ಶುಕ್ರವಾರ, ಅಕ್ಟೋಬರ್ 22, 2021
21 °C
ಮಕ್ಕಳು ಪ್ರಶ್ನೆ ಕೇಳುವುದನ್ನು ತಡೆಯದೆ, ಅವರ ಕುತೂಹಲ ತಣಿಸುವಂತೆ ಸಾವಧಾನವಾಗಿ ಉತ್ತರಿಸುವ ಹೊಣೆಗಾರಿಕೆ ದೊಡ್ಡವರದ್ದು

ಸಂಗತ: ಪ್ರಶ್ನೆ ಎತ್ತುವ ಸ್ವಾಧ್ಯಾಯದ ಕಲಿಕೆ

ಡಾ. ವಿ.ಎಚ್.ಮೂಲಿಮನಿ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಿಗೆ ಸಂತೋಷಕರ, ಸ್ಫೂರ್ತಿದಾಯಕ ಭವ್ಯ ಭವಿಷ್ಯತ್ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಮಕ್ಕಳ ಮನಸ್ಸೂ ಸ್ವಚ್ಛಂದವಾಗಿ, ಕ್ರಿಯಾಶೀಲವಾಗಿ ವಿಕಾಸವಾಗುವ ರೀತಿಯಲ್ಲಿ ಅವಕಾಶ ಮಾಡಿಕೊಡಬೇಕು. ಹುಟ್ಟಿನಿಂದ ಆರು ವರ್ಷಗಳವರೆಗಿನ ಅವಧಿ ಮನುಷ್ಯನು ತನ್ನ ಸುತ್ತಲಿನ ಪರಿಸರವನ್ನು ಅರ್ಥೈಸಿಕೊಳ್ಳಲು ಕಳೆಯುವ ಕಾಲಘಟ್ಟ. ಅಂದರೆ ಇದು, ಮಗುವಿಗೆ ಪ್ರತಿಯೊಂದರಲ್ಲೂ ಅದಮ್ಯ ಕುತೂಹಲ, ಪ್ರಶ್ನೆಗಳು ಹುಟ್ಟುವ ವಯಸ್ಸು.

ಹಕ್ಕಿ ಹಾರುತ್ತದೆ ಏಕೆ? ಹೂವು ಅರಳುವುದು ಹೇಗೆ? ಯಾರು ಮೇಲಿಂದ ಮಳೆ ಸುರಿಸುತ್ತಾರೆ? ತಟ್ಟೆಗೆ ತಟ್ಟೆ ಎಂದೇ ಏಕೆ ಹೇಳಬೇಕು? ಹಸಿರೆಲೆಗಳ ಬಣ್ಣ ಚಳಿಗಾಲದಲ್ಲಿ ಹಳದಿ, ಕೆಂಪು ಏಕೆ? ಒಂಟೆಯ ಡುಬ್ಬದಲ್ಲಿ ನೀರು ತುಂಬಿದೆಯೇ? ಮೋಡಗಳು ಹೇಗೆ ಆಗುತ್ತವೆ? ಈರುಳ್ಳಿ ಹೆಚ್ಚಿದಾಗ ಕಣ್ಣೀರು ಏಕೆ? ಆಕಾಶವು ನೀಲಿ ಬಣ್ಣವೇಕೆ? ಹೀಗೆ ಕೊನೆ ಮೊದಲಿಲ್ಲದ ನಿರಂತರ ಪ್ರಶ್ನೆಗಳ ಸುರಿಮಳೆ ಸುರಿಸುವ ಕಾಲ ಇದು!

ಅಂದರೆ ಮಗುವಿಗೆ ಮೂಲಭೂತವಾಗಿ ಇವೆಲ್ಲ ವನ್ನೂ ತಿಳಿದುಕೊಳ್ಳಬೇಕು ಎಂಬ ಆಸೆಯೂ ಆಸಕ್ತಿಯೂ ಇರುತ್ತದೆ. ಅದರ ಕುತೂಹಲ ತಣಿಸುವಂತೆ ಸಾವಧಾನವಾಗಿ ಉತ್ತರಿಸುವ ಹೊಣೆಗಾರಿಕೆ ದೊಡ್ಡವ ರದ್ದು. ವಿದ್ಯಾರ್ಥಿಗಳದು ಕುತೂಹಲದ ಮನಸ್ಸು. ಅವರಿಗೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಅನುಮಾನಗಳು ಉದ್ಭವಿಸಿದಾಗ ಭಯ, ಸಂಕೋಚ ಅಥವಾ ಹಿಂಜರಿಕೆಗಳಿಂದ ಶಿಕ್ಷಕರಲ್ಲಿ ಪ್ರಶ್ನೆಗಳನ್ನು ಕೇಳದೆ ಮನಸ್ಸಿನಲ್ಲೇ ಉಳಿಸಿಕೊಳ್ಳುವುದರಿಂದ ಪ್ರಗತಿ ಕುಂಠಿತವಾಗುತ್ತದೆ.

ಪ್ರತಿಭಾವಂತ ವಿಜ್ಞಾನಿಯಾಗಿದ್ದ ಸ್ಟೀಫನ್ ಹಾಕಿಂಗ್‌, ‘ನಾನು ಬೆಳೆಯಲು ಒಪ್ಪದ ಪುಟ್ಟ ಮಗು. ಅದಕ್ಕೇ ಈಗಲೂ ‘ಹೇಗೆ’ ಮತ್ತು ‘ಏಕೆ’ ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ಅಪರೂಪಕ್ಕೊಮ್ಮೆ ಉತ್ತರ ಕಂಡುಕೊಂಡಿದ್ದೇನೆ’ ಎಂದು ಹೇಳುತ್ತಿದ್ದರು. ರುಡ್‍ಯಾರ್ಡ್‌ ಕಿಪ್ಲಿಂಗ್ ಮಕ್ಕಳಿಗಾಗಿ ಹೀಗೆ ಬರೆದಿದ್ದಾರೆ, ‘ನನ್ನ ಬಳಿ ಆರು ಮಂದಿ ಪ್ರಾಮಾಣಿಕ ಜನರಿದ್ದಾರೆ. ಅವರೇ ನನಗೆ ತಿಳಿಯದ್ದನ್ನೆಲ್ಲ ಕಲಿಸಿ ದ್ದಾರೆ. ಅವರ ಹೆಸರೇನು ಹೇಳಲೆ? ಅವರೆಂದರೆ– ಏನು? ಏಕೆ? ಎಂದು? ಹೇಗೆ? ಎಲ್ಲಿ? ಯಾರು?

ಮಹಾನ್‌ ವಿಜ್ಞಾನಿಗಳ ಮನಸ್ಸು ಅನೇಕ ರೀತಿಯ ಪ್ರಶ್ನೆಗಳಿಂದ ತುಡಿಯುತ್ತಿರುತ್ತದೆ. ‘ಇದೇಕೆ ಹೀಗಾಗುತ್ತದೆ?’, ‘ಇದನ್ನು ನನ್ನಿಂದ ಸುಧಾರಿಸ ಲಾದೀತೆ?’ ಅಥವಾ ‘ಇದಕ್ಕಿಂತ ಹೆಚ್ಚಿನದೇನಾಗಬಹುದು?’ ಎಂದೆಲ್ಲ ಕೇಳಿಕೊಳ್ಳುತ್ತಲೇ ಇರುತ್ತದೆ.

ಯಾವುದೇ ವಿಷಯದ 360 ಡಿಗ್ರಿಗಳ ಜ್ಞಾನ ಸಂಪಾದಿಸಬೇಕಾದರೆ ಅದನ್ನು ಹಲವು ದಿಕ್ಕುಗಳಿಂದ ಶೋಧಿಸಬೇಕು. ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ ವಾದ. ಯಾವುದಾದರೂ ವಿಷಯವನ್ನು ಗುರುಗಳು ಹೇಳಿದರು ಎಂಬ ಕಾರಣಕ್ಕೆ ವಾದವಿಲ್ಲದೆ ಒಪ್ಪಿ ಕೊಂಡರೆ ಅದರಿಂದ ಸಿಗುವ ಜ್ಞಾನ ಅಲ್ಪ ಮಾತ್ರ. ಆದರೆ ವಿಷಯದ ಬಗ್ಗೆ ಇನ್ನಷ್ಟು, ಮತ್ತಷ್ಟು ಎಂಬಂತೆ ಪ್ರಶ್ನಿಸುತ್ತ, ಅಗೆಯುತ್ತ ಹೋದರೆ ಆ ವಿಷಯವು ಹೆಚ್ಚು ಸ್ಫುಟವಾಗುತ್ತ ಸಾಗುತ್ತದೆ. ಆದರೆ ವಾದಕ್ಕಾಗಿ ವಾದ ಎಂಬಂತೆ ಆಗಬಾರದು. ತಮಗೆ ಬೇಕಾದ ಜ್ಞಾನ ಪಡೆಯುವುದೇ ಅಂತಿಮ ಗುರಿ ಎಂಬ ಲಕ್ಷ್ಯವು ವಾದಿ ಪ್ರತಿವಾದಿಗಳಿಬ್ಬರಲ್ಲೂ ಇರಬೇಕು.

ಇನ್ನು ಪ್ರಶ್ನೆ ಮಾಡುವುದು ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಯ ಅವಿಭಾಜ್ಯ ಭಾಗವೇ ಆಗಿದೆ. ಎಲ್ಲ ಉಪನಿಷತ್ತುಗಳೂ ಇಂಥ ಪ್ರಶ್ನೋತ್ತರ ರೂಪದಲ್ಲೇ ಇವೆ. ಅವುಗಳಲ್ಲೊಂದು ಪ್ರಮುಖ ಉಪನಿಷತ್ತಿಗೆ ಷಟ್‍ಪ್ರಶ್ನೋಪನಿಷತ್ ಎಂಬ ಹೆಸರಿದೆ. ಪ್ರಶ್ನೆಗಳಲ್ಲಿ ಎರಡು ವಿಧ: ಉತ್ಥತ್ ಆಕಾಂಕ್ಷಾ ಮತ್ತು ಉತ್ಥಾಪ್ಯ ಆಕಾಂಕ್ಷಾ. ಇವುಗಳಲ್ಲಿ ಮೊದಲನೆಯದು, ಶಿಷ್ಯನಿಗೆ ಅಧ್ಯಯನ ಮಾಡುವಾಗ ಅಥವಾ ಗುರು ಮುಖೇನ ಪಾಠ ಕೇಳುತ್ತಿರುವಾಗ ಹುಟ್ಟುವ ಪ್ರಶ್ನೆ ಗಳು. ಉದಾಹರಣೆಗೆ, ಭೂಮಿಯು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತದೆ ಎಂಬ ಸಾಲು ಓದಿದರೆ ವಿದ್ಯಾರ್ಥಿಗೆ ‘ಭೂಮಿಯೇ ಏಕೆ ಸೂರ್ಯನಿಗೆ ಪ್ರದಕ್ಷಿಣೆ ಹಾಕಬೇಕು? ಭೂಮಿ ತನ್ನ ಸುತ್ತಾಟವನ್ನು ನಿಲ್ಲಿಸಿದರೆ ಏನಾಗಬಹುದು? ಮುಂತಾಗಿ ಅನಿಸುವುದು. ಇದು ಉತ್ಥತ್ ಆಕಾಂಕ್ಷಾ. ಇದಲ್ಲದೆ ವಿಷಯವನ್ನು ಸ್ಪಷ್ಟ
ಪಡಿಸಲಿಕ್ಕಾಗಿ ಗುರುವೇ ತನ್ನ ಉಪನ್ಯಾಸದ ಮಧ್ಯದಲ್ಲಿ ಪ್ರಶ್ನೆ ಮಾಡಿ ಶಿಷ್ಯಂದಿರ ಬೌದ್ಧಿಕತೆಯನ್ನು ಕೆದಕಿದರೆ ಅದು ಉತ್ಥಾಪ್ಯ ಆಕಾಂಕ್ಷಾ.

ಮಕ್ಕಳು ಪ್ರಶ್ನೆ ಕೇಳುವುದನ್ನು ತಡೆಯಲು ಎಂದಿಗೂ ಯತ್ನಿಸಬಾರದು. ಉತ್ತರ ಗೊತ್ತಿಲ್ಲದಿದ್ದರೆ ಅವರನ್ನು ಗದರಿಸಿ ಓಡಿಸದೇ ಪ್ರಾಮಾಣಿಕವಾಗಿ ‘ನನಗೆ ಉತ್ತರ ಗೊತ್ತಿಲ್ಲ. ನಾವಿಬ್ಬರೂ ಸೇರಿ ಉತ್ತರವನ್ನು ಹುಡುಕೋಣ’ ಎಂದು ಅವರ ಕಲಿಕೆಯಲ್ಲಿ ಜೊತೆ ಗೂಡಬೇಕು. ಇದರಿಂದ ‘ಯಾವಾಗಲೂ ರೆಡಿಮೇಡ್’ ಉತ್ತರಗಳನ್ನು ಪಡೆಯುವ ಮಕ್ಕಳು ಅಭ್ಯಾಸವನ್ನು ಕಡಿಮೆ ಮಾಡಿ, ಉತ್ತರಗಳನ್ನು ಸಂಶೋಧಿಸಿ ಕಂಡುಕೊಳ್ಳಬೇಕು ಎಂಬ ಸರಿಯಾದ ಸ್ವಾಧ್ಯಾಯದ ವಿಭಾಗವನ್ನು ಪರಿಚಯ ಮಾಡಿಸಿದಂತಾಗುತ್ತದೆ.

ಪ್ರಶ್ನೆ ಮಾಡುವುದು ಹರಿಯುವ ನದಿಯಂತೆ. ಯಾವುದನ್ನೂ ಪ್ರಶ್ನೆ ಮಾಡದೇ ನಂಬಬೇಡಿ. ಎಂತಹ ಪವಾಡಪುರುಷರು, ದೇವಮಾನವರು ಎನಿಸಿ ಕೊಂಡವರು, ಮಹಾತ್ಮರು, ವಿಶ್ವವಿಖ್ಯಾತ ವಿಜ್ಞಾನಿಗಳೇ ಹೇಳಲಿ, ಅವರು ಹೇಳಿದ್ದನ್ನು ಯಾಂತ್ರಿಕವಾಗಿ ಒಪ್ಪಿಕೊಳ್ಳಬಾರದು ಎಂಬುದು ಶಿಕ್ಷಣ ತಜ್ಞ ಡಾ. ಎಚ್.ನರಸಿಂಹಯ್ಯ ಅವರ ಸಲಹೆಯಾಗಿತ್ತು.ಮೂಲಭೂತ ಪ್ರಶ್ನೆಯನ್ನು ಎತ್ತುವುದು ಮುಖ್ಯವೇ ಹೊರತು ಉತ್ತರವನ್ನು ಕಂಡುಕೊಳ್ಳುವುದಲ್ಲ.

ಲೇಖಕ: ನಿವೃತ್ತ ಪ್ರಾಧ್ಯಾಪಕ, ಕಲಬುರ್ಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು