‘ತಾಯ ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ದೂರುವೆ’ ಎನ್ನುವ ಬಸವಣ್ಣನ ವಚನವನ್ನು ನೆನಪಿಸುವ ವಿದ್ಯಮಾನಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಸಕಲ ಜೀವಸಂಕುಲವನ್ನು ಪೊರೆಯುವ ತಾಯಿಯಾಗಿರುವ ಪ್ರಕೃತಿಯೇ ಪೂತನಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ವಿದ್ಯಮಾನಗಳನ್ನು ಕಾಣುತ್ತಿದ್ದೇವೆ ಹಾಗೂ ಅಂಥ ಘಟನೆಗಳ ಸೃಷ್ಟಿಕರ್ತರು ನಾವೇ ಆಗಿದ್ದೇವೆ.

ಬಿಹಾರದ ಕೆಲವು ಪ್ರದೇಶಗಳಲ್ಲಿ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ನಂಜುಕಾರಕ ಯುರೇನಿಯಂ ಅಂಶ ಪತ್ತೆಯಾಗಿರುವುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಕಲಬೆರಕೆ ಜಗತ್ತಿನಲ್ಲಿ ತಾಯಿಯ ಹಾಲೂ ಶುದ್ಧವಾಗಿ ಉಳಿದಿಲ್ಲ ಎನ್ನುವುದು ಮನುಷ್ಯ ಸಂಬಂಧಗಳ ಬಗ್ಗೆ ನಂಬಿಕೆ ಉಳ್ಳವರನ್ನು ಕಂಗೆಡಿಸುವ ಸಂಗತಿ. ಅಸಂಭವ ಎನ್ನುವ ಸಾದೃಶ್ಯಗಳನ್ನು ನೀಡುವ ಬಸವಣ್ಣನ ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲುಬಾರದು’ ಎನ್ನುವ ವಚನದ ಆತಂಕ ವರ್ತಮಾನದಲ್ಲಿ ಸಂಭವನೀಯ ಎನ್ನುವಂತಾಗಿದೆ.

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಇರುವುದನ್ನು ಪಟ್ನಾದ ಮಹಾವೀರ್ ಕ್ಯಾನ್ಸರ್ ಸಂಸ್ಥೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಸಂಶೋಧನೆ ದೃಢಪಡಿಸಿದೆ. ಯುರೇನಿಯಂ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಸೂಚ್ಯಂಕಕ್ಕಿಂತ ಕಡಿಮೆ ಇದೆ ಎನ್ನುವುದು ಸಮಾಧಾನದ ಸಂಗತಿ.

‘ಯಾರಿಗೆ ದೂರುವುದು’ ಎನ್ನುವ ಬಸವಣ್ಣನ ಆತಂಕದ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆ ತೋರಬಹುದಾದ ಉತ್ತರ, ಪ್ರಜೆಗಳೇ ಚುನಾಯಿಸಿದ ಸರ್ಕಾರ. ಪರಿಸರ ಸಂರಕ್ಷಣೆ ಸರ್ಕಾರದ ಹೊಣೆಗಾರಿಕೆ. ಈ ಕರ್ತವ್ಯವನ್ನು ಸುಪ್ರೀಂ ಕೋರ್ಟ್, ಮೂಲಭೂತ ಹಕ್ಕುಗಳ ರಕ್ಷಣೆಯ ರೂಪದಲ್ಲಿ ವ್ಯಾಖ್ಯಾನಿಸಿರುವುದು ಕುತೂಹಲಕರ. ರಾಜಸ್ಥಾನದ ಮೂರು ನದಿಗಳ (ಜೊಜರಿ, ಬಂಡಿ, ಲುನಿ) ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ‘ಪರಿಸರ ಸಂರಕ್ಷಣೆ ಜನತೆಯ ಮೂಲಭೂತ ಹಕ್ಕಿನ ರಕ್ಷಣೆ ಕೂಡ’ ಎಂದು ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠ ಹೇಳಿದೆ. ನೈಸರ್ಗಿಕ ಸಮತೋಲನ ಮತ್ತು ಸ್ವಚ್ಛ ವಾತಾವರಣವನ್ನು ದೇಶದ ಜನತೆಗೆ ಕಲ್ಪಿಸುವುದು, ಅವರ ಮೂಲಭೂತ ಹಕ್ಕನ್ನು ಕಾಪಾಡಿದಂತೆಯೇ ಸರಿ ಎನ್ನುವುದು ಸುಪ್ರೀಂ ಕೋರ್ಟ್ ಅಭಿಪ್ರಾಯದ ಸಾರ. ತನ್ನ ಮಾತುಗಳ ಸಂದರ್ಭದಲ್ಲಿ, ಸಂವಿಧಾನದ 21ನೇ ವಿಧಿಯನ್ನು ಪ್ರಸ್ತಾಪಿಸಿರುವ ಕೋರ್ಟ್– ‘ಪರಿಸರದ ಸಂರಕ್ಷಣೆ ಜೀವಿಸುವ ಹಕ್ಕಿಗೆ ಸಮಾನ’ ಎಂದು ವಿಶ್ಲೇಷಿಸಿದೆ.

ತಿರುಚಿರಾಪಳ್ಳಿಯ ಬಳಿ ಕಾವೇರಿ ನದಿಯನ್ನು ಅಧ್ಯಯನಕ್ಕೆ ಒಳಪಡಿಸಿರುವ ತಮಿಳುನಾಡಿನ ‘ಭಾರತೀದಾಸನ್’ ವಿಶ್ವವಿದ್ಯಾಲಯದ ಸಂಶೋಧಕರು, ನದಿಯ ನೀರಿನಲ್ಲಿ ಭಾರವಾದ ಲೋಹಗಳು ಸೇರಿರುವುದನ್ನು ಗುರ್ತಿಸಿದ್ದಾರೆ. ಸೀಸ ಮತ್ತು ಕ್ಯಾಡ್ಮಿಯಂ ಲೋಹದ ಮಾದರಿ ಕಾವೇರಿ ನದಿಯಲ್ಲಿನ ಮೀನಿನಲ್ಲಿಯೂ ಪತ್ತೆ ಆಗಿದೆ. ಭಾರಲೋಹ ಬೆರೆತ ನೀರು ಮಾತ್ರವಲ್ಲ, ಆ ಪರಿಸರದ ಮೀನುಗಳ ಸೇವನೆ ಕೂಡ ಆರೋಗ್ಯಕ್ಕೆ ಹಿತಕರವಲ್ಲ ಎಂಬ ಎಚ್ಚರಿಕೆಯನ್ನು ತಜ್ಞರ ತಂಡ ನೀಡಿದೆ.

‘ಲಾನ್ಸೆಂಟ್ ಕೌಂಟ್ಡೌನ್’ನ 2025ರ ವರದಿಯಲ್ಲಿ ಇರುವ, ವಾಯುಮಾಲಿನ್ಯ ಉಂಟು ಮಾಡಿರುವ ಅನಾಹುತದ ಮಾಹಿತಿ ಗಾಬರಿ ಹುಟ್ಟಿಸುವಂತಿದೆ. 2022ರಲ್ಲಿ ಲಕ್ಷಾಂತರ ಭಾರತೀಯರು ವಾಯುಮಾಲಿನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿ ಹೇಳುತ್ತದೆ. ‘ಲಾನ್ಸೆಂಟ್ ಕೌಂಟ್ಡೌನ್’ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಹವಾಮಾನ ಬದಲಾವಣೆ ಮತ್ತು ಅದು ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸುತ್ತದೆ. ಪಾರಂಪರಿಕ ಇಂಧನ ಮೂಲಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಬಳಕೆಯಿಂದ ಜಗತ್ತಿನ ನೂರು ದೇಶಗಳಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ಸಾವಿಗೀಡಾಗುತ್ತಿದ್ದಾರೆ ಎನ್ನುವ ದಾರುಣ ಸಂಗತಿಯನ್ನೂ ಲಾನ್ಸೆಂಟ್ ತನ್ನ ವರದಿಯಲ್ಲಿ ದಾಖಲಿಸಿದೆ.

ಕರ್ನಾಟಕದಲ್ಲಿಯೂ ನದಿ ಮೂಲಗಳು ಶುದ್ಧವಾಗಿಲ್ಲ ಎನ್ನುವ ಆತಂಕ ದಶಕಗಳಿಂದಲೂ ಇದೆ. ಕೈಗಾರಿಕೆಗಳಿಂದ ನಾಡಿನ ಜೀವನದಿಗಳು ನಂಜು ಮೈಗೂಡಿಸಿಕೊಳ್ಳುತ್ತಿರುವ ಬಗ್ಗೆ ಪರಿಸರವಾದಿಗಳು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೆ, ನದಿಗಳನ್ನು ಚರಂಡಿಗಳಾಗಿಸುವ ‘ನಾಗರಿಕ ಕಾರ್ಯ’ ಎಗ್ಗಿಲ್ಲದೆ ಸಾಗಿದೆ.

ವಾಯುಮಾಲಿನ್ಯ ಹೆಚ್ಚುತ್ತಿದ್ದರೂ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ವಾಯುಮಾಲಿನ್ಯಕ್ಕೆ ತಿದಿ
ಒತ್ತುತ್ತೇವೆ. ದೆಹಲಿಯ ಪಾಡಂತೂ ಹೇಳತೀರದು. ಅಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳಿದೆ. ದೇಶದ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಸಿಟ್ಟು, ಆಕ್ರೋಶ
ದೊಂದಿಗೆ, ನಿರಾಶೆಯ ಧ್ವನಿಯಲ್ಲೂ ಮಾತನಾಡಿರುವುದಿದೆ.

ಮಾಲಿನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ನಡೆಯುವ ನಾಗರಿಕ ಪ್ರತಿರೋಧದ ಚಳವಳಿಗಳನ್ನು ವ್ಯವಸ್ಥೆ ಹತ್ತಿಕ್ಕಲು ಬಯಸುತ್ತದೆ. ಪರಿಸರ ಕಾಳಜಿಯ ಮಾತುಗಳನ್ನಾಡುವವರು ಅಭಿವೃದ್ಧಿಯ ವಿರೋಧಿಗಳು ಎನ್ನುವಂತೆ ಚಿತ್ರಿಸಲಾಗುತ್ತದೆ. ಪ್ರತಿರೋಧದ ನಡುವೆಯೂ ಪರಿಸರ ಕಾಳಜಿಯ ವಿವೇಕದ ಧ್ವನಿಗಳು ಜೀವಂತವಾಗಿವೆ ಎನ್ನುವುದು ಆಶಾವಾದದ ಸಂಗತಿ.

ಸ್ವಚ್ಛ ಪರಿಸರದ ಅಪೇಕ್ಷೆ ನಾಗರಿಕರ ಮೂಲಭೂತ ಹಕ್ಕು ಎನ್ನುವುದನ್ನು ಸರ್ಕಾರಗಳು ಮನಗಾಣಬೇಕಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಗಾಳಿಗೂ ಪಡಿತರ ವ್ಯವಸ್ಥೆ ಅನಿವಾರ್ಯವಾಗುವ ಸ್ಥಿತಿಯನ್ನು ಸರ್ಕಾರಗಳು ಸೃಷ್ಟಿಸಬಾರದು.