ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮತವ್ಯೂಹಕ್ಕೆ ಸಿಲುಕಿ ಹೈರಾಣಾಗುವುದೇಕೆ?

ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳಿಗಾಗಿ ನಾವು ಸಂಬಂಧಗಳನ್ನೆಲ್ಲಾ ಬದಿಗಿಟ್ಟು, ನಮ್ಮ ನಡುವೆ ಕಂದಕ ಸೃಷ್ಟಿಸಿಕೊಂಡು ಪರಸ್ಪರ ಬಡಿದಾಡಿಕೊಳ್ಳುವುದು ಅನಗತ್ಯ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ವೀರಕಪುತ್ರ ಶ್ರೀನಿವಾಸ

ಲೋಕಸಭಾ ಚುನಾವಣೆಯು ದೇಶದಲ್ಲಿ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ವಿಶ್ವದ ಮುಂದುವರಿದ ರಾಷ್ಟ್ರಗಳೆಲ್ಲ ಭಾರತದ ಚುನಾವಣೆಯನ್ನು ತೀಕ್ಷ್ಣ ಕಣ್ಣುಗಳಿಂದ ನೋಡುತ್ತಿವೆ. ಮೌಲ್ಯಾಧಾರಿತ ಚುನಾವಣೆಯನ್ನು ಒಂದು ರೀತಿಯಲ್ಲಿ ಹಬ್ಬದಂತೆ ಕಟ್ಟಿಕೊಡಲಾಗುತ್ತಿದೆ. ಹಬ್ಬಗಳೆಂದರೆ ಮೌಲ್ಯಗಳ ಎತ್ತಿ ಹಿಡಿಯುವಿಕೆ, ನಂಬಿಕೆಗಳ ಮೆರವಣಿಗೆ, ಒಗ್ಗಟ್ಟಿನ ಪ್ರಜ್ಞೆಯ ಸಂಕೇತ ವಾಗಿರುತ್ತವೆ. ವಾಸ್ತವದಲ್ಲಿ ನಮ್ಮ ಚುನಾವಣೆಗಳೂ ಹಾಗೇ ಆಗಬೇಕಿತ್ತು. ಆದರೆ ಅವು ಮೌಲ್ಯಗಳ ಕುಸಿತಕ್ಕೆ ಕಾರಣವಾಗಿವೆ, ಅಪನಂಬಿಕೆಗಳನ್ನು ಮೂಡಿಸುತ್ತಿವೆ ಮತ್ತು ಜನರ ನಡುವಿನ ಒಗ್ಗಟ್ಟನ್ನು ಮುರಿಯಲು ಶಕ್ತವಾಗಿವೆ ಎಂಬುದು ಮಾತ್ರ ದುರಂತ.

ಅವು ನನ್ನ ಬಾಲ್ಯದ ದಿನಗಳು. ನಮ್ಮೂರಿನ ಮನೆಗಳ ಗೋಡೆಗಳ ಮೇಲೆ ಕೆಲವು ಪಕ್ಷಗಳ ಚಿಹ್ನೆಗಳು ರಾರಾಜಿಸುತ್ತಿದ್ದವು. ನಾವು ಮಕ್ಕಳಿಗೆ ಊರಿನವರ ಜಾತಿಗಳು ಗೊತ್ತಿರಲಿಲ್ಲ. ಆದರೆ ಅವರು ಇಂತಹ ಪಕ್ಷದವರು ಅನ್ನುವುದು ಮಾತ್ರ ಚಿಹ್ನೆಗಳ ಕಾರಣದಿಂದ ನಿಕ್ಕಿಯಾಗಿರುತ್ತಿತ್ತು. ಅಷ್ಟರಮಟ್ಟಿಗೆ
ಚುನಾವಣೆಗಳು ಸಿದ್ಧಾಂತಗಳ ಆಧಾರದ ಮೇಲೆ ನಡೆಯುತ್ತಿದ್ದವು. ಒಗ್ಗಟ್ಟು ಒಡೆಯುವ, ಜಾತಿಯ ವಾಸನೆ ಹರಡುವ, ಹಣದ ವ್ಯವಹಾರಕ್ಕೆ ಆಸ್ಪದ ಕೊಡದಂತಹ ಚುನಾವಣೆಯ ದಿನಗಳವು. ಆದರೆ ಈಗಿನ ಚುನಾವಣೆಗಳು ಏನಾಗಿವೆ? ಸಮುದಾಯದ ಒಗ್ಗಟ್ಟು ಕೆಡಿಸುತ್ತಿವೆ ಮತ್ತು ಸಾಮರಸ್ಯದ ವಿಘಟನೆಗೆ ಕಾರಣವಾಗುತ್ತಿವೆ.

ನಾವು ಹಳ್ಳಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡು ತ್ತೇವೆ. ಆದರೆ ಅಲ್ಲಿರುವಷ್ಟು ಒಡಕು ಮತ್ತೆಲ್ಲೂ ಸಿಗ ದಂತೆ ಆಗಿಬಿಟ್ಟಿದೆ. ಸಹೋದರತ್ವವನ್ನು ಸಾರುತ್ತಿದ್ದ, ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟಿದ್ದ ಹಳ್ಳಿಗಳಲ್ಲಿ ಚುನಾವಣೆ ಕಾರಣದಿಂದಾಗಿ ಪರಸ್ಪರ ಗೋಡೆ ಕಟ್ಟಿಕೊಂಡು ಬದುಕುವಂತಾಗಿದೆ.
ರಾಜಕಾರಣದ ಕಾರಣದಿಂದಾಗಿ ಮನಸ್ಸುಗಳು ಒಡೆದಿವೆ. ಕುಟುಂಬಗಳಲ್ಲೇ ಬಿರುಕು ಕಾಣಿಸಿ ಕೊಂಡಿದೆ. ಜಾತಿಯ ವಿಷಸರ್ಪಗಳು ಹೆಡೆ ಎತ್ತಿವೆ. ಕೊಳಕು ಸೈದ್ಧಾಂತಿಕ ನಿಲುವುಗಳು ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿ ಮಾಡಿವೆ. ದಣಿದು ನೆಮ್ಮದಿಯಾಗಿ ಮಲಗುತ್ತಿದ್ದವನು ಇಂದು ರಾಜಕೀಯ ಚರ್ಚೆಗಳಲ್ಲಿ ಮುಳುಗಿ ನೆಮ್ಮದಿ ಕಳೆದುಕೊಂಡಿದ್ದಾನೆ.

ಸಾಮಾಜಿಕ ಜಾಲತಾಣಗಳ ಅವಘಡಗಳನ್ನು ಕೇಳಲೇಬೇಕಿಲ್ಲ. ಅಸಹ್ಯದ ಪರಮಾವಧಿಯನ್ನು
ಮೀರಿ ನಿಂತಿವೆ. ಅಣ್ಣ–ತಮ್ಮ, ಅಕ್ಕ–ತಮ್ಮ, ಚಿಕ್ಕಪ್ಪ–ದೊಡ್ಡಪ್ಪ ಎಂದು ಪರಸ್ಪರ
ಗೌರವಿಸುತ್ತಿದ್ದವರು ಕೆಟ್ಟಾಕೊಳಕು ಭಾಷೆಯಲ್ಲಿ ನಿಂದಿಸಿಕೊಳ್ಳುವ ಮಟ್ಟ ತಲುಪಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ, ಪ್ರತಿ ಪಕ್ಷಕ್ಕೂ ಡಿಜಿಟಲ್ ವಿಭಾಗ ಇದ್ದೇ ಇದೆ. ಪಕ್ಷಗಳು ಕೆಲವು ಒಳ್ಳೆಯ ಬರಹಗಾರ ರನ್ನು ವೇತನ ನೀಡಿ ನೇಮಿಸಿಕೊಳ್ಳುತ್ತವೆ. ಅವರ ಮೂಲಕ ಪ್ರಚೋದನಕಾರಿ ವಿಷಯಗಳನ್ನು ಹರಿಯ ಬಿಡುತ್ತವೆ. ಇದನ್ನು ಅರಿಯದ ಜನಸಾಮಾನ್ಯರು ಅವರ ವಿಷವ್ಯೂಹಕ್ಕೆ ಸಿಲುಕಿ ನೆಮ್ಮದಿಯನ್ನು ಕಳೆದು
ಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಯಾವುದೋ ಒಬ್ಬ ರಾಜಕಾರಣಿ ಕುರಿತಂತೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು ಎಂಬ ಕಾರಣಕ್ಕೆ ಒಬ್ಬ ಯುಟ್ಯೂಬರ್ ಮೇಲೆ ಎರಡು ಕೋಟಿಯಷ್ಟು ಮಾನನಷ್ಟ
ಮೊಕದ್ದಮೆಯನ್ನು ಹೂಡಲಾಗಿದೆ. ಅಷ್ಟಕ್ಕೂ ಆ ವಿಷಯದ ಕುರಿತು ಆ ಯುಟ್ಯೂಬರ್‌ಗೆ ಯಾವುದೇ ಮಾಹಿತಿ ಇರಲಿಲ್ಲ. ಯಾವುದೋ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಅನಾಮಿಕವಾಗಿ ಬಂದ ಸುದ್ದಿಯನ್ನು ಆತ ತನ್ನ ಯುಟ್ಯೂಬ್ ಚಾನೆಲ್ಲಿನಲ್ಲಿ ಪ್ರಸಾರ ಮಾಡಿದ್ದ ಅಷ್ಟೇ. ಹಿಂದಿನ ಒಂದು ವರ್ಷದಿಂದ ಪಡಬಾರದ ಪಾಡು ಆತನದು. ಪೊಲೀಸು, ಕೋರ್ಟು ಎಂದೆಲ್ಲ ಅಲೆದಲೆದು ಸುಸ್ತಾಗಿ ಹೋಗಿದ್ದಾನೆ. ಇದು ಬರೀ ಒಂದು ಉದಾಹರಣೆ. ಇಂತಹ ಅದೆಷ್ಟೋ ಜನರು ಪಕ್ಷಗಳ ಮತವ್ಯೂಹಕ್ಕೆ ಸಿಲುಕಿ ಹೈರಾಣಾಗಿದ್ದಾರೆ. ಯಾಕಿದು ಹೀಗೆ?

ಅಷ್ಟಕ್ಕೂ ಚುನಾವಣೆ ಅಂದರೆ ಹೀಗೆಲ್ಲಾ ಆಗಬೇಕು ಅನ್ನುವ ನಿಯಮವೇನಾದರೂ ಇದೆಯೇ? ನಾವೇಕೆ ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುತ್ತಿದ್ದೇವೆ? ಈ ರಾಜಕಾರಣಿಗಳಿಂದ ನಮಗೇನು ಪ್ರಯೋಜನ? ಅವರು ಎಂದಾದರೂ ಪರಿಚಿತರಂತೆ ನಮ್ಮ ಮನೆಗೆ ಬಂದು ಒಂದು ಲೋಟ ಕಾಫಿ ಕುಡಿದಿದ್ದಾರೆಯೇ? ಗೆಳೆಯನಂತೆ ನಮ್ಮ ಕಷ್ಟ ಸುಖದಲ್ಲಿ ಕೈ ಹಿಡಿದಿದ್ದಾರೆಯೇ? ಇಲ್ಲವಲ್ಲ. ಮತ್ತೆ ನಾವ್ಯಾಕೆ ಅವರಿಗಾಗಿ ಪರಿಚಿತರು, ಗೆಳೆಯರು, ಸಂಬಂಧಿಕರು, ಹಳ್ಳಿಯವರನ್ನು ಕಳೆದುಕೊಳ್ಳಬೇಕು? ರಾಜಕಾರಣಿಗಳ ಕೆಲಸ ನಮ್ಮ ಮನೆಗೆ ಬಂದು ಹೋಗುವುದಲ್ಲ ಎಂಬುದು ನಮಗೆ ಹೇಗೆ ಗೊತ್ತಿರಬೇಕೋ ಹಾಗೆಯೇ ಉತ್ತಮ ರಾಜಕಾರಣಿಗಳಿಗೆ ಮತ ಹಾಕುವುದು ನಮ್ಮ ಕರ್ತವ್ಯವೇ ವಿನಾ ಅವರಿಗಾಗಿ ಒದ್ದಾಡಿ, ಗುದ್ದಾಡಿ ಸಂಬಂಧಗಳನ್ನು ಕಳೆದುಕೊಂಡು ಹೈರಾಣಾಗುವುದಲ್ಲ ಎಂಬುದು ಸಹ ನಮಗೆ ತಿಳಿದಿರಬೇಕು.

ಈ ನಾಡು, ದೇಶ ನಮ್ಮಿಂದಲೇ ಉಳಿದಿರುವುದು ಎಂಬ ರಾಜಕಾರಣಿಯ ಮಾತಿನಲ್ಲಿ ಅದೆಷ್ಟು ಸತ್ಯವಿದೆ ಎಂದು ಎಂದಾದರೂ ಯೋಚಿಸಿದ್ದೇವೆಯೇ? ಈ ಚುನಾವಣೆ ಕಳೆದರೆ ರಾಜಕಾರಣಿಗೆ ನಾವು ನೆನಪಾಗು ವುದು ಮುಂದಿನ ಐದು ವರ್ಷಕ್ಕೆ. ಸದಾ ನಮ್ಮ ಜೊತೆಗೆ ಇರಬೇಕಾದವರು ಇದೇ ನಮ್ಮ ನಡುವಿನ ಸ್ನೇಹಿತರು, ಸಂಬಂಧಿಕರು, ಪರಿಚಿತರು. ಹಾಗಾಗಿ, ರಾಜಕಾರಣಿಗಳ ಪ್ರಚೋದನಕಾರಿ ಮಾತುಗಳಿಗೆ ಮರುಳಾಗಿ ಸುತ್ತಮುತ್ತಲಿನ ವಾತಾವರಣವನ್ನು ಹಾಳುಗೆಡಿಸಿಕೊಳ್ಳದಿರುವಷ್ಟು ಕನಿಷ್ಠ ಬುದ್ಧಿಯಾದರೂ ನಮಗಿರಬೇಕು. ಆದ್ದರಿಂದ ಈ ಚುನಾವಣೆ ಮುಗಿಯುವತನಕ ಹಳ್ಳಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಂಯಮ ಪ್ರದರ್ಶನ ನಮ್ಮ ನಿಮ್ಮ ಆದ್ಯತೆಯಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT