ಗೆಳತಿಯೊಬ್ಬಳು ತಾನು ತುಂಬ ಇಷ್ಟಪಟ್ಟಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು, ವರ್ಕ್ ಫ್ರಂ ಹೋಂ ಕೆಲಸಕ್ಕೆ ಅವಕಾಶವಿರುವ ನೌಕರಿಗಾಗಿ ಹುಡುಕಾಟ ನಡೆಸಿದ್ದಳು. ಸದಾ ಓಡಾಟದ ಆ ಕೆಲಸ ಅವಳಿಗೆ ಪ್ರಿಯವಾದುದಾಗಿತ್ತು. ಹಾಗಾಗಿ, ಅದರಿಂದ ಹೊರಬರಲು ಕಾರಣ ಏನಿರಬಹುದು ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ಬೇಸರ ತರುವಂತಿತ್ತು.

‘ಸುತ್ತುವುದು ಇಷ್ಟದ ಕೆಲಸವೇ. ಆದರೆ, ಹೆಣ್ಣುಮಕ್ಕಳಿಗೆ ಸುತ್ತಲು ಸೂಕ್ತವಾದ ವಾತಾವರಣ ನಮ್ಮಲ್ಲಿಲ್ಲ. ಪಿರಿಯಡ್ಸ್ ಸಮಯದಲ್ಲಂತೂ ನರಕಯಾತನೆ. ಕೆಲಸದ ನೆಪದಲ್ಲಿ ರಾಜ್ಯದ ಮೂಲೆ ಮೂಲೆ ಸುತ್ತಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛ ಶೌಚಾಲಯ ವ್ಯವಸ್ಥೆ ಕಂಡಿದ್ದು ತೀರಾ ಕಡಿಮೆ. ಕೆಲವು ಕಡೆ ನ್ಯಾಪ್ಕಿನ್ ಬದಲಿಸಲೂ ಸೂಕ್ತ ಜಾಗ ಇಲ್ಲದೇ ಒದ್ದಾಡಿದ್ದಿದೆ’ ಎಂದು ಸಂಕಟ ತೋಡಿಕೊಂಡಳು. ಅವಳ ನೋವು ಹಾಗೂ ಬೇಸರ ವೈಯಕ್ತಿಕ ಮಾತ್ರವಾಗಿರದೆ, ಎಲ್ಲ ಹೆಣ್ಣುಮಕ್ಕಳೂ ಎದುರಿಸುತ್ತಿರುವ ಸಂಕಟದ ಧ್ವನಿಯಂತಿತ್ತು.

ಪ್ರಸ್ತುತ ರಾಜ್ಯ ಸಚಿವ ಸಂಪುಟ ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ಅದಕ್ಕೂ ಮೊದಲು ಮೂಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕಿದೆ. ಜೊತೆಗೆ, ಹೆಣ್ಣುಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಸಂಸ್ಥೆಗೆ ಹೊರೆ’ ಎಂದು ಮೂಗು ಮುರಿಯುವ ಉದ್ಯೋಗದಾತರಿಗೆ ತಿಳಿವಳಿಕೆ ಹೇಳುವ ಕೆಲಸವನ್ನು ಮಾಡಬೇಕಿದೆ.

ಗೆಳತಿಯೊಂದಿಗಿನ ಮಾತುಕತೆ ಮುಟ್ಟಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಮೂಡಿಸಿತು. ಉದ್ಯೋಗಸ್ಥ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಎದುರಿಸುವ ಸಮಸ್ಯೆಗಳನ್ನು ನೆನಪಿಸಿತು. ಮುಟ್ಟಿನ ದಿನಗಳಲ್ಲಿ ಆತಂಕ, ಕಿರಿಕಿರಿ, ಮುಜುಗರಕ್ಕೆ ಒಳಗಾಗದೇ ಕೆಲಸ ಮಾಡುವ ಸೂಕ್ತ ವಾತಾವರಣವಾದರೂ ನಮ್ಮಲ್ಲಿದೆಯೇ? ಆ ನಿಟ್ಟಿನಲ್ಲಿ ಸರ್ಕಾರ ಏನಾದರೂ ಯೋಚಿಸಿದೆಯೇ? ಅಧ್ಯಯನಗಳನ್ನು ಕೈಗೊಂಡಿದೆಯೇ? ಹತ್ತಾರು ಪ್ರಶ್ನೆಗಳು ಕಾಡತೊಡಗಿದವು.

ಈಗಲೂ ನಮ್ಮ ದೇಶದ ಹಳ್ಳಿಗಳಲ್ಲಿ ಶೌಚಾಲಯವನ್ನು ಮೂಲ ಸೌಕರ್ಯ ಎಂದು ಪರಿಗಣಿಸಿಯೇ ಇಲ್ಲ. ಸಾರ್ವಜನಿಕ ಶೌಚಾಲಯಗಳಂತೂ ಇಲ್ಲವೇ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಜಾಗದ ಕೊರತೆ, ನೀರಿನ ಕೊರತೆಯ ಜೊತೆಗೆ ಅರಿವಿನ ಕೊರತೆಯೂ ಶೌಚಾಲಯ ಇಲ್ಲದಿರುವುದಕ್ಕೆ, ಇದ್ದರೂ ಬಳಸದೆ ಇರುವುದಕ್ಕೆ ಕಾರಣವಾಗಿದೆ. ಶೌಚಕ್ಕೆ ಬಯಲನ್ನೇ ಅವಲಂಬಿಸಿದ ಮಹಿಳೆಯರು ಬೆಳಗಾಗುವ ಮೊದಲು ಮಸುಕಿನಲ್ಲಿ ಅಥವಾ ರಾತ್ರಿಯಲ್ಲೇ ಬಹಿರ್ದೆಸೆಗೆ ಹೋಗಬೇಕಾದ ಅನಿವಾರ್ಯವಿದೆ.

ಎಷ್ಟೋ ಸರ್ಕಾರಿ ಶಾಲೆ– ಕಾಲೇಜುಗಳಲ್ಲೂ ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲ. ಸೂಕ್ತ ನಿರ್ವಹಣೆ ಇಲ್ಲ. ಈ ಮೊದಲು ಪ್ರಾಥಮಿಕ, ಪ್ರೌಢ, ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಿತ್ತು. ಆದರೆ, ಕೋವಿಡ್ ನಂತರ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ನಿಲ್ಲಿಸಲಾಗಿತ್ತು. ಈಗ ಕೆಲವು ಶಾಲೆಗಳಲ್ಲಿ ಮತ್ತೆ ನ್ಯಾಪ್ಕಿನ್ ವಿತರಣೆ ಆರಂಭಿಸಿದ್ದರೂ, ಅವುಗಳ ಗುಣಮಟ್ಟದ ಕುರಿತು ಕಾಳಜಿ ವಹಿಸಿಲ್ಲ. ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ಕೊಡುವ ಯೋಜನೆಯನ್ನೂ ರಾಜ್ಯ ಸರ್ಕಾರ ಹಾಕಿಕೊಂಡಿತ್ತು. ಅದು ರಾಜ್ಯದ ಎಲ್ಲ ವಿದ್ಯಾರ್ಥಿನಿಯರನ್ನು ತಲಪುವಲ್ಲಿ ಸಫಲವಾಗಿಲ್ಲ.

ಈಗಲೂ ಕೆಲವೆಡೆ ಮಹಿಳೆಯರ ಸಾಮರ್ಥ್ಯವನ್ನು ಪ್ರಶ್ನಾರ್ಥಕವಾಗಿ ನೋಡುವವರು ಇದ್ದಾರೆ. ಎರಡು ವರ್ಷಗಳ ಕೆಳಗೆ ಪ್ರತಿಷ್ಠಿತ ಸಂಸ್ಥೆಯೊಂದು ಕೆಲಸಕ್ಕೆ ಅರ್ಜಿ ಆಹ್ವಾನಿಸಿತ್ತು. ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಲು ಹೋದಾಗ, ನಾವು ಮಹಿಳೆಯರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು. ಕಾರಣ ಕೇಳಿದರೆ– ಕೆಲಸ ಮುಗಿಯಲು ರಾತ್ರಿ ತಡವಾಗುತ್ತದೆ, ಮಹಿಳೆಯರನ್ನು ಮನೆಗೆ ಬಿಡಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕಾಗುತ್ತದೆ. ನಾಳೆ ಅವರು ಮದುವೆ ಆದರೆ ನೌಕರಿ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ, ಹೆರಿಗೆ ರಜೆ ಬೇರೆ ಕೊಡಬೇಕು... ಇವೆಲ್ಲ ಸಮಸ್ಯೆ ಬೇಡವೆಂದು ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂದು ಮುಲಾಜಿಲ್ಲದೇ ಹೇಳಿದ್ದರು. ಮಹಿಳೆಯರ ಸಬಲೀಕರಣದ ಬಗ್ಗೆ ಯೋಚಿಸಬೇಕಾದವರೇ ಹೀಗೆ ಲಘುವಾಗಿ ಯೋಚಿಸಿದರೆ ಲಿಂಗಸಮಾನತೆ ಸಾಧ್ಯವಾಗುವುದಾದರೂ ಹೇಗೆ? ಇಂಥ ಮನಃಸ್ಥಿತಿ ಹೊಂದಿರುವವರು ಸಂಬಳ ಸಹಿತ ಮುಟ್ಟಿನ ರಜೆ ನೀಡುವುದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?

ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೊಂದು ಮುಟ್ಟಿನ ರಜೆ ನೀಡುವ ಮೂಲಕ ಸರ್ಕಾರ ದೊಡ್ಡದೊಂದು ಸವಾಲಿಗೆ ತನ್ನನ್ನು ಒಡ್ಡಿಕೊಂಡಿದೆ. ಖಾಸಗಿ ಸಂಸ್ಥೆಗಳಲ್ಲಿರಲಿ, ಸರ್ಕಾರಿ ಕಚೇರಿಗಳಲ್ಲೇ ಮಹಿಳೆಯರು ಮುಟ್ಟಿನ ರಜೆಯನ್ನು ಅಳುಕಿಲ್ಲದೆ ತೆಗೆದುಕೊಳ್ಳುವುದು ಸುಲಭವೇನಲ್ಲ. ಇನ್ನು ಖಾಸಗಿ ಸಂಸ್ಥೆಗಳಲ್ಲಿ, ಮುಟ್ಟಿನ ರಜೆ ಎನ್ನುವುದು ಮಹಿಳೆಯರ ಉದ್ಯೋಗದ ಅವಕಾಶಗಳಿಗೆ ಕಂಟಕ ಆದರೂ ಆಶ್ಚರ್ಯವಿಲ್ಲ. ಈ ಸವಾಲನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದರ ಮೇಲೆ ಮುಟ್ಟಿನ ರಜೆಯ ಯಶಸ್ಸು ನಿರ್ಧಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.