ಸೋಮವಾರ, ಜನವರಿ 17, 2022
18 °C
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಈಗ್ಗೆ ಕೆಲವು ದಶಕಗಳಿಂದ ಇರುವುದು ಗುಟ್ಟೇನೂ ಅಲ್ಲ

ಸಂಗತ: ಕಸಾಪ- ಚುಕ್ಕಾಣಿ ಹಿಡಿಯುವುದರ ಹಿಂದೆ...

ಡಾ. ಆರ್.ಲಕ್ಷ್ಮೀನಾರಾಯಣ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಮಹತ್ವದ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಮತ್ತು ಅದರ ಜಿಲ್ಲಾ ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಇನ್ನೇನು ಇದೇ ತಿಂಗಳೇ ಚುನಾವಣೆ ನಡೆಯಲಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಚುನಾವಣೆಯದು ಒಂದು ತೂಕವಾದರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆಯದೇ ಇನ್ನೊಂದು ತೂಕ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಅದರದೇ ಆದ ಮಹತ್ವವಿದೆ.

ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ನಂತರದ ಪ್ರಾರಂಭದ ವರ್ಷಗಳಲ್ಲಿ ಯುವರಾಜರು ನಾಮ ಮಾತ್ರಕ್ಕೆ ಅದರ ಅಧ್ಯಕ್ಷರಾಗಿದ್ದರೂ ಉಪಾಧ್ಯಕ್ಷರಾಗಿ ರುತ್ತಿದ್ದ ಖ್ಯಾತಿವಂತ ಸಾಹಿತಿಗಳು ಅದರ ಕಾರ್ಯಾಧ್ಯಕ್ಷ ರಾಗಿ ಅದರ ನಿಜವಾದ ಅಧ್ಯಕ್ಷರಾಗಿರುತ್ತಿದ್ದರು. ಯುವ ರಾಜರು ತೀರಿಕೊಂಡ ಮೇಲೆ ಸಾಹಿತಿಗಳೇ ಅದರ ಅಧ್ಯಕ್ಷರಾಗುವುದು ರೂಢಿಗೆ ಬಂದಿತೆನಿಸುತ್ತದೆ. ಡಿವಿಜಿ, ಮಾಸ್ತಿ, ಬಿಎಂಶ್ರೀ, ಎಂಆರ್‌ಶ್ರೀ ಮುಂತಾದ ಸಾಹಿತ್ಯ ಕ್ಷೇತ್ರದ ಧೀಮಂತರು ಅದರ ಉಪಾಧ್ಯಕ್ಷ/ಅಧ್ಯಕ್ಷರಾಗಿ ಪರಿಷತ್ತಿಗೆ ಮತ್ತು ಅದರ ಅಧ್ಯಕ್ಷ ಸ್ಥಾನಕ್ಕೆ ಎಲ್ಲಿಲ್ಲದ ಘನತೆ, ಗೌರವಗಳನ್ನು ತಂದುಕೊಟ್ಟರು. ಆನಂತರದಲ್ಲಿ ಖ್ಯಾತ ವಿದ್ವಾಂಸರಾದ ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿ ಬಹಳಷ್ಟು ವರ್ಷಗಳು ಅದನ್ನು ಮುನ್ನಡೆಸಿದರು. ಆನಂತರ ಪ್ರೊ. ಜೀವಿಯವರು ಅಧ್ಯಕ್ಷರಾಗಿ ಪರಿಷತ್ತಿಗೆ ಜೀವಕಳೆ ತಂದುಕೊಟ್ಟರು. ಮುಂದೆ ಜಿ.ನಾರಾಯಣ ಅವರು ಅಧ್ಯಕ್ಷರಾಗಿ ಅದನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದೊಂದು ದಾಖಲೆಯೇ ಆಯಿತು. ಅವರು ಸ್ವತಃ ಅಂಥ ದೊಡ್ಡ ಸಾಹಿತಿಯೆಂದೇನೂ ಹೆಸರಾಗಿಲ್ಲದಿದ್ದರೂ ಅತ್ಯಂತ ನಿಸ್ವಾರ್ಥ ಭಾವದಿಂದ ದುಡಿದು, ತಮ್ಮ ರಾಜಕೀಯ ಕ್ಷೇತ್ರದಲ್ಲಿನ ಅನುಭವ ಮತ್ತು ರಾಜಕಾರಣಿಗಳ ಸಂಪರ್ಕ, ವೈಯಕ್ತಿಕ ಪ್ರಭಾವ, ಅದ್ಭುತ ಕಾಣ್ಕೆ ಗಳಿಂದಾಗಿ ಕೇಂದ್ರ ಕಚೇರಿಯ ನವೀಕರಣದಿಂದ ಹಿಡಿದು ಜಿಲ್ಲಾ ಶಾಖೆಗಳನ್ನು ಹುಟ್ಟುಹಾಕುವವರೆಗೆ ಒಂದು ಸಾರ್ವಕಾಲಿಕ ದಾಖಲೆಯನ್ನೇ ಸ್ಥಾಪಿಸಿದರು.

ಬಹುಶಃ ಅಲ್ಲಿಂದ ಮುಂದಕ್ಕೆ ಪರಿಷತ್ತಿನ ಅಧ್ಯಕ್ಷರಾಗುವವರು ಸಾಹಿತಿಗಳೇ ಆಗಬೇಕೆಂದಿಲ್ಲ; ಸಾಹಿತ್ಯಾಭಿಮಾನಿಗಳು, ಸಾಹಿತ್ಯಾಸಕ್ತರೂ ಆಗಬಹುದು ಎಂಬ ಅಘೋಷಿತ ಸಂಪ್ರದಾಯ ರೂಢಿಗೆ ಬಂದಿತೆನಿಸು
ತ್ತದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ಮುಂಚೆ ವರ್ಷಕ್ಕೊಂದರಂತೇನೂ ನಿಯಮಬದ್ಧ
ವಾಗಿ ನಡೆಯುತ್ತಿರಲಿಲ್ಲ. ಅವುಗಳನ್ನು ಕ್ರಮಬದ್ಧವಾಗಿ ನಡೆಸಿದ್ದು, ಜನಪದ ಸಮ್ಮೇಳನಗಳು, ಪ್ರಕಟಣೆಗಳ ಮಹಾಪೂರ ಇವೆಲ್ಲ ಅವರ ಸಾಧನೆಗಳು. ಬಹುಶಃ ಜಿ.ನಾರಾಯಣ ಅವರ ಪ್ರಯತ್ನದಿಂದಲೇ ಎಂದು ತೋರುತ್ತದೆ ಪರಿಷತ್ತಿಗೆ ಸರ್ಕಾರದಿಂದ ಅತ್ಯಧಿಕ ಅನುದಾನ ಬರಲಾರಂಭಿಸಿತು. ಸಮ್ಮೇಳನ ಗಳು ಅದ್ಧೂರಿಯಿಂದ ನಡೆಯತೊಡಗಿದವು.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನವೆಂದರೆ ಸರ್ಕಾರಕ್ಕೂ ಹೆಮ್ಮೆ ಮತ್ತು ಗೌರವದ ಸಂಗತಿಯೆನಿಸಿ ಕೋಟಿ ಗಟ್ಟಲೆ ಅನುದಾನ ನೀಡಲಾರಂಭಿಸಿತು. ಹಾಗೆ ಅನುದಾನವನ್ನು ಹಕ್ಕಿನಿಂದ ಕೇಳುವ ಮತ್ತು ಪಡೆದುಕೊಳ್ಳುವ ಸಾಮರ್ಥ್ಯ ಪರಿಷತ್ತಿನ ಅಧ್ಯಕ್ಷರದಾಗತೊಡಗಿತು. ಅಧಿಕಾರದ ಮಹತ್ವದ ಜೊತೆಗೆ ಹಣದ ಕಾರಣವೂ ಸೇರಿಕೊಂಡು ಜಿ.ನಾರಾಯಣರ ನಂತರ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಪ್ರಾರಂಭವಾಯಿತು. ಎಷ್ಟರಮಟ್ಟಿಗೆ ಎಂದರೆ, ತಾವು ಗೆಲ್ಲಬೇಕೆಂದರೆ ತಮ್ಮ ಮತದಾರರನ್ನು ಗುರುತಿಸಿ ಕೊಂಡು, ಕನ್ನಡವೆಂದರೆ ಯಾವ ಪಕ್ಷಿ ಎಂದು ಕೇಳು ವವರನ್ನೂ, ಇನ್ನು ಎರಡು ದಿನ ಚುನಾವಣೆ ಇದೆ ಎನ್ನು ವಾಗ ಪುಸಲಾಯಿಸಿಯೋ ಅಥವಾ ಅವರ ಸದಸ್ಯತ್ವದ ಶುಲ್ಕ ತಾವೇ ತುಂಬಿಯೋ ಸದಸ್ಯರನ್ನಾಗಿಸುವುದೂ ಚಾಲ್ತಿಗೆ ಬಂತು. ಈ ಅಬದ್ಧವನ್ನು ತಡೆಯಲು, ವೋಟು ಮಾಡುವವರು ಇಂತಿಷ್ಟು ವರ್ಷ ಸದಸ್ಯರಾಗಿ ರಲೇಬೇಕೆಂಬ ನಿಯಮ ರೂಢಿಗೆ ತರಬೇಕಾಯಿತು.

ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಲಾಗಾಯ್ತಿನಿಂದ ನಡೆಸುತ್ತಿರುವ ಹುನ್ನಾರು ಗಳಾದ ವ್ಯಾಪಕ ಪ್ರಚಾರ, ನೀರಿನಂತೆ ಧನವ್ಯಯ, ಮಠಾಧಿಪತಿಗಳ ಕಡೆಯಿಂದ ಭಕ್ತ ಮತ್ತು ಶಿಷ್ಯ ಗಣಕ್ಕೆ ಹೇಳಿಸುವುದು, ಜಾತಿಗಳ ಪ್ರಭಾವ, ಇನ್ನಿತರೆ ವಶೀಲಿಬಾಜಿಗಳು ಪರಿಷತ್ತಿನ ಅಧ್ಯಕ್ಷ ಚುನಾವಣೆ ಯಲ್ಲೂ ನಡೆಯುತ್ತವೆಂದು ಎಲ್ಲರ ಅಂಬೋಣ. ಬಹುಶಃ ಅದೇ ನಿಜ. ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಈಗ್ಗೆ ಕೆಲವು ದಶಕಗಳಿಂದ ಇರುವುದು ಗುಟ್ಟೇನೂ ಅಲ್ಲ.

ಇಂಥ ಪರಿಸ್ಥಿತಿಯಲ್ಲಿ ಅಧ್ಯಕ್ಷರಾಗಬೇಕೆಂದು ಎಷ್ಟೇ ತೀವ್ರವಾಗಿ ಅನ್ನಿಸಿದರೂ ನಿಜವಾದ ಸಾಹಿತ್ಯಿಕ ಸಂವೇದನೆ ಉಳ್ಳ ಪ್ರಾಮಾಣಿಕ ವ್ಯಕ್ತಿಗೆ, ಸಾಹಿತಿಗೆ- ನಮ್ಮ ರಾಜಕೀಯ ಚುನಾವಣೆಗಳಿಗೆ ಸ್ಪರ್ಧಿಸುವ ಬಗ್ಗೆ- ‘ಒಬ್ಬ ಪ್ರಾಮಾಣಿಕ ವ್ಯಕ್ತಿ ಈಗಿನ ಚುನಾವಣೆ ಗಳಲ್ಲಿ ಸ್ಪರ್ಧಿಸುವುದಿರಲಿ, ಸ್ಪರ್ಧಿಸುವುದನ್ನು ಯೋಚಿ ಸುವುದಕ್ಕೂ ಸಾಧ್ಯವಿಲ್ಲ’- ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತು ನೆನಪಾಗಿ ಹಿಂದೆ ಸರಿಯಲೇಬೇಕಾಗು ತ್ತದೆ. ಇಂಥ ಹುನ್ನಾರವಿಲ್ಲದೆ ವ್ಯಕ್ತಿತ್ವದ ಪ್ರಭಾವದಿಂದ ಆಯ್ಕೆಯಾದ ಒಂದಿಬ್ಬರು ಸಾಹಿತಿಗಳೂ ಇದ್ದಾರೆ.

ಪರಿಷತ್ತಿನ ಮತದಾರರ ಸಂಖ್ಯೆಯನ್ನು ಎಷ್ಟೋ ಪಟ್ಟು ಹೆಚ್ಚಿಸಬೇಕೆಂಬ ಮಾತು ಕೆಲ ದಿನಗಳ ಹಿಂದೆ ಕೇಳಿಬಂತು. ಈ ಪರಿಸ್ಥಿತಿಯಲ್ಲಿ ಪರಿಷತ್ತು ಕನ್ನಡಿಗರೆಲ್ಲರ ಅಭಿಮಾನದ ಸಂಸ್ಥೆಯಾಗುಳಿದು, ಅವರು ಗಳು ಸದಸ್ಯರಾಗದೆ ಧನಸಹಾಯ ನೀಡಿದರೆ ಸಾಕೆ, ಇಲ್ಲ ಸದಸ್ಯತ್ವ ಶುಲ್ಕ ತೆರಬಲ್ಲವರೆಲ್ಲರೂ ಮತ ದಾರರಾಗಿ ಪರಿಷತ್ ಚುನಾವಣೆಗಳು ರಾಜಕೀಯ ಚುನಾವಣೆಗಳ ತದ್ವತ್ತಾಗಬೇಕೆ, ಅಲ್ಲಿಯ ಅಧ್ವಾನಗಳೆಲ್ಲ ಇಲ್ಲೂ ಇರಬೇಕೆ ಎಂಬ ಬಗ್ಗೆ ಕನ್ನಡಿಗರೆಲ್ಲರೂ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು