ ಸರ್ಕಾರಿ ಶಾಲೆಗಳ ಕಡೆಗೆ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಸಕ್ತ ನವೆಂಬರ್‌ನಿಂದ 2021ರ ಅಕ್ಟೋಬರ್‌ ಅಂತ್ಯದವರೆಗೆ ‘ಕನ್ನಡ ಕಾಯಕ ವರ್ಷ’ ಎಂದು ಸರ್ಕಾರ ಘೋಷಿಸಿರುವುದು ಆಶಾದಾಯಕ ಬೆಳವಣಿಗೆ. ಈ ವರ್ಷ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೊಸದಾಗಿ ದಾಖಲಾಗಿರುವುದು ಮಹತ್ವದ ಸಂಗತಿ. ಕನ್ನಡ ಉಳಿಸಿ ಬೆಳೆಸುವ ಸಲುವಾಗಿ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ತೀರಾ ಅಗತ್ಯವಾಗಿದೆ.

ಡಾ. ಸಂಜೀವಕುಮಾರ ಅತಿವಾಳೆ, ಬೀದರ್‌

***

ಸಬಲೀಕರಣ ಆಗಲಿ

ಶತಮಾನ ಪೂರೈಸಿದ ಶಾಲೆಗಳಿಗೆ ಸಂಬಂಧಿಸಿದಂತೆ ಧಾರವಾಡ ಶೈಕ್ಷಣಿಕ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬರುವ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ 2010-11ರಷ್ಟು ಹಿಂದೆಯೇ (ನಾನು ಅಲ್ಲಿ ಹೆಚ್ಚುವರಿ ಆಯುಕ್ತ
ನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ) ಅಂಥ ಶಾಲೆಗಳು ನಡೆದುಬಂದ ದಾರಿ, ಸಾಧಿಸಿದ ಶೈಕ್ಷಣಿಕ ಹಿರಿಮೆ, ಅಲ್ಲಿ ಕಾರ್ಯ ನಿರ್ವಹಿಸಿದ ಶಿಕ್ಷಕರು, ಅಲ್ಲಿಂದ ಹೊರಬಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಸಮೂಹ, ಶಾಲಾಭಿವೃದ್ಧಿಯಲ್ಲಿ ಗ್ರಾಮದ ಜನರ, ಸಾರ್ವಜನಿಕರ ಸಹಕಾರ, ಸೇವೆ ಕುರಿತು ಹಾಗೂ ಆ ಕಾಲದ ಬ್ರಿಟಿಷ್‌ ಅಧಿಕಾರಿಗಳನ್ನು ಒಳಗೊಂಡು ಮೇಲಧಿಕಾರಿಗಳ ಭೇಟಿ, ಶೈಕ್ಷಣಿಕ ವಿಷಯದಲ್ಲಿ ಅವರು ದಾಖಲಿಸಿದ ಷರಾಗಳ ಸಹಿತ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿ ದಾಖಲೀಕರಣ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶತಮಾನ ಕಂಡ ಶಾಲೆಗಳ ಕ್ರೋಡೀಕೃತ ಗ್ರಂಥಗಳೂ ಪ್ರಕಟಗೊಂಡಿವೆ. ಅವು, ಆಯಾ ಶಾಲೆಗಳಲ್ಲಿ ಓದಿದ, ಕಲಿಸಿದವರ ಲೇಖನಗಳು, ಕಲಿಕೆ ವಿಧಾನಗಳು, ಶಾಲೆಗಳು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಗ್ರಾಮ ಮಟ್ಟದಲ್ಲಿ ವಹಿಸಿದ ಪಾತ್ರದಂತಹ ಹಲವಾರು ರೀತಿಯ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿವೆ. ಶಾಲೆಗಳು ಶತಮಾನ ಕಂಡ ನೆನಪಿನಲ್ಲಿ ಅನೇಕ ಕಡೆ ಕಾರ್ಯಕ್ರಮಗಳು ನಡೆದಿವೆ. ಉಳಿದ ಜಿಲ್ಲೆ, ತಾಲ್ಲೂಕುಗಳ ಪುಸ್ತಕ ಪ್ರಕಟಣೆ ಕಾರ್ಯ ಆಗಬೇಕಾಗಿದೆ.

‘ಕನ್ನಡ ಕಾಯಕ’ ಕಾರ್ಯಕ್ರಮದಡಿ ಎಲ್ಲ ಕನ್ನಡ ಶಾಲೆಗಳಿಗೆ ಕಾಯಕಲ್ಪ ಆಗಬೇಕು. ಹೊಸ ಶಿಕ್ಷಣ ನೀತಿ ಅಡಿ ಮಾತೃ ಭಾಷೆ, ಪ್ರಾದೇಶಿಕ ಭಾಷೆಗಳಲ್ಲಿ ಕಲಿಕೆಗೆ ಒತ್ತು ಸಿಗಬಹುದೆಂದು ಆಶಿಸಲಾಗಿದೆ. ಅದರಡಿ ಕನ್ನಡ ಶಾಲೆಗಳ ಸಬಲೀಕರಣ ಆಗಬೇಕು. ಅದು ಆದಾಗ ಮಾತ್ರ ನಮ್ಮ ಭಾಷೆ, ನಮ್ಮ ನಾಡು ಸಬಲವಾದೀತು.

ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು