ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹದಿಹರೆಯವೆಂಬ ನಾಜೂಕು ಶೀಷೆ

ಸಕಾರಾತ್ಮಕ ಚಿಂತನೆ, ಪ್ರಶಂಸೆ, ಪ್ರೀತಿ, ಪ್ರೋತ್ಸಾಹ, ಅನುನಯದಿಂದ ಹರೆಯದವರ ವರ್ತನೆಯಲ್ಲಿ ಪವಾಡಸದೃಶ ಪರಿವರ್ತನೆ ತರಲು ಸಾಧ್ಯ
Last Updated 8 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಕ್ಕಳ ಈ ಪರಿಯ ನಡೆ ನನಗೆ ತೀರಾ ಅನಿರೀಕ್ಷಿತ. ‘ಥ್ಯಾಂಕ್ಯೂ ಸರ್... ಥ್ಯಾಂಕ್ಯೂ ಸರ್’ ಎನ್ನುತ್ತಾ ನನ್ನ ಕಾಲಿಗೆರಗುತ್ತಿದ್ದ ಎಳೆಯರನ್ನು ತೀರಾ ಮುಜುಗರದಿಂದಲೆ ತಡೆಯಲು ಪ್ರಯತ್ನಿಸಿದೆ. ಅವರ ಮೊಗದಲ್ಲಿ ಅಭಿಮಾನದ ಭಾವ. ಕೆಲವರ ಕಂಗಳು ತುಂಬಿದ್ದವು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಕರ ಮುಗಿದೊ ಇಲ್ಲಾ ಕೈಕುಲುಕಿಯೊ ಸಂತಸ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಹೀಗೆ ಒಬ್ಬರ ನಂತರ ಒಬ್ಬರು ಜಿದ್ದಿಗೆ ಬಿದ್ದವರಂತೆ ಪಾದ ಮುಟ್ಟಿದ್ದು ಮಾತ್ರ ಪ್ರಥಮ ಅನುಭವ. ತರಗತಿಯ ನಂತರ ವಿದ್ಯಾರ್ಥಿಗಳು, ಶಿಕ್ಷಕರಿಂದ ಬೀಳ್ಕೊಂಡು ಮೈದಾನದಲ್ಲಿ ನಿಲ್ಲಿಸಿದ್ದ ಕಾರಿನತ್ತ ಸಾಗುವಾಗ ಈ ಘಟನೆ ನಡೆದಿತ್ತು.

ಆ ಗ್ರಾಮೀಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಫೋನಾಯಿಸಿದ್ದರು. ಹಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದ ಶಾಲೆಯದು. ಕಳೆದ ವರ್ಷ ಕೋವಿಡ್ ಗೊಂದಲದ ನಡುವೆಯೂ ಶೇಕಡ 100ರ ಸಾಧನೆ ಆಗಿತ್ತು. ಆದರೆ ಈ ವರ್ಷ ಮಾತ್ರ ಪರಿಸ್ಥಿತಿ ತೀರಾ ನಿರಾಶಾದಾಯಕ ಎಂಬುದು ಅವರ ಆತಂಕ. ಆನ್‍ಲೈನ್ ಕ್ಲಾಸ್‍ಗಾಗಿ ದಿನವಿಡೀ ಮೊಬೈಲ್ ಹಿಡಿದ ಕೆಲವು ಮಕ್ಕಳು ವ್ಯಸನಕ್ಕೆ ಬಿದ್ದಿದ್ದಾರೆ. ಶಾಲೆಯಿಂದ ದೀರ್ಘವಾಗಿ ದೂರವಿದ್ದುದರಿಂದ ಕೆಲವರಿಗೆ ಕುಡಿತದಂತಹ ಚಾಳಿಗಳೂ ಅಂಟಿಕೊಂಡಿವೆ. ಈಗ ತರಗತಿಯ ಪಾಠಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಪೋಷಕರ ಬುದ್ಧಿವಾದ ಧಿಕ್ಕರಿಸುತ್ತಿದ್ದಾರೆ. ಸರಿಯಾಗಿ ಶಾಲೆಗೂ ಬರುತ್ತಿಲ್ಲ. ಟೆಸ್ಟ್‌ಗಳಲ್ಲಿನ ಅಂಕಗಳನ್ನು ನೋಡಿದರೆ ದಿಗಿಲಾಗುತ್ತಿದೆ. ಒಮ್ಮೆ ಬಂದು ಆಪ್ತ ಸಮಾಲೋಚನೆ ಮಾಡಬಹುದಾ ಎಂಬ ಕೋರಿಕೆ ಮೇರೆಗೆ ನಾನು ಆ ಶಾಲೆಗೆ ಹೋಗಿದ್ದು.

ಇವೆಲ್ಲಾ ಕೋವಿಡ್ ಸಾಂಕ್ರಾಮಿಕ ತಂದಿತ್ತ ಗಂಭೀರ ಅಡ್ಡ ಪರಿಣಾಮಗಳು. ಸಂತ್ರಸ್ತ ಸ್ಥಾನದಲ್ಲಿರುವುದು ಇದೊಂದೇ ಶಾಲೆಯಲ್ಲ. ಇನ್ನೂ ಕೆಲವೆಡೆ ಇಂತಹ ಕಥೆ-ವ್ಯಥೆ ಇದ್ದಿರಬಹುದು! ವಿದ್ಯಾಲಯಗಳಿಂದ ಸುದೀರ್ಘವಾಗಿ ದೂರವುಳಿದ ಹಲವು ವಿದ್ಯಾರ್ಥಿಗಳ ಮನಃಸ್ಥಿತಿ ಊಹಿಸಲಾಗದಷ್ಟು ಬದಲಾಗಿದೆ. ಮರಳಿ ಸರಿದಾರಿಗೆ ತರುವ ಕಸರತ್ತುಗಳು ನಿರೀಕ್ಷಿತ ಫಲ ಕೊಡದೆ ಶಿಕ್ಷಕರು, ಪೋಷಕರು ಹೈರಾಣಾಗಿದ್ದಾರೆ.

‘ಗ್ಲಾಸ್: ಹ್ಯಾಂಡಲ್ ವಿತ್‌ ಕೇರ್’ ಎಂಬುದು ಸಾಮಾನ್ಯವಾಗಿ ಗಾಜಿನ ಉಪಕರಣಗಳ ಬಾಕ್ಸ್‌ಗಳ ಮೇಲೆ ಮುದ್ರಿತವಾಗುವ ಎಚ್ಚರಿಕೆ. ಹದಿಹರೆಯದ ಮಕ್ಕಳೂ ಗಾಜಿನ ತರಹ ತುಂಬಾ ಸೂಕ್ಷ್ಮ. ಅವರೊಟ್ಟಿಗೆ ತುಸು ಒರಟಾಗಿ, ಬಿರುಸಾಗಿ ವರ್ತಿಸಿದರೆ ಮನಸ್ಸೂ ಗ್ಲಾಸ್‍ನಂತೆ ಒಡೆದು ಅವರದ್ದಷ್ಟೇ ಅಲ್ಲ ಹೆತ್ತವರ ಕನಸು ನುಚ್ಚುನೂರಾಗಿ ಭವಿಷ್ಯ ಅಂಧಕಾರಮಯ ಆಗಬಹುದು. ಶೀಷೆಯ ಚೂರುಗಳಿಂದಾದ ಮಾನಸಿಕ ಗಾಯ ಮಾಯದೆ ವ್ರಣವಾಗಬಹುದು. ಹಾಗಾಗಿ ಹರೆಯದ ಮಕ್ಕಳನ್ನು ನಿಭಾಯಿಸುವಾಗ ಎಚ್ಚರ ಅತಿ ಮುಖ್ಯ.

ಒಂದೆಡೆ ಹಾರ್ಮೋನ್‌ಗಳ ಅಧಿಕ ಸ್ರವಿಸುವಿಕೆ ಹುಟ್ಟುಹಾಕುವ ಮನೋದೈಹಿಕ ಬದಲಾವಣೆಗಳು, ತತ್ಪರಿಣಾಮದ ಆಕರ್ಷಣೆಗಳು, ಮತ್ತೊಂದೆಡೆ ವಿವೇಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೆದುಳಿನ ನಿರ್ದಿಷ್ಟ ಭಾಗ ಪೂರ್ಣವಾಗಿ ಬೆಳವಣಿಗೆಆಗದಿರುವುದು. ತುಸು ಎಡವಿದರೂ ಪರಿಸ್ಥಿತಿ ಬಿಗಡಾಯಿಸಬಹುದು. ಈ ವಯೋಮಾನದವರಿಗೆ ಹೊಡೆದು, ಬೈದು ಬುದ್ಧಿ ಹೇಳುವುದರಿಂದ ಅಪಾಯಗಳೇ ಜಾಸ್ತಿ. ಹೋಲಿಕೆ, ಹೀಯಾಳಿಕೆ, ಅವಮಾನ, ಅತಿ ಉಪದೇಶಗಳನ್ನು ಸೈರಿಸರು. ಹಾಗೆ ಮಾಡಿದರೆ ಮತ್ತಷ್ಟು ಮೊಂಡರಾಗಿ ತೀವ್ರ ಪ್ರತಿರೋಧ ತೋರಬಹುದು. ಮನೆಬಿಟ್ಟು ಓಡಿಹೋಗುವುದು, ಜೀವಕ್ಕೆ ಅಪಾಯ ತಂದುಕೊಳ್ಳುವುದು ಸಹಾ ಇದೇ ಕಾರಣಕ್ಕೆ.

ತಲೆ ತುಂಬಾ ಗೊಂದಲ ತುಂಬಿಕೊಂಡು ದಿಕ್ಕೆಟ್ಟವರಂತೆ ಕಾಣುತ್ತಿದ್ದ ಮಕ್ಕಳನ್ನು ವಾತ್ಸಲ್ಯದಿಂದ ಮಾತನಾಡಿಸಿ ಆತ್ಮವಿಶ್ವಾಸ ತುಂಬಲು ಯಶಸ್ವಿಯಾಗಿದ್ದೆ. ನನ್ನ ಕೋರಿಕೆಯಂತೆ ಐಎಎಸ್, ಡಾಕ್ಟರ್, ಎಂಜಿನಿಯರ್, ಮಿಲಿಟರಿ, ಪೊಲೀಸ್ ಆಫೀಸರ್, ಶಿಕ್ಷಕಿ, ಲಾಯರ್ ಎಂದೆಲ್ಲಾ ಪ್ರತಿಯೊಬ್ಬರೂ ತಮ್ಮ ಕನಸನ್ನು ಚೀಟಿಯಲ್ಲಿ ಬರೆದುಕೊಟ್ಟಾಗ ಕೆಲಸ ಸುಲಭವಾಗಿತ್ತು. ಗುರಿ ಮುಟ್ಟಲು ಮೊಬೈಲ್, ಆಕರ್ಷಣೆಗಳು, ಲವ್, ದುರ್ವ್ಯಸನಗಳಂತಹ ಅಂಶಗಳು ಹೇಗೆ ಅಡ್ಡಿ ಬರುತ್ತವೆ ಎಂದು ವಿವರಿಸುತ್ತಿದ್ದಂತೆ ಅವುಗಳಿಂದ ದೂರವಿರಬೇಕಾದ ಅಗತ್ಯ ಮನವರಿಕೆಯಾಗಿತ್ತು. ವಿಶ್ವಾಸವೃದ್ಧಿಯ ಜೊತೆಗೆ ತಮ್ಮ ಗೊಂದಲಗಳಿಗೆ ಪರಿಹಾರ ದೊರೆತ ಖುಷಿಯೇ ಸಾಮೂಹಿಕವಾಗಿ ಹೀಗೆ ಪಾದಕ್ಕೆರಗಲು ಅವರಿಗೆ ಪ್ರೇರಣೆಯಾಗಿದ್ದು.

ತೀರ್ಥಹಳ್ಳಿ ಸಮೀಪದ ಬಿಳಲುಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಕಲಿಕೆ ಉತ್ತೇಜಿಸಲು ತಮ್ಮದೇ ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಮಕ್ಕಳನ್ನು ಸಕಾರಾತ್ಮಕವಾಗಿ ಹುರಿದುಂಬಿಸುವ ಜೊತೆಗೆ ಹಳ್ಳಿ ಶಾಲೆಯ ಈ ಎಚ್.ಎಂ., ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣವಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರು ಗಳಿಸಿದ ಅಂಕಗಳಷ್ಟು ಪ್ರೋತ್ಸಾಹಧನ ನೀಡುತ್ತಾರೆ. ಅದೂ ತಮ್ಮ ಸ್ವಂತ ಪಾಕೆಟ್‍ನಿಂದ. ಪರಿಣಾಮ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಇರುವ ಶಾಲೆ ಕಳೆದ ಆರು ವರ್ಷಗಳಿಂದ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಿದೆ. ಇತರ ಶಾಲೆಗಳಂತೆ ಮಕ್ಕಳ ಕೊರತೆಯ ಸಮಸ್ಯೆಯೂ ಕಾಡುತ್ತಿಲ್ಲ.‌

ಹೌದು, ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ, ಪ್ರಶಂಸೆ, ಪ್ರೀತಿ, ಪ್ರೋತ್ಸಾಹ, ಮೃದುಮಾತು, ಅನುನಯದಿಂದ ಹರೆಯದವರ ವರ್ತನೆಯಲ್ಲಿ ಪವಾಡಸದೃಶ ಪರಿವರ್ತನೆ ತರಲು ಖಂಡಿತ ಸಾಧ್ಯ. ಇದನ್ನು ಸಾಧಿಸುವ ಕೌಶಲಗಳು ಕರಗತವಾಗಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT