ಶುಕ್ರವಾರ, ಮೇ 20, 2022
21 °C
ಅಧಿಕಾರ ಗಳಿಸುವುದರಲ್ಲೇ ಬದುಕು ಕಳೆದುಹೋಗುವಂತೆ ಮಾಡದೆ, ಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳುವ ವಿವೇಕವನ್ನೂ ಮೈಗೂಡಿಸಿಕೊಳ್ಳಬೇಕು

ಸಂಗತ: ಪ್ರವಹಿಸುತ್ತಲೇ ಇರಲಿ ಜೀವನಧಾರೆ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಗೆಳೆಯ ಚಿದಂಬರ ಇನಾಮದಾರ ಅವರು ಒಮ್ಮೆಲೇ ಜ್ಞಾನೋದಯವಾದಂತೆ ತಮ್ಮ ಹುಟ್ಟೂರಿಗೆ ಹೊರಟು ಹೋದರು. ಅಲ್ಲಿ ಅವರ ಪೂರ್ವಜರು ಪೂಜಿಸುತ್ತಿದ್ದ ಹಳೆಯದಾದ ವಿಠಲ ಮಂದಿರವನ್ನು ಶ್ರಮಪಟ್ಟು ತಮ್ಮದೇ ಹಣ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿದರು. ಈಗ ಈ ಮಂದಿರದ ಬದಿಯ ಒಂದು ಸಣ್ಣ ಮನೆಯಲ್ಲಿ ಪತ್ನಿಯೊಂದಿಗೆ ವಾಸ ಮಾಡುತ್ತಾ, ಧಾರ್ಮಿಕ, ಸಾಂಸ್ಕೃತಿಕ, ಯೋಗ ಮತ್ತು ಆರೋಗ್ಯ ಶಿಬಿರಗಳನ್ನು ಸಂಘಟಿಸುತ್ತಿದ್ದಾರೆ. ಯಾರಿಂದಲೂ ಹಣ ಪಡೆಯದೆ ತಮ್ಮ ಪಿಂಚಣಿ ಹಣವನ್ನೆಲ್ಲ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.

ಅವರು ಇದಕ್ಕೆ ಕೊಡುವ ವಿವರಣೆ ಜೀವನ ಪಾಠದಂತಿದೆ: ‘ಇಷ್ಟು ದಿನ ಕುಟುಂಬ, ಮಕ್ಕಳು ಅಂತ ಹೆಣಗಿದ್ದೇನೆ. ಇನ್ನು ಮೇಲೆ ನನ್ನ ಹಣವನ್ನು ಸಮಾಜ ಕಾರ್ಯಗಳಿಗೆ ಖರ್ಚು ಮಾಡಬಯಸಿದ್ದೇನೆ. ಇದು ನನ್ನ ಬದುಕಿನ ಮುಖ್ಯ ಉದ್ದೇಶ. ಮಕ್ಕಳು ದೊಡ್ಡವರಾಗಿದ್ದಾರೆ. ಅವರೇ ದುಡಿದು ಬದುಕು ಕಟ್ಟಿಕೊಳ್ಳಬೇಕು’.

ಪ್ರಲೋಭಕ್ಕಿಂತ ಹೆಚ್ಚಿನ ಆನಂದ ತ್ಯಾಗದ್ದು, ಮನುಷ್ಯನ ಆತ್ಮ ಜಾಗೃತವಾಗುವುದು ವಿರಕ್ತಿಯಿಂದ ಎಂಬ ಮಾತಿದೆ. ಹಣ ಗುಡ್ಡೆ ಹಾಕುವುದರಲ್ಲಿಯೇ ಅನೇಕರ ಬದುಕು ಕಳೆದುಹೋಗುತ್ತದೆ. ಮನಸ್ಸು ಹಂಬಲಿಸಿದ, ಸಾಧಿಸಲೇಬೇಕು ಎಂದು ಕಂಡ ಕನಸು
ಗಳನ್ನು ಸಾಕಾರಗೊಳಿಸುವಲ್ಲಿ ಬದುಕಿನ ಉದ್ದೇಶ ಸಫಲವಾಗುತ್ತದೆ.

ಬದುಕಿನ ಭದ್ರತೆಗೆ ಉಳಿತಾಯ ಬೇಕು. ಉಳಿತಾಯ ಮಾಡುವುದೇ ಗೀಳಾಗಬಾರದು. ಕೆಲವರು ಹೊಟ್ಟೆ, ಬಟ್ಟೆ ಕಟ್ಟಿ ಹಣ ಸಂಗ್ರಹಿಸಿ ಇಡುತ್ತಾರೆ. ಒಂದು ಪತ್ರಿಕೆ, ಪುಸ್ತಕ ಕೊಳ್ಳುವುದಕ್ಕೆ, ಗೆಳೆಯರೊಂದಿಗೆ ಹೋಟೆಲಿಗೆ ಹೋಗಿ ಚಹಾ ಕುಡಿಯುವುದಕ್ಕೆ ಖರ್ಚು ಮಾಡಲು ಒಪ್ಪುವುದಿಲ್ಲ. ನನ್ನ ಪರಿಚಿತ ನಿವೃತ್ತ ಪ್ರಾಚಾರ್ಯರೊಬ್ಬರು ಮನೆಗೆ ಯಾವ ಪತ್ರಿಕೆಯನ್ನೂ ತರಿಸಿಕೊಳ್ಳುವುದಿಲ್ಲ. ‘ಸಾರ್ವಜನಿಕ ವಾಚನಾಲಯದಲ್ಲಿ ಪತ್ರಿಕೆಗಳನ್ನು ಓದುತ್ತೇನೆ. ಪತ್ರಿಕೆ ಕೊಳ್ಳುವುದನ್ನು ನಿಲ್ಲಿಸಿದ್ದರಿಂದ ವಾರ್ಷಿಕ ₹ 2,000 ಉಳಿತಾಯವಾಗು
ತ್ತದೆ’ ಎಂಬ, ಗಣಿತ ವಿಷಯದಲ್ಲಿ ಪಿಎಚ್.ಡಿ ಮಾಡಿರುವ ಅವರ ಮಾತು ಕೇಳಿ ನಗು ಬರುತ್ತದೆ.

ಮರಾಠಿ ಭಾಷಾ ಶಿಕ್ಷಕರಾಗಿದ್ದ ಎಸ್.ಎಸ್.ಉಕಲಿ ಅವರು ನಿವೃತ್ತಿಯ ನಂತರ ಕನ್ನಡ ಭಾಷಾ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ, ಹಳೆಗನ್ನಡದ ಮಹತ್ವದ 8 ಕೃತಿಗಳನ್ನು ಸರಳ ಕನ್ನಡಕ್ಕೆ ರೂಪಾಂತರಿಸಿ, ತಮ್ಮದೇ ಹಣ ಸುರಿದು ಪ್ರಕಟಿಸಿದ್ದಾರೆ. ಈ ಗ್ರಂಥಗಳನ್ನು ಶಾಲೆ, ಕಾಲೇಜು ಮತ್ತು ಆಸಕ್ತರಿಗೆ ಉಚಿತವಾಗಿ ತಲುಪಿಸುತ್ತಿದ್ದಾರೆ. ‘ವೃತ್ತಿಯಲ್ಲಿದ್ದಾಗ ಕನ್ನಡಕ್ಕಾಗಿ ಏನೂ ಮಾಡಲು ಆಗಲಿಲ್ಲ. ಆ ಹಳಹಳಿ ಬಹಳ ಕಾಡುತ್ತಿತ್ತು. ನಿವೃತ್ತಿಯ ದಿನಗಳನ್ನು ಕನ್ನಡಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ. ಇದು ನನಗೆ ನೆಮ್ಮದಿ, ಆರೋಗ್ಯ ಕೊಟ್ಟಿದೆ. 86ನೇ ವಯಸ್ಸಿನಲ್ಲಿಯೂ ಗಟ್ಟಿಮುಟ್ಟಾಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಆಸ್ತಿ, ಸಂಪತ್ತು, ಅಧಿಕಾರ ಗಳಿಸುವುದಕ್ಕೆ ಮನುಷ್ಯ ಹೆಣಗುತ್ತಲೇ ಇರುತ್ತಾನೆ. ಬದುಕು ಇದರಲ್ಲಿಯೇ ಕಳೆದುಹೋಗುವ ಅಪಾಯವಿದೆ. ಅವನು ತನ್ನಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳುವ ವಿವೇಕವನ್ನೂ ಮೈಗೂಡಿಸಿಕೊಳ್ಳಬೇಕು. ಬದುಕಿನ ಕ್ಷಣಿಕತೆ ಮತ್ತು ನಶ್ವರತೆ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂಬ, ಅಸ್ತಿತ್ವವಾದಿ ದಾರ್ಶನಿಕ ಮಾರ್ಟಿನ್ ಹೈಡಗೆ ಅವರ ಮಾತು ಸ್ಮರಣೀಯವಾಗಿದೆ.

ಅಮೆರಿಕದ ಉಕ್ಕು ಉದ್ಯಮಿಯಾಗಿದ್ದ ಆ್ಯಂಡ್ರೂ ಕಾರ್ನೆಗಿ, ಮುಪ್ಪು ಆವರಿಸುತ್ತಲೇ ಎಚ್ಚೆತ್ತು ತಮ್ಮ ಸಂಪತ್ತನ್ನು ಗ್ರಂಥಾಲಯ ನಿರ್ಮಾಣಕ್ಕೆ ಧಾರೆಯೆರೆದರು. ‘ಶ್ರೀಮಂತನಾಗಿ ಸಾಯುವ ವ್ಯಕ್ತಿ ಕಳಂಕ ಹೊತ್ತುಕೊಂಡಿರುತ್ತಾನೆ’ ಎಂಬುದು ಕಾರ್ನೆಗಿ ಅವರ ಪ್ರಸಿದ್ಧ ಮಾತು. ಸ್ನೇಹಿತರೊಬ್ಬರಿಗೆ ‘ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ?’ ಎಂದು ವಿಚಾರಿಸಿದೆ. ‘ಪಿಂಚಣಿ ಬರುತ್ತಿದೆಯಲ್ಲಾ, ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದರು. ಅವರ ಮಾತಿನಲ್ಲಿ ಹೊಗೆ ಕಾಣಿಸುತ್ತಿತ್ತು.

‘ಹೊರಗೆ ಹೋಗಬೇಡಿ, ನಿಮಗೆ ವಯಸ್ಸಾಯಿತು. ವಾಹನಗಳ ಓಡಾಟ ಜಾಸ್ತಿ’ ಎಂದು ಮನೆಯಲ್ಲಿ ಕಟ್ಟಿ ಹಾಕುತ್ತಾರೆ. ಮನೆಯಲ್ಲೇ ಕುಳಿತುಕೊಂಡರೆ ಹಿಂದಕ್ಕೆ ಸರಿಯಲು ಒಪ್ಪಿಕೊಂಡಂತೆಯೇ. ಸಮಾಜ ವಾಹಿನಿಯೊಂದಿಗೆ ಜೀವನಧಾರೆ ಪ್ರವಹಿಸುತ್ತಲೇ ಇರಬೇಕು. ಅದು ಬದುಕಿನ ಸೊಗಸು.

ಹಿರಿಯ ನಾಗರಿಕರು ಎಂದಿನಂತೆ ಕ್ರಿಯಾಶೀಲರಾಗಿರಬೇಕು. ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿಯಿದ್ದರೆ ಮುಂದುವರಿಯಬೇಕು. ಹೊಸದನ್ನು ಕಲಿಯಲು ಹಂಬಲಿಸಬೇಕು. ಕಲೆಯಲ್ಲಿ ದೇಹ, ಮನಸ್ಸು, ಬುದ್ಧಿ ಕ್ರಿಯಾಶೀಲವಾಗುತ್ತವೆ. ತಮ್ಮ ಬಳಿ ಇರುವ ಹಣವನ್ನು ಇದಕ್ಕಾಗಿ ಧಾರಾಳವಾಗಿ ಖರ್ಚು ಮಾಡಬೇಕು.

ಸಭೆ, ಸಮಾರಂಭ, ಪ್ರತಿಭಟನೆ, ಹೋರಾಟಗಳಲ್ಲಿ ಭಾಗವಹಿಸಿ ನಿಮ್ಮ ಅಭಿಪ್ರಾಯ ಹೇಳುವ ಅವಕಾಶ ಬಂದರೆ ಧೈರ್ಯವಾಗಿ ಹೇಳಿಬಿಡಿ. ನಿಮ್ಮ ಮನಸ್ಸು ಯೌವನಕ್ಕೆ ಹೊರಳುತ್ತದೆ.

ಜೀವನದಲ್ಲಿ ಯಶಸ್ಸು ದಕ್ಕಬೇಕಾದರೆ ನಾಲ್ಕು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಪಂಚತಂತ್ರದ ಒಂದು ಕಥೆ ಹೇಳುತ್ತದೆ. ಮೊದಲನೆಯದು, ಹಣ ಮಾಡುವ ಕೌಶಲವಾದರೆ, ಎರಡನೆಯದು, ಅದನ್ನು ಸಂರಕ್ಷಿಸುವ ಕಲೆ, ಮೂರನೆಯದು, ಹಣ ಖರ್ಚು ಮಾಡಲು ಗೊತ್ತಿರಬೇಕು. ಕೊನೆಯದಾಗಿ, ದಾನ ಮಾಡುವ ಕೌಶಲ ರೂಢಿಸಿಕೊಳ್ಳಬೇಕು.

ನಿನ್ನ ನಂತರವೂ ನೀನು ಉಳಿಯಬೇಕೆಂದರೆ, ನಿನ್ನ ನಿರ್ಗಮನ ಸಮಾಜಕ್ಕೆ ನಷ್ಟ ಎನ್ನುವಂತೆ ಬದುಕಬೇಕು ಎಂದು ಲೇಖಕ ಜಾನ್ ರಸ್ಕಿನ್ ಹೇಳಿದ ಮಾತು ಇಲ್ಲಿ ನೆನಪಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.