ಶುಕ್ರವಾರ, ಡಿಸೆಂಬರ್ 13, 2019
27 °C
ಉದ್ಯಾನದ ಬದಲು ಅರಣ್ಯೀಕರಣಕ್ಕೆ ಒತ್ತು ಸಿಗಲಿ ಎನ್ನುತ್ತಾರೆ ಪರಿಸರವಾದಿಗಳು

ಸಂಗತ | ಮಂಗ ಚೇಷ್ಟೆ ಮತ್ತು ಮೀಸಲು ಉದ್ಯಾನ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಸ್ಥಳ ಹಾಗೂ ಉದ್ಯಾನಗಳಲ್ಲಿ ತಮ್ಮ ಚೇಷ್ಟೆಗಳಿಂದ ಮನರಂಜನೆ ಹಾಗೂ ಜನರಿಗೆ ತೊಂದರೆ ಎರಡನ್ನೂ ನೀಡುವ ಮಂಗಗಳು, ರಾಜ್ಯದ ಮಲೆನಾಡು ಭಾಗದಲ್ಲಿ ರೈತರ ಬೆಳೆ ನಾಶ ಮಾಡಿ, ಅವರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡುತ್ತಿವೆ. ಹೀಗಾಗಿ, ಈ ಭಾಗದಲ್ಲಿ ಮಿತಿಮೀರಿರುವ ಮಂಗಗಳ ಉಪಟಳವನ್ನು ನಿಯಂತ್ರಿಸಲು ಇದೀಗ ‘ಮಂಗಗಳ ಉದ್ಯಾನ’ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಾಗೋಡಿ ಬಳಿ ಮಂಗಗಳ ವಾಸಕ್ಕೆಂದೇ ಮೀಸಲಾದ ‘ಮಂಕಿ ಪಾರ್ಕ್’ ಅಥವಾ ‘ವಾನರ ಉದ್ಯಾನ’ ರೂಪುಗೊಳ್ಳಲಿದೆ. ಅಸ್ಸಾಂನಲ್ಲಿ ಈಗಾಗಲೇ ಯಶಸ್ವಿಯಾಗಿರುವ ಮಂಗಗಳ ಉದ್ಯಾನದ ಮಾದರಿಯಲ್ಲೇ ನಾಗೋಡಿಯ ಉದ್ದೇಶಿತ ಉದ್ಯಾನದಲ್ಲಿ ಹಣ್ಣು ಬಿಡುವ ಮರಗಳನ್ನೇ ಹೆಚ್ಚಾಗಿ ಬೆಳೆಸಿ ಮಂಗಗಳನ್ನು ಸಂರಕ್ಷಿಸಲಾಗುತ್ತದೆ.

ಇದನ್ನೂ ಓದಿ: ಮಂಗಗಳ ಉದ್ಯಾನ: ಹೇಳಿದಷ್ಟು ಸಲೀಸಲ್ಲ

ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಸಿದ್ಧಾಪುರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಗಳು, ಕಾಡಿನಲ್ಲಿ ತಮಗೆ ಆಹಾರದ ಕೊರತೆ ಉಂಟಾದಾಗ ಸಮೀಪದ ರೈತರ ಹೊಲ, ತೋಟಗಳಿಗೆ ನುಗ್ಗಿ, ಬೆಳೆಯ ಬಹುಪಾಲನ್ನು ತಿಂದು ತೇಗುತ್ತಿವೆ. ಇದು ರೈತರ ನಿದ್ದೆಗೆಡಿಸಿದೆ. ಪ್ರತೀ ವರ್ಷ ನಾಗೋಡಿ ಭಾಗದ ಬೆಳೆಗಾರರು 100 ಕ್ವಿಂಟಲ್‍ನಷ್ಟು ಏಲಕ್ಕಿಯನ್ನು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಅದು 25 ಕ್ವಿಂಟಲ್‍ ಅನ್ನೂ ದಾಟಿಲ್ಲ. ಮಂಗಗಳ ವಿಪರೀತ ಹಾವಳಿಯಿಂದ ತೋಟಗಾರಿಕೆಯೇ ಬೇಡವೆನಿಸಿದೆ ಎನ್ನುತ್ತಾರೆ ಬೆಳೆಗಾರರು. ತೋಟಗಳಿಗೆ ನುಗ್ಗುವ ಮಂಗಗಳನ್ನು ಓಡಿಸಲು ಪಟಾಕಿ ಹೊಡೆಯುವ ವಿಧಾನ ಅನುಸರಿಸಿದರೂ ಅದರ ಸದ್ದಿಗೆ ಹೆದರದ ಅವು ಲೂಟಿಯನ್ನು ಮುಂದುವರಿಸುತ್ತವೆ ಎನ್ನುವುದು ಅವರ ಅಳಲು. ಅಲ್ಲದೆ, ಮಂಗಗಳಿಂದ ಆಗುವ ಬೆಳೆ ನಾಶಕ್ಕೆ ಸರ್ಕಾರ ಯಾವುದೇ ಪರಿಹಾರವನ್ನೂ ನೀಡುವುದಿಲ್ಲ.

ಇದನ್ನೂ ಓದಿ: ಸಿ.ಎಂ. ತವರಿಗೆ ಮಂಗಗಳ ಉದ್ಯಾನ: ರಾಜ್ಯದಲ್ಲಿಯೇ ಮೊದಲ ಪ್ರಯೋಗ

ನಿತ್ಯದ ಅಗತ್ಯಗಳಿಗೆ ಬೇಕಾದ ತರಕಾರಿಯನ್ನು ಬೆಳೆದುಕೊಳ್ಳುತ್ತಿದ್ದ ಇಲ್ಲಿನ ರೈತರೀಗ, ಅದು ಮಂಗಗಳ ಪಾಲಾಗುವುದನ್ನು ಕಂಡು, ತರಕಾರಿ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಂಗಗಳ ಈ ಪರಿಯ ಹಾವಳಿಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಅವುಗಳನ್ನು ನಿಯಂತ್ರಿಸುವ ಶಾಶ್ವತ ಕ್ರಮಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ ಎಂದು ರೈತರು ದೂರುತ್ತಾರೆ. ಮಂಗಗಳಿಗೆ ವಿಷಹಾಕಿ ಸಾಯಿಸಿ ಇಲ್ಲವೇ ಅವುಗಳ ಸಂಖ್ಯೆ ಹೆಚ್ಚಾಗದಂತೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನಾದರೂ ಮಾಡಿ ಎಂದು ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ. ಸಮಸ್ಯೆಯ ತೀವ್ರತೆಯನ್ನು ಅರಿತ ಸರ್ಕಾರ, ತನ್ನ ಸುಪರ್ದಿಯ 100 ಎಕರೆ ಜಾಗದಲ್ಲಿ ವಾನರ ಉದ್ಯಾನವನ್ನು ನಿರ್ಮಿಸುವ ಕಾರ್ಯಕ್ಕೆ ಕೈಹಾಕಿದೆ.

ಹಿಮಾಚಲ ಪ್ರದೇಶದಲ್ಲಿ 2009ರಲ್ಲಿ ಮಂಗಗಳ ಉಪಟಳ ಜಾಸ್ತಿಯಾಗಿ, ಅಲ್ಲಿನ ರೈತರು ನಮ್ಮವರ ಹಾಗೆಯೇ ಕಂಗಾಲಾಗಿದ್ದರು. ವಾರ್ಷಿಕ ₹ 500 ಕೋಟಿ ಮೌಲ್ಯದ ಬೆಳೆಯನ್ನು ಅವು ನಾಶಪಡಿಸುತ್ತಿದ್ದವು. ಉಪಟಳ ನೀಡುತ್ತಿದ್ದ ಮಂಗಗಳಿಗೆ ಸಮರೋ ಪಾದಿಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲಾಗಿತ್ತು. ಬೆಳೆ ಹಾಳು ಮಾಡುವ ಕ್ರಿಮಿ ಎಂದು ಪರಿಗಣಿಸಿ ವಧೆಗೂ ಅವಕಾಶ ಕಲ್ಪಿಸಲಾಗಿತ್ತು. ಅಸ್ಸಾಂನ ಗಿಬ್ಬನ್ ಅಭಯಾರಣ್ಯದಲ್ಲಿ ಏಳೆಂಟು ಪ್ರಭೇದದ ಕೋತಿಗಳನ್ನು ಸಂರಕ್ಷಿಸ
ಲಾಗಿದೆ. ಅದೇ ಮಾದರಿಯನ್ನು ಇಲ್ಲೂ ಅನುಸರಿಸಿ, ಮಂಗಗಳು ಹೊರ ಹೋಗದಂತೆ ತಡೆಯಲು ಪಾರ್ಕ್‌ನ
ಸುತ್ತ ಸೌರ ವಿದ್ಯುತ್ ಬೇಲಿಯನ್ನು ನಿರ್ಮಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸುತ್ತಿದೆ.

ಉದ್ದೇಶಿತ ‘ವಾನರ ಉದ್ಯಾನ’ದಿಂದ ತಾತ್ಕಾಲಿಕ ಪರಿಹಾರ ದೊರೆಯುತ್ತದೆಯೇ ಹೊರತು, ಸಮಸ್ಯೆಯು
ಶಾಶ್ವತವಾಗಿ ಬಗೆಹರಿಯುವುದಿಲ್ಲ ಎಂದು ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿರುವ ಪರಿಸರ
ವಾದಿಗಳು, ಕಾಡನ್ನು ಸರಿಯಾಗಿ ಸಂರಕ್ಷಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ. ಸರ್ಕಾರವೇ ನಿರ್ಮಿಸಿರುವ ನೆಡುತೋಪುಗಳ ಮಧ್ಯೆ, ಹಣ್ಣು ಬಿಡುವ ಮರಗಳನ್ನು ಮೊದಲೇ ಬೆಳೆಸಿದ್ದರೆ ಹೀಗಾಗುತ್ತಿರಲಿಲ್ಲ, ಈಗ ತಡವಾದರೂ ಸರಿ ಆ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಸುಮಾರು 10,000 ಹೆಕ್ಟೇರ್‌ನಷ್ಟು ಅರಣ್ಯ ಒತ್ತುವರಿ ಆಗಿರುವುದರಿಂದ ಆವಾಸಸ್ಥಾನವನ್ನು ಕಳೆದುಕೊಂಡಿರುವ ಮಂಗಗಳು, ಆಹಾರಕ್ಕಾಗಿ ಜನವಸತಿಗೆ ನುಗ್ಗುತ್ತಿರುವುದು ಸಹಜವಾಗಿಯೇ ಇದೆ ಎಂದಿರುವ ಪರಿಸರವಾದಿಗಳು, ಮಂಗಗಳ ಉದ್ಯಾನದ ಬದಲು ಅರಣ್ಯೀಕರಣಕ್ಕೆ
ಹೆಚ್ಚಿನ ಒತ್ತು ಕೊಡಬೇಕು ಎಂದಿದ್ದಾರೆ.

ಉದ್ಯಾನ ನಿರ್ಮಿಸಿದಾಕ್ಷಣ ಅಲ್ಲಿ ಥಟ್ಟೆಂದು ಹಣ್ಣಿನ ಮರಗಳು ಸೃಷ್ಟಿಯಾಗುವುದಿಲ್ಲ. ನೆಟ್ಟ ಸಸಿ ಮರವಾಗಿ ಹಣ್ಣು ಬಿಡಲು ಕನಿಷ್ಠ 5ರಿಂದ 10 ವರ್ಷಗಳಾದರೂ ಬೇಕು. ಉದ್ಯಾನಕ್ಕೆ ಸ್ಥಳಾಂತರಿಸಿದ ಮಂಗಗಳಿಗೆ ಅಲ್ಲಿಯವರೆಗೂ ಆಹಾರ ಬೇಕಲ್ಲವೇ? 500 ಮಂಗಗಳಿಗೆ ವರ್ಷವಿಡೀ ಆಹಾರ ಒದಗಿಸಲು ₹40 ಲಕ್ಷ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಮಂಗಗಳ ಹಾವಳಿಯನ್ನು ತಡೆಯಲು ಗ್ರಾಮ ಮಟ್ಟದಲ್ಲಿ ಕ್ರಿಯಾಪಡೆ ರಚಿಸಬೇಕು ಎಂಬ ಒತ್ತಾಯವೂ ಜೋರಾಗಿದೆ.

ಒಟ್ಟಾರೆ, ಮಂಗಗಳಿಂದ ರೈತರಿಗೆ ತುಂಬಲಾರದ ನಷ್ಟವಂತೂ ಆಗುತ್ತಿದೆ. ಪರಿಸರವಾದಿಗಳ ಸಲಹೆಯನ್ನು ಅರಣ್ಯ ಇಲಾಖೆ ಪರಿಗಣಿಸಿದರೆ, ಮಂಗಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ, ಮಂಗ ಹಾಗೂ ಮಾನವ ಇಬ್ಬರೂ ಸಂಕಷ್ಟದಿಂದ ಪಾರಾಗಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು