ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪಿಎಚ್‌.ಡಿ. ಎಂಬ ‘ಕದ್ದ ಮಾಲು!’

ತಮ್ಮ ಆಲೋಚನೆಗಳನ್ನು ಅಕ್ಷರರೂಪಕ್ಕೆ ಇಳಿಸುವ ಕೌಶಲ ಪಿಎಚ್.ಡಿ. ಹಂತದ ವಿದ್ಯಾರ್ಥಿಗಳಲ್ಲೂ ಏಕೆ ಮೈಗೂಡಿಲ್ಲ ಎಂಬುದು ಚಿಂತನಾರ್ಹ ಸಂಗತಿಯಾಗಿದೆ
Last Updated 12 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಂಶೋಧನಾ ಪ್ರಬಂಧದ ಶೇಕಡ 25ಕ್ಕಿಂತ ಹೆಚ್ಚು ಭಾಗ ಇತರರು ಬರೆದ ಪುಸ್ತಕಗಳು, ಸಂಶೋಧನಾ ಲೇಖನಗಳು, ಪ್ರಬಂಧಗಳು ಮತ್ತು ಇತರ ಮೂಲಗಳಲ್ಲಿರುವ ಪಠ್ಯದೊಂದಿಗೆ ಸಾಮ್ಯತೆ ಹೊಂದಿರುವ ಕಾರಣಕ್ಕೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಈ ವರ್ಷ ಪಿಎಚ್.ಡಿ. ಪದವಿಗಾಗಿ ಸಲ್ಲಿಕೆಯಾದ 60 ಪ್ರಬಂಧಗಳನ್ನು ತಿರಸ್ಕರಿಸಿರುವುದು ಶೈಕ್ಷಣಿಕ ವಲಯದಲ್ಲಿ ಸಣ್ಣ ಚರ್ಚೆ ಹುಟ್ಟುಹಾಕಿದೆ.

‘ಶೇ 25ಕ್ಕಿಂತ ಕಡಿಮೆ ಭಾಗ ಕದ್ದರೆ ಸಮಸ್ಯೆ ಇಲ್ಲವೇ’ ಅಂತೆಲ್ಲ ಕೆಲವರು ಕುಹಕವಾಡುತ್ತಿದ್ದಾರೆ. ತಂತ್ರಾಂಶ ಬಳಸಿ ಸಾಮ್ಯತೆಯ ಪ್ರಮಾಣ ಕಂಡುಹಿಡಿಯುವ ಪ್ರಕ್ರಿಯೆಯು ಒಂದು ತಾಂತ್ರಿಕ ಕಸರತ್ತೇ ವಿನಾ ಸಂಶೋಧನೆ ಮತ್ತು ಸಂಶೋಧನಾ ಪ್ರಬಂಧದ ಗುಣಮಟ್ಟದ ಸುಧಾರಣೆಗೆ ಇದು ಹೆಚ್ಚೇನೂ ಕೊಡುಗೆ ನೀಡಲಾರದು ಎಂಬುದು ಇಲ್ಲಿ ಗಮನಿಸಬೇಕಿರುವ ಅಂಶ. ಸಾಮ್ಯತೆ ಪ್ರಮಾಣದ ಆಧಾರದಲ್ಲಿ ಪ್ರಬಂಧಗಳನ್ನು ಪಿಎಚ್.ಡಿ. ಪದವಿಗೆ ಸ್ವೀಕರಿಸಬೇಕೊ ಅಥವಾ ತಿರಸ್ಕರಿಸಬೇಕೊ ಎಂದು ನಿರ್ಧರಿಸುವುದು ಗುಣಮಟ್ಟ ಸುಧಾರಣೆ ದಿಸೆಯಲ್ಲಿ ಇಡಬಹುದಾದ ಒಂದು ಸಣ್ಣ ಹೆಜ್ಜೆಯಷ್ಟೆ ಎನ್ನಲು ಒಂದಿಷ್ಟು ಸಕಾರಣಗಳಿವೆ.

ಶೈಕ್ಷಣಿಕ ವಲಯ ಚಿಂತಿಸಬೇಕಿರುವುದು ಸಾಮ್ಯತೆ ಪ್ರಮಾಣ ತಗ್ಗಿಸುವುದು ಹೇಗೆ ಎಂಬುದರ ಕುರಿತಷ್ಟೇ ಅಲ್ಲ. ತಮ್ಮ ಆಲೋಚನೆಗಳನ್ನು ಅಕ್ಷರ
ರೂಪಕ್ಕೆ ಇಳಿಸಿ, ಬರಹಗಳ ಮೂಲಕ ಸಂವಹನ ನಡೆಸುವ ಕೌಶಲವು ಪಿಎಚ್.ಡಿ. ಹಂತದ ವಿದ್ಯಾರ್ಥಿಗಳಲ್ಲೂ ಏಕೆ ಮೈಗೂಡಿಲ್ಲ ಎಂಬುದು ನಮ್ಮನ್ನು ಚಿಂತೆ
ಗೀಡುಮಾಡಬೇಕಲ್ಲವೇ? ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲು ಇಂತಹ ನಿದರ್ಶನಗಳಾದರೂ
ಪ್ರಚೋದಿಸಬೇಕಲ್ಲವೇ?

ಸಿದ್ಧ ಮಾದರಿಯ ಪ್ರಶ್ನೆ- ಉತ್ತರಗಳ ಸರಪಳಿಯಲ್ಲಿ ಸಿಲುಕಿ ನಲುಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ನಿರ್ದಿಷ್ಟ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಹೇಳಿಕೊಡಲು ಹೆಚ್ಚು ಮುತುವರ್ಜಿ ತೋರುತ್ತಿದೆ. ಯಾವುದೇ ಪ್ರಶ್ನೆಯನ್ನು ತನ್ನದೇ ದೃಷ್ಟಿಕೋನದಿಂದ ವಿಶ್ಲೇಷಿಸಿ, ತನ್ನ ತಿಳಿವಳಿಕೆಗೆ ಅನುಗುಣವಾಗಿ ಸ್ವಂತ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುವುದೇ ಅಪರೂಪವಾಗಿದೆ. ವಿದ್ಯಾರ್ಥಿ ಜೀವನದುದ್ದಕ್ಕೂ ನೆನಪಿನ ಶಕ್ತಿಯನ್ನೇ ಬಂಡವಾಳವನ್ನಾಗಿಸಿಕೊಂಡು, ಪರೀಕ್ಷೆಗಳಲ್ಲಿ
ನೋಟ್ಸು ಅಥವಾ ಯಾವುದಾದರೂ ಪುಸ್ತಕದಲ್ಲಿನ ಸಾಲುಗಳನ್ನು ಯಥಾವತ್ತಾಗಿ ಬರೆದು ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗೆ ತಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಉತ್ತಮ ಫಲಿತಾಂಶ ಪಡೆದುಕೊಂಡೇ ಬಂದ ಎಷ್ಟೋ ವಿದ್ಯಾರ್ಥಿಗಳು ಕೂಡ, ಸ್ವತಂತ್ರವಾಗಿ ವಿಶ್ಲೇಷಿಸಿ ಬರೆಯುವ ಸಂದರ್ಭ ಎದುರಾದಾಗ ತಿಣುಕಾಡುವುದಿದೆ.

ಅಂಕಗಳು, ರ್‍ಯಾಂಕುಗಳ ಹಿಂದೆ ಬಿದ್ದಿರುವ ಶೈಕ್ಷಣಿಕ ವ್ಯವಸ್ಥೆಗೆ ವಿದ್ಯಾರ್ಥಿಗಳಲ್ಲಿ ಬರೆಯುವ ಕೌಶಲ ಮೈಗೂಡಿಸುವುದು ಆದ್ಯತೆಯಾಗಿದ್ದರೆ, ಸಂಶೋಧನಾ ಪ್ರಬಂಧ ಬರೆಯುವ ಹಂತದಲ್ಲಿ ಪರದಾಡುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ.

ಪದವಿ- ಸ್ನಾತಕೋತ್ತರ ಪದವಿ ಹಂತದ ಕಲಿಕೆಯ ವೇಳೆಯಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಬೇಕಿರುವ ಸೆಮಿನಾರ್ ರಿಪೋರ್ಟು, ಪ್ರಾಜೆಕ್ಟ್ ರಿಪೋರ್ಟುಗಳು ಕೂಡ ಬಹುತೇಕ ಸಂದರ್ಭಗಳಲ್ಲಿ ಕಾಪಿ-ಪೇಸ್ಟ್ ಕೌಶಲಕ್ಕಷ್ಟೇ ಕನ್ನಡಿ ಹಿಡಿಯುವಂತೆ ಇರುತ್ತವೆ. ತಾವು ಸಿದ್ಧಪಡಿಸುವ ವರದಿ ಅಥವಾ ಪ್ರಬಂಧಗಳು ಸಾಮ್ಯತೆಯ ಪ್ರಮಾಣವನ್ನು ಪತ್ತೆ ಹಚ್ಚುವ ತಂತ್ರಾಂಶಗಳ ಮೂಲಕ ಹಾದು ಹೋಗುವುದಾದರೆ, ಹಲವು ವಿದ್ಯಾರ್ಥಿಗಳು ಸಾಮ್ಯತೆಯ ಪ್ರಮಾಣ ತಗ್ಗಿಸಲೆಂದೇ ಇರುವ ತಾಂತ್ರಿಕ ಪರಿಕರಗಳ ಮೊರೆ ಹೋಗುತ್ತಾರೆ. ಕೆಲ ತಂತ್ರಾಂಶಗಳಿಗೆ ಪಠ್ಯ ಹಾಕಿದರೆ, ಅವು ಪದಗಳನ್ನು ಅದಲು ಬದಲು ಮಾಡಿ ಹೊಸ ವಾಕ್ಯಗಳನ್ನು ರಚಿಸಿ ನಮ್ಮೆದುರು ಇಡುತ್ತವೆ. ಇಂತಹ ತಾಂತ್ರಿಕ ಹತಾರಗಳ ನೆರವಿನಿಂದ ಸಂಶೋಧನಾ ಪ್ರಬಂಧದಲ್ಲಿನ ಸಾಮ್ಯತೆ ಪ್ರಮಾಣ ತಗ್ಗಿಸುವವರೂ ಇದ್ದಾರೆ. ಇಂತಹ ತಂತ್ರಗಳ ಮೊರೆ ಹೋಗದ ಕಾರಣಕ್ಕೂ ಕೆಲವರ ಪ್ರಬಂಧಗಳಲ್ಲಿನ ಸಾಮ್ಯತಾ ಪ್ರಮಾಣ ಹೆಚ್ಚಿರಬಹುದಾದ ಸಾಧ್ಯತೆಯನ್ನೂ ತಳ್ಳಿ
ಹಾಕುವಂತಿಲ್ಲ.

ನೌಕರಿ, ಬಡ್ತಿ, ವೇತನ ಹೆಚ್ಚಳದಂತಹ ಬಾಹ್ಯ ಒತ್ತಡಗಳ ಕಾರಣಕ್ಕೆ ಪಿಎಚ್.ಡಿ. ಪದವಿ ಪಡೆಯಲೇ
ಬೇಕಿರುವ ಅನಿವಾರ್ಯಕ್ಕೆ ಸಿಲುಕಿರುವ ಕೆಲವರು, ಈ ಪ್ರಕ್ರಿಯೆಯ ಭಾಗವಾಗಿ ಮಾಡಲೇಬೇಕಿರುವ ಕೆಲಸಗಳನ್ನು ಹೊರಗುತ್ತಿಗೆ ನೀಡುವುದೂ ಉಂಟು. ನಿಗದಿಪಡಿಸಿದಷ್ಟು ಹಣ ಪಾವತಿಸಿದರೆ ಸಂಶೋಧನಾ ಲೇಖನ, ಪ್ರಬಂಧ ಬರೆದುಕೊಡುವ, ಪೇಟೆಂಟುಗಳಿಗೆ ಹೆಸರು ಸೇರಿಸುವ ಖಾಸಗಿ ಕನ್ಸಲ್ಟೆನ್ಸಿಗಳು ಇತ್ತೀಚೆಗೆ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಪಿಎಚ್.ಡಿಗೆ ಪ್ರವೇಶ ಪಡೆದವರ ಸಂಪರ್ಕ ವಿವರಗಳನ್ನು ಹೇಗೋ ದಕ್ಕಿಸಿಕೊಳ್ಳುವ ರಿಸರ್ಚ್ ಕನ್ಸಲ್ಟೆನ್ಸಿಗಳು ಪದೇಪದೇ ಕರೆ ಮಾಡಿ, ‘ನಿಮಗೆ ಮಾರ್ಗದರ್ಶನದ ಅಗತ್ಯವಿದೆಯೇ’ ಎಂದು ವಿಚಾರಿಸುವುದೂ ಇದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನೂ ಒಳಗೊಂಡಂತೆ ಹಲವು ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ, ಸಂಶೋಧನಾ ಗುಣಮಟ್ಟ ಕಾಯ್ದುಕೊಳ್ಳುವ ಸವಾಲನ್ನು ಮೆಟ್ಟಿ ನಿಲ್ಲುವುದಕ್ಕೆ ಸುಲಭದ ದಾರಿಗಳಿಲ್ಲ. ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಅಗತ್ಯವಿರುವ ಮೂಲಸೌಕರ್ಯ ಹಾಗೂ ಸಂಪನ್ಮೂಲಗಳನ್ನು ಒದಗಿಸುವುದೂ ಆದ್ಯತೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT