ಆಸ್ಪತ್ರೆ ಅವ್ಯವಸ್ಥೆ ನಿಯಂತ್ರಣಕ್ಕೆ ಬೇಕು ನಿಯಮ

ಬಹುತೇಕ ಆಸ್ಪತ್ರೆಗಳ ರೀತಿನೀತಿ ಅಪಾರದರ್ಶಕವಾಗಿ ಇರುವುದನ್ನು, ವೈದ್ಯಕೀಯ ಕ್ಷೇತ್ರವು ವ್ಯಾಪಾರೀಕರಣಕ್ಕೆ ಒಳಗಾಗಿರುವುದನ್ನು ಪು.ಸೂ.ಲಕ್ಷ್ಮೀನಾರಾಯಣ ರಾವ್ ತೆರೆದಿಟ್ಟಿದ್ದಾರೆ (ಸಂಗತ, ಮೇ 13). ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿನ ಇಂತಹ ನ್ಯೂನತೆಗಳಿಗೆ ಮತ್ತೊಂದು ಪ್ರಮುಖ ಕಾರಣವೂ ಇದೆ. ಜಿಲ್ಲಾ ಕೇಂದ್ರದ ಕಾಲೇಜು ಆಸ್ಪತ್ರೆಗಳು ಹಾಗೂ ಬೆಂಗಳೂರು ನಗರದ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹಣವಂತರು, ವಿಮೆ ಸೌಲಭ್ಯ ಇರುವವರು ಸಣ್ಣ ಪುಟ್ಟ ಕಾಯಿಲೆಗಳಿಗೂ ಚಿಕಿತ್ಸೆಗಾಗಿ ಬರುತ್ತಾರೆ. ಹೀಗಾಗಿ, ಈ ಆಸ್ಪತ್ರೆಗಳು ಸದಾ ಜನಜಂಗುಳಿಯಿಂದ ಕೂಡಿರುತ್ತವೆ. ವಿಮೆ ಸೌಲಭ್ಯದ ಉಪಯೋಗ ಪಡೆಯುವ ಸಲುವಾಗಿ, ಅವಶ್ಯಕತೆ ಇಲ್ಲದಿದ್ದರೂ ಒಂದೆರಡು ದಿನ ಒಳರೋಗಿಗಳಾಗಿ ಇರಿಸಿಕೊಳ್ಳುವುದು ಸರ್ವೇಸಾಮಾನ್ಯ. ಈ ಕಾರಣದಿಂದ, ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಒಮ್ಮೊಮ್ಮೆ ಹಾಸಿಗೆ ಸಿಗುವುದಿಲ್ಲ. ತಜ್ಞ ವ್ಯೆದ್ಯರಿಗೆ ಕೆಲಸದ ಒತ್ತಡವೂ ಹೆಚ್ಚಾಗಿ ಅವಶ್ಯಕತೆ ಇರುವ ರೋಗಿಗಳಿಗೆ ಸಮಯ ಮೀಸಲಿಡಲು ಕಷ್ಟವಾಗುತ್ತದೆ.

ಈ ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳನ್ನು ಬರೀ ರೆಫರಲ್ ಆಸ್ಪತ್ರೆಗಳಾಗಿ ಪರಿಗಣಿಸಿದರೆ ಈ ಸಮಸ್ಯೆಗೆ
ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು. ತುರ್ತು ಸಂದರ್ಭ ಹೊರತುಪಡಿಸಿ, ಉಳಿದಂತೆ ಕೆಳ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಾಗದೆ ಅವರಿಂದ ಶಿಫಾರಸು ಪತ್ರ ತರುವ ರೋಗಿಗಳಿಗೆ ಮಾತ್ರ ಇಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ನಿಯಮ ರೂಪಿಸಬೇಕು. ಆಗ ಈ ಆಸ್ಪತ್ರೆಗಳ ಜನಜಂಗುಳಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ತಜ್ಞ ವೈದ್ಯರ ಸಮಯವು ಅವಶ್ಯಕತೆ ಇರುವ, ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಭ್ಯವಾಗುತ್ತದೆ.

-ಟಿ.ಜಯರಾಂ, ಕೋಲಾರ

ವ್ಹೀಲಿ ದುಸ್ಸಾಹಸ: ಆಗಲಿ ಅಪಾಯದ ಮನವರಿಕೆ

ಅಪಾಯಕಾರಿ ವ್ಹೀಲಿಯಂತಹ ದುಸ್ಸಾಹಸ ಚಟುವಟಿಕೆಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿರುವುದು (ಪ್ರ.ವಾ., ಮೇ 13) ನಿಜಕ್ಕೂ ಸಮಯೋಚಿತ ಮತ್ತು ಕಠಿಣ ಕ್ರಮಕ್ಕೆ ಮುನ್ನುಡಿ ಬರೆದಂತಿದೆ. ಈಗ ವ್ಹೀಲಿಯ ಪಿಡುಗು ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣ ಹಾಗೂ ಗ್ರಾಮಗಳಿಗೂ ಹಬ್ಬಿದೆ. ಅಷ್ಟು ಮಾತ್ರವಲ್ಲದೆ ಸೈಕಲ್ ಓಡಿಸುವ ಮಕ್ಕಳವರೆಗೂ ಹಬ್ಬಿದೆ ಎಂದರೆ ಇದರ ವ್ಯಾಪ್ತಿ ಹೇಗಿದೆ ಎಂಬುದು ವೇದ್ಯವಾಗುತ್ತದೆ. ನಗರದಲ್ಲಂತೂ ವಾರಾಂತ್ಯದ ರಾತ್ರಿಗಳಲ್ಲಿ ಒಂದೊಂದು ಬಾರಿ ಒಂದೊಂದು ನಿಗದಿತ ಸ್ಥಳದಲ್ಲಿ ವ್ಹೀಲಿ ಮಾಡುವವರನ್ನು ನೋಡುತ್ತಿರುತ್ತೇವೆ. ಇವರಲ್ಲಿ ಹೆಚ್ಚಿನವರು ಪೊಲೀಸರ ಕಣ್ಣಿಗೆ ಬೀಳದಿರುವುದು ಆಶ್ಚರ್ಯಕರ. ನೂರಾರು ಜನ ವ್ಹೀಲಿಯಲ್ಲಿ ತೊಡಗಿದ್ದರೆ ಪೊಲೀಸರು ಹಿಡಿಯುವುದು ಕೆಲವು ಮಂದಿಯನ್ನಷ್ಟೇ. ಅದೂ ಅವರಿಂದ ಸಾರ್ವಜನಿಕರಿಗೆ ಅಪಾಯ ಆದಾಗ ಅಥವಾ ವ್ಹೀಲಿ ಮಾಡುವವರಿಗೆ ಅಪಘಾತ ಆದಾಗ ಮಾತ್ರ.

ವ್ಹೀಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅದನ್ನು ಎಲ್ಲೆಡೆ ಪ್ರಚಾರ ಮಾಡಬೇಕಿದೆ. ಅಷ್ಟೇ ಅಲ್ಲದೆ, ಮಕ್ಕಳು ತಮ್ಮ ಸೈಕಲ್ನಲ್ಲಿ ವ್ಹೀಲಿ ಮಾಡುತ್ತಿದ್ದರೆ ಅವರಿಗೆ ತಿಳಿಹೇಳುವ ಕೆಲಸವನ್ನು ಪೋಷಕರು ಹಾಗೂ ಅದನ್ನು ಗಮನಿಸಿದವರು ಮಾಡಬೇಕಾದ ಅಗತ್ಯ ಇದೆ.

-ಕಡೂರು ಫಣಿಶಂಕರ್, ಬೆಂಗಳೂರು

‘ಅವರ’ ಮಕ್ಕಳೂ ಸರ್ಕಾರಿ ಶಾಲೆಯಲ್ಲಿ ಓದಿದ್ದರೆ...

ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಕುರಿತ ಮಣ್ಣೆ ರಾಜು ಅವರ ‘ಮಕ್ಕಳಿರಲವ್ವ...’ ಎಂಬ ವಿಡಂಬನೆಯನ್ನು (ಚುರುಮುರಿ, ಮೇ 7) ಓದಿದಾಗ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಶೋಚನೀಯ ಸ್ಥಿತಿ ಕಣ್ಮುಂದೆ ಬಂದಿತು. ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸ್ತರದ ಸರ್ಕಾರಿ ಸಿಬ್ಬಂದಿ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸಿದರೆ ಖಾಸಗಿ ಇಂಗ್ಲಿಷ್ ಮಾಧ್ಯಮ ಕಾನ್ವೆಂಟ್ಗಳಿಗೆ ಸಡ್ಡು ಹೊಡೆಯಬಹುದಿತ್ತು. ‘ದೊಡ್ಡವರ’ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದುವುದರಿಂದ ಮೂಲಸೌಕರ್ಯಗಳ ಕೊರತೆ ಇರುತ್ತಿರಲಿಲ್ಲ.

ಸರ್ಕಾರಿ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದರೆ, ಅವರೇ ಕಲಿಸುತ್ತಿರುವ ಶಿಕ್ಷಣದ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂಬುದನ್ನು ಊಹಿಸಬಹುದು. ಆರ್ಥಿಕವಾಗಿ ಹೆಚ್ಚು ಚೈತನ್ಯ ಹೊಂದಿಲ್ಲದ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವವರು. ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವಿಜ್ಞಾನ– ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದವಿ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿ ಇಲ್ಲದಿರುವುದರಿಂದ, ಜನ ಇಂಗ್ಲಿಷ್ ಮಾಧ್ಯಮದ ಕಡೆ ಆಕರ್ಷಿತರಾಗುತ್ತಿರುವ ವಾಸ್ತವ ಸ್ಥಿತಿಯನ್ನು ಬರಹ ಬಿಂಬಿಸಿದೆ.

-ಟಿ.ಶಿವಮೂರ್ತಿ ಉಪ್ಪಾರ, ಕೆಸ್ತೂರು, ಯಳಂದೂರು

ಭಾಷೆಯ ಬಗ್ಗೆ ಅಸಡ್ಡೆ ಏಕೆ?

ಬೆಂಗಳೂರಿನ ಯಲಹಂಕದ ಮದರ್ ಡೈರಿ ವೃತ್ತದ ಸಮೀಪ ಇತ್ತೀಚೆಗೆ ಸಂಜೆ ಹೋಗುತ್ತಿದ್ದಾಗ, ಯಲಹಂಕ ಉಪನಗರಕ್ಕೆ ಹೋಗುತ್ತಿದ್ದ ಬಸ್ ಕಾಣಿಸಿತು. ಅದರಲ್ಲಿನ ಎಲೆಕ್ಟ್ರಾನಿಕ್ ಡಿಸ್ಪ್ಲೇ ಬೋರ್ಡ್ ನೋಡಿದಾಗ
ಆಶ್ಚರ್ಯವಾಯಿತು. ಆ ಬೋರ್ಡ್ನಲ್ಲಿ ‘ಜಾಲಹಳ್ಳಿ ಇಂದ ಯಲಹಂಕ ಹಳೆ ಕುಸಿತ’ ಎಂದಿತ್ತು. ಇದಾವುದು ಯಲಹಂಕ ಹಳೆ ಕುಸಿತ ಎಂಬುದು ಹೊಳೆಯಲಿಲ್ಲ. ನಂತರ ಇಂಗ್ಲಿಷ್ನಲ್ಲಿ ಬಂದ ಹೆಸರು ಯಲಹಂಕ ಓಲ್ಡ್ ಡೌನ್ ಎಂದಿತ್ತು. ನನಗಾಗ ತಿಳಿದಿದ್ದು, ಯಲಹಂಕ ಓಲ್ಡ್ ಟೌನ್ ಎಂಬುದನ್ನು ಮೊದಲು ತಪ್ಪಾಗಿ ಓಲ್ಡ್ ಡೌನ್ ಎಂದು ಬರೆದು, ನಂತರ ಆ ತಪ್ಪನ್ನೇ ಕನ್ನಡಕ್ಕೆ ಬಹುಶಃ ಗೂಗಲ್ನಲ್ಲಿ ಅನುವಾದ ಮಾಡಿ ಯಲಹಂಕ ‘ಹಳೆ ಕುಸಿತ’ ಎಂದು ಬರೆದಿದ್ದಾರೆ ಎಂದು. ಆ ಗಾಢ ತಪ್ಪನ್ನೇ ಹೊತ್ತು ಆ ಬಸ್ ನಗರದಲ್ಲೆಲ್ಲಾ ಸಂಚರಿಸುತ್ತಿದೆ. ಅದನ್ನು ಬರೆದವರಿಗಾಗಲೀ ಬರೆಸಿದವರಿಗಾಗಲೀ ಚಾಲಕ, ನಿರ್ವಾಹಕ, ಕೊನೆಪಕ್ಷ ಮೇಲಧಿಕಾರಿಗಳಿಗಾಗಲೀ ಯಾರಿಗೂ ಈ ತಪ್ಪಿನ ಅರಿವಾಗಲಿಲ್ಲವೇ? ಅಥವಾ ಭಾಷೆಯ ಬಗ್ಗೆ ಅಷ್ಟೊಂದು ಅಸಡ್ಡೆಯೇ?

ಒಂದೆಡೆ ಜನ ಕನ್ನಡದ ಬಳಕೆಯಿಂದ ದೂರ ಸರಿಯುತ್ತಿರುವ ಈ ದಿನಗಳಲ್ಲಿ, ಕರ್ನಾಟಕದ ರಾಜಧಾನಿಯಲ್ಲಿ, ರಾಜ್ಯ ಸರ್ಕಾರದ ಸಂಸ್ಥೆಯೊಂದರಲ್ಲಿಯೇ ಈ ರೀತಿ ಕನ್ನಡದ ಕಗ್ಗೊಲೆಯಾದರೆ ಕನ್ನಡದ ಗತಿ ಏನು?

-ಮಂಜುನಾಥ ಎಸ್.ಎಸ್., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.