ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 26 ಏಪ್ರಿಲ್ 2024, 19:19 IST
Last Updated 26 ಏಪ್ರಿಲ್ 2024, 19:19 IST
ಅಕ್ಷರ ಗಾತ್ರ

ನಾಡಗೀತೆ: ಕಡ್ಡಾಯಕ್ಕೆ ಆಗ್ರಹಿಸುವ ಮುನ್ನ...

‘ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಎಂಬ ಭೇದವಿಲ್ಲದೆ ಎಲ್ಲ ಶಾಲೆಗಳಲ್ಲಿ ಹಾಗೂ ಕನ್ನಡ ಕಾರ್ಯಕ್ರಮಗಳಲ್ಲಿ ನಾಡಗೀತೆ ಗಾಯನದ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆಗ್ರಹಿಸಿರುವುದೇನೋ (ಪ್ರ.ವಾ., ಏ. 26) ಸರಿ. ಆದರೆ ಇಲ್ಲೊಂದು ತೊಡಕಿದೆ. ನಾಡಗೀತೆಯನ್ನು ಕಡ್ಡಾಯಗೊಳಿಸಲು ಸರ್ಕಾರವನ್ನು ಒತ್ತಾಯಿಸಿರುವ ಕಸಾಪ ಅಧ್ಯಕ್ಷರು, ನಾಡಿನ ಎಷ್ಟು ಶಾಲೆಗಳಲ್ಲಿ ಸಂಗೀತದ ಶಿಕ್ಷಕರಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಬೇಕು. ಇಲ್ಲದ ಕಡೆಗಳಲ್ಲಿ ಶಿಕ್ಷಕರನ್ನು ನೇಮಿಸುವಂತೆಯೂ ಆಗ್ರಹಿಸಬೇಕು. ಕನ್ನಡ ಕಾರ್ಯಕ್ರಮವನ್ನು ರೂಪಿಸುವ ಎಲ್ಲಾ ಸಂಘಟಕರು ಮತ್ತು ಸಂಘ ಸಂಸ್ಥೆಗಳ ಸದಸ್ಯರಿಗೆ ನಾಡಗೀತೆ ಹಾಡಲು ಸರಿಯಾಗಿ ಗೊತ್ತಿರಬೇಕೆಂದೂ ಆಗ್ರಹಿಸಬೇಕು. ನಿಯಮ ಜಾರಿಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲು ಕಾವಲು ಪಡೆ ನೇಮಿಸುವ ಅಗತ್ಯವೂ ಇದೆ.

ಇಷ್ಟಾಗದೆ ಏಕಾಏಕಿ ಜಾರಿಗೆ ಆಗ್ರಹಿಸಿದರೆ, ಭೂಮಿಯನ್ನೇ ಹಸನು ಮಾಡದ ರೈತ, ಬೀಜ ಬಿತ್ತಿದಂತೆ ಆಗುತ್ತದೆ. ಅಲ್ಲದೆ, ನಾಡಗೀತೆ ಗಾಯನ ತಂಡಕ್ಕೆ ಮೊದಲು ಆಹ್ವಾನ ಕೊಟ್ಟು ನಂತರ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಶಾಲೆಗಳಿಗೂ ಕಡ್ಡಾಯವಾಗಿ ನಾಡಗೀತೆ ಗಾಯನ ತಂಡವನ್ನು ನೇಮಿಸಿಕೊಳ್ಳುವ ಅಗತ್ಯ ಬರುತ್ತದೆ. ಸರ್ಕಾರ ಈ ಎಲ್ಲವನ್ನೂ ಗಮನಿಸಿ, ಸಂಗೀತ ಶಿಕ್ಷಕರನ್ನು ನೇಮಿಸುವ, ಇಲ್ಲವೇ ವೃತ್ತಿಪರ ನಾಡಗೀತೆ ಗಾಯನ ತಂಡಗಳು ಬೆಳೆಯಲು ಅವಕಾಶ ಕೊಡುವ, ಇಲ್ಲವೇ ಆನು ಒಲಿದಂತೆ ಹಾಡಲು ಬಿಟ್ಟು ಈ ಹಿಂದಿನ ಸರ್ಕಾರ ನೀಡಿದ್ದ ಆದೇಶವನ್ನು ರದ್ದುಪಡಿಸುವ ಸೂಕ್ತ ತೀರ್ಮಾನಕ್ಕೆ ಬರಲಿ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

***

ಅಂತ್ಯವಾಗದ ಬಹಿರಂಗ ಪ್ರಚಾರ!

ಲೋಕಸಭಾ ಚುನಾವಣೆಯಲ್ಲಿ ಶುಕ್ರವಾರ ಪ್ರಮುಖ ಪಕ್ಷದ ಅಭ್ಯರ್ಥಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಸುಪ್ರಸಿದ್ಧರು ಮತದಾನ ಮಾಡಿದ್ದನ್ನು ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿ ಇತರರಿಗೆ ಸ್ಫೂರ್ತಿ ತಂದಿದ್ದು
ಮೆಚ್ಚತಕ್ಕದ್ದು. ಆದರೆ ಅದೇ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾನ ಮಾಡಿದ್ದನ್ನು ಪ್ರಸಾರ ಮಾಡುವಾಗ, ವರದಿಗಾರರು ಸದರಿ ಅಭ್ಯರ್ಥಿಗಳ ಎದುರು ಮೈಕ್ ಹಿಡಿದು ಮಾತನಾಡಿಸಿದರು. ಆ ಅಭ್ಯರ್ಥಿಗಳೂ ಅಷ್ಟೇ ಸಾಕೆಂಬಂತೆ ತಮ್ಮ ಮತ್ತು ತಮ್ಮ ಪಕ್ಷದ ಕುರಿತು ಭರಪೂರ ಮಾತನಾಡಿದರು. ಇದು ಪರೋಕ್ಷವಾಗಿ ಬಹಿರಂಗ ಪ್ರಚಾರ ಆಗುವುದಿಲ್ಲವೇ? ಈ ವಿಚಾರದ ಕುರಿತು ಚುನಾವಣಾ ಆಯೋಗ ಸ್ಪಷ್ಟ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ, ಬಹಿರಂಗ ಪ್ರಚಾರ ಅಂತ್ಯ ಎಂಬ ಮಾತು ನಗೆಪಾಟಲಾದೀತು.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

***

ಅರಿವಿನ ಪ್ರಚಾರಕ್ಕಿಂತ ಪ್ರಚಾರದ್ದೇ ಅಬ್ಬರ

ಮತದಾನ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಡೆಯುವ ಕುರಿತು ಡಾ. ಮುರಳೀಧರ ಕಿರಣಕೆರೆ ತಮ್ಮ ಲೇಖನದಲ್ಲಿ (ಸಂಗತ, ಏ. 26) ಕಳಕಳಿ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಿತಿಗೆ ಕಾರಣ ಇಷ್ಟೆ‌. ಮತದಾನ ಪ್ರಕ್ರಿಯೆಯ ಕುರಿತು ಪ್ರಜೆಗಳಿಗೆ ಅರಿವು ಮೂಡಿಸುವುದಕ್ಕಿಂತ ಜನಪ್ರತಿನಿಧಿಗಳ ಪ್ರಚಾರದ ಅಬ್ಬರವೇ ಹೆಚ್ಚಾಗಿರುತ್ತದೆ. ಮತದಾನದ ಮೌಲ್ಯ, ಮತಗಟ್ಟೆಯಲ್ಲಿ ಮತವನ್ನು ಹೇಗೆ ಚಲಾಯಿಸಬೇಕು ಮತ್ತು ಅದರ ಅಣಕು ಪ್ರದರ್ಶನದಂತಹ ಅರಿವಿನ ಪ್ರಚಾರದ ಕಾರ್ಯ ಅಷ್ಟಕ್ಕಷ್ಟೆ.

ಇನ್ನು ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಂತದ ಮಹಾವಿದ್ಯಾಲಯಗಳಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಂವಿಧಾನ, ರಾಜ್ಯಶಾಸ್ತ್ರದಂತಹ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿಸಿರಬಹುದೇನೊ. ಆದರೆ ವಿಜ್ಞಾನ ಮತ್ತು ವೃತ್ತಿಪರ ಕೋರ್ಸ್‌ಗಳ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಇನ್ನು ಕೆಲವು ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗಂತೂ ತಮ್ಮ ತಮ್ಮ ಊರಿಗೆ ತೆರಳಿ ಮತ ಹಾಕುವುದಕ್ಕೆ ಉದಾಸೀನ ಮತ್ತು ಅಷ್ಟೇ ಬೇಜವಾಬ್ದಾರಿತನ ಕೂಡ. ಇವೆಲ್ಲ ಕಾರಣಗಳಿಂದಲೂ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ, ಮತದಾನದ ಜಾಗೃತಿಯಂತಹ ವಿಷಯಗಳ ಬಗ್ಗೆ ವ್ಯಾಪಕವಾದ ಅರಿವು ಮೂಡಿಸಿದರೆ, ಮುಂಬರುವ ಚುನಾಣೆಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

–ಸೋಮನಾಥ ಡಿ., ಹಾವೇರಿ

***

ನೀರಸ ಮತದಾನ: ಬೆಂಗಳೂರಿಗರೇಕೆ ಹೀಗೆ?

ಹಿಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳ ಮತದಾನದ ಶೇಕಡಾವಾರು ಪ್ರಮಾಣ ತೀರಾ ಕಡಿಮೆ ಇತ್ತು. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ನಗರದ ಮತದಾರರು ಅದೇ ಹಳೆಯ ದಾರಿ ತುಳಿದದ್ದು ತುಂಬಾ ನಿರಾಶಾದಾಯಕ. ಪ್ರಜ್ಞಾವಂತ, ಸುಶಿಕ್ಷಿತ ಮತ್ತು ಪ್ರಬುದ್ಧ ಜನರಿರುವ ಬೆಂಗಳೂರಿನಂತಹ ಮಹಾನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿ ಆಗಬೇಕೆಂಬ ನಿರೀಕ್ಷೆ ಸಹಜವಾದುದು. ಆದರೆ ಹಾಗಾಗದಿರುವುದು ನಿರಾಸೆಯನ್ನು ಉಂಟುಮಾಡಿದೆ. ಚುನಾವಣಾ ಆಯೋಗ ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಹಣ ಖರ್ಚು ಮಾಡಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುವುದು ವ್ಯರ್ಥ ಎನ್ನಿಸುತ್ತದೆ.

ನಗರದ ನಾಗರಿಕರು ಮತ್ತು ಯುವಕರಲ್ಲಿ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರವೋ ಮತದಾನದ ದಿನದಂದು ಸಿಗುವ ರಜೆಯನ್ನು ಪ್ರವಾಸ, ಮೋಜು-ಮಸ್ತಿಗೆ ವಿನಿಯೋಗಿಸಿಕೊಳ್ಳುವುದು ಇದಕ್ಕೆ ಕಾರಣವೋ ಎಂಬ ಪ್ರಶ್ನೆಗಳು ಮೂಡುತ್ತವೆ. ಒಟ್ಟಿನಲ್ಲಿ ಸುಸ್ಥಿರ ಪ್ರಜಾಪ್ರಭುತ್ವ ಕಟ್ಟುವಲ್ಲಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಈ ಪ್ರಜಾತಂತ್ರದ ಹಬ್ಬದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಸಮರ್ಥ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾರರು ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದನ್ನು ಎಲ್ಲರೂ
ತಿಳಿದುಕೊಳ್ಳಬೇಕಾಗಿದೆ.

–ಮಲ್ಲಿಕಾರ್ಜುನ ತೇಲಿ ಗೋಠೆ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT