ಭಾನುವಾರ, ಮೇ 16, 2021
22 °C

ನಿಸ್ಸಾರ ಬದುಕು ಬೇಡವೆಂದ ನಿಷ್ಠುರವಾದಿ ವಿ.ಎಸ್.ನೈಪಾಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

‘ನನ್ನ ಬದುಕು ತುಂಬಾ ಚಿಕ್ಕದು. ನಿಸ್ಸಾರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅದನ್ನು ಹಾಳುಮಾಡಿಕೊಳ್ಳಲಾರೆ...'

- ಶನಿವಾರ ಲಂಡನ್‌ನಲ್ಲಿ ನಿಧನರಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿದ್ಯಾಧರ್ ಸೂರಜ್‌ಪ್ರಸಾದ್ ನೈಪಾಲ್ (ಜನನ: 17ನೇ ಆಗಸ್ಟ್ 1932) ಅವರ ಬದುಕಿನ ಮಂತ್ರ ಇದು. ನಿಸ್ಸಾರ ಎನಿಸುವ ಜನರನ್ನು ಅವರು ಸಹಿಸಿಕೊಳ್ಳುತ್ತಲೂ ಇರಲಿಲ್ಲ, ನಿಸ್ಸಾರ ಬದುಕನ್ನೂ ಇಷ್ಟಪಡಲಿಲ್ಲ.

ತಮ್ಮ ಸಾಹಿತ್ಯ ಕೃತಿಗಳ ಜೊತೆಜೊತೆಗೆ ತಮ್ಮ ನೇರ ಮತ್ತು ನಿಷ್ಠುರ ಮಾತುಗಳಿಂದಲೂ ಅವರು ಸುದ್ದಿಯಾಗುತ್ತಿದ್ದರು. ‘ಜಗತ್ತಿನ ಹಲವು ಸಂಸ್ಕೃತಿಗಳನ್ನು ಸತ್ವಹೀನಗೊಳಿಸಿದ ಇಸ್ಲಾಂ, ಹಲವು ಸಂಸ್ಕೃತಿಗಳನ್ನು ನಾಮಾವಶೇಷಗೊಳಿಸಲು ಯತ್ನಿಸಿತ್ತು’ ಎನ್ನುವುದು ನೈಪಾಲ್ ಅವರ ಮತ್ತೊಂದು ವಿವಾದಾತ್ಮಕ ಹೇಳಿಕೆ. ಇಂಥ ಹೇಳಿಕೆ ನೀಡಿದ ಕಾರಣದಿಂದ 2010ರಲ್ಲಿ ಟರ್ಕಿಯ ಸಾಹಿತ್ಯ ಉತ್ಸವವೊಂದರಿಂದ ಅವರನ್ನು ಹೊರಹಾಕಲಾಗಿತ್ತು.

ಅವರ ವ್ಯಕ್ತಿತ್ವದ ಭಾಗವೇ ಆಗಿದ್ದ ನಿಷ್ಠುರತೆಯು ಅವರ ಕೃತಿಗಳನ್ನೂ ಪ್ರಭಾವಿಸಿದೆ. ಬಹುಷಃ ಇದೇ ಕಾರಣಕ್ಕೆ ಇರಬೇಕು, ‘ಜಗತ್ತನ್ನು ಆಳಿದ ಚಕ್ರಾಧಿಪತ್ಯಗಳು ಸಾಮಾನ್ಯ ಜನರಿಗಾಗಿ ಏನು ಮಾಡಿದವು ಎಂಬುದನ್ನು ನೈತಿಕ ಪ್ರಜ್ಞೆಯಲ್ಲಿ ಹಿಡಿದಿಡುತ್ತಿದ್ದ ಅವರ ಬರವಣಿಗೆ ದೈನಂದಿನ ಬದುಕಿಗೆ ಕನ್ನಡಿ ಹಿಡಿಯುವಂತೆ ಇದೆ. ಇತಿಹಾಸದಲ್ಲಿ ಹೂತುಹೋಗಿದ್ದ ಮತ್ತು ಇತರ ಬರಹಗಾರರು ಮರೆತುಬಿಟ್ಟಿದ್ದ ಅನೇಕ ಅಂಶಗಳನ್ನು ಅವರ ಬರವಣಿಗೆ ಎತ್ತಿ ತೋರಿಸಿದೆ’ ಎಂದು ನೊಬೆಲ್ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸ್ವೀಡಿಷ್ ಅಕಾಡೆಮಿ ಹೇಳಿತ್ತು.

ಆರಂಭದ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟು ಮತ್ತು ಒಂಟಿತನದಿಂದ ಮಂಕಾಗಿದ್ದ ಅವರಿಗೆ ಪ್ರೇತಿಯ ಸಂಜೀವಿನಿ ಕೊಟ್ಟವರು ಪ್ಯಾಟ್. ಮೊದಲ ಪತ್ನಿ ಪ್ಯಾಟ್ ಅವರನ್ನು ನೈಪಾಲ್ ಭೇಟಿಯಾಗಿದ್ದು ಆಕ್ಸ್‌ಫರ್ಡ್‌ನಲ್ಲಿ. ನೈಪಾಲ್‌ ಅವರ ಸಾಹಿತ್ಯ ಪಯಣದಲ್ಲಿ ಬೆನ್ನೆಲುಬಾಗಿ ನಿಂತವರು ಪ್ಯಾಟ್.

ಆದರೆ 1996ರಲ್ಲಿ ಪ್ಯಾಟ್ ಮೃತಪಟ್ಟಾಗ ನೈಪಾಲ್ ನೀಡಿದ ಹೇಳಿಕೆ ಹಲವರಲ್ಲಿ ಅಚ್ಚರಿ ಮೂಡಿಸಿತ್ತು.

‘ಪ್ಯಾಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಕಷ್ಟನೋಡಲಾಗದೇ ಆಕೆಗೆ ಬೇಗ ಸಾವು ಬರಲಿ ಎಂದು ಆಸಿಸಿದ್ದೆ. ಆಕೆಗೆ ದೀರ್ಘಕಾಲದ ಅನಾರೋಗ್ಯವಿದ್ದ ಕಾರಣ ವೇಶ್ಯೆಯರ ಸಹವಾಸ ಮಾಡಿದ್ದೆ' ಎಂದು ನೈಪಾಲ್ ಹೇಳಿಕೊಂಡಿದ್ದರು. ಮಾತ್ರವಲ್ಲ, ಪತ್ನಿ ಸತ್ತ ವರ್ಷವೇ ಪಾಕಿಸ್ತಾನದ ಪತ್ರಕರ್ತೆ ನಾದಿರಾ ಅಲ್ವಿ ಅವರನ್ನು ಮದುವೆಯಾಗಿದ್ದರು.

ಭಾರತದ ರಾಜಕಾರಿಣಿಗಳ ಭಷ್ಟಾಚಾರ, ಹಳೆಯ ವಸಾಹತುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪಶ್ಚಿಮ ದೇಶಗಳ ಮನಸ್ಥಿತಿ ಮತ್ತು ನಿರಂಕುಶ ಆಡಳಿತಗಾರರ ಪ್ರಶ್ನಾತೀತ ವ್ಯಕ್ತಿಪೂಜೆಯ ಬಗ್ಗೆ ಅವರಿಗೆ ಅಪಾರ ಸಿಟ್ಟಿತ್ತು. ಇಂಥ ಹಲವು ಸಂಗತಿಗಳನ್ನು ಅವರ ‘ದಿ ರಿಟರ್ನ್ ಆಫ್ ಇವಾ ಪೆರೊನ್’ ಕೃತಿ ಹಿಡಿದಿಟ್ಟಿದೆ.

‘ಬೇರಿಲ್ಲದ ಬದುಕು’ ಅವರ ಇಷ್ಟದ ಪರಿಕಲ್ಪನೆ. ಅದರ ಸಂಕೇತದಂತೆಯೇ ಬದುಕು ಸಾಗಿಸಿದ್ದ ನೈಪಾಲ್, ಭಾವುಕವಾಗಿ ಬರೆಯುವ ಕಾದಂಬರಿಕಾರ್ತಿಯರನ್ನು ಕೆಟ್ಟದಾಗಿ ಬೈಯ್ಯುತ್ತಿದ್ದರು. ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ‘ಸಮಾಜವಾದಿ ಚಳವಳಿ ಸಂದರ್ಭದಲ್ಲಿ ನೀವು ಪೈರೇಟ್‌ನಂತೆ (ಸಮುದ್ರಕಳ್ಳ) ವರ್ತಿಸಿದ್ದಿರಿ’ ಎಂದು ಟೀಕಿಸಿದ್ದರು.

ಅಮೆರಿಕದ ಪ್ರವಾಸ ಬರಹಗಾರ ಪೌಲ್ ಥೆರಾಕ್ಸ್ ಜೊತೆಗೂ ನೈಪಾಲ್ ಜಗಳವಾಡಿಕೊಂಡಿದ್ದರು. ನೈಪಾಲ್ ಜೊತೆಗಿನ ಒಡನಾಟದ ದಿನಗಳ ಕೆಟ್ಟ ಅನುಭವದ ಬಗ್ಗೆ ಥೆರಾಕ್ಸ್ ನಂತರದ ದಿನಗಳಲ್ಲಿ ಬರೆಯುವ ಮೂಲಕ ಕಹಿ ತೋಡಿಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ತಮ್ಮ ಭಿನ್ಮಮತ ಪರಿಹರಿಸಿಕೊಂಡರು.

1990ರಲ್ಲಿ ನೈಪಾಲ್ ಅವರಿಗೆ ನೈಟ್‌ಹುಡ್ ಪದವಿ ನೀಡಲಾಗಿತ್ತು. ಸೃಜನಶೀಲ, ಸೃಜನೇತರ ಮತ್ತು ಆತ್ಮಕಥಾನಕ ಮಾದರಿಯ ಬರವಣಿಗೆ ಅವರಿಗೆ ಸಿದ್ಧಸಿತ್ತು. 1961ರಲ್ಲಿ ಪ್ರಕಟವಾದ 'ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್' ನೈಪಾಲ್ ಅವರ ಬಹುಚರ್ಚಿತ ಕೃತಿ. ತಮ್ಮ ಬೇರುಗಳಿಗೆ ಜೋತುಬಿದ್ದು ಕೆರಿಬಿಯನ್ ದ್ವೀಪಗಳಲ್ಲಿ (ವೆಸ್ಟ್‌ ಇಂಡೀಸ್) ಬದುಕು ಕಟ್ಟಿಕೊಳ್ಳಲು ಮತ್ತು ಅಲ್ಲಿನ ಸಮಾಜದಲ್ಲಿ ಬೆರೆಯಲು ಯತ್ನಿಸುವ  ಭಾರತೀಯ ವಲಸಿಗರ ತೊಳಲಾಟವನ್ನು ಹಿಡಿದಿಡಲು ಈ ಕೃತಿ ಯತ್ನಿಸಿದೆ.

ನೈಪಾಲ್ ಅವರು ಒಟ್ಟು 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇಂದು ಬ್ರಿಟನ್‌ನ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲಿಗರಲ್ಲಿ ಅವರೂ ಒಬ್ಬರು 1971ರಲ್ಲಿ ನೈಪಾಲ್ ಅವರ "ಇನ್‌ ಎ ಫ್ರೀ ಸ್ಟೇಟ್" ಕೃತಿಗೆ ಬೂಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ವಿ.ಎಸ್.ನೈಪಾಲ್ (85) ನಿಧನ
ಲಂಡನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ಬ್ರಿಟಿಷ್ ಸಾಹಿತಿ ವಿ.ಎಸ್.ನೈಪಾಲ್ (85) ಶನಿವಾರ ನಿಧನರಾದರು.

ಟ್ರಿನಿಡಾಡ್‌ನಲ್ಲಿ 17ನೇ ಆಗಸ್ಟ್ 1932ರಲ್ಲಿ ಜನಿಸಿದರು. ಅವರ ತಂದೆ ಭಾರತ ಸರ್ಕಾರದ ಸೇವೆಯಲ್ಲಿದ್ದರು. ಆಕ್ಸ್‌ಫರ್ಡ್‌ ವಿವಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದರು.

ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರೂ ಜೀವನದ ಬಹುಕಾಲವನ್ನು ಪ್ರವಾಸದಲ್ಲಿಯೇ ಕಳೆದರು. ಬ್ರಿಟನ್‌ನ ಸಾಂಸ್ಕೃತಿಕ ಜಗತ್ತಿನ ಆಧಾರ ಸ್ತಂಭವಾಗಿದ್ದ ಅವರು ‘ಬೇರಿಲ್ಲದ ಬದುಕು’ ಪರಿಕಲ್ಪನೆಯ ಸಂಕೇತದಂತೆ ತಮ್ಮ ಬದುಕು ಸಾಗಿಸಿದರು.
ನೈಪಾಲ್ ಅವರ ಆರಂಭದ ಕೃತಿಗಳು ವೆಸ್ಟ್‌ ಇಂಡೀಸ್‌ ಬದುಕನ್ನು ಹೆಚ್ಚು ಕೇಂದ್ರೀಕರಿಸಿದ್ದವು. ವಸಾಹತು ಕಾಲಘಟ್ಟದ ನಂತರ ವಿಶ್ವದ ವಿವಿಧ ದೇಶಗಳಲ್ಲಿ ಆದ ಬದಲಾವಣೆಗಳನ್ನು ಅವರ ಕೃತಿಗಳು ಹಿಡಿದಿಟ್ಟಿವೆ.

2001ರಲ್ಲಿ ಅವರಿಗೆ ಸಾಹಿತ್ಯದ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿತ್ತು. ‘ಜಗತ್ತು ಸುತ್ತುವ ಈ ಪಯಣಿಗ ಮನೆಯಲ್ಲಿರುವುದೇ ಅಪರೂಪ. ಸಾಹಿತ್ಯ ಕೃತಿಗಳಲ್ಲಿನ ಅವರ ದನಿ ಅನುಕರಣೀಯ’ ಎಂದು ನೊಬೆಲ್ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿ ಬಣ್ಣಿಸಿತ್ತು.

‘ತಮ್ಮನ್ನು ಪ್ರೀತಿಸುವವರು ಸುತ್ತುವರಿದಿದ್ದಾಗಲೇ ಅವರ ಕಣ್ಮುಚ್ಚಿದರು. ಇಷ್ಟಪಟ್ಟ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಅವರು ಸೃಜನಶೀಲತೆ ಮತ್ತು ಚಲನಶೀಲತೆ ಇದ್ದ ಸೊಗಸಾದ ಬದುಕನ್ನು ಸಾಗಿಸಿದ್ದರು’ ಎಂದು ಅವರ ಪತ್ನಿ ನಾದಿರಾ ನೈಪಾಲ್ ಪತಿಯ ಸಾವಿನ ಸುದ್ದಿ ತಿಳಿಸುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.