ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಡೇಟಾ ಮತ್ತು ಮನೋಲಹರಿ

ಅಂತರ್ಜಾಲ ಸೇವಾ ಸಂಪರ್ಕದಲ್ಲಿನ ಕ್ರಾಂತಿಯು ಅಪರಾಧ ಪ್ರಕರಣಗಳಿಗೆ ಇಂಬು ಕೊಡುತ್ತಿರುವುದಕ್ಕೆ ಮಾಧ್ಯಮ ವರದಿಗಳು ಕನ್ನಡಿ ಹಿಡಿಯುತ್ತವೆ
Last Updated 23 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ದೇಶದಲ್ಲಿ ದಾಖಲಾದ ಅಪರಾಧಗಳ ಅಂಕಿಅಂಶಗಳ ವರದಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‍ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದೆ. ‘ಭಾರತದಲ್ಲಿ ಅಪರಾಧ– 2017’ ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಆತಂಕಪಡುವ ವಿಚಾರ
ಗಳಿವೆ. ದೇಶದಲ್ಲಿ ಅಪರಾಧಗಳ ಸಂಖ್ಯೆದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ. ನಮ್ಮ ಬೆಂಗಳೂರು, ಸೈಬರ್‌ ಅಪರಾಧಗಳ ಕೇಂದ್ರವೆಂಬ ಕುಖ್ಯಾತಿಗೆ ಪಾತ್ರವಾಗುತ್ತಿದೆ.

ಎನ್‍ಸಿಆರ್‌ಬಿ ವರದಿಯಂತೆ, ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಶೇ 77ರಷ್ಟು ಹೆಚ್ಚಾಗಿದೆ. 2014ರಲ್ಲಿ ಇದರ ಸಂಖ್ಯೆ 9,622 ಇದ್ದರೆ, ಪ್ರಸ್ತುತ ವರದಿಯಲ್ಲಿ 21,796 ಪ್ರಕರಣಗಳು ನಮೂದಾಗಿವೆ. ಬೆಂಗಳೂರು ಒಂದರಲ್ಲೇ ದೇಶದ ಒಟ್ಟು ಸೈಬರ್ ಅಪರಾಧದ ಶೇ 38ರಷ್ಟು ಪ್ರಕರಣಗಳು ನಡೆದಿವೆ. ಅಂದಹಾಗೆ ಈ ವರದಿ 2017ರದ್ದು. ತಡವಾಗಿ ಈಗ ಹೊರಬಿದ್ದಿದೆ.

ಹಾಗಿದ್ದರೆ, 2018 ಮತ್ತು 2019ರ ವರದಿಯಲ್ಲಿ ಅರಗಿಸಿಕೊಳ್ಳಲಾಗದ ಸತ್ಯ ಅಡಕವಾಗಿರಬಹುದೇ? ಹೆಚ್ಚುತ್ತಿರುವ ಅಪರಾಧಗಳ ಸಂಖ್ಯೆಯನ್ನು ನೋಡಿದರೆ ಹಾಗೆ ಭಾವಿಸಬಹುದು. ಇದಕ್ಕೆ ಕಾರಣ ಇಷ್ಟೆ, 2017ರಲ್ಲಿ ಅಂತರ್ಜಾಲ ಸೇವಾ ಸಂಪರ್ಕ ಕ್ಷೇತ್ರದಲ್ಲಿ ನಡೆದ ಕ್ರಾಂತಿ. ಈ ಬೆಳವಣಿಗೆಯು ಅಪರಾಧ ಪ್ರಕರಣಗಳಿಗೆ ಇಂಬು ಕೊಡುತ್ತಿರುವುದಂತೂ ನಿಜ. ಆದರೆ, ನೇರವಾಗಿ ಸೈಬರ್ ಅಪರಾಧ ಎಂದು ಕರೆಯಲು ಸಾಧ್ಯವಿಲ್ಲದಿದ್ದರೂ, ಒಂದಲ್ಲ ಒಂದು ರೀತಿಯಲ್ಲಿ ಅಂತರ್ಜಾಲ, ಕಂಪ್ಯೂಟರ್, ಮೊಬೈಲ್‍ಗೆ ತಳಕು ಹಾಕಿಕೊಂಡಿರುವ ಪ್ರಕರಣಗಳ ಸಂಖ್ಯೆಯೇ ಇತ್ತೀಚೆಗೆ ಅಧಿಕ. ವರದಿಯಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖ ಇಲ್ಲ, ಸಾಕ್ಷಿಯಾಗಿ ದಾಖಲಾದ ಪ್ರಕರಣಗಳ ಅಂಕಿಅಂಶ ಲಭ್ಯವಿಲ್ಲ. ಆದರೂ ಬಿಗಡಾಯಿಸುತ್ತಿರುವ ಪರಿಸ್ಥಿತಿಗೆ ಮಾಧ್ಯಮಗಳಲ್ಲಿ ವರದಿಯಾಗುವ ಪ್ರಕರಣಗಳೇ ಕನ್ನಡಿ ಹಿಡಿಯುತ್ತವೆ.

ಈ ಮೂರು ತಿಂಗಳಲ್ಲಿ ದಾಖಲಾದ ಎರಡು ಪ್ರಕರಣಗಳನ್ನು ಇಲ್ಲಿ ಗಮನಿಸಲೇಬೇಕು. ಮೊಬೈಲ್‍ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕಾಗಿ ತಂದೆಯನ್ನೇ ಕೊಂದ ಮಗ, ಗ್ರಾಮೀಣ ಪ್ರದೇಶದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಅನೈತಿಕ ಚಟುವಟಿಕೆಯಲ್ಲಿ ತೊಡಗಿ, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಶಿಕ್ಷಣ ಸಂಸ್ಥೆ, ಪೋಷಕರು ಹಾಗೂ ನಾಗರಿಕ ಸಮಾಜಕ್ಕೆ ನೈತಿಕ ಆಘಾತ ನೀಡಿದ್ದು.

ಸಾಮಾನ್ಯವಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ಯುವಜನರು ಅನೈತಿಕ ಹಾದಿ ಹಿಡಿಯುತ್ತಿದ್ದಾರೆ ಎಂಬ ಕಳಕಳಿ ವ್ಯಕ್ತವಾಗುತ್ತದೆ ಮತ್ತು ಅದರ ಸುತ್ತಲೇ ನಮ್ಮ ಚರ್ಚೆಗಳು ಗಿರಕಿ ಹೊಡೆಯುತ್ತವೆ. ಯುವಜನರು ಯಾವುದೋ ಒಂದು ಮಾಧ್ಯಮಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಕ್ಕೇ ಅವರ ನೈತಿಕತೆ ಅಧಃಪತನವಾಯಿತೇ, ಯಾವ ವಿಷಯಕ್ಕೆ ಅವರು ತೆರೆದುಕೊಳ್ಳುತ್ತಾರೆ ಹಾಗೂ ಆ ಮಾಧ್ಯಮ ಅವರಿಗೆ ಯಾವ ರೀತಿಯ ವಿಚಾರಗಳನ್ನು ಎಷ್ಟರಮಟ್ಟಿಗೆ ನೀಡುತ್ತದೆ ಎಂಬಂತಹ ಪ್ರಶ್ನೆಗಳು ಇಲ್ಲಿ ಮುಖ್ಯವಾಗುತ್ತವೆ.

ಯಾವುದೇ ಸರಕು ಅಥವಾ ಸೇವೆಯ ಖರೀದಿಯು ನಮ್ಮ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಅದೇ ರೀತಿ, ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳು ಹಾಗೂ ಅದನ್ನು ನೀಡುವ ತಂತ್ರಜ್ಞಾನವು ನಮ್ಮ ಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಒಂದು ಕಾಲದಲ್ಲಿ ಜನಸಾಮಾನ್ಯರು ಹಿಡಿಯುವ ಮೊಬೈಲ್ ಸೆಟ್‍ಗಳು ಅವರ ಆರ್ಥಿಕ ಅಂತಸ್ತನ್ನು ತೋರಿಸುತ್ತಿದ್ದವು. ಆದರೆ, ಆರ್ಥಿಕ ಉದಾರೀಕರಣದ ಪರಿಣಾಮವಾಗಿ ದುಬಾರಿ ಮೊಬೈಲ್‍ಗಳಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಒಳಗೊಂಡ ಕಡಿಮೆ ದರದ ಸ್ಮಾರ್ಟ್ ಫೋನ್‍ಗಳು ಯುವಕರ ಕೈಯಲ್ಲಿ ‘ಬೆಳಕು ಚೆಲ್ಲಲು’ ಆರಂಭಿಸಿದವು. ದೇಶದಲ್ಲಿ ದೂರಸಂಪರ್ಕ ಸೇವಾ ಕಂಪನಿಗಳು ನೀಡಿದ ‘ಫ್ರೀ ಡೇಟಾ’ ಎನ್ನುವ ಮಾರುಕಟ್ಟೆಯ ತಂತ್ರವು ಇದಕ್ಕೆ ಇಂಬು ನೀಡಿತು. ಅನಿಯಮಿತ ಅಂತರ್ಜಾಲ ಸಂಪರ್ಕದ ಬೆನ್ನಲ್ಲೇ ಕಂಪನಿಗಳ ನಡುವೆ ನಡೆದ ಬೆಲೆ ಸಮರ. ಪರಿಣಾಮವಾಗಿ, ಯುವಜನರತ್ತ ಹರಿದುಬಂದ ಲಂಗುಲಗಾಮಿಲ್ಲದ ಮಾಹಿತಿಗಳು ಹಾಗೂ ವಿಡಿಯೊಗಳು. ಇದರಿಂದ, ಸೃಜನಾತ್ಮಕ ಹವ್ಯಾಸಗಳೊಂದಿಗೆ ದೇಶದ ಅತ್ಯುನ್ನತ ಮಾನವ ಸಂಪನ್ಮೂಲವಾಗಬೇಕಾದ ಭವಿಷ್ಯದ ಪ್ರಜೆಗಳು ಮೊಬೈಲ್‌ ತೆರೆಯಲ್ಲಿ ಸೆರೆಯಾಗಿ ಹೋದದ್ದು!

ಒಂದು ಕಾಲದಲ್ಲಿ ಕಿಲೊಬೈಟ್ (ಕೆ.ಬಿ) ಅಥವಾ ಮೆಗಾಬೈಟ್‍ಗಳೇ (ಎಂ.ಬಿ) ಅತ್ಯಂತ ದುಬಾರಿ ಅಂತರ್ಜಾಲ ಸಂಪರ್ಕ ಸೇವೆಯಾಗಿದ್ದರೆ, ಇಂದು ನಿಮ್ಮಲ್ಲಿ ಎಷ್ಟು ಜಿ.ಬಿ. ಡೇಟಾ (ಗೀಗಾ ಬೈಟ್‌) ಇದೆ ಎನ್ನುವುದರ ಮೇಲೆ ಅಂತಸ್ತಿನ ವರ್ಗೀಕರಣವಾಗುತ್ತದೆ. ಅಲ್ಲದೆ ಅನಿಯಮಿತ ಅಂತರ್ಜಾಲ ಸಂಪರ್ಕ, ಅದರಲ್ಲಿ ಯುವಜನ ಎದುರುಗೊಳ್ಳುವ ಮಾಹಿತಿ ಹಾಗೂ ವಿಡಿಯೊಗಳು ಮಾನವನ ಆಂತರ್ಯದಲ್ಲಿ ಹುದುಗಿರುವ ಪೈಶಾಚಿಕತೆಯೊಂದನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿವೆ ಎಂದರೆ ತಪ್ಪಿಲ್ಲ. ಬೇಡವೆಂದರೂ ಪದೇಪದೇ ಎಡತಾಕುವ ಮಾಹಿತಿಗಳು, ವಿಡಿಯೊಗಳು ಯುವಜನರನ್ನು ತಮ್ಮ ಪಾಶದೊಳಗೆ ಸಿಲುಕಿಸುತ್ತವೆ. ಹಾಗಿದ್ದರೆ ಇಂತಹ ಅಪರಾಧಗಳಾಗುವುದು ಸರಿಯಾದ ಪಾಲನೆಯ ಕೊರತೆಯಿಂದಲೋ, ಶಿಕ್ಷಣ ಸಂಸ್ಥೆಗಳ ಎಡವಟ್ಟಿನಿಂದಲೋ ಅಥವಾ ಮಾರುಕಟ್ಟೆ ತಂತ್ರಗಳಲ್ಲಿಯೋ ಎಂಬ ಬಗ್ಗೆ ಯೋಚಿಸಬೇಕಿದೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಎಸ್‍ಡಿಎಂ ಕಾಲೇಜು, ಉಜಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT